ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹಳೆಯ ತಪ್ಪು, ರಾಬಿನ್‌ಸನ್‌ ತಬ್ಬಿಬ್ಬು

Last Updated 9 ಜೂನ್ 2021, 12:46 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಬರೆಯುವ ಯುವಕರು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲೇಬೇಕು ಎನ್ನುವುದಕ್ಕೆ ಸಾಕ್ಷಿಯಾಗಿ ರಾಬಿನ್‌ಸನ್ ನಿಷೇಧದ ಪ್ರಕರಣ ಕಾಣುತ್ತಿದೆ. 2012ರಲ್ಲಿ ಅವರು ಮಾಡಿದ್ದ ಟ್ವೀಟ್‌ಗಳು ಚೊಚ್ಚಲ ಟೆಸ್ಟ್‌ ಪಂದ್ಯ ಆಡಿ ಮುಗಿಸುವ ಹೊತ್ತಿಗೇ ಅವರಿಗೆ ಮುಳುವಾಗಿವೆ. ಯಾರೀ ರಾಬಿನ್‌ಸನ್‌?

******

ಲಾರ್ಡ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಇತ್ತೀಚೆಗೆ ಮೊದಲ ಕ್ರಿಕೆಟ್ ಟೆಸ್ಟ್‌ ಪಂದ್ಯ ಆಡಿತು. ಮೊದಲ ದಿನದಾಟ ಶುರುವಾಗುವ ಮೊದಲು ‘ಮೊಮೆಂಟ್ ಆಫ್ ಯೂನಿಟಿ’ ಎಂದು ಎಲ್ಲ ಆಟಗಾರರೂ ಒಂದೆಡೆ ಕಲೆತರು. ವರ್ಣಭೇದ, ಧರ್ಮಭೇದ, ಲಿಂಗ ಅಸೂಕ್ಷ್ಮತೆ ಅಥವಾ ಸೆಕ್ಸಿಸಂ ಇಂತಹವುಗಳನ್ನು ಸಹಿಸಿಕೊಳ್ಳುವುದಿಲ್ಲ ಎಂಬರ್ಥದ ಬರಹವಿರುವ ಟಿ–ಶರ್ಟ್‌ಗಳನ್ನು ಆಗ ತೊಟ್ಟಿದ್ದರು. ಆಮೇಲೆ ಬಿಳಿ ಬಟ್ಟೆ ಹಾಕಿಕೊಂಡು ಎಲ್ಲರೂ ಆಟಕ್ಕಿಳಿದರು.

ಕ್ರಿಕೆಟಿಗ ಓಲಿ ರಾಬಿನ್‌ಸಸ್‌ಗೆ ಅದು ಪದಾರ್ಪಣೆ ಪಂದ್ಯ. ಕೆಂಪು ಚೆಂಡಿನಲ್ಲಿ ರಿವರ್ಸ್‌ ಸ್ವಿಂಗ್ ಮಾಡುವುದರಲ್ಲಿ ಪಳಗಿದ್ದುದರಿಂದ ಅವರನ್ನು ಇಂಗ್ಲೆಂಡ್ ತಂಡಕ್ಕೆ ಆರಿಸಿಕೊಂಡಿದ್ದರು. ಮೊದಲ ದಿನ ಟಾಮ್ ಲಾಥಮ್ ಹಾಗೂ ರಾಸ್‌ ಟೇಲರ್‌ ವಿಕೆಟ್‌ಗಳನ್ನು ರಾಬಿನ್‌ಸನ್ ಪಡೆದರು. ಲಾಥಮ್ ಬ್ಯಾಟ್‌ನ ಒಳಅಂಚಿಗೆ ಚೆಂಡು ತಾಕಲು ಕಾರಣವಾದದ್ದು ಅವರ ಸ್ವಿಂಗ್‌ ಶಕ್ತಿ. ಟೇಲರ್ ಎಲ್‌ಬಿ ಬಲೆಗೆ ಬಿದ್ದಿದ್ದೂ ಚೆಂಡಿನ ತಿರುವನ್ನು ತಪ್ಪು ಅಂದಾಜು ಮಾಡಿದ್ದರಿಂದಲೇ. ಪಂದ್ಯ ಇನ್ನೇನು ಕಳೆಗಟ್ಟುತ್ತಿದೆ ಎನ್ನುವಾಗಲೇ 2012ರಲ್ಲಿ ರಾಬಿನ್‌ಸನ್‌ ಮಾಡಿದ್ದ ಕೆಲವು ವರ್ಣಭೇದ, ಧರ್ಮಭೇದದ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

‘My new muslim friend is the bomb’, ‘I wonder if Asian people put smilies like this :)#racist’, ‘Guy next to me on the train definitely has Ebola’–ಈ ಮೂರು ಟ್ವೀಟ್‌ಗಳ ಸ್ಕ್ರೀನ್‌ ಶಾಟ್‌ಗಳು ರಾಬಿನ್‌ಸನ್‌ ದಶಕದ ಹಿಂದೆ ಮಾಡಿದಂಥವು. ಸರಿಯಾಗಿ, ಅವರ ಟೆಸ್ಟ್‌ ಪದಾರ್ಪಣೆ ಪಂದ್ಯದ ಮೊದಲ ದಿನದ ನಡುಘಟ್ಟದಲ್ಲೇ ಅವನ್ನು ಮತ್ತೆ ಜಾಹೀರುಗೊಳಿಸಿದವರು ಯಾರೋ ಗೊತ್ತಿಲ್ಲ. ಆದರೆ ಇಂಗ್ಲೆಂಡ್‌ ಮತ್ತುವೇಲ್ಸ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ಇದರಿಂದ ಪೇಚಿಗೆ ಸಿಲುಕಿತು. ವಿಧಿಯಿಲ್ಲದೆ ಮೊದಲ ಟೆಸ್ಟ್‌ ನಂತರ ರಾಬಿನ್‌ಸನ್‌ ಅವರನ್ನು ಕ್ರಿಕೆಟ್‌ನಿಂದಲೇ ಅಮಾನತುಗೊಳಿಸಿತು.

ಮೊದಲ ದಿನದಾಟ ಮುಗಿದ ಮೇಲೆ ಬೇಷರತ್ ಆಗಿ ರಾಬಿನ್‌ಸನ್ ಕ್ಷಮಾಪಣೆ ಕೇಳಿದರು. ಹತ್ತು ವರ್ಷಗಳ ಹಿಂದೆ ತಮ್ಮ ಮನಸ್ಥಿತಿ ಹಾಗಿದ್ದರೂ ಈಗ ಅಂಥ ಭಾವನೆಗಳಿಲ್ಲ. ಯಾರಿಗೂ ನೋವುಂಟು ಮಾಡುವ ಉದ್ದೇಶವಿಲ್ಲ ಎಂದು ಅವರು ಕ್ರಿಕೆಟ್‌ನಲ್ಲಿ ಉಳಿಯಬೇಕೆಂಬ ಮಹತ್ವಾಕಾಂಕ್ಷೆಯಿಂದ ಮುಂಚಿತವಾಗಿಯೇ ಹೇಳಿಕೊಂಡರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಆ ಒತ್ತಡದಲ್ಲೂ ಪಂದ್ಯದಲ್ಲಿ ಅವರು ಏಳು ವಿಕೆಟ್ ಪಡೆದದ್ದು ಆಟದ ಮೇಲೆ ಅವರಿಗೆ ಇರುವ ಹಿಡಿತಕ್ಕೆ ಕನ್ನಡಿ ಹಿಡಿಯುತ್ತದೆ.

ಇಂಗ್ಲೆಂಡ್‌ನ ಸಹಾಯಕ ಕೋಚ್ ಪಾಲ್ ಫಾರ್‌ಬ್ರೇಸ್‌ ಎನ್ನುವವರ ಮಲಮಗ ರಾಬಿನ್‌ಸನ್. ಮಗನನ್ನು ಫಾರ್‌ಬ್ರೇಸ್‌ ಮೊದಲು ಯಾರ್ಕ್‌ಷೈರ್‌ ಕೌಂಟಿ ತಂಡಕ್ಕೆ ಪರಿಚಯಿಸಿದರು. ಟ್ವೆಂಟಿ20 ಕ್ರಿಕೆಟ್‌ನಲ್ಲಿ ಕೊನೆಯ ಓವರ್‌ಗಳ ಬೌಲಿಂಗ್‌ನಲ್ಲಿ ಪರಿಣಾಮಕಾರಿಯಾಗಿ ಕಂಡ ಹುಡುಗನತ್ತ ಅಲ್ಲಿನವರ ಕಣ್ಣು ನೆಟ್ಟಿತು.

ಬರೀ ಬೌಲರ್‌ ಅಷ್ಟೇ ಅಲ್ಲ. ಬ್ಯಾಟಿಂಗ್‌ನಲ್ಲೂ ರಾಬಿನ್‌ಸನ್ ಗಟ್ಟಿಗ. ಸಸೆಕ್ಸ್‌ ತಂಡದ ಪರವಾಗಿ ಆಡಿದ ಮೊದಲ ಪ್ರಥಮ ದರ್ಜೆ ಪಂದ್ಯದಲ್ಲೇ ಡುರ್ಹಮ್ ವಿರುದ್ಧ ಶತಕ ಹೊಡೆದರು. ಚೆಸ್ಟರ್‌–ಲೀ–ಸ್ಟ್ರೀಟ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಅದೂ ಸುಡುಧಗೆಯಲ್ಲಿ ಹನ್ನೊಂದನೇ ಬ್ಯಾಟ್ಸ್‌ಮನ್‌ ಮ್ಯಾಥ್ಯು ಹಾಬ್ಡನ್ ಜತೆ ಅವರು ಕೊನೆಯ ವಿಕೆಟ್‌ಗೆ 164 ರನ್‌ ಸೇರಿಸಿದ್ದು 107 ವರ್ಷಗಳ ದಾಖಲೆಯೊಂದನ್ನು ಮುರಿದಿತ್ತು. ಸಸೆಕ್ಸ್ ತಂಡದ ಪರವಾಗಿ ಹತ್ತನೇ ವಿಕೆಟ್‌ಗೆ ಹರಿದುಬಂದ ಅತಿ ಗರಿಷ್ಠ ರನ್‌ಗಳ ಜತೆಯಾಟ ಅದಾಗಿತ್ತು.

ಯಾರ್ಕ್‌ಷೈರ್‌ ತಂಡದಲ್ಲಿ ಜೇಸನ್ ಗಿಲೆಸ್ಪಿ ತರಬೇತಿ ನೀಡುತ್ತಿದ್ದಾಗ ರಾಬಿನ್‌ಸನ್‌ ಕೆಲವು ಪಾಠಗಳನ್ನು ಕಲಿತರು. ಹ್ಯಾಜಲ್‌ವುಡ್ ಹಾಗೂ ಗ್ಲೆನ್‌ ಮೆಕ್‌ಗ್ರಾ ರೀತಿಯಲ್ಲಿ ಬೌಲ್ ಮಾಡಬಲ್ಲ ನೀಳಕಾಯದ ಪ್ರತಿಭೆ ಇವರು ಎಂದು ಗಿಲೆಸ್ಪಿ ಮೊದಮೊದಲು ಅಂದುಕೊಂಡಿದ್ದರು. ರಾಬಿನ್‌ಸನ್ ಆರಾಧಿಸುತ್ತಿದ್ದುದು ಮೆಕ್‌ಗ್ರಾ ಅವರನ್ನೇ. ಆದರೆ, ಕಾಲ ಕಳೆದಂತೆ ಗಿಲೆಸ್ಪಿ ಅಭಿಪ್ರಾಯ ಬದಲಾಯಿತು. ರಾಬಿನ್‌ಸನ್ ಪ್ರತಿಭೆಯ ಕುರಿತು ಅವರಿಗೆ ತಕರಾರು ಇರಲಿಲ್ಲ. ಅಶಿಸ್ತಿನ ಬಗೆಗೆ ಬೇಸರವಿತ್ತು. ಪದೇ ಪದೇ ವೃತ್ತಿಪರವಾಗಿ ವರ್ತಿಸದ, ತರಬೇತಿಗೆ ಹೇಳಿದ ಸಮಯಕ್ಕೆ ಬಾರದೆ ಉಡಾಫೆ ತೋರುತ್ತಿದ್ದ ರಾಬಿನ್‌ಸನ್‌ ಮೇಲೆ ಅವರಿಗೆ ಸಿಟ್ಟು ಬಂತು. ತಂಡದಿಂದಲೇ ಹೊರಗೆ ಅಟ್ಟಿದರು.

ಹ್ಯಾಂಪ್‌ಷೈರ್‌ ಹಾಗೂ ಎಸೆಕ್ಸ್ ತಂಡಗಳ ಪರವಾಗಿ ಸೆಕೆಂಡ್ ಇಲೆವೆನ್ ಕ್ರಿಕೆಟ್ ಆಡಿ ಅನುಭವ ಪಡೆದುಕೊಂಡ ಮೇಲೆ ಸಸೆಕ್ಸ್‌ ತಂಡದವರು ಈ ಆಟಗಾರನಿಗೆ ಗುತ್ತಿಗೆ ನೀಡಿದ್ದು. ತಾವು ಆಡಿದ ಪ್ರಥಮ ದರ್ಜೆ ಪಂದ್ಯಗಳ ಮೊದಲ ಟೂರ್ನಿಯಲ್ಲೇ 46 ವಿಕೆಟ್‌ಗಳನ್ನು ಕಿತ್ತರು. ಇನಿಂಗ್ಸ್ ಒಂದರಲ್ಲಿ 33ಕ್ಕೆ 6 ವಿಕೆಟ್ ಪಡೆದದ್ದು ಶ್ರೇಷ್ಠ ಸಾಧನೆಯಾಗಿತ್ತು. ವಾರ್ವಿಕ್‌ಷೈರ್ ವಿರುದ್ಧದ ಪಂದ್ಯ ಗೆಲ್ಲಲು ಕಾರಣವಾಗಿದ್ದ ಬೌಲಿಂಗ್ ಅದು. ತಮ್ಮ ಸಹಜ ಬೌಲಿಂಗ್‌ ಶೈಲಿಯಲ್ಲೇ ಆಫ್‌ಸ್ಪಿನ್‌ ಎಸೆತಗಳನ್ನೂ ಹಾಕಬಲ್ಲ ಚಾಕಚಕ್ಯತೆ ಅವರನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಯಿತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದುವರೆಗೆ 286 ವಿಕೆಟ್‌ಗಳನ್ನು ಪಡೆದಿರುವುದೇ ಇದಕ್ಕೆ ಸಾಕ್ಷಿ.

ಕೆಲವು ತಿಂಗಳುಗಳಿಂದ ಕೆಂಪು ಚೆಂಡಿನಲ್ಲಿ ಸ್ವಿಂಗ್‌ ಮಾಡುವುದರಲ್ಲಿ ಸಾಕಷ್ಟು ಪಳಗಿದ್ದರಿಂದ ರಾಬಿನ್‌ಸನ್ ಅವರಿಗೆ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಲು ಟೆಸ್ಟ್‌ ಪಂದ್ಯಕ್ಕೆ ಆಹ್ವಾನ ಸಿಕ್ಕಿತು. ಅವರನ್ನು ಆರಿಸಿದವರೆಲ್ಲ ಈಗ ಪೇಚಿಗೆ ಸಿಲುಕಿದ್ದಾರೆ. ಇಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಬಿನ್‌ಸನ್ ಟ್ವೀಟ್‌ಗಳ ಬಗೆಗೆ ಬೇಸರ ಹೊರಹಾಕಿದರು. ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್ ವಾನ್ ಇಸಿಬಿಯನ್ನೇ ತರಾಟೆಗೆ ತೆಗೆದುಕೊಂಡರು. ಆಟಗಾರನನ್ನು ಆಯ್ಕೆ ಮಾಡುವಾಗ ಇತಿ ವೃತ್ತಾಂತ ಅರಿತುಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯ. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಆಟಗಾರರು ಎಷ್ಟು ಜಾಗ್ರತೆಯಿಂದ, ಜವಾಬ್ದಾರಿಯಿಂದ ಇರಬೇಕು ಎನ್ನುವುದಕ್ಕೆ ಈ ಪ್ರಕರಣ ಪಾಠವಾಗಿದೆ ಎಂದು ಇಂಗ್ಲೆಂಡ್‌ನ ಸಜ್ಜನ ಆಟಗಾರ, ವೀಕ್ಷಕ ವಿವರಣೆಕಾರ ನಾಸಿರ್‌ ಹುಸೇನ್ ಹೇಳಿದರು. ಅಷ್ಟೇ ಅಲ್ಲ, ‘ಹದಿನೆಂಟು ವರ್ಷದ ಯುವಕನೊಬ್ಬ ಅಂತಹ ಟ್ವೀಟ್‌ಗಳನ್ನು ಮಾಡಿ, ಜೀರ್ಣಿಸಿಕೊಂಡು, ಇಷ್ಟು ವರ್ಷ ತನ್ನ ತಪ್ಪಿನ ಅರಿವೆಯೇ ಇಲ್ಲದಂತೆ ಇರಗೊಡುವ ಸಮಾಜವನ್ನು ನೋಡಿದರೆ ನನಗೆ ಭಯವಾಗುತ್ತಿದೆ. ನಾವೆಲ್ಲಿಗೆ ಹೋಗುತ್ತಿದ್ದೇವೆ? ಆ ಟ್ವೀಟ್‌ಗಳನ್ನು ನಾನೂ ಓದಿದೆ. ತೀರಾ ಕೆಟ್ಟದಾಗಿವೆ’ ಎಂದೂ ಅವರು ತೂಕದ ಮಾತನ್ನಾಡಿದ್ದಾರೆ.

ಒಂದು ಟೆಸ್ಟ್‌, 252 ಎಸೆತಗಳು, ಕೊಟ್ಟಿದ್ದು 101 ರನ್‌, ಏಳು ವಿಕೆಟ್–ಇದು ರಾಬಿನ್‌ಸನ್‌ ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನ ಬೌಲಿಂಗ್‌ನ ಗಳಿಕೆ. ಹತ್ತು ವರ್ಷದ ಹಿಂದೆ ಬರೆದ ಟ್ವೀಟ್‌ಗಳು 27 ವರ್ಷ ಪ್ರಾಯದವನಿಗೂ ಮುಳುವಾಗಬಲ್ಲವು ಎನ್ನುವುದನ್ನು ಈ ಪ್ರಕರಣ ಸಾಬೀತುಪಡಿಸಿದೆ.

‘ಇಂಟರ್ನೆಟ್‌ ನಿಮ್ಮನ್ನು ಮರೆಯುವುದಿಲ್ಲ, ಕ್ಷಮಿಸುವುದೂ ಇಲ್ಲ’ ಎಂದು ಭಾರತದ ಮಾಜಿ ಕ್ರಿಕೆಟರ್ ಆಕಾಶ ಚೋಪ್ರಾ ಹೇಳಿದಿರುವುದೂ ಸತ್ಯ. ದಕ್ಷಿಣ ಆಫ್ರಿಕಾದ ಲಾನ್ಸ್‌ ಕ್ಲೂಸ್ನರ್‌, ಆಸ್ಟ್ರೇಲಿಯಾದ ಆ್ಯಂಡ್ರೂ ಸೈಮಂಡ್ಸ್‌, ಇಂಗ್ಲೆಂಡ್‌ನ ನೀಲ್‌ ಫೇರ್‌ಬ್ರದರ್, ಶ್ರೀಲಂಕಾದ ಲಾಸಿತ್ ಮಲಿಂಗ ಇವರೆಲ್ಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ಲಯ ಕಂಡುಕೊಳ್ಳಲಾಗದೆ ಏಕದಿನ ಪಂದ್ಯಗಳ ಚಮತ್ಕಾರದಿಂದಾಗಿಯೇ ಗುರುತಾಗಿದ್ದವರು. ಅಂತಹುದರಲ್ಲಿ ಎಂದೋ ತಪ್ಪು ಮಾಡಿರುವ ರಾಬಿನ್‌ಸನ್‌ ತಟ್ಟೆಯಲ್ಲಿಟ್ಟು ಕೊಟ್ಟ ಟೆಸ್ಟ್‌ ಅವಕಾಶವನ್ನು ನೆಲಕ್ಕೆ ಚೆಲ್ಲಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT