ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂಗೀಯ ದ್ವೇಷದ ನಂಜು: ಶ್ರೇಷ್ಠತೆಯ ‘ಈ’ ಸೊಕ್ಕಿಗಿಲ್ಲ ಅಂತ್ಯ

Last Updated 17 ಜನವರಿ 2021, 4:23 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ ಮಾನವೀಯ ಮೌಲ್ಯಗಳನ್ನು ಬಿತ್ತುವ ಸಾಧನಗಳಲ್ಲೊಂದಾದ ಕ್ರೀಡೆಯಲ್ಲಿ ಜನಾಂಗೀಯ ದ್ವೇಷದ ನಂಜು ಆಗಾಗ ಹೆಡೆ ಎತ್ತುತ್ತಲೇ ಇದೆ. ಬಿಳಿ ಚರ್ಮದ ಕೆಲವು ಕಿಡಿಗೇಡಿಗಳ ಶ್ರೇಷ್ಠತೆಯ ವ್ಯಸನದಿಂದ ಕ್ರೀಡಾಸ್ಫೂರ್ತಿಗೆ ಪೆಟ್ಟೂ ಬೀಳುತ್ತಿದೆ. ಈ ಪಿಡುಗಿನ ವಿರುದ್ಧ ಇಡೀ ಜಗತ್ತು ಧ್ವನಿ ಎತ್ತಿದೆ ನಿಜ. ಆದರೆ, ಹೀಯಾಳಿಸುವ ಚಟ ಮಾತ್ರ ಸಾಂಕ್ರಾಮಿಕದಂತೆ ಹಬ್ಬುತ್ತಲೇ ಇದೆಯಲ್ಲ?!

***

ಮನುಷ್ಯನಿಗೆ ಬೇರೆಯವರನ್ನು ಬೈಯುವುದು ಅಥವಾ ಹೀಯಾಳಿಸುವುದು, ಜಾತಿಯ ಹೆಸರಲ್ಲಿ ನಿಂದಿಸುವುದು ಸ್ವಭಾವವೇ ಅಥವಾ ಚಟವೇ? ಬಹಳಷ್ಟು ಜನರಿಗೆ ಇದು ಮಾದಕ ವಸ್ತುಗಳ ಸೇವನೆಯಂತೆ ಮೈಗೆ ಅಂಟಿಕೊಂಡುಬಿಟ್ಟಿರುತ್ತದೆ. ಚಟವಾಗಿಬಿಟ್ಟಿರುತ್ತದೆ. ಇದನ್ನು ಸೊಕ್ಕು ಎಂದೂ ಹೇಳಬಹುದು. ಇದು ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿಯಲ್ಲಿ ಇರುತ್ತದೆ. ಕಾಲಕಾಲಕ್ಕೆ ಅನುಕೂಲಕರವಾಗಿ ಸ್ವಭಾವ, ಚಟ ಎರಡನ್ನೂ ಬದಲಾಯಿಸಿಕೊಳ್ಳುವ ರಾಜಕಾರಣಿಗಳು ಈ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದರೆ, ಸಿನಿಮಾ ಮತ್ತು ಕ್ರೀಡಾರಂಗ ನಂತರದ ಸ್ಥಾನದಲ್ಲಿ ನಿಲ್ಲುತ್ತವೆ. ಭಾರತದ ಸಂಸ್ಕೃತಿ, ಶಿಕ್ಷಣ ವ್ಯವಸ್ಥೆಯನ್ನು ಹಾಳುಮಾಡಿ, ಜನರನ್ನು ಜಾತಿಯ ಮೂಲಗಳಿಂದ ಒಡೆದು, ಅವಮಾನಿಸಿ ಎಲ್ಲವನ್ನೂ ದೋಚಿಕೊಂಡು ಹೋದ ಬ್ರಿಟಿಷರ ಭಾಷೆ, ಆಟ ಮತ್ತು ಚಟವನ್ನು ನಾವೆಲ್ಲ ಅಪ್ಪಿಕೊಂಡಿಲ್ಲವೇ? ಇಂಗ್ಲಿಷ್, ಕ್ರಿಕೆಟ್ ಮತ್ತು ವಿಸ್ಕಿಯನ್ನು ಯಾರಾದರೂ ಬಿಡಲು ಸಾಧ್ಯವೇ ಎಂದು ಕೇಳಿನೋಡಿ. ಇಲ್ಲ, ಅವು ನಮ್ಮ ದೇಹದ ರಕ್ತದ ಗುಂಪುಗಳಾಗಿವೆ.

ಆಸ್ಟ್ರೇಲಿಯದ ಕೆಲ ಜನರು ‘ಮಂಗನಿಂದ ಮಾನವರಾದವರೋ ಅಥವಾ ಮಾನವನಿಂದ ಮಂಗನಾಗುತ್ತಿದ್ದಾರೋ?’ ಎಂಬ ಅನುಮಾನ ಇಂದು ನಿನ್ನೆಯದಲ್ಲ. ಆಸ್ಟ್ರೇಲಿಯದ ಕೆಲ ಕಿಡಿಗೇಡಿಗಳು ಕ್ರಿಕೆಟ್ ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ ತಾವು ಕಪಿಚೇಷ್ಟೆ ಮಾಡುತ್ತ ಬೇರೆಯವರನ್ನು ಅಂದರೆ ತಮ್ಮ ಚರ್ಮದ ಬಣ್ಣಕ್ಕಿಂತ ಭಿನ್ನವಾದವರನ್ನು ಕಂದುಕೋತಿ ಎಂದು ರೇಗಿಸುವುದು ಹೊಸತೇನಲ್ಲ. ಅದು ಅವರಲ್ಲಿರುವ ಹತಾಶ ಮನೋಭಾವ, ಜನಾಂಗೀಯ ದ್ವೇಷದ ಪ್ರತೀಕ. ಬಿಳಿಯ ಬಣ್ಣಕ್ಕಿಂತ ಕಪ್ಪುಬಣ್ಣ ಶ್ರೇಷ್ಠವಾಗಲು ಸಾಧ್ಯವೇ ಇಲ್ಲ ಎಂದು ಬಲವಾಗಿ ನಂಬಿರುವ ಈ ವರ್ಣದ್ವೇಷಿಗಳು, ಅವರಿಗೆ ಹೊಡೆತ ಬೀಳತೊಡಗಿದಾಗ, ಇಂಥ ಅನಾಗರಿಕ ವರ್ತನೆಯಲ್ಲಿ ತೊಡಗುತ್ತಾರೆ.

ಇತ್ತೀಚೆಗೆ ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯ ನಡುವಣ ಟೆಸ್ಟ್ ಪಂದ್ಯದಲ್ಲಿ ಆಗಿದ್ದೇ ಇದು. ತಲೆಗೇರಿದ್ದ ‘ಗುಂಡು’ ನೀಚಬುದ್ಧಿಯ ನಾಲಿಗೆಯನ್ನು ಹರಿಬಿಟ್ಟಿತ್ತು. ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬೂಮ್ರ ಅವರನ್ನು ಸತತ ಎರಡು ದಿನ ‘ಕೋತಿ’, ‘ಕಂದುನಾಯಿ’ ಎಂದು ಅವಮಾನಿಸಿದ ಕೆಲವೇ ಪ್ರೇಕ್ಷಕರ ಪುಂಡಾಟವನ್ನು ಉಳಿದವರು ಬಾಯಿಮುಚ್ಚಿಕೊಂಡು ನೋಡಿದರು. ಯಾರೂ ಅವರ ಕಪಾಳಕ್ಕೆ ಎರಡು ಬಿಟ್ಟು, ಹೊರಹಾಕಲು ಯತ್ನಿಸಲಿಲ್ಲ. ಅವರನ್ನು ಪೊಲೀಸರು ಹೊರಹಾಕಿದರಾದರೂ ಅವರನ್ನು ಬಂಧಿಸಿ ಜೈಲಿಗೆ ತಳ್ಳಲಿಲ್ಲ.

ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು, ಕೆಲವು ಹಿರಿಯ ಆಟಗಾರರು ಆ ಘಟನೆಯನ್ನು ಖಂಡಿಸಿರುವರಾದರೂ ಅದರಿಂದ ಏನೂ ಪ್ರಯೋಜನ ಇಲ್ಲ. ಇದಕ್ಕೆಲ್ಲ ಪೂರ್ಣವಿರಾಮ ಬೀಳಬೇಕೆಂದರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆಟಗಾರರನ್ನು ನಿಂದಿಸಿದ ಪ್ರೇಕ್ಷಕರನ್ನು ಐಸಿಸಿ ರೂಪಿಸಿರುವ ನಿಯಮದಂತೆ ಜೈಲಿಗೆ ಕಳಿಸಿ, ಅವರು ಇನ್ನೆಂದೂ ಯಾವುದೇ ಮೈದಾನ ಪ್ರವೇಶಿಸದಂತೆ ಪ್ರತಿಬಂಧಿಸಬೇಕು. ಕಪ್ಪು ಜನರ ದೇಹದಲ್ಲಿ ಹರಿಯುವ ರಕ್ತದ ಬಣ್ಣವೂ ಕೆಂಪು ಎಂಬುದು ಗೊತ್ತಾಗುವ ಹಾಗೆ ಆ ಬಿಳಿಯರಿಗೆ ಶಿಕ್ಷೆ ವಿಧಿಸಬೇಕು. ಆದರೆ, ಕ್ರಿಕೆಟ್ ಸಾಮ್ರಾಜ್ಯದಲ್ಲಿ ಇನ್ನೂ ಬಿಳಿಯರದೇ ದರ್ಬಾರು!

ಜನಾಂಗೀಯ ನಿಂದನೆ ವಿರುದ್ಧ ಅಂಪೈರ್‌ಗೆ ಭಾರತದ ಮೊಹಮ್ಮದ್ ಸಿರಾಜ್‌ ದೂರು ನೀಡಿದ ಕ್ಷಣ –ಎಎಫ್‌ಪಿ ಚಿತ್ರ
ಜನಾಂಗೀಯ ನಿಂದನೆ ವಿರುದ್ಧ ಅಂಪೈರ್‌ಗೆ ಭಾರತದ ಮೊಹಮ್ಮದ್ ಸಿರಾಜ್‌ ದೂರು ನೀಡಿದ ಕ್ಷಣ –ಎಎಫ್‌ಪಿ ಚಿತ್ರ

ಇಲ್ಲಿ ‘ಶಹಬ್ಬಾಸ್’ ಹೇಳಬೇಕಾಗಿರುವುದು ಭಾರತದ ಆಟಗಾರರಿಗೆ ಮಾತ್ರ. ಆಟಗಾರರಿಬ್ಬರಿಗೆ ಆದ ಅವಮಾನದ ಜೊತೆ, ತಂಡ ಸೋಲಿನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಆಗ ಮೂಡಿಬಂತು ಧೈರ್ಯ ಮತ್ತು ಛಲ. ಚೇತೇಶ್ವರ ಪೂಜಾರ, ರಿಷಭ್ ಪಂತ್, ಹನುಮ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ ಕನಸು ಮನಸಿನಲ್ಲೂ ಎಣಿಸಿರದ ರೀತಿಯಲ್ಲಿ ಆಡಿದರು. ಭಾರತ ಗೆಲ್ಲಲಿಲ್ಲ, ಆದರೆ ಸೋಲಲಿಲ್ಲ. ಪಂದ್ಯ ಡ್ರಾ ಆಯಿತು. ಇದು ಗೆದ್ದಷ್ಟೇ ಮಹತ್ವದ್ದಾಗಿತ್ತು. ಆಸ್ಟ್ರೇಲಿಯ ಆಟಗಾರರಿಗೆ ಮತ್ತು ನಿಂದಕ ಪ್ರೇಕ್ಷಕರಿಗೆ ಕಪಾಳಕ್ಕೆ ಹೊಡೆದ ಹಾಗಾಗಿತ್ತು.

ಆಸ್ಟ್ರೇಲಿಯ ಆಟಗಾರರು ಹತಾಶರಾಗಿದ್ದರು, ಸಿಟ್ಟಿನಿಂದ ಕೈಚೆಲ್ಲಿದ್ದರು. ಈ ಅಂಶಗಳೇ ಅವರಿಗೆ ಮುಳುವಾಗಿದ್ದು. ನಾಯಕ ಟಿಮ್ ಪೇಯ್ನ್ ಇಂಥ ಸಂದರ್ಭದಲ್ಲೂ ತಮ್ಮ ಮೂಲ ಬುದ್ಧಿಯನ್ನು ಬಿಡದೇ ಅಶ್ವಿನ್ ಅವರನ್ನು ಕೆಣಕಿ, ಮಂಗಳಾರತಿ ಮಾಡಿಸಿಕೊಂಡರು. ‘ಅಂತಿಮ ಟೆಸ್ಟ್‌ನಲ್ಲಿ (ಇದೇ 15 ರಿಂದ ಬ್ರಿಸ್ಬೇನ್‍ನಲ್ಲಿ) ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂಬ ಅರ್ಥದಲ್ಲಿ ಟಿಮ್ ಪೇಯ್ನ್ ಕುಟುಕಿದಾಗ, ‘ನೀನು ಭಾರತಕ್ಕೆ ಬಾ, ಅದೇ ನಿನ್ನ ಕೊನೆಯ ಸರಣಿ ಆಗುತ್ತದೆ’ ಎಂದು ಅಶ್ವಿನ್ ವಾಪಸ್ಸು ಕೊಟ್ಟಿದ್ದರು. ಆಸ್ಟ್ರೇಲಿಯದ ಆಟಗಾರರಿಗೆ ಮೈದಾನದಲ್ಲಿ ಎದುರಾಳಿಗಳನ್ನು ಕಾಡುತ್ತಲೇ ಆಡುವುದೆಂದರೆ ಅದೇನೋ ಒಂದು ರೀತಿಯ ವಿಘ್ನಸಂತೋಷ. ಇದಕ್ಕೆ ಮೊದಲು ರಿಷಭ್‌ ಪಂತ್ ಬ್ಯಾಟಿಂಗ್ ಮಾಡುವಾಗ ಹಾಕಿಕೊಂಡಿದ್ದ ಗಾರ್ಡ್ ಗೆರೆಯನ್ನು ಸ್ಟೀವ್ ಸ್ಮಿತ್ ಕಾಲಿನಿಂದ ಅಳಿಸಿಹಾಕಿ ತಮ್ಮ ದುರ್ಬುದ್ಧಿಯನ್ನು ತೋರಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಕಿತಾಪತಿ ಮಾಡಿ, ಒಂದು ವರ್ಷ ಆಟದಿಂದಲೇ ಹೊರಹಾಕಿಸಿಕೊಂಡು ನಾಯಕಪಟ್ಟವನ್ನೂ ಕಳೆದುಕೊಂಡಿದ್ದ ಸ್ಮಿತ್‍ ಅವರಿಗೆ ಇನ್ನೂ ಬುದ್ಧಿ ಬಂದಿಲ್ಲ ಅನಿಸುತ್ತದೆ.

ಆಸ್ಟ್ರೇಲಿಯದ ಆಟಗಾರರು ಚೆನ್ನಾಗಿ ಆಡುತ್ತಾರೆ ಎಂಬುದು ಸುಳ್ಳಲ್ಲ. ಆದರೆ, ಅವರು ತಮ್ಮ ಶ್ರೇಷ್ಠತೆಯನ್ನು ಮೆರೆಯಲು ಹೋಗಿ ಹೀಗೆ ಎಡವುತ್ತಲೇ ಇರುತ್ತಾರೆ. ಎದುರಾಳಿಗಳನ್ನು ಮಣಿಸಲು ಇದೊಂದು ಮಾನಸಿಕ ಅಸ್ತ್ರ ಎಂದವರು ಭಾವಿಸಿದ್ದಾರೆ. ಅದಕ್ಕೆ ಆಗಿಂದಾಗಲೇ ತಿರುಗೇಟು ಕೊಟ್ಟಾಗ ಸರಿಹೋಗುತ್ತಾರೆ. ವಿರಾಟ್ ಕೊಹ್ಲಿ ಇದ್ದಿದ್ದರೆ ಇಂಥ ಸಾಹಸಕ್ಕೆ ಪೇಯ್ನ್ ಆಗಲೀ ಸ್ಟೀವ್ ಸ್ಮಿತ್ ಆಗಲೀ ಕೈಹಾಕುತ್ತಿರಲಿಲ್ಲ ಎಂದೆನಿಸುತ್ತದೆ. ವಿರಾಟ್ ಮೊದಲ ಟೆಸ್ಟ್ ನಂತರ ವಾಪಸ್ಸಾದರು. ಅವರಿರುವವರೆಗೆ ಯಾವ ಪಂದ್ಯಗಳಲ್ಲೂ ಅನುಚಿತ ವರ್ತನೆಗಳು ಯಾರಿಂದಲೂ ಬರಲಿಲ್ಲ (ಐಪಿಎಲ್‍ನಿಂದ ಹೊರಹಾಕಬಹುದೆಂಬ ಹೆದರಿಕೆ ಇರಬಹುದು! ಹಣ ಕೊಡುತ್ತೇನೆಂದರೆ ಕ್ರಿಕೆಟ್ ಆಟಗಾರರು ಸಭ್ಯರಾಗಿಬಿಡುತ್ತಾರೆ ಎಂಬುದು ಹಳೆಯ ಜೋಕ್!).

ಹನ್ನೆರಡು ವರ್ಷಗಳ ಹಿಂದೆ, ಇದೇ ಸಿಡ್ನಿ ಮೈದಾನದಲ್ಲೇ ‘ಮಂಕಿಗೇಟ್’ ಪ್ರಕರಣ ನಡೆದಿತ್ತು. ಇದು ನಡೆದದ್ದು ಹರಭಜನ್ ಸಿಂಗ್ ಮತ್ತು ಆಂಡ್ರ್ಯೂ ಸೈಮಂಡ್ಸ್ ನಡುವೆ. ಆಗ ಅನಿಲ್ ಕುಂಬ್ಳೆ ನಾಯಕತ್ವದ ಭಾರತ ತಂಡ ಆಟ ನಿಲ್ಲಿಸಿ ಸ್ವದೇಶಕ್ಕೆ ವಾಪಸ್ಸಾಗುವಂಥ ವಾತಾವರಣ ನಿರ್ಮಾಣವಾಗಿತ್ತು. ಸ್ಟೀವ್ ವಾ ಅವರ ಸತತ 16 ಟೆಸ್ಟ್ ಗೆಲುವುಗಳ ದಾಖಲೆಯನ್ನು ಮುರಿಯುವ ಯೋಚನೆಯಲ್ಲಿದ್ದ ರಿಕಿ ಪಾಂಟಿಂಗ್, ಶತಾಯಗತಾಯ ಭಾರತ ತಂಡವನ್ನು ಮಣಿಸುವ ಗುರಿ ಹೊಂದಿದ್ದರು. ಆಗ ಆಸ್ಟ್ರೇಲಿಯ ಆಟಗಾರರ ಹಳೆಯ ಚಟ ಬಹಿರಂಗವಾಗಿತ್ತು. ಆ ಎರಡನೇ ಟೆಸ್ಟ್‌ನ ಮೂರನೇ ದಿನ ‘ಮಂಕಿಗೇಟ್’ ಘಟನೆ ಸಂಭವಿಸಿತು.

ಮೊದಲ ಟೆಸ್ಟ್ ಗೆದ್ದಿದ್ದ ರಿಕಿ ಪಾಂಟಿಂಗ್ ಎರಡನೆಯದನ್ನೂ ಗೆದ್ದರೆ, ದಾಖಲೆ ಮುರಿದಂತಾಗುತ್ತಿತ್ತು. ಆದರೆ, ಮೊದಲ ದಿನವೇ ಅವರ ತಂಡ ಕುಸಿದು, ಪೆಟ್ಟು ತಿಂದಿತ್ತು. ಆಗ ಆಂಡ್ರ್ಯೂ ಸೈಮಂಡ್ಸ್ (ಔಟಾಗದೆ 162) ತಂಡಕ್ಕೆ ಆಸರೆಯಾಗಿದ್ದರು. ಆದರೆ, ಇಲ್ಲಿ ಅಂಪೈರುಗಳ ತೋರುಬೆರಳು ಕೆಲಸ ಮಾಡದಿದ್ದುದೂ ನೆರವಾಗಿತ್ತು. ಅದಕ್ಕೆ ಸರಿಯಾಗಿ ಸೈಮಂಡ್ಸ್, ‘ನಾನು ಕ್ಯಾಚ್ ಕೊಟ್ಟಿದ್ದೆ. ಆದರೆ ಅಂಪೈರ್ ಔಟ್ ಕೊಡಲಿಲ್ಲ. ಹೀಗಾಗಿ ನಾನು ಆಟ ಮುಂದುವರಿಸಿದೆ’ ಎಂದು ಹೇಳಿದ್ದರು. ಸಚಿನ್ ತೆಂಡೂಲ್ಕರ್ (ಅಜೇಯ 154) ಮತ್ತು ಹರಭಜನ್ ಸಿಂಗ್ (63) ಅವರ ಭರ್ಜರಿ ಜೊತೆಯಾಟದಿಂದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಿತ್ತು.

ಭಾರತ–ಆಸ್ಟ್ರೇಲಿಯಾ ಟೆಸ್ಟ್‌ ಪಂದ್ಯದ ವೇಳೆ ಸಿಡ್ನಿ ಗ್ಯಾಲರಿಯಿಂದ ಆಪಾದಿತ ಪ್ರೇಕ್ಷಕರ ಗುಂಪನ್ನು ಭದ್ರತಾ ಸಿಬ್ಬಂದಿಗಳು ಹೊರ ಹಾಕುತ್ತಿರುವ ದ್ಯಶ್ಯ​
ಭಾರತ–ಆಸ್ಟ್ರೇಲಿಯಾ ಟೆಸ್ಟ್‌ ಪಂದ್ಯದ ವೇಳೆ ಸಿಡ್ನಿ ಗ್ಯಾಲರಿಯಿಂದ ಆಪಾದಿತ ಪ್ರೇಕ್ಷಕರ ಗುಂಪನ್ನು ಭದ್ರತಾ ಸಿಬ್ಬಂದಿಗಳು ಹೊರ ಹಾಕುತ್ತಿರುವ ದ್ಯಶ್ಯ​

ಸಚಿನ್‌–ಹರಭಜನ್‌ ಜೊತೆಯಾಟ ಮುರಿಯಲು ಪರದಾಡುತ್ತಿದ್ದ ಆಸ್ಟ್ರೇಲಿಯ ಆಟಗಾರರು ತಮ್ಮ ಕರಾಮತ್ತು ಆರಂಭಿಸಿದರು. ಬ್ರೆಟ್ ಲೀ ಅವರ ಯಾರ್ಕರ್ ಒಂದನ್ನು ಯಶಸ್ವಿಯಾಗಿ ತಡೆದ ಹರಭಜನ್, ಒಂದು ರನ್ ತೆಗೆದುಕೊಳ್ಳುವಾಗ, ಲೀ ಅವರಿಗೆ ಚೆನ್ನಾಗಿ ಬೌಲ್ ಮಾಡಿದೆ ಎಂದು ಹೇಳಲು ಅವರ ಬೆನ್ನು ತಟ್ಟಿದರು. ಆದರೆ ಇದು ಸೈಮಂಡ್ಸ್ ಅವರನ್ನು ಕೆಣಕಿತು. ಅವರು ಹರಭಜನ್ ಬಳಿ ಬಂದು, ‘ನಿನಗೆ ನಮ್ಮ ತಂಡದಲ್ಲಿ ಯಾರೂ ಗೆಳೆಯರಿಲ್ಲ’ ಎಂದು ಕೆಟ್ಟ ಭಾಷೆಯಲ್ಲೇ ಬೈಯ್ದರು. ಆಗ ಹರಭಜನ್ ಕೂಡ ತಿರುಗಿ ಬೈದರು. ಅವೆಲ್ಲ ಆಸ್ಟ್ರೇಲಿಯದ ಚಾನೆಲ್ ನೈನ್ ಸ್ಟಂಪ್ ಮೈಕ್ರೋಫೋನ್‍ನಲ್ಲಿ ದಾಖಲಾಗಿದ್ದವು.

ಹರಭಜನ್ ತಮಗೆ ‘ಮಂಕಿ’ ಎಂದು ಎರಡು ಸಲ ಬೈದರು ಎಂಬುದು ಸೈಮಂಡ್ಸ್ ಅವರ ದೂರಾಗಿತ್ತು. ಓತಿಕಾಟಕ್ಕೆ ಬೇಲಿ ಸಾಕ್ಷಿ ಎಂಬಂತೆ ಮ್ಯಾಥ್ಯೂ ಹೇಡೆನ್, ‘ಹೌದು, ನೀನು ಎರಡು ಸಲ ಮಂಕಿ ಎಂದು ಬೈದೆ’ ಎಂದು ಬಾಯಿ ಹಾಕಿದರು. ‘ನೀನು ಮಾಡಿದ್ದು ಜನಾಂಗೀಯ ನಿಂದನೆ’ ಎಂದೂ ಆರೋಪಿಸಿದರು. ಮೈಕೆಲ್ ಕ್ಲಾರ್ಕ್ ಅಂಪೈರ್ ಬಳಿ ಹೋಗಿ, ‘ಇದೇನೂ ಮೊದಲ ಸಲ ಅಲ್ಲ, ಹರಭಜನ್ ಭಾರತದಲ್ಲೂ ಹೀಗೆ ಮಾಡುತ್ತಾರೆ’ ಎಂದು ದೂರಿದ್ದರು. ಹರಭಜನ್‍ಗೆ ಎಚ್ಚರಿಕೆ ನೀಡುವಂತೆ ರಿಕಿ ಪಾಂಟಿಂಗ್ ಅಂಪೈರುಗಳಲ್ಲಿ ವಿನಂತಿಸಿದ್ದರು. ಇವೆಲ್ಲ ಅವರ ಹತಾಶ ಮನೋಭಾವಕ್ಕೆ ಉದಾಹರಣೆಯಾಗಿದ್ದವು. ಕೊನೆಗೆ ಮ್ಯಾಚ್ ರೆಫರಿ ಮೈಕ್ ಪ್ರಾಕ್ಟರ್, ನಿಂದನೀಯ ಭಾಷೆ ಉಪಯೋಗಿಸಿದ್ದಕ್ಕೆ ಹರಭಜನ್ ಸಿಂಗ್ ಆರೋಪಿ ಎಂದು ಹೇಳಿದ್ದರು. ಹರಭಜನ್ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೋರುವುದಾಗಿ ಅನಿಲ್ ಕುಂಬ್ಳೆ ವಿನಂತಿಸಿದರೂ ಪಾಂಟಿಂಗ್ ಒಪ್ಪಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯ ಟೆಸ್ಟ್ ಗೆದ್ದರೂ ಆಟಗಾರರ ಮನಸ್ಸುಗಳು ಒಡೆದುಹೋಗಿದ್ದವು.

ಹರಭಜನ್ ಸಿಂಗ್ ಅವರನ್ನು ಮೂರು ಪಂದ್ಯಗಳಿಂದ ಸಸ್ಪೆಂಡ್ ಮಾಡಲಾಯಿತು. ಇದನ್ನು ಸುನೀಲ್ ಗಾವಸ್ಕರ್ ಕಟುವಾಗಿ ಟೀಕಿಸಿ, ಹರಭಜನ್ ಅವರನ್ನು ಬೆಂಬಲಿಸಿದ್ದರು. ನಂತರ ವಿಚಾರಣೆ ನಡೆದು, ಪ್ರತಿಬಂಧವನ್ನು ತೆಗೆದು, ಅವರ ಪಂದ್ಯ ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಯಿತು. ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದೇನೆಂದರೆ, ಹರಭಜನ್ ತಮ್ಮ ಪಂಜಾಬಿ ಭಾಷೆಯಲ್ಲಿ ‘ತೇರಿ ಮಾಕಿ’ ಎಂದು ಹೇಳಿದ್ದು ಸೈಮಂಡ್ಸ್‌ಗೆ ‘ಮಂಕಿ’ ಎಂದು ಕೇಳಿಸಿತ್ತು. ಬಹುಶಃ ಜಗತ್ತಿನ ಎಲ್ಲ ಭಾಷೆಗಳಲ್ಲೂ ಸಿಟ್ಟು ಬಂದರೆ ಬಾಯಿಯಿಂದ ಹೊರಬೀಳುವ ಬೈಗುಳ ಎಂದರೆ ಇದೇ! (ಹಿರಿಯ ಕ್ರಿಕೆಟ್ ಬರಹಗಾರ ವೇದಂ ಜೈಶಂಕರ್ ತಮ್ಮ ‘ಕರೇಜ್, ಕನ್ವಿಕ್ಷನ್, ಕಾಂಟ್ರೊವರ್ಸಿ ಆಂಡ್ ಕ್ರಿಕೆಟ್’ ಎಂಬ ಪುಸ್ತಕದಲ್ಲಿ ಮಂಕಿಗೇಟ್ ಪ್ರಕರಣದ ಪೂರ್ಣ ಪಾಠ ಬರೆದಿದ್ದಾರೆ.)

ಕ್ರಿಕೆಟ್ ಒಂದೇ ಅಲ್ಲ, ಎಲ್ಲ ಕ್ರೀಡೆಗಳಲ್ಲೂ ಇಂಥ ಜನಾಂಗೀಯ ನಿಂದನೆಯ ಘಟನೆಗಳು ನಡೆಯುತ್ತಲೇ ಇರುತ್ತವೆ. 1994ರಲ್ಲಿ, ಹಿರೊಷಿಮಾದಲ್ಲಿ ನಡೆದ ಏಷ್ಯನ್ ಕ್ರೀಡೆಗಳ ಸಮಯದಲ್ಲಿ, ಖ್ಯಾತ ಓಟಗಾರ ಬಹಾದ್ದೂರ್‌ ಪ್ರಸಾದ್ ‘ಪ್ರಜಾವಾಣಿ’ಗಾಗಿ ಈ ಲೇಖಕನಿಗೆ ನೀಡಿದ ಸಂದರ್ಶನದಲ್ಲಿ, ಮೇಲ್ಜಾತಿಯ ತರಬೇತುದಾರರು, ಅಧಿಕಾರಿಗಳು ತಮ್ಮನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದರು. ‘ನಾನು ದೇಶಕ್ಕಾಗಿ ಪದಕ ಗೆಲ್ಲಬೇಕು. ಆದರೆ ಈ ಜನರು ನಾನು ಕೆಳಜಾತಿಯವನೆಂದು ನನ್ನೊಡನೆ ಊಟ ಮಾಡುವುದಿಲ್ಲ’ ಎಂದು ಅವರು ಅತ್ತುಕೊಂಡಿದ್ದರು. ಭಾರತದ ಕ್ರೀಡಾರಂಗದ ಮಟ್ಟಿಗೆ ಹೇಳಬೇಕೆಂದರೆ, ಇಡೀ ದೇಶವನ್ನೇ ಕಾಡುತ್ತಿರುವ ಜಾತಿ ಮತ್ತು ಭ್ರಷ್ಟಾಚಾರವೆಂಬ ದೆವ್ವಗಳು ಕ್ರೀಡಾರಂಗವನ್ನೂ ಹಾಳುಮಾಡಿವೆ, ಮಾಡುತ್ತಿವೆ. ಏಷ್ಯನ್ ಕ್ರೀಡೆಗಳಲ್ಲಾಗಲೀ ಅಥವಾ ಒಲಿಂಪಿಕ್ಸ್‌ನಲ್ಲಾಗಲೀ ಭಾರತ ಪದಕಗಳನ್ನು ಗೆಲ್ಲಲು ಅಡ್ಡಿಯಾಗಿರುವ ಅಂಶಗಳು ಇವು. ಇವರನ್ನು ಬಾಯಿಗೆ ಬಂದಂತೆ ನಿಂದಿಸಬಹುದೇ ಹೊರತು, ಇವರನ್ನೇನೂ ಮಾಡಲು ಆಗುವುದಿಲ್ಲ ಎಂಬುದು ಎಲ್ಲರಿಗೂ ಖಚಿತವಾಗಿದೆ.

__

ಕ್ರಿಕೆಟ್‍ಗೆ ಸಂಬಂಧಿಸಿದ ಯಾವುದೇ ವಿಷಯವಾಗಲೀ ವಿವಾದವಾಗಲೀ ಇಡೀ ದೇಶವನ್ನೇ ಜಾಗೃತಗೊಳಿಸುತ್ತದೆ. ಭಾರತ ತಂಡ ಆಡುವಾಗ ನಮ್ಮ ಪ್ರೇಕ್ಷಕರು ರಾಷ್ಟ್ರಧ್ವಜ ಬೀಸುತ್ತ ಅದೆಂಥ ರಾಷ್ಟ್ರಪ್ರೇಮವನ್ನು ತೋರಿಸುತ್ತಾರೆಂಬುದು ಎಲ್ಲರಿಗೂ ಗೊತ್ತು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT