ಮಂಗಳವಾರ, ಮಾರ್ಚ್ 2, 2021
21 °C

PV Web Exclusive: ಚಿತ್ತೇಶ್ವರ ಟೆಸ್ಟ್ ಪೂಜಾರ!

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಆಟದ ಮನೆ

ಶುಭಮನ್ ಗಿಲ್, ರಿಷಭ್ ಪಂತ್ ತರಹದ ಬಿಸಿರಕ್ತದ ಹುಡುಗರು ಲೀಲಾಜಾಲವಾಗಿ ಆಡಲು ಬೇಕಾದ ಭೂಮಿಕೆ ಹಾಕಿಕೊಟ್ಟು, ವಿಕೆಟ್ ಉಳಿಸಿಕೊಂಡು ಇನ್ನೊಂದು ತುದಿಯಲ್ಲಿ ನಿಂತ ಅನುಭವಿ ಚೇತೇಶ್ವರ ಪೂಜಾರ ಬಾರ್ಡರ್–ಗಾವಸ್ಕರ್ ಟೆಸ್ಟ್‌ ಸರಣಿಯಲ್ಲಿ ವಿಶೇಷ ಕಾರಣಕ್ಕೆ ಗುರುತಾದರು. ಎಂಥ ತಂತ್ರಗಳಿಗೂ ಜಗ್ಗದೆ ತಮ್ಮ ಚಿತ್ತವನ್ನು ತಣ್ಣಗೇ ಇಟ್ಟುಕೊಳ್ಳುವ ಅವರನ್ನು ಚಿತ್ತೇಶ್ವರ ಎಂದರೂ ಸರಿಯೇ.

ಸಚಿನ್ ತೆಂಡೂಲ್ಕರ್ ಮುಂಬೈನ ಕ್ರೀಡಾಂಗಣದ ಕಾರಿಡಾರ್‌ನಲ್ಲಿ ನಿಂತು ಆಸ್ಟ್ರೇಲಿಯಾ ಎದುರು ಭಾರತ ಐತಿಹಾಸಿಕ ಟೆಸ್ಟ್‌ ಸರಣಿ ಗೆಲುವು ಪಡೆದದ್ದಕ್ಕೆ ಮನದುಂಬಿ ಅಭಿನಂದಿಸಿದರು. ಯಾವತ್ತೂ ಎದುರಿಸದಷ್ಟು ಸವಾಲುಗಳಿಗೆ ಎದೆಗೊಟ್ಟು, ‘ಹೊಸ ಚಿಗುರು–ಹಳೆ ಬೇರು’ ದಕ್ಕಿಸಿಕೊಟ್ಟ ವಿಜಯವನ್ನು ಬಣ್ಣಿಸಲಿಕ್ಕೆ ತಮಗೆ ಪದಗಳೇ ಸಿಗುತ್ತಿಲ್ಲ ಎಂದು ಭಾವುಕರಾಗಿದ್ದರು. ಚೆನ್ನಾಗಿ ಆಡಿದ ಪ್ರತಿಯೊಬ್ಬರನ್ನೂ ನೆನೆಯುತ್ತಾ, ಅವರ ಆಟದ ವೈಖರಿಯನ್ನು ಕೊಂಡಾಡಿದ್ದು ವಿಶೇಷ. ಅದರಲ್ಲಿ ಚೇತೇಶ್ವರ ಪೂಜಾರ ಹೆಸರಿಗೆ ಅಡಿಗೆರೆ ಎಳೆದರು. ‘ಪೂಜಾರ ಸ್ಟ್ರೈಕ್‌ರೇಟ್‌ ಬಗ್ಗೆ ಕೆಲವರು ತಕರಾರು ತೆಗೆಯುತ್ತಾರೆ. ನಾನು ಸುದೀರ್ಘ ಕಾಲ ಟೆಸ್ಟ್‌ ಆಡಿರುವುದರಿಂದ ಅದರ ಕ್ಲಾಸ್ ಏನು ಎನ್ನುವುದನ್ನು ಬಲ್ಲೆ. ಪೂಜಾರ ಕ್ಲಾಸ್ ಆಟಗಾರ. ಸಾಕಷ್ಟು ಎತ್ತರದಲ್ಲಿಟ್ಟೇ ಅವರನ್ನು ನಾನು ನೋಡುತ್ತೇನೆ. ಅಂಥ ಹೃದಯ ಎಲ್ಲ ಆಟಗಾರರಿಗೂ ಇರಲು ಸಾಧ್ಯವಿಲ್ಲ’ ಎಂಬ ಧಾಟಿಯಲ್ಲಿ ಹೇಳಿದ್ದನ್ನು ಅನೇಕರು ನೋಡಿರಬೇಕು.

ಸಂಯಮದ ಕಾಲ ಇದಲ್ಲ. ಎಲ್ಲದರಲ್ಲೂ ಬಹುತೇಕರ ಮನಸ್ಸು ವೇಗಕ್ಕೆ ಒಡ್ಡಿಕೊಂಡಿದೆ. ಕಾದಂಬರಿ ಓದುವವರು ಕಡಿಮೆಯಾಗಿದ್ದಾರೆ, ರಾತ್ರಿ ಇಡೀ ನಾಟಕ ಮಾಡಿದರೆ ಬಂದು ನೋಡುವವರು ಯಾರು ಎಂಬ ಪ್ರಶ್ನೆ ಎದ್ದಿದೆ, ಯಕ್ಷಗಾನ ಪ್ರಸಂಗಗಳ ಅವಧಿಯನ್ನೂ ಮೊಟಕು ಮಾಡಿರುವ ಕಾಲವಿದು. ಹೀಗಿರುವಾಗ ಟ್ವೆಂಟಿ20 ಕ್ರಿಕೆಟ್ ಎಂಬ ಫಾಸ್ಟ್‌ಫುಡ್ ರುಚಿ ಕಂಡವರು ಟೆಸ್ಟ್‌ ಕ್ರಿಕೆಟ್‌ನ ಬೆರಗನ್ನು ಆಸ್ವಾದಿಸಲು ಸಾಧ್ಯವೇ ಎಂದೆಲ್ಲ ಅಂದುಕೊಳ್ಳುತ್ತಿರುತ್ತೇವೆ. ಹೀಗೆ ಅಂದುಕೊಳ್ಳುವಾಗಲೇ ಅಲ್ಲವೇ ವೆಬ್ ಸರಣಿಗಳ ‘ಬಿಂಜ್ ವಾಚ್’ ಕೂಡ ಪಥ್ಯವಾಗಿರುವುದು? ಅಂತೆಯೇ ಈಗ ಟೆಸ್ಟ್‌ ಕ್ರಿಕೆಟ್ ಮಗ್ಗಲು ಬದಲಾಯಿಸಿದೆ.


ಚೇತೇಶ್ವರ ಪೂಜಾರ ಬ್ಯಾಟಿಂಗ್‌ ವೈಖರಿ

2001ರಲ್ಲಿ ಕೋಲ್ಕತ್ತದಲ್ಲಿ ವಿವಿಎಸ್ ಲಕ್ಷ್ಮಣ್ ಎಂಬ ‘ಸೈಲೆಂಟ್ ಕಿಲ್ಲರ್’ ಆಟವನ್ನು ನೋಡಿದ್ದ, ರಾಹುಲ್ ದ್ರಾವಿಡ್ ತರಹದ ‘ಗೋಡೆ’ಯನ್ನು ಕಂಡಿದ್ದ ಆಸ್ಟ್ರೇಲಿಯಾ, ಈ ಸಲ ಅವರಿಬ್ಬರನ್ನೂ ಆವಿರ್ಭವಿಸಿಕೊಂಡಂತೆ ಆಡಿದ ಚೇತೇಶ್ವರ ಪೂಜಾರ ತಾಳ್ಮೆಯ ಆಟದ ಘನತೆಯನ್ನು ಅನುಭವಿಸಿತು. ಪೂಜಾರ ಗುಂಡಿ ತೋಡಿದರು. ಶುಭಮನ್ ಗಿಲ್ ಪಕ್ಕದಲ್ಲಿದ್ದ ಮಣ್ಣನ್ನೆಲ್ಲ ಎತ್ತಿಹಾಕಿದರು. ರಿಷಭ್ ಪಂತ್ ಆಸ್ಟ್ರೇಲಿಯಾದ ಬೌಲರ್‌ಗಳನ್ನೆಲ್ಲ ಆ ಗುಂಡಿಯೊಳಗೇ ಕೆಡವಿಬಿಟ್ಟರು. ಹೀಗೆ ಉತ್ಪ್ರೇಕ್ಷಿತ ಧಾಟಿಯಲ್ಲಿ ನಾವು ಯೋಚಿಸುವಷ್ಟರ ಮಟ್ಟಿಗೆ ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ‘ಡ್ರಾಮಾ’ಗಳಿದ್ದವು.

ಇಪ್ಪತ್ತೇಳರ ಪ್ರಾಯದ ಪ್ಯಾಟ್ ಕಮಿನ್ಸ್ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟಿದ್ದು ಪೂಜಾರ ಆಯ್ಕೆಯಾದ ಒಂದೇ ವರ್ಷದ ನಂತರ ಎನ್ನುವುದು ಎಷ್ಟೋ ಜನರಿಗೆ ಗೊತ್ತಿರಲಿಕ್ಕಿಲ್ಲ. ವಯಸ್ಸಿನಲ್ಲಿ ಕಮಿನ್ಸ್‌ಗಿಂತ ಪೂಜಾರ ಐದು ವರ್ಷ ದೊಡ್ಡವರು. ಆಸ್ಟ್ರೇಲಿಯಾದ ವೇಗಿಗಿಂತ ದುಪ್ಪಟ್ಟಿಗೂ ಹೆಚ್ಚು ಟೆಸ್ಟ್‌ಗಳನ್ನು ಆಡಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುನೀಲ್ ಗಾವಸ್ಕರ್, ವಿವಿಎಸ್ ಲಕ್ಷ್ನಣ್, ವೀರೇಂದ್ರ ಸೆಹ್ವಾಗ್, ವಿರಾಟ್‌ ಕೊಹ್ಲಿ, ಸೌರವ್ ಗಂಗೂಲಿ, ದಿಲೀಪ್ ವೆಂಗ್‌ಸರ್ಕರ್, ಮೊಹಮ್ಮದ್ ಅಜರುದ್ದೀನ್ ಇವರೆಲ್ಲರ ಕ್ಲಾಸ್‌ನ ಯಾದಿಗೆ ಟೆಸ್ಟ್‌ ರನ್ ಗಳಿಕೆಯ ಪಟ್ಟಿಯಲ್ಲಿ ಪೂಜಾರ ಕೂಡ ಸೇರುತ್ತಾರೆ.  ಈ ಪಟ್ಟಿಯಲ್ಲಿ ಇರುವ ಎಲ್ಲರಿಗಿಂತ ಕಡಿಮೆ ಟೆಸ್ಟ್‌ ಆಡಿರುವುದು ಅವರೇ. ಇನ್ನು ನೂರು ಚಿಲ್ಲರೆ ರನ್ ಗಳಿಸಿದರೆ ಮೊಹಮ್ಮದ್ ಅಜರುದ್ದೀನ್ ಮೈಲುಗಲ್ಲನ್ನು ದಾಟುವರು. 34 ಟೆಸ್ಟ್‌ಗಳಲ್ಲೇ 164 ವಿಕೆಟ್‌ಗಳನ್ನು ಪಡೆದಿರುವ ಕಮಿನ್ಸ್ ಗಾಬಾದಲ್ಲಿ ಹಾಕಿದ ರಾಕೆಟ್‌ನಂಥ ಎಸೆತಗಳು ಸೌರಾಷ್ಟ್ರದ ಬಂಡೆಗಲ್ಲಿನಂತಹ ಆಟಗಾರನ ಚಿತ್ತವನ್ನು ಕೆಣಕುವಂತೆ ಇದ್ದವು. ಜಾಸ್ ಹ್ಯಾಜಲ್‌ವುಡ್‌ ಕೂಡ ಅದೇ ತಂತ್ರಕ್ಕೆ ಕೈಹಾಕಿದರು. ಒಂದು ಎಸೆತವಂತೂ ಬಡಿದು, ಗ್ಲೌಸ್ ಒಳಗಿನ ಬೆರಳಿಗೂ ಪರಮ ಯಾತನೆ ಉಂಟುಮಾಡಿತು. ಹೆಲ್ಮೆಟ್‌ನ ಹಿಂಭಾಗ, ಗ್ರಿಲ್‌, ಎದೆಯ ಭಾಗ, ಮೊಣಕೈ ಎಲ್ಲಕ್ಕೂ ವೇಗದ ಎಸೆತಗಳು ಅಪ್ಪಳಿಸಿದವು. ಬ್ಯಾಟ್ಸ್‌ಮನ್ ಒಬ್ಬ ಹೀಗೆ ಮೈಮೇಲೆ ಎಸೆತಗಳನ್ನು ಎಳೆದುಕೊಂಡು ಬಂಡೆಗಲ್ಲಿನಂತೆ ನಿಲ್ಲುವುದಕ್ಕೆ ಗಟ್ಟಿ ಗುಂಡಿಗೆ ಬೇಕು. ಕೆಲವು ಎಸೆತಗಳಂತೂ ‘ಬಾಡಿಲೈನ್’ ನೆನಪಿಸುವಂತೆ ಇದ್ದವು. ಹ್ಯಾಜಲ್‌ವುಡ್ ಎಸೆತದಲ್ಲಿ ಬಲಗೈ ಬೆರಳಿಗೆ ನೋವಾಗಿ, ನೆಲದ ಮೇಲೆ ಅವರು ಅಂಗಾತ ಮಲಗಿದಾಗ ಭಾರತಕ್ಕೆ ಗೆಲ್ಲಲು ಇನ್ನೂ 196 ರನ್‌ಗಳು ಬೇಕಿದ್ದವು. ಹ್ಯಾಜಲ್‌ವುಡ್ ಹಾಕಿದ ಇನ್ನೊಂದು ಎಸೆತ ಹೆಲ್ಮೆಟ್‌ಗೆ ಅಪ್ಪಳಿಸಿ ಸ್ಟೆಮ್ ಗಾರ್ಡ್ ಕಳಚಿಬಿದ್ದಿದ್ದನ್ನು ನೋಡಿದರೆ ಗಾಬರಿ ಹುಟ್ಟಿಸುವಂತಿತ್ತು.


ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರ ಜೊತೆಯಾಟ

ಭಾರತ ಎರಡನೇ ಇನಿಂಗ್ಸ್‌ನಲ್ಲಿ 18 ರನ್ ಗಳಿಸಿದ್ದಾಗ ರೋಹಿತ್ ಶರ್ಮ ವಿಕೆಟ್ ಹೋಯಿತು. ಆಗ ಪೂಜಾರ ಕ್ರೀಸ್‌ಗೆ ಕಾಲಿಟ್ಟದ್ದು. ವೇಗದ ಬೌಲರ್‌ಗಳೆಲ್ಲ ಶಾರ್ಟ್‌ ಪಿಚ್ ತಂತ್ರ ಪ್ರಯೋಗಿಸಲು ಸಜ್ಜಾಗಿದ್ದರು. ಮಾಧ್ಯಮವೊಂದಕ್ಕೆ ವೀಕ್ಷಕ ವಿವರಣೆ ನೀಡುತ್ತಿದ್ದ ಶೇನ್ ವಾರ್ನ್ ಕೂಡ ‘ಪೂಜಾರ ತಲೆಯತ್ತಲೇ ಗುರಿಯಾಗಿಸಿ ಶಾರ್ಟ್ ಪಿಚ್ ಎಸೆತಗಳನ್ನು ಹಾಕಬೇಕು’ ಎಂದು ಹೇಳಿ ಟ್ರೋಲ್‌ಗೆ ಒಳಗಾದರು. ಕ್ರೀಸ್‌ನಲ್ಲಿ ಲಂಗರುಹಾಕಿ ಆಡುವ ಆಟಗಾರರೆಂದರೆ ಆಸ್ಟ್ರೇಲಿಯನ್ನರಿಗೆ ತಲೆಬಿಸಿ. ದ್ರಾವಿಡ್, ಲಕ್ಷ್ಮಣ್ ಕೂಡ ಅವರನ್ನು ಹಾಗೆಯೇ ಗೋಳುಹೊಯ್ದುಕೊಂಡದ್ದು. ತಮ್ಮ ವೃತ್ತಿಬದುಕಿನಲ್ಲೇ ಯಾವತ್ತೂ ಪೂಜಾರ ಅರ್ಧ ಶತಕ ಗಳಿಸಲು 196 ಎಸೆತಗಳನ್ನು ತೆಗೆದುಕೊಂಡಿರಲಿಲ್ಲ. ಮಂಗಳವಾರ ಅಷ್ಟು ಹೊತ್ತು ನಿಲ್ಲಲೇಬೇಕಾಯಿತು. ಇನ್ನೊಂದು ತುದಿಯಲ್ಲಿ ಶುಭಮನ್ ಗಿಲ್ ಪುಲ್‌, ಕಟ್, ಪಂಚ್‌ಗಳನ್ನು ಮಾಡುತ್ತಿದ್ದರೆ ಅದರಿಂದ ಕಿಂಚಿತ್ತೂ ಪ್ರೇರಣೆಗೊಳ್ಳದಂತೆ ತಮ್ಮತನದ ಆಟಕ್ಕೇ ಪೂಜಾರ ಜೋತುಬಿದ್ದರು. ಗೆಲ್ಲಲೇಬೇಕು ಎಂದು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿರುವಾಗ ಇಷ್ಟು ತಾಳ್ಮೆಯಿಂದ ಆಡುವ ಆಟಗಾರನೇ ಅವರ ಕಣ್ಣಿಗೆ ಖಳನಂತೆ ಕಾಣತೊಡಗುವುದು ಇನ್ನೊಂದು ವಿಪರ್ಯಾಸ.

ಒಟ್ಟು 211 ಎಸೆತಗಳನ್ನು ಆಡಿ 56 ರನ್ ಗಳಿಸಿ, ಕಮಿನ್ಸ್ ಎಲ್‌ಬಿಡಬ್ಲ್ಯು ಬಲೆಗೆ ಪೂಜಾರ ಕೊನೆಗೂ ಬಿದ್ದಾಗ ಎದುರಾಳಿಗಳು ನಿರಾಳರಾದರು. 314 ನಿಮಿಷದ ಮರೆಯಲಾಗದ ಆಟವದು.

ಈ ಸಲದ ಬಾರ್ಡರ್–ಗಾವಸ್ಕರ್ ಟ್ರೋಫಿಯಲ್ಲಿ ಪೂಜಾರ ನಾಲ್ಕು ಟೆಸ್ಟ್‌ಗಳಿಂದ 277 ರನ್‌ ಕಲೆಹಾಕಿದರು (ಸರಾಸರಿ 33.87). ಅದಕ್ಕೂ ಮುಖ್ಯವಾಗಿ ಅವರು ಆಡಿದ್ದು 928 ಎಸೆತಗಳನ್ನು. ಉಭಯ ತಂಡಗಳ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ಸರಣಿಯಲ್ಲಿ ಇಷ್ಟೊಂದು ಎಸೆತಗಳನ್ನು ಆಡಿಲ್ಲ. 2018–19ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದಾಗ ಅವರು 521 ರನ್‌ಗಳನ್ನು ಕಲೆಹಾಕಿದ್ದು, 1258 ಎಸೆತಗಳನ್ನು ಆಡಿದ್ದರು. ಪೂಜಾರ ಈ ಸಲ ಹಾಕಿಕೊಟ್ಟ ಬುನಾದಿಯ ಮೇಲೆ ಶುಭಮನ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ರನ್‌ಗಳ ಸೌಧ ಕಟ್ಟಿದರು. ಆ ಹುಡುಗರಲ್ಲಿ ಬಹುತೇಕರು ದ್ರಾವಿಡ್ ಶಿಷ್ಯರು ಎನ್ನುವುದು ಇನ್ನೊಂದು ವಿಶೇಷ.  ಎರಡು ವರ್ಷಗಳ ಹಿಂದೆ ಇದ್ದಂಥ ಫಾರ್ಮ್‌ನಲ್ಲಿ ಪೂಜಾರ ಈಗ ಇಲ್ಲದೇ ಇದ್ದರೂ ಟೆಸ್ಟ್‌ ಕ್ರಿಕೆಟ್ ಬೇಡುವ ಸಹಿಷ್ಣುತೆಯ ಕಾರಣಕ್ಕೆ ಮುಖ್ಯರಾಗುತ್ತಾರೆ.


ಅರ್ಧಶತಕ ಗಳಿಸಿ ಸಂಭ್ರಮಿಸಿದ ಪೂಜಾರ

ಪೂಜಾರ 17ನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು. ತಂದೆ ಅರವಿಂದ್ ರಣಜಿ ಕ್ರಿಕೆಟ್ ಆಡಿದವರು. ಗುಜರಾತ್‌ ಹುಡುಗನಿಗೆ ಅವರೇ ಮೊದಲ ಆಟದ ಗುರು. ಪೆಟ್ಟು, ನೋವು ಎಂದೆಲ್ಲ ನೆಟ್ಸ್‌ ಪ್ರಾಕ್ಟೀಸ್ ತಪ್ಪಿಸುವ ಹಾಗಿರಲಿಲ್ಲ. ಆ ಶಿಸ್ತು, ಬದುಕು ಕಲಿಸಿದ ತಾಳ್ಮೆಯ ಪಾಠಗಳನ್ನೇ ಕ್ರಿಕೆಟ್‌ ಅಂಗಳದಲ್ಲೂ ಪೂಜಾರ ಪ್ರಾತ್ಯಕ್ಷಿಕೆಯಂತೆ ತೋರಿಸುತ್ತಾರೆ.

2010ರಲ್ಲಿ ವಿವಿಎಸ್ ಲಕ್ಷ್ಮಣ್ ಹಾಗೂ ಗೌತಮ್ ಗಂಭೀರ್ ಗಾಯಗೊಂಡಾಗ ಎರಡನೇ ಟೆಸ್ಟ್‌ನಲ್ಲಿ ಆಡುವ ಹನ್ನೊಂದು ಮಂದಿಯಲ್ಲಿ ಮೊದಲ ಬಾರಿಗೆ ಪೂಜಾರ ಒಬ್ಬರಾದರು. ಮೊದಲ ಟೆಸ್ಟ್‌ನಲ್ಲಿ ಸಬ್‌ಸ್ಟಿಟ್ಯೂಟ್‌ ಫೀಲ್ಡರ್ ಆಗಿ ಸ್ಲಿಪ್‌ನಲ್ಲಿ ಎರಡು ಕ್ಯಾಚ್‌ಗಳನ್ನು ಹಿಡಿದು ತಮ್ಮ ತದೇಕಚಿತ್ತವನ್ನು ತೋರಿದ್ದರು. ಬೆಂಗಳೂರಿನಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಮಿಚೆಲ್ ಜಾನ್ಸನ್ ಮೂರನೇ ಎಸೆತದಲ್ಲೇ ಅವರು ಔಟಾದರು. ಗಳಿಸಿದ್ದು ಬರೀ ನಾಲ್ಕು ರನ್. ಎರಡನೇ ಇನಿಂಗ್ಸ್‌ನಲ್ಲಿ ಭಾರತಕ್ಕೆ ಗೆಲ್ಲಲು ಇನ್ನೂರು ಚಿಲ್ಲರೆ ರನ್‌ಗಳು ಬೇಕಿದ್ದವು. ಅದರಲ್ಲಿ 72 ರನ್‌ಗಳನ್ನು ಸಂಯಮದಿಂದ ಆಡಿ, ಗಳಿಸಿದ್ದು ಪೂಜಾರ. ಆಗ ನೇಥನ್ ಹೌರಿಟ್ಜ್‌ ಆರ್ಮ್‌ ಬಾಲ್ ಪ್ರಯೋಗಿಸಿ ಅವರನ್ನು ಬೌಲ್ಡ್ ಮಾಡಿದ್ದರು. ಆಗಲೇ ಬೌಲರ್‌ಗಳಲ್ಲಿ ಹತಾಶೆ ಮೂಡಿಸುವಷ್ಟು ಸಂಯಮದಿಂದ ಅವರು ಆಡಿದ್ದರೆನ್ನುವುದಕ್ಕೆ ಇದು ಉದಾಹರಣೆ. ಆ ಇನಿಂಗ್ಸ್‌ನಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ತಂತ್ರ ಬದಲಿಸಿದ್ದರು. ರಾಹುಲ್ ದ್ರಾವಿಡ್ ಆಡಬೇಕಿದ್ದ ಮೂರನೇ ಕ್ರಮಾಂಕದಲ್ಲಿ ಇವರನ್ನು ಕಳುಹಿಸಿದ್ದರು. ಆ ಸ್ಥಾನವನ್ನೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪೂಜಾರ ಈಗಲೂ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಲಕ್ಷ್ಮಣ್ ಗಾಯಗೊಂಡಾಗ ಅವಕಾಶ ಪಡೆದು, ಸೆಹ್ವಾಗ್ ಫಾರ್ಮ್ ಕಳೆದುಕೊಂಡಾಗ ತಂಡದಲ್ಲಿ ಗಟ್ಟಿಗೊಳ್ಳುತ್ತಾ, ಟೆಸ್ಟ್‌ ಕ್ರಿಕೆಟ್‌ನ ಪರಂಪರೆಯನ್ನು ಎತ್ತಿಹಿಡಿಯುವ ತಾಳ್ಮೆಯ ಮೂರ್ತಿಯಂತೆ ಪೂಜಾರ ಆಡುತ್ತಲೇ ಇದ್ದಾರೆ.

ಇದನ್ನೂ ಓದಿ: 

81 ಟೆಸ್ಟ್‌ಗಳಲ್ಲಿ 18 ಶತಕಗಳು ಅವರಿಂದ ಬಂದಿವೆ. ಈ ಸಲದ ಸರಣಿಯಲ್ಲಿ ಸಿಡ್ನಿ ಟೆಸ್ಟ್‌ನಲ್ಲಿ ಅವರು ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕಗಳನ್ನು ಗಳಿಸಿದರು. ಕ್ರಮವಾಗಿ 174, 170 ಎಸೆತಗಳನ್ನು ಆಡಿದ ನಂತರ ಅರ್ಧಶತಕಗಳನ್ನು ದಾಖಲಿಸಿದ್ದು ಎನ್ನುವುದಕ್ಕೆ ಅಡಿಗೆರೆ ಎಳೆಯಬೇಕು.

ಸರಣಿಯನ್ನು ಗೆದ್ದ ನಂತರ ರವಿಶಾಸ್ತ್ರಿ ಎಲ್ಲರನ್ನೂ ಡ್ರೆಸಿಂಗ್ ರೂಮ್‌ನಲ್ಲಿ ಕೊಂಡಾಡುತ್ತಾ, ‘ಚೇತೇಶ್ವರ್ ಪೂಜಾರ...ಯೂ ಆರ್‌ ಎ ವಾರಿಯರ್’ ಎಂದು ಹೊಗಳಿದ್ದು ಎಷ್ಟು ಅರ್ಥಪೂರ್ಣ.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು