ಭಾನುವಾರ, ಜುಲೈ 25, 2021
27 °C

ನಿವೃತ್ತಿ ನಂತರದ ಇನಿಂಗ್ಸ್‌ಗೆ ಕಪಿಲ್ ಸಲಹೆ ನೆರವಾಯಿತು: ರಾಹುಲ್ ದ್ರಾವಿಡ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ 'ಎ' ಮತ್ತು 19 ವರ್ಷದೊಳಗಿನವರ ತಂಡಗಳ ಕೋಚ್ ಹುದ್ದೆಯಲ್ಲಿ ಯಶಸ್ವಿಯಾಗಲು ದಿಗ್ಗಜ ಆಲ್‌ರೌಂಡರ್ ಕಪಿಲ್ ದೇವ್ ಅವರ ಸಲಹೆಗಳು ಪ್ರಯೋಜನಕ್ಕೆ ಬಂದಿದ್ದವು ಎಂದು ಭಾರತದ 'ಗೋಡೆ' ಖ್ಯಾತಿಯ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಡಬ್ಲ್ಯು.ವಿ. ರಾಮನ್ ಅವರ ಯುಟ್ಯೂಬ್ ಚಾನಲ್ 'ಇನ್‌ಸೈಡ್ ಔಟ್'ನಲ್ಲಿ ನಡೆದ ಸಂವಾದಲ್ಲಿ ಮಾತನಾಡಿದ ದ್ರಾವಿಡ್ ’ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದೆ. ಆ ಸಂದರ್ಭದಲ್ಲಿ ಕಪಿಲ್ ದೇವ್ ಅವರ ಸಲಹೆ ಪಡೆಯುವ ಅದೃಷ್ಟ ದೊರಕಿತು. ಹೀಗಾಗಿ ವೃತ್ತಿ ಬದುಕಿಗೆ ಹೊಸ ದಿಸೆ ದೊರಕಿತು‘ ಎಂದರು. 

'ದ್ರಾವಿಡ್, ದಿಢೀರ್ ಆಗಿ ಯಾವುದೇ ತೀರ್ಮಾನ ಕೈಗೊಳ್ಳಬೇಡಿ. ಕೆಲವು ಕಾಲ ಹೊರಗಡೆ ಸುತ್ತಾಡಿ ಎಲ್ಲ ಕಡೆಗೂ ಕಣ್ಣು ಹಾಯಿಸಿ. ಕೆಲವು ಪ್ರಯೋಗಗಳನ್ನು ಮಾಡಿ. ಕೊನೆಗೆ ಯಾವುದರಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತೀರೋ ಅದಕ್ಕೆ ಬದ್ಧರಾಗಿ' ಎಂದು ಕಪಿಲ್‌ ದೇವ್ ಹೇಳಿದರು ಎಂದು ದ್ರಾವಿಡ್ ವಿವರಿಸಿದರು.

’ಆರಂಭದಲ್ಲಿ, ವೀಕ್ಷಕ ವಿವರಣೆ ನೀಡುವುದರಲ್ಲಿ ತೊಡಗಿಸಿಕೊಳ್ಳುವತ್ತ ಗಮನ ಕೊಟ್ಟಿದ್ದೆ. ನಂತರ ಅದು ಬೇಡ ಎನಿಸಿತು. ಆಟದಲ್ಲಿ ಪರೋಕ್ಷವಾಗಿ ತೊಡಗಿಸಿಕೊಳ್ಳುವುದರಲ್ಲೇ ನಿಜವಾದ ಖುಷಿ ಎಂದೆನಿಸಿತು. ಅದೇ ಸಂದರ್ಭದಲ್ಲಿ ಭಾರತ ’ಎ‘ ಮತ್ತು 19 ವರ್ಷದೊಳಗಿನವರ ತಂಡಗಳಿಗೆ ತರಬೇತಿ ನೀಡುವ ಅವಕಾಶ ದೊರಕಿತು. ನಿವೃತ್ತಿ ನಂತರದ ಜೀವನ ಮುಂದುವರಿಸಲು ಅದು ಸರಿಯಾದ ವೇದಿಕೆ ಎನಿಸಿತು. ಆದ್ದರಿಂದ ಖುಷಿಯಾಗಿ ಅದನ್ನು ನಿರ್ವಹಿಸಿದೆ‘ ಎಂದು ಭಾರತ ತಂಡದ ನಾಯಕನೂ ಆಗಿದ್ದ ದ್ರಾವಿಡ್ ಹೇಳಿದರು.

’ಕೋಚಿಂಗ್ ಮತ್ತು ಎನ್‌ಸಿಎ ನಿರ್ದೇಶಕ ಸ್ಥಾನ ನನ್ನನ್ನು ಕ್ರಿಕೆಟ್ ಜೊತೆಯಲ್ಲೇ ಇರುವಂತೆ ಮಾಡಿದೆ. ಏಕಾಏಕಿ ಸ್ಟಾರ್ ಆಗಬೇಕು ಎಂದು ಬಯಸದೇ ಇರುವ ಅನೇಕ ಯುವ ಕ್ರಿಕೆಟಿಗರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಅದು ಹೆಚ್ಚು ಖುಷಿ ನೀಡಿದೆ‘ ಎಂದು 1996ರಿಂದ 2012ರ ವರೆಗೆ 164 ಟೆಸ್ಟ್ ಪಂದ್ಯಗಳನ್ನು ಆಡಿ 13288 ರನ್ ಕಲೆ ಹಾಕಿರುವ ದ್ರಾವಿಡ್ ವಿವರಿಸಿದರು. 19 ವರ್ಷದೊಳಗಿನ ಆಟಗಾರರಿಗೆ ಒಂದು ವಿಶ್ವಕಪ್‌ನಲ್ಲಿ ಮಾತ್ರ ಆಡಲು ಅವಕಾಶ ನೀಡುವ ಬಿಸಿಸಿಐ ನಿರ್ಧಾರವನ್ನು ಅವರು ಸ್ವಾಗತಿಸಿದರು.

’ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) 45ರಿಂದ 50 ಯುವ ಆಟಗಾರರಿಗೆ ತರಬೇತಿ ನೀಡಲಾಗುತ್ತದೆ. ಉತ್ತಮ ಕೋಚ್‌ಗಳು, ಉತ್ತಮ ಫಿಸಿಯೊಗಳು ಮತ್ತು ಟ್ರೇನರ್‌ಗಳು ಅಲ್ಲಿರುವುದರಿಂದ ಸಮರ್ಥ ಆಟಗಾರರನ್ನು ಸಜ್ಜುಗೊಳಿಸಲು ಸಾಧ್ಯವಾಗುತ್ತಿದೆ‘ ಎಂದು ದ್ರಾವಿಡ್ ತಿಳಿಸಿದರು.

ಏಕದಿನ ತಂಡದಿಂದ ಕೈಬಿಟ್ಟಿದ್ದು ಯಾಕೆ?

1998ರಲ್ಲಿ ತಮ್ಮನ್ನು ಏಕದಿನ ತಂಡದಿಂದ ಕೈಬಿಟ್ಟಿದ್ದರ ಕುರಿತು ಮಾತನಾಡಿದ ಅವರು ’ಸ್ಟ್ರೈಕ್‌ರೇಟ್‌ ಕಡಿಮೆ ಇದ್ದದ್ದೇ  ಆ ತೀರ್ಮಾನ ಕೈಗೊಳ್ಳಲು ಕಾರಣ‘ ಎಂದರು.

ದ್ರಾವಿಡ್ ಅವರನ್ನು 1999ರ ವಿಶ್ವಕಪ್ ಸಂದರ್ಭದಲ್ಲಿ ಮತ್ತೆ ಏಕದಿನ ತಂಡಕ್ಕೆ ಕರೆಸಿಕೊಳ್ಳಲಾಗಿತ್ತು. ಇಂಗ್ಲೆಂಡ್‌ನಲ್ಲಿ ನಡೆದ ಟೂರ್ನಿಯಲ್ಲಿ ಅವರು ಒಟ್ಟು 461 ರನ್ ಗಳಿಸಿದ್ದರು. ಭಾರತ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. 2003ರ ವಿಶ್ವಕಪ್‌ನಲ್ಲೂ ಆಡಿದ ಅವರು 2007ರ ವಿಶ್ವಕಪ್‌ನಲ್ಲಿ ತಂಡದ ನಾಯಕ ಆಗಿದ್ದರು. 344 ಏಕದಿನ ಪಂದ್ಯಗಳಲ್ಲಿ ಒಟ್ಟಾರೆ 10889 ರನ್ ಗಳಿಸಿದ್ದಾರೆ.

’ಕ್ರಿಕೆಟಿಗನಾಗಿ ಬೆಳೆಯುವುದು ಕಷ್ಟದ ಕೆಲಸವಾಗಿತ್ತು. ನಾನು ಕ್ರಿಕೆಟ್‌ಗೆ ಕಾಲಿರಿಸಿದ್ದಾಗ ಆದಾಯ ಗಳಿಸಲು ರಣಜಿ ಟ್ರೋಫಿ ಟೂರ್ನಿ ಮಾತ್ರ ಇತ್ತು. ಆದರೂ ಬೆಳೆದು ಬಂದೆ‘ ಎಂದು ಅವರು ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು