ಮಂಗಳವಾರ, ನವೆಂಬರ್ 24, 2020
22 °C

PV Web Exclusive | ಆಟದ ಮನೆ: ಇಶಾನ್‌ಗೆ ಅಂದು ಬೈಗುಳ; ಇಂದು ಸಮ್ಮಾನ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಇಶಾನ್ ಕಿಶನ್ 2018ರಲ್ಲಿ ಕೋಚ್ ಮಹೇಲ ಜಯವರ್ಧನೆ ಅವರಿಂದ ವಿಪರೀತ ಬೈಗುಳ ಕೇಳಿದ್ದರು. ‘ಅಶಿಸ್ತಿನ ಮೂಟೆ’ ಎಂದು ಆಗ ಕರೆಸಿಕೊಂಡಿದ್ದ ಆಟಗಾರ, ಈ ಸಲದ ಐಪಿಎಲ್‌ನಲ್ಲಿ ಮಿಂಚಿದ್ದು ಕ್ರಿಕೆಟ್‌ ಯಾರು ಯಾರನ್ನು ಹೇಗೆಲ್ಲ ರೂಪಿಸುತ್ತದೆ ಎನ್ನುವುದಕ್ಕೆ ಸಾಕ್ಷಿ. ಅತಿ ಹೆಚ್ಚು ಸಿಕ್ಸರ್‌ಗಳನ್ನು ಈ ಬಾರಿ ಐಪಿಎಲ್‌ನಲ್ಲಿ ಗಳಿಸಿದ ಇಶಾನ್ ಆಟವು ಬದಲಾದದ್ದು ಹೇಗೆ ಎನ್ನುವುದು ಆಸಕ್ತಿಕರ.

***

ನನ್ನ ಸಹಜ ಆಟವನ್ನು ಹತ್ತಿಕ್ಕಿಬಿಟ್ಟರೆ ನಾನೊಬ್ಬ ಅರೆ ಬ್ಯಾಟ್ಸ್‌ಮನ್ ಆಗಿಬಿಡುವೆ: -ಇಶಾನ್ ಕಿಶನ್.

ಹೋದ ವರ್ಷದ ಮಳೆಗಾಲ ಮುಗಿಯುತ್ತಿದ್ದ ಸಂದರ್ಭ. ತಿರುವನಂತಪುರದ ಗ್ರೀನ್‌ಫೀಲ್ಡ್ಸ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರಿನ ಅನೌಪಚಾರಿಕ ಏಕದಿನ ಪಂದ್ಯ. ಮಳೆ ಬಂದಿದ್ದರಿಂದ 21 ಓವರ್‌ಗಳ ಶೂಟ್‌ಔಟ್‌ಗೆ ಆಟ ಮೊಟಕಾಯಿತು. ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ‘ಎ’ ತಂಡ 163 ರನ್‌ಗಳ ಗುರಿ ಒಡ್ಡಿತ್ತು. 9 ಓವರ್‌ಗಳು ಮುಗಿದಾಗ ಭಾರತ ‘ಎ’ 57ಕ್ಕೆ 3. ಕುಶಲಮತಿ ಶುಭಮನ್ ಗಿಲ್ ಚೆನ್ನಾಗಿ ಆಡುತ್ತಿದ್ದಾಗಲೇ ಔಟಾಗಿದ್ದರು. ಆಗ ಐದನೇ ಬ್ಯಾಟ್ಸ್‌ಮನ್ ಆಗಿ ಆಡಲು ಇಳಿದದ್ದು ಜಾರ್ಖಂಡ್ ಹುಡುಗ ಇಶಾನ್ ಕಿಶನ್. ‍ಪ್ರತಿ ಓವರ್‌ಗೆ 9ಕ್ಕಿಂತ ಹೆಚ್ಚು ರನ್‌ಗಳನ್ನು ಹೊಡೆಯುವ ಸವಾಲು. ಇಶಾನ್ ಸಹಜ ಆಟಕ್ಕಿಳಿದರು. ನಾಲ್ಕು ಬೌಂಡರಿ, ನಾಲ್ಕು ಸಿಕ್ಸರ್. 24 ಎಸೆತಗಳಲ್ಲಿ 55 ಹೊಡೆದು ಔಟಾದಾಗ ಗೆಲ್ಲಲು 38 ಎಸೆತಗಳಲ್ಲಿ ಬರೀ 32 ರನ್ ಬೇಕಿತ್ತು. ಆಮೇಲೆ ಭಾರತ ‘ಎ’ ಆ ಪಂದ್ಯ ಗೆದ್ದಿತು.

ಆ ದಿನ ಅವರ ಸಹಜ ಆಟ ಯಾವುದು ಎನ್ನುವುದರ ಪ್ರಾತ್ಯಕ್ಷಿಕೆ ಶುಭಮನ್ ಗಿಲ್ ತರಹದವರಿಗೂ ಸಿಕ್ಕಿತ್ತು. ಆಮೇಲೆ ದುಲೀಪ್ ಟ್ರೋಫಿ ಪಂದ್ಯವೊಂದು ನಡೆದಾಗ ಆಲೂರಿನಲ್ಲಿ ಕಿಶನ್ ತಮ್ಮ ಸಹಜ ಆಟದ ಕುರಿತು ಸುದ್ದಿಗಾರರ ಎದುರು ಮಾತನಾಡಿದ್ದು. ಪುಲ್ ಶಾಟ್ ಹಾಗೂ ಬಿಹೈಂಡ್ ದಿ ಸ್ವ್ಕೇರ್‌ನತ್ತ ಹೊಡೆಯುವುದರಲ್ಲಿ ಇಶಾನ್ ನಿಸ್ಸೀಮರು. ‘ಮಿಡ್ಲ್ ಅಂಡ್ ಲೆಗ್ ಸ್ಟಂಪ್‌’ನ ಲೈನ್‌ ಕಡೆಗೆ ಬೌಲಿಂಗ್ ಮಾಡುವವರಿಗೆ ‘ಅಕ್ರಾಸ್‌’ ಹೋಗಿ (ಗಾರ್ಡ್‌ನ ಸ್ಥಳದಿಂದ ಮುಂದಕ್ಕೆ ನಡೆದು ಲೆಗ್‌ಸೈಡ್‌ನತ್ತ ಗುರಿ ಮಾಡುವ ಪರಿ), ‘ಲಾಂಗ್ ಆನ್ ಮತ್ತು ಡೀಪ್ ಬ್ಯಾಕ್‌ವರ್ಡ್‌ ಸ್ವ್ಕೇರ್‌ಲೆಗ್‌’ ಜಾಗದಲ್ಲಿ ದೊಡ್ಡ ಹೊಡೆತಗಳಿಗೆ ಯತ್ನಿಸುವುದು ವೈಖರಿ.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಶಾನ್ ಎಲ್ಲರಿಗಿಂತ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದಾಗ ಅವರ ಹೆಜ್ಜೆಗುರುತುಗಳು ನೆನಪಾದವು. 30 ಸಿಕ್ಸರ್‌ಗಳನ್ನು ಹೊಡೆದ ಅವರ ಆಟವನ್ನು ನೋಡಿ ‘ಮುಂಬೈ ಇಂಡಿಯನ್ಸ್‌’ ನಾಯಕ ರೋಹಿತ್ ಶರ್ಮ ಕೂಡ ಶಹಬ್ಬಾಸ್‌ಗಿರಿ ಕೊಟ್ಟರು. ‘ಇಂತಹ ಹುಡುಗರಿಗೆ ತಮ್ಮ ಸಹಜ ಆಡ ಆಡಲು ಬಿಡಬೇಕು’ ಎಂದು ಮಾತಿನ ಸರ್ಟಿಫಿಕೇಟನ್ನೂ ಇತ್ತರು.

ತಮ್ಮದೇ ಜಾರ್ಖಂಡ್‌ನ ಸಹ ಆಟಗಾರ ಸೌರಭ್ ತಿವಾರಿ ಈ ಸಲ ‘ಮುಂಬೈ ಇಂಡಿಯನ್ಸ್‌’ನ ನಾಲ್ಕನೇ ಬ್ಯಾಟ್ಸ್‌ಮನ್ ಆಗಿದ್ದರು. 42 ಹಾಗೂ 21 ರನ್‌ಗಳನ್ನು ಎರಡು ಇನಿಂಗ್ಸ್‌ಗಳಲ್ಲಿ 143ರ ಸ್ಟ್ರೈಕ್‌ ರೇಟ್‌ನಲ್ಲಿ ಗಳಿಸಿ ಅವರು ಪರಿಣಾಮಕಾರಿ ಎನಿಸಿಕೊಂಡಿದ್ದರು. ಅವರು ಗಾಯಾಳುವಾಗಿ ಆಡಲು ಅಲಭ್ಯರಾದದ್ದೇ ಇಶಾನ್‌ಗೆ ಅವಕಾಶದ ಕದ ತೆರೆದುಕೊಂಡಿತು. ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (ಆರ್‌ಸಿಬಿ) ವಿರುದ್ಧ 202 ರನ್‌ಗಳ ಗುರಿ ಎದುರಲ್ಲಿದ್ದಾಗ ಆಡುವುದು ದೊಡ್ಡ ಅವಕಾಶವೇನೋ ಹೌದು. ಆದರೆ, ಒತ್ತಡ ಕಡಿಮೆಯೇನಲ್ಲ. 58 ಎಸೆತಗಳಲ್ಲಿ 99 ರನ್‌ಗಳಿಸಿ ಕೈರನ್ ಪೊಲಾರ್ಡ್‌ ಜತೆಗೆ ಪಂದ್ಯವನ್ನು ಸೂಪರ್‌ ಓವರ್‌ವರೆಗೆ ಇಶಾನ್ ಕೊಂಡೊಯ್ದದ್ದು ಅವರ ಸಹಜ ಆಟಕ್ಕೆ ಇನ್ನೊಂದು ಉದಾಹರಣೆ. ಶತಕದ ಸನಿಹದಲ್ಲಿ ಎಡವಿದ ಅವರು ಪಂದ್ಯ ಮುಗಿಯುವವರೆಗೆ ಪ್ಯಾಡ್‌ ಬಿಚ್ಚಲಿಲ್ಲ. ಸೂಪರ್ ಓವರ್‌ ನಡೆದಾಗಲೂ ಕದಲಲಿಲ್ಲ. ಮನಸ್ಸಿನ ತುಂಬ ಸೂಪರ್ ಓವರ್‌ಗೆ ತೆಗೆದುಕೊಂಡು ಹೋಗದೆ ಪಂದ್ಯ ಗೆಲ್ಲಿಸಿಕೊಡಲಿಲ್ಲವಲ್ಲ ಎಂಬ ಕೊರಗು. ಅದು ಅವರ ಮುಖದಲ್ಲಿ ಎದ್ದುಕಾಣುತ್ತಿತ್ತು. ಬೆವರಿನಿಂದ ತೊಪ್ಪೆಯಾಗಿದ್ದ ಅವರ ದೇಹದ ಕಣ ಕಣದಲ್ಲೂ ಆ ದಿನ ಸಾರ್ಥಕ್ಯ. ನವದೀಪ್ ಸೈನಿ ಆವತ್ತು ಫಾರ್ಮ್‌ನಲ್ಲಿದ್ದ ಬೌಲರ್. ಅವರಿಗೇ ಒಂದಾದ ಮೇಲೆ ಒಂದರಂತೆ ಇಶಾನ್ ಸಿಕ್ಸರ್ ಹೊಡೆದರು. ಪೊಲಾರ್ಡ್‌ ಪಿಚ್‌ಗೆ ಕುದುರಿಕೊಳ್ಳುತ್ತಿದ್ದ ಹೊತ್ತಿನಲ್ಲಿ ಯಜುವೇಂದ್ರ ಚಹಲ್ ಅವರನ್ನು ಗುರಿಯಾಗಿಸಿ ಹೊಡೆದದ್ದಂತೂ ರೋಚಕ. 9 ಸಿಕ್ಸರ್‌ಗಳನ್ನು ಸಿಕ್ಕ ಮೊದಲ ಅವಕಾಶದಲ್ಲೇ ಈ ಸಲ ಅವರು ಹೊಡೆದದ್ದು ನಾಯಕ ರೋಹಿತ್ ಶರ್ಮಗೆ ಸಿಕ್ಕ ಹೊಸ ಇಂಧನ.

ಇಶಾನ್ ಈ ಬಾರಿಯ ಐಪಿಎಲ್‌ನಲ್ಲಿ ದಿಗ್ಗಜ ಬೌಲರ್‌ಗಳಿಗೆಲ್ಲ ಜವಾಬು ಕೊಟ್ಟಿದ್ದಾರೆ. 99 ರನ್ ಹೊಡೆದ ಪಂದ್ಯದಲ್ಲಿ ನವದೀಪ್ ಸೈನಿ ಅವರಿಗೆ 20 ಎಸೆತಗಳಲ್ಲಿ 38 ರನ್ ಗಳಿಸಿದ್ದರು. ಅದರಲ್ಲಿ ನಾಲ್ಕು ಸಿಕ್ಸರ್‌ಗಳಿದ್ದುದು ವಿಶೇಷ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಇನ್ನೊಂದು ಪಂದ್ಯದಲ್ಲಿ ಕಗಿಸೊ ರಬಾಡ ಹಾಗೂ ಆಂನ್ರಿಚ್ ನೋಕಿಯೆ ಅವರ 14 ಎಸೆತಗಳಲ್ಲಿ 36 ರನ್‌ಗಳನ್ನು ದೋಚಿದ್ದು ಮರೆಯಲಾಗದ ಇನಿಂಗ್ಸ್‌. ಅಷ್ಟೇ ಏಕೆ, ‘ರಾಜಸ್ಥಾನ್ ರಾಯಲ್ಸ್’ ತಂಡದ ಹುರಿಯಾಳು ಜೋಫ್ರಾ ಆರ್ಚರ್ ಹಾಕಿದ ಯಾರ್ಕರ್‌ ಅನ್ನು ಲೋ ಫುಲ್‌ಟಾಸ್ ಆಗಿ ಪರಿವರ್ತಿಸಿ ಬೌಂಡರಿ ಗಳಿಸಿದ ಕ್ಷಣ ಇಶಾನ್ ಇರಾದೆಗೆ ಕನ್ನಡಿ ಹಿಡಿದಂತಿತ್ತು.

2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದವರು ಇದೇ ಇಶಾನ್. ವೆಸ್ಟ್‌ಇಂಡೀಸ್ ಚಾಂಪಿಯನ್ ಆದ ಆ ಟೂರ್ನಿಯಲ್ಲಿ ಭಾರತ ರನ್ನರ್ ಅಪ್ ಆಗಿತ್ತಾದರೂ ಇಶಾನ್ ವೈಯಕ್ತಿಕವಾಗಿ ಪರದಾಡಿದ್ದರು. ಆರು ಇನಿಂಗ್ಸ್‌ಗಳಲ್ಲಿ ಬರೀ 73 ರನ್‌ಗಳನ್ನು ಹೊಡೆದಿದ್ದರು. ಅದೇ ತಂಡದಲ್ಲಿ ಇದ್ದ ರಿಷಭ್ ಪಂತ್ ಈಗಾಗಲೇ ಭಾರತ ತಂಡವನ್ನು ವಿಕೆಟ್ ಕೀಪರ್ ಆಗಿ ಪ್ರತಿನಿಧಿಸುವ ಅವಕಾಶ ಪಡೆದದ್ದನ್ನು ನಾವು ಕಂಡಿದ್ದೇವೆ. ಜೂನಿಯರ್ ಹಂತದಲ್ಲಿ ನಾಯಕನಾದರೂ ಒಂದು ಬೆಳ್ಳಿಗೆರೆ ಸಿಗದೇ ಇದ್ದರೆ ಆಮೇಲೆ ಮೇಲೇರುವುದು ಎಷ್ಟು ಕಷ್ಟ ಎನ್ನುವುದಕ್ಕೆ ಇದು ಉದಾಹರಣೆ.

2014ರಲ್ಲಿ ಇಶಾನ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟಿದ್ದು. ಮೊದಲ ಹತ್ತು ಪ್ರಥಮ ದರ್ಜೆಯ ಪಂದ್ಯಗಳಲ್ಲಿ ಒಂದು ಶತಕ, ಐದು ಅರ್ಧ ಶತಕಗಳು ಬಂದವು. 2015ರಲ್ಲಿ ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ಸೌರಾಷ್ಟ್ರದ ಎದುರು ರಾಜ್‌ಕೋಟ್‌ನಲ್ಲಿ 69 ಎಸೆತಗಳಲ್ಲಿ 87 ರನ್ ಹೊಡೆದಾಗ ಮೊದಲು ಇಶಾನ್ ಬೆರಗಿನಂತೆ ಕಂಡಿದ್ದರು. ಚೆಂಡು ಸ್ವಿಂಗ್‌ ಆಗುತ್ತಿದ್ದ ಪಿಚ್‌ನಲ್ಲಿ ಎಂಟು ಸಿಕ್ಸರ್‌ಗಳನ್ನು ಹೊಡೆಯುವುದು ದೊಡ್ಡ ಸಾಧನೆಯೇ ಆಗಿತ್ತು. ಆ ಇನಿಂಗ್ಸ್‌ನಲ್ಲಿ ತೋರಿದ್ದ ಧೋರಣೆಯಿಂದಲೇ ಅವರಿಗೆ ಭಾರತದ 19 ವರ್ಷದೊಳಗಿನವರ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು.

2018ರಲ್ಲಿ ‘ಮುಂಬೈ ಇಂಡಿಯನ್ಸ್’ ತಂಡ 6.2 ಕೋಟಿ ರೂಪಾಯಿ ಹರಾಜಿಗೆ ಇಶಾನ್ ಅವರನ್ನು ಪಡೆದುಕೊಂಡಿತ್ತು. ತಂಡದ ಉಸ್ತುವಾರಿ ಸಿಬ್ಬಂದಿ ಹೇಳಿದ ಮಾತನ್ನು ಈ ಹುಡುಗ ಕೇಳುತ್ತಿರಲಿಲ್ಲ ಎಂಬ ಆರೋಪ ಆಗ ಕೇಳಿಬಂದಿತ್ತು. ಕೋಚ್ ಜಯವರ್ಧನೆ ಕೂಡ ‘ಬರೀ ಜೋರಾಗಿ ಹೊಡೆಯುವುದಷ್ಟೇ ಬ್ಯಾಟಿಂಗ್ ಅಲ್ಲ’ ಎಂದು ಕುಪಿತರಾಗಿ ಮಾತನಾಡಿದ್ದ ವಿಡಿಯೊ ಆಗ ಸದ್ದು ಮಾಡಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಈಗಲೂ ಆ ಟೂರ್ನಿಯಲ್ಲಿ ಹುಡುಗು ಬುದ್ಧಿಯ ಆಟಗಾರನ ಕುರಿತು ಹೇಳಿದ್ದ ಪಾಠಗಳ ವಿಡಿಯೊ ಲಭ್ಯ. 14 ಇನಿಂಗ್ಸ್‌ಗಳಲ್ಲಿ ಆಗ 275 ರನ್‌ಗಳನ್ನು ಇಶಾನ್ ಗಳಿಸಿದರು. ಒಮ್ಮೆ ಅವರತ್ತ ಕ್ಯಾಮೆರಾ ಹಿಡಿದಾಗ, ‘ನಾನು ಚೆನ್ನಾಗಿ ಆಡುತ್ತಿಲ್ಲ. ಕ್ರಿಕೆಟ್ ಬಗ್ಗೆ ಏನೂ ಕೇಳಬೇಡಿ. ತಲೆಯಲ್ಲಿ ಏನೂ ಇಲ್ಲ’ ಎಂದು ಖುದ್ದು ಇಶಾನ್ ಹತಾಶೆಯಿಂದ ಹೇಳಿದ್ದರು. 2019ರಲ್ಲಿ ಏಳು ಪಂದ್ಯಗಳಲ್ಲಿ ಬರೀ 101 ರನ್‌ಗಳನ್ನು ಅವರು ಹೊಡೆದರಷ್ಟೆ.

ಅನೌಪಚಾರಿಕ ಪಂದ್ಯಗಳು ನಡೆದಾಗ ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರ ಸಿಂಗ್ ಧೋನಿ ಈ ಪ್ರತಿಭೆಗೆ ಅಗತ್ಯ ಪಾಠಗಳನ್ನು ಹೇಳಿದರು. ಈ ಸಲ ಹಾರ್ದಿಕ್ ಪಾಂಡ್ಯ ಹಾಗೂ ಕೈರನ್ ಪೊಲಾರ್ಡ್ ತಂಡದಲ್ಲಿ ತಂತಮ್ಮ ಪಾತ್ರಗಳ ಕುರಿತು ಸಿದ್ಧರಾಗುವ ಬಗೆ ಹೇಗೆ ಎನ್ನುವುದನ್ನು ಇಶಾನ್ ಹತ್ತಿರದಿಂದ ತಿಳಿದುಕೊಂಡರು. ರೋಹಿತ್ ಶರ್ಮ ಆಡಲು ಆಗದೇ ಇದ್ದಾಗ ಇನಿಂಗ್ಸ್‌ ಆರಂಭಿಸುವ ಅವಕಾಶ ದೊರೆತದ್ದೇ ‘ಡೆಲ್ಲಿ ಕ್ಯಾಪಿಟಲ್ಸ್’ ಎದುರು 42 ಎಸೆತಗಳಲ್ಲಿ 72 ರನ್ ಗಳಿಸಿ, ಕಲಿತ ಪಾಠದ ಪ್ರಾತ್ಯಕ್ಷಿಕೆ ನೀಡಿದರು. ತಾಳ್ಮೆಯಿಂದ ಮೊದಲ ಕೆಲವು ಎಸೆತಗಳನ್ನು ಆಡಿ, ಆಮೇಲೆ ಸ್ಫೋಟಗೊಂಡರೆ ಎದುರಾಳಿ ತಂಡದ ಬೌಲರ್‌ಗಳ ಜಂಘಾಬಲ ಉಡುಗಿಸಬಹುದು ಎಂಬ ತಂತ್ರವನ್ನು ಕರಗತ ಮಾಡಿಕೊಂಡರು. ಆಫ್‌ಸೈಡ್‌ನತ್ತ ಹೊಡೆಯಲು ತಡಕಾಡುತ್ತಿದ್ದ ಅವರು, ಆ ಕೊರತೆಯನ್ನೂ ನೀಗಿಕೊಂಡರು. 2018ರಲ್ಲಿ ಹುಡುಗು ಬುದ್ಧಿಯ ಆಟಗಾರನಂತೆ ಇದ್ದಾಗ ಇಶಾನ್‌ಗೆ ಇನ್ನೂ 19 ವರ್ಷ. ಈಗ ಮಾಗಿದ ಆಟಗಾರನೊಬ್ಬನ ಕುರುಹುಗಳನ್ನು ಅವರು ಕಾಣಿಸಿದ್ದಾರೆ. ಧೋನಿ ಇನ್ನು ಭಾರತದ ಪರವಾಗಿ ವಿಕೆಟ್ ಕೀಪಿಂಗ್ ಮಾಡುವುದಿಲ್ಲ. ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್ ಅಸಾಲಿನಲ್ಲಿ ಮುಂದೆ ನಿಂತಿದ್ದಾರೆ. ರಿಷಭ್ ಪಂತ್ ಬಿಳಿ ಚೆಂಡಿನಲ್ಲಿ ಆಡಲು ಅಷ್ಟೇನೂ ಯೋಗ್ಯರಲ್ಲ ಎಂದು ಆಯ್ಕೆಗಾರರು ತೀರ್ಮಾನಿಸಿರುವುದರಿಂದ ಸಾಲಿನಲ್ಲಿ ಹಿಂದೆ ಅವರೂ ನಿಂತಿದ್ದಾರೆ. ಅವರೊಟ್ಟಿಗೆ ಈಗ ಇಶಾನ್ ಪೋಟಿಗೆ ಇಳಿಯುವ ಸಾಧ್ಯತೆ ಕಾಣುತ್ತಿದೆ. ಯಾಕೆಂದರೆ, ಐಪಿಎಲ್‌ನಲ್ಲಿ ಈ ಸಲ ಅವರು 516 ರನ್‌ಗಳ ಗಮನಾರ್ಹ ಕಾಣ್ಕೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು