ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs BAN 1st Test: ಪೂಜಾರ, ಶ್ರೇಯಸ್ ಅರ್ಧಶತಕದ ಆಸರೆ

Last Updated 14 ಡಿಸೆಂಬರ್ 2022, 10:51 IST
ಅಕ್ಷರ ಗಾತ್ರ

ಚಿತ್ತೋಗ್ರಾಮ: ಚೇತೇಶ್ವರ ಪೂಜಾರ (90) ಹಾಗೂ ಶ್ರೇಯಸ್ ಅಯ್ಯರ್ (82*) ಸಮಯೋಚಿತ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ, ಇಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ನಿಗದಿತ 90 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿದೆ.

ಗಾಯಾಳು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಕೆ.ಎಲ್. ರಾಹುಲ್, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಆದರೆ ತಂಡವು 45 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ರಾಹುಲ್ (22) ಹಾಗೂ ಶುಭಮನ್ ಗಿಲ್ (20) ವಿಕೆಟ್ ನಷ್ಟವಾಯಿತು.

ವಿರಾಟ್ ಕೊಹ್ಲಿ 1 ರನ್ ಗಳಿಸಿ ಔಟ್ ಆದರು. ಇದರೊಂದಿಗೆ ಭಾರತ ಸಂಕಷ್ಟಕ್ಕೆ ಒಳಗಾಯಿತು.

ಈ ಹಂತದಲ್ಲಿ ಜೊತೆಗೂಡಿದ ಚೇತೇಶ್ವರ ಪೂಜಾರ ಹಾಗೂ ವಿಕೆಟ್ ಕೀಪರ್, ಬ್ಯಾಟರ್ ರಿಷಬ್ ಪಂತ್ 64 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು.

ಪೂಜಾರ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ಪಂತ್ ಎಂದಿನಂತೆ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಆದರೆ ಅರ್ಧಶತಕದ ಸನಿಹದಲ್ಲಿ ಎಡವಿದರು. 45 ಎಸೆತಗಳನ್ನು ಎದುರಿಸಿದ ಪಂತ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್‌ ನೆರವಿನಿಂದ 46 ರನ್ ಗಳಿಸಿದರು.

ಬಳಿಕ ಶ್ರೇಯಸ್ ಅಯ್ಯರ್ ಜೊತೆ ಸೇರಿದ ಪೂಜಾರ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಬಾಂಗ್ಲಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೊದಲ ದಿನದ ಗೌರವವನ್ನು ಸಂಪಾದಿಸಿದರು.

ಪೂಜಾರ ಹಾಗೂ ಅಯ್ಯರ್ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಅಲ್ಲದೆ ಐದನೇ ವಿಕೆಟ್‌ಗೆ 149 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು.

ದಿನದಾಟದ ಮುಕ್ತಾಯಕ್ಕೆ ಕೆಲವೇ ಹೊತ್ತು ಇರುವಾಗ ವಿಕೆಟ್ ಒಪ್ಪಿಸಿದ ಪೂಜಾರ ಶತಕ ವಂಚಿತರಾದರು. 203 ಎಸೆತಗಳನ್ನು ಎದುರಿಸಿದ ಪೂಜಾರ 11 ಬೌಂಡರಿಗಳ ನೆರವಿನಿಂದ 90 ರನ್ ಗಳಿಸಿದರು.

ಅತ್ತ ದಿಟ್ಟ ಹೋರಾಟ ಮುಂದುವರಿಸಿರುವ ಅಯ್ಯರ್ 82 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 169 ಎಸೆತಗಳನ್ನು ಎದುರಿಸಿದ ಅಯ್ಯರ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳು ಸೇರಿದ್ದವು.

ಆದರೆ ದಿನದಾಟದ ಅಂತಿಮ ಎಸೆತದಲ್ಲಿ 14 ರನ್ ಗಳಿಸಿದ್ದ ಅಕ್ಷರ್ ಪಟೇಲ್ ವಿಕೆಟ್ ನಷ್ಟವಾಯಿತು.

ಭಾರತ ತಂಡವನ್ನು ಕಾಡಿದ ಬಾಂಗ್ಲಾ ಸ್ಪಿನ್ನರ್ ತೈಜುಲ್ ಇಸ್ಲಾಂ 84 ರನ್ ತೆತ್ತು ಮೂರು ವಿಕೆಟ್ ಕಬಳಿಸಿದರು. ಎರಡು ವಿಕೆಟ್ ಮೆಹದಿ ಹಸನ್ ಮಿರಾಜ್ ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT