ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಟೆಸ್ಟ್‌ ಕ್ರಿಕೆಟ್‌ನ ಬಾಲಂಗೋಚಿಗಳ ಭಾರಿ ಮಾಂಜಾ!

Last Updated 25 ಆಗಸ್ಟ್ 2021, 13:46 IST
ಅಕ್ಷರ ಗಾತ್ರ

ಆಟದಮನೆ

ಭಾರತ ಕ್ರಿಕೆಟ್ ತಂಡದ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳ ಟೆಸ್ಟ್‌ ಪ್ರದರ್ಶನ 2018ರಿಂದ ಕಳಪೆಯಾಗಿಯೇ ಇತ್ತು. ಆದರೆ, ಈ ವರ್ಷ ಎದುರಾಳಿಗಳ ಶಾರ್ಟ್‌ ಪಿಚ್ ತಂತ್ರಕ್ಕೆ ಪ್ರತ್ಯುತ್ತರ ನೀಡುವ ಮನೋಬಲವನ್ನು ರೂಢಿಸಿಕೊಳ್ಳುತ್ತಿರುವುದಕ್ಕೆ ಕೆಲವು ಉದಾಹರಣೆಗಳು ಸಿಕ್ಕುತ್ತಿವೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಅಂತಹ ಮನ್ವಂತರದ ಆಟ ನೋಡಲುಸಿಕ್ಕಿತು. ಆ ಆಟದ ಸೂಕ್ಷ್ಮಗಳ ಮೆಲುಕು ಇಲ್ಲಿದೆ...

***

ಲಾರ್ಡ್ಸ್‌ ಕ್ರೀಡಾಂಗಣದ ಕ್ರಿಕೆಟಿಗರ ಬಾಲ್ಕನಿಯೇ ಗಮ್ಮತ್ತಿನ ಅನುಭವ ಕೊಡುವಂಥದ್ದು. ನಾಟ್‌ವೆಸ್ಟ್‌ ಸರಣಿಯ ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ಹಾಗೂ ಮೊಹಮ್ಮದ್ ಕೈಫ್ ಹೋರಾಡಿ ಗೆಲುವನ್ನು ಇಂಗ್ಲೆಂಡ್‌ನಿಂದ ಕಸಿದುಕೊಟ್ಟಾಗ ನಾಯಕರಾಗಿದ್ದ ಸೌರವ್ ಗಂಗೂಲಿ ತಮ್ಮ ಟಿ–ಶರ್ಟ್ ಬಿಚ್ಚಿ ಕೆಚ್ಚಿನಿಂದ ಸಂಭ್ರಮಿಸಿದ ನೆನಪಿನ್ನೂ ಹಸಿರು. ಮೊನ್ನೆ ಆತಿಥೇಯರ ಎದುರಿನ ಮೂರನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಬಾಲಂಗೋಚಿಗಳು ಲೀಡ್‌ ಅನ್ನು ಉದ್ದುದ್ದ ವಿಸ್ತರಿಸಿಕೊಂಡು ಬಂದಾಗ ವಿರಾಟ್‌ ಕೊಹ್ಲಿ ಹಾಗೂ ಸ್ನೇಹಿತರು ಸಂಭ್ರಮಿಸಿದ್ದು ಗೆಲುವಿನ ಅವಕಾಶವನ್ನು ಸೃಷ್ಟಿಸಿಕೊಂಡಿದ್ದಕ್ಕೆ. ಆ ಅವಕಾಶ ಹಣ್ಣಾದ ಅನುಭವ ನಮ್ಮೆಲ್ಲರದೂ ಆಗಿದೆ.

Pv Web Exclusive: ಟೆಸ್ಟ್‌ ಕ್ರಿಕೆಟ್‌ನ ಬಾಲಂಗೋಚಿಗಳ ಭಾರಿ ಮಾಂಜಾ!

ನಾಲ್ಕನೇ ದಿನದಾಟ ಮುಗಿದಾಗ ಭಾರತ 181 ರನ್ ಗಳಿಸಿ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ದಾಳಿಕೋರ ರಿಷಭ್ ಪಂತ್ ಜತೆಯಲ್ಲಿ ಇಶಾಂತ್ ಶರ್ಮ ಇದ್ದರು. ಅವರಿಬ್ಬರೂ ಎಷ್ಟು ಗಳಿಸುವರೋ ಅಷ್ಟೇ ಭಾರತಕ್ಕೆ ಉಳಿಗಾಲ ಎಂಬ ಭಾವನೆ ಇತ್ತು. ಆದರೆ, ಕೊನೆಯ ದಿನದಾಟದಲ್ಲಿ ಆ ಇಬ್ಬರೂ ಹಿಂದಿನ ದಿನದ ಸ್ಕೋರ್‌ಗೆ ಸೇರಿಸಿದ್ದು ಬರೀ 28 ರನ್‌ಗಳನ್ನಷ್ಟೆ. ಇಬ್ಬರೂ ಪೆವಿಲಿಯನ್ ಹಾದಿ ಹಿಡಿದರು. ಮೊಹಮ್ಮದ್ ಶಮಿ ಹಾಗೂ ಜಸ್‌ಪ್ರೀತ್‌ ಬುಮ್ರಾ ಇಬ್ಬರೂ ಹೆಚ್ಚು ಹೊತ್ತು ನಿಂತು ಆಡುತ್ತಾರೆಂಬ ವಿಶ್ವಾಸ ಯಾರೊಬ್ಬರಿಗೂ ಇರಲಿಲ್ಲ.

ಇಂಗ್ಲೆಂಡ್‌ ಪರವಾಗಿ ಬ್ಯಾಟಿಂಗ್ ಮಾಡಲು ಆ್ಯಂಡರ್‌ಸನ್ ಬಂದಿದ್ದಾಗ ಬೂಮ್ರಾ ಅವರನ್ನು ತಮ್ಮ ವೇಗ ವೈವಿಧ್ಯ ಹಾಗೂ ಬೌನ್ಸರ್‌ಗಳಿಂದ ಕಂಗೆಡಿಸಿದ್ದರು. ಸೇಡು ತೀರಿಸಿಕೊಳ್ಳಲು ಆ್ಯಂಡರ್‌ಸನ್‌ಗೆ ಇದಕ್ಕಿಂತ ಕಾರಣ ಬೇಕೆ? ಒಂದರ ಹಿಂದೆ ಒಂದರಂತೆ ಬೌನ್ಸರ್‌ಗಳನ್ನು ಹಾಕಿದರು. ಮೊದಲಿಗೆ ದಂಗಾದಂತೆ ಕಂಡ ಬೂಮ್ರಾ, ವಿಕೆಟ್‌ ಕೀಪರ್ ಜಾಸ್ ಬಟ್ಲರ್ ಕೆಣಕಿದ್ದೇ ಕುಪಿತರಾದರು. ಬೌಲಿಂಗ್ ಮಾಡುತ್ತಿದ್ದ ಮಾರ್ಕ್ ವುಡ್ ಕೂಡ ಒಂದಷ್ಟು ಮಾತಿನ ಚಕಮಕಿಗೆ ಇಳಿದರು. ವುಡ್ ಹಾಕಿದ ಮರು ಎಸೆತವನ್ನು ಅಸಡಾ ಬಸಡಾ ರೀತಿಯಲ್ಲೇ ಬೂಮ್ರಾ ಬೌಂಡರಿಗೆ ಅಟ್ಟಿದರು. ಆ್ಯಂಡರ್‌ಸನ್ ಕೂಡ ಆಮೇಲೆ ಮಾತಿನ ಏಟಿನಿಂದ ಶಮಿ ಹಾಗೂ ಬೂಮ್ರಾ ಇಬ್ಬರನ್ನೂ ವಿಚಲಿತರನ್ನಾಗಿಸಲು ಹವಣಿಸಿದರು.

Pv Web Exclusive: ಟೆಸ್ಟ್‌ ಕ್ರಿಕೆಟ್‌ನ ಬಾಲಂಗೋಚಿಗಳ ಭಾರಿ ಮಾಂಜಾ!

ಕೆಲವು ನಿಮಿಷಗಳಾದವಷ್ಟೆ. ಬೂಮ್ರಾ ಹಾಗೂ ಶಮಿ ಬ್ಯಾಟಿಂಗ್‌ಗೆ ಕುದುರಿಕೊಂಡರು. ಶಾರ್ಟ್ ಬಾಲ್ ತಂತ್ರಕ್ಕೆ ಕಾಪಿಬುಕ್ ರೀತಿಯಲ್ಲಿ ರಕ್ಷಣಾತ್ಮಕವಾಗಿ ಆಡಿದರು. ಶಮಿ ಮಾಡಿದ ಕವರ್‌ಡ್ರೈವ್ ಅಂತೂ ವೃತ್ತಿಪರ ಬ್ಯಾಟ್ಸ್‌ಮನ್ ಆಡುವಂಥದ್ದೇ. ಮೊಯಿನ್ ಅಲಿ ಸ್ಪಿನ್‌ ಮೋಡಿಗೂ ಜಗ್ಗದೆ ಶಮಿ ಕ್ರೀಸ್‌ನಿಂದ ಹೊರಬಂದು ಮಿಡ್‌ವಿಕೆಟ್‌ನತ್ತ ದೊಡ್ಡ ಹೊಡೆತಕ್ಕೆ ಕೈಹಾಕಿ ಯಶಸ್ವಿಯಾದರು. 89 ರನ್‌ಗಳ ಮುರಿಯದ ಜತೆಯಾಟ ಆಡಿ ಇಬ್ಬರೂ ಮುಖದ ತುಂಬಾ ಸಾರ್ಥಕ್ಯ ಹೊತ್ತು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಶಮಿ ಔಟಾಗದೆ 56 ಹಾಗೂ ಬೂಮ್ರಾ ಔಟಾಗದೆ 34 ಎಂಬ ಸ್ಕೋರ್ ಇಬ್ಬರ ಟೆಸ್ಟ್‌ ಕ್ರಿಕೆಟ್ ಬದುಕಿನಲ್ಲೇ ವೈಯಕ್ತಿಕ ಗರಿಷ್ಠ ಮೊತ್ತಗಳು.

2014ರಲ್ಲಿ ಶಮಿ ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ 51 ರನ್‌ ಗಳಿಸಿದ್ದರು. ಅದನ್ನು ಬಿಟ್ಟರೆ 2018ರಲ್ಲಿ ದಕ್ಷಿಣ ಆಫ್ರಿಕಾ ಎದುರು 27 ರನ್‌ ಗಳಿಸಿದ್ದೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ ಹೆಚ್ಚಿನ ಇನಿಂಗ್ಸ್ ರನ್ ಗಳಿಕೆಯಾಗಿತ್ತು. ಆ ಇನಿಂಗ್ಸ್‌ ಕೂಡ ಸ್ಮರಣೀಯ. ಭುವನೇಶ್ವರ ಕುಮಾರ್ ಜತೆಯಲ್ಲಿ 35 ರನ್‌ಗಳ ಜತೆಯಾಟಕ್ಕೆ ಆ ಸ್ಕೋರ್ ಕಾರಣವಾಗಿತ್ತು. ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 241 ರನ್‌ಗಳ ಗುರಿ ನೀಡಿ, 63 ರನ್‌ಗಳಿಂದ ಭಾರತ ಗೆಲ್ಲಲು ಸಾಧ್ಯವಾದದ್ದು ಆ ಜತೆಯಾಟದಿಂದ. ಎರಡನೇ ಇನಿಂಗ್ಸ್‌ನಲ್ಲಿ ಶಮಿ ಆಗ ಐದು ವಿಕೆಟ್‌ಗಳನ್ನು ಸಹ ಗಳಿಸಿದ್ದರು.

Pv Web Exclusive: ಟೆಸ್ಟ್‌ ಕ್ರಿಕೆಟ್‌ನ ಬಾಲಂಗೋಚಿಗಳ ಭಾರಿ ಮಾಂಜಾ!

ಬೂಮ್ರಾ ಇದೇ ಸರಣಿಯ ನಾಟಿಂಗ್‌ಹ್ಯಾಮ್‌ ಟೆಸ್ಟ್‌ನ ಒಂದು ಇನಿಂಗ್ಸ್‌ನಲ್ಲೂ 28 ರನ್ ಕಲೆಹಾಕಿ ಬ್ಯಾಟಿಂಗ್‌ನಲ್ಲಿ ತಮ್ಮ ಹೊಡೆತವನ್ನು ಅನಾವರಣಗೊಳಿಸಿದ್ದರು. ಆ ಇನಿಂಗ್ಸ್‌ನಿಂದಾಗಿ ಮೊಹಮ್ಮದ್ ಸಿರಾಜ್ ಜತೆಗೂಡಿ ಕೊನೆಯ ವಿಕೆಟ್‌ಗೆ 33 ರನ್‌ಗಳು ಹರಿದುಬಂದಿದ್ದವು. ಭಾರತ ಮೊದಲ ಇನಿಂಗ್ಸ್‌ನಲ್ಲಿ 95 ರನ್‌ಗಳ ಮುನ್ನಡೆ ಪಡೆದದ್ದು ಹಾಗೆ.

ಸಿರಾಜ್ ಕೂಡ ತಾಳ್ಮೆಯಿಂದ ಆಡುವುದನ್ನು ನಿಧಾನವಾಗಿ ಕಲಿಯುತ್ತಿದ್ದಾರೆ. ಇದೇ ವರ್ಷ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್‌ನಲ್ಲಿ ರವಿಚಂದ್ರನ್ ಅಶ್ವಿನ್ ಜತೆಯಲ್ಲಿ ಹತ್ತನೇ ವಿಕೆಟ್‌ಗೆ 49 ರನ್‌ಗಳನ್ನು ಅವರು ಸೇರಿಸಿದ್ದರು. 16 ರನ್‌ ಗಳಿಸಿ, ಔಟಾಗದೇ ಉಳಿದ ಆ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳು ಇದ್ದದ್ದು ವಿಶೇಷ. ಆ ಜತೆಯಾಟದಿಂದ 482 ರನ್‌ಗಳ ದೊಡ್ಡ ಗೆಲುವಿನ ಸವಾಲನ್ನು ಇಂಗ್ಲೆಂಡ್‌ ಎದುರು ಇಡಲು ಸಾಧ್ಯವಾಗಿತ್ತು.

ಇದಕ್ಕೂ ಮೊದಲು, 2019ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದ ಇನಿಂಗ್ಸ್‌ನಲ್ಲಿ ಇಶಾಂತ್ ಔಟಾಗದೆ 57 ರನ್‌ಗಳನ್ನು ಗಳಿಸಿದ್ದರು. ಹನುಮ ವಿಹಾರಿಯೊಟ್ಟಿಗೆ ಎಂಟನೇ ವಿಕೆಟ್‌ಗೆ 112 ರನ್‌ಗಳ ಜತೆಯಾಟ ಮೂಡಲು ಕಾರಣವಾಗಿದ್ದ ಆಟ ಅದು. 100ಕ್ಕೂ ಹೆಚ್ಚು ಟೆಸ್ಟ್‌ ಆಡಿರುವ ಅನುಭವಿ ಇಶಾಂತ್ ಬದುಕಿನಲ್ಲೂ ಅದು ಟೆಸ್ಟ್ ಇನಿಂಗ್ಸ್ ಒಂದರ ವೈಯಕ್ತಿಕ ಗರಿಷ್ಠ ಸ್ಕೋರ್.

ಬಾಲಂಗೋಚಿ ಬ್ಯಾಟ್ಸ್‌ಮನ್‌ ಹೀಗೆ ಬಂದು, ಬ್ಯಾಟ್‌ ಬೀಸಿ ಹಾಗೆ ಹೋಗುವ ಜಾಯಮಾನ ಈಗಿನದ್ದಲ್ಲ. ಪರಿಸ್ಥಿತಿ ಬದಲಾಗುತ್ತಿದೆ. ತಾವು ನಿಯಂತ್ರಿಸಬಹುದಾದ ಮೊತ್ತಕ್ಕೆ ಸ್ಕೋರ್‌ ಅನ್ನು ಕೊಂಡೊಯ್ಯಬಹುದಾದ ಸಾಧ್ಯತೆಗೆ ಬೌಲರ್‌ಗಳು ಬ್ಯಾಟ್ ಹಿಡಿದೇ ಎದೆಗೊಡುತ್ತಿರುವುದರ ಸೂಚನೆ ಇದು.

‘ನಾಟಿಂಗ್‌ಹ್ಯಾಮ್ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತದ ಕೊನೆಯ ಮೂವರು ಬ್ಯಾಟ್ಸ್‌ಮನ್‌ಗಳು ಸುಮಾರು 50 ರನ್‌ಗಳನ್ನು ತಂದಿತ್ತರು. ಆದರೆ, ಇಂಗ್ಲೆಂಡ್‌ನ ಕೊನೆಯ ಮೂವರಿಂದ 20 ರನ್‌ಗಳಷ್ಟೆ ಬಂದವು. 30 ರನ್‌ಗಳ ಈ ವ್ಯತ್ಯಾಸ ಸುದೀರ್ಘಾವಧಿ ಕ್ರಿಕೆಟ್‌ನಲ್ಲಿ ತುಂಬಾ ಮುಖ್ಯವಾಗುತ್ತದೆ’ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್‌ ಹುಸೇನ್ ಸಹ ಹೇಳಿದ್ದರು.

2018ರ ನಂತರ ಭಾರತದ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳ ರನ್‌ ಗಳಿಕೆಯ ಸರಾಸರಿ ಉಳಿದ ತಂಡಗಳಿಗೆ ಹೋಲಿಸಿದರೆ ಕಳಪೆಯಾಗಿದೆ. ನ್ಯೂಜಿಲೆಂಡ್‌, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಪಂದ್ಯಗಳಲ್ಲಿ ಈ ಸರಾಸರಿಯಲ್ಲಿ ಭಾರತಕ್ಕಿಂತ ಮುಂದಿದ್ದರು. ಈ ವರ್ಷ ಭಾರತ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಚ್ಚರಿಗಳನ್ನು ನೀಡುತ್ತಿದೆ.

ದೇಸಿ ಕ್ರಿಕೆಟ್‌ನಲ್ಲಿ ಶತಕ ಗಳಿಸಿರುವ ಉಮೇಶ್ ಯಾದವ್ ಸಹ ದೀರ್ಘ ಕಾಲ ನಿಂತು ಆಡಬಲ್ಲ ಬಾಲಂಗೋಚಿ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ‘ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದ್ದ ಶಾರ್ದೂಲ್ ಠಾಕೂರ್ ಅವಕಾಶವನ್ನು ಹಣ್ಣಾಗಿಸಿಕೊಂಡರೆ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬಬಲ್ಲ ಆಲ್‌ರೌಂಡರ್’ ಎಂದು ವಿವಿಎಸ್ ಲಕ್ಷ್ಮಣ್ ಅಭಿಪ್ರಾಯ ಪಟ್ಟಿರುವುದಕ್ಕೂ ಸಮರ್ಥನೆ ಇದೆ.

Pv Web Exclusive: ಟೆಸ್ಟ್‌ ಕ್ರಿಕೆಟ್‌ನ ಬಾಲಂಗೋಚಿಗಳ ಭಾರಿ ಮಾಂಜಾ!

ನೆಟ್ಸ್‌ನಲ್ಲಿ ಸಾಮಾನ್ಯವಾಗಿ ಬೌಲರ್‌ಗಳು ಬ್ಯಾಟಿಂಗ್ ಅಭ್ಯಾಸ ಮಾಡುವ ಅವಧಿ ತುಂಬಾ ಕಡಿಮೆ. ಹರಭಜನ್ ಸಿಂಗ್ ಚೆಂಡನ್ನು ಮೇಲಕ್ಕೆ ಹೊಡೆಯುವುದನ್ನೇ ಅಭ್ಯಾಸ ಎನ್ನುವಂತೆ ನೆಟ್ಸ್‌ನಲ್ಲಿ ಸುಖಿಸುತ್ತಿದ್ದರು. ಆದರೆ, ಈಗಿನ ಬಾಲಂಗೋಚಿಗಳು ಹದಿನೈದು ಇಪ್ಪತ್ತು ನಿಮಿಷ ತಲೆತಗ್ಗಿಸಿ ಬ್ಯಾಟಿಂಗ್ ಅಭ್ಯಾಸವನ್ನೂ ನಿತ್ಯ ಮಾಡುತ್ತಿರುವುದರ ಫಲ ಇದು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಶಾರ್ಟ್ ಪಿಚ್ ತಂತ್ರವನ್ನು ಪ್ರಯೋಗಿಸುವ ಮೊದಲು ಆ್ಯಂಡರ್‌ಸನ್, ಮಾರ್ಕ್ ವುಡ್ ಇನ್ನೊಮ್ಮೆ ಯೋಚಿಸುವುದರಲ್ಲಿ ಅನುಮಾನವೇ ಇಲ್ಲ. ಬರೀ ಮಾತಿನ ಕೊಡಲಿಯಿಂದ ಈ ಆಟಗಾರರಿಗೆ ಪೆಟ್ಟು ಕೊಡುವುದು ಸಾಧ್ಯವಿಲ್ಲ ಎಂಬ ಪಾಠ ಅವರಿಗೆ ದಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT