ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA | ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

ದಕ್ಷಿಣ ಆಫ್ರಿಕಾ ಪಿಚ್‌ ಕ್ಯುರೇಟರ್ ಬ್ರಿಯಾನ್ ಹೇಳಿಕೆ: ಹಸಿರು ಹೊದಿಕೆಯ ಅಂಕಣ
Published 23 ಡಿಸೆಂಬರ್ 2023, 16:20 IST
Last Updated 23 ಡಿಸೆಂಬರ್ 2023, 16:20 IST
ಅಕ್ಷರ ಗಾತ್ರ

ಸೆಂಚುರಿಯನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಡೆಯಲಿರುವ ‘ಬಾಕ್ಸಿಂಗ್ ಡೇ‘ ಟೆಸ್ಟ್ ಪಂದ್ಯದ ಮೊದಲ ದಿನ ಮಳೆ ಸುರಿಯುವ ಸಾಧ್ಯತೆ ಇದೆ. 

‘ಇಲ್ಲಿ ದಿನದಿಂದ ದಿನಕ್ಕೆ ತಾಪಮಾನ ಇಳಿಕೆಯಾಗುತ್ತಿದೆ. ಪಂದ್ಯದ ದಿನದಂದು 20 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಕುಸಿಯುವ ಸಾಧ್ಯತೆ ಇದೆ. ಅದರಿಂದ ಮಳೆ ಬರುವ ಸಾಧ್ಯತೆ ಇದೆ.  ಮೊದಲ ದಿನವಿಡೀ ಪಂದ್ಯ ನಡೆಯುವುದೇ  ಅನುಮಾನವಾಗಿದೆ’ ಎಂದು ದಕ್ಷಿಣ ಆಫ್ರಿಕಾದ ಪಿಚ್ ಕ್ಯುರೇಟರ್ ಬ್ರಿಯಾನ್ ಬಿಲಾಯ್ ಹೇಳಿದ್ದಾರೆ.

ಶನಿವಾರ ಪಿಚ್‌ ಸಿದ್ಧತೆಯನ್ನು ಪರಿಶೀಲಿಸಿದ ನಂತರ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದರು.

‘ಎರಡು ಮತ್ತು ಮೂರನೇ ದಿನದಾಟದಲ್ಲಿ  ಒಂದಿಷ್ಟು ಆಟ ನಡೆಯುವ ನಿರೀಕ್ಷೆ ಇದೆ. ಆದರೆ ತಂಪು ವಾತಾವರಣ ಇರುವುದರಿಂದ ಪಿಚ್‌ನಲ್ಲಿ ಚೆಂಡು ಎಷ್ಟು ತಿರುವು ಪಡೆಯಬಹುದು ಎಂಬುದನ್ನು ಈಗಲೇ ಹೇಳಲಾಗದು’ ಎಂದರು.

‘ಪಂದ್ಯದ ಆರಂಭಿಕ ಹಂತದಲ್ಲಿ ಪಿಚ್‌ನಲ್ಲಿ ವೇಗಿಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ಬ್ಯಾಟರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು. ಮೊದಲೆರಡು ದಿನಗಳಲ್ಲಿ ಹೆಚ್ಚು ಅವಧಿಯಲ್ಲಿ ಪಿಚ್‌ ಕವರ್‌ ಆಗಿಯೇ ಉಳಿದರೆ ನಂತರದ ಆಟದಲ್ಲಿ ಚೆಂಡಿನ ಚಲನೆ ಹೇಗಿರಬಹುದು ಎಂಬುದನ್ನು ಕಾದು ನೋಡಬೇಕು’ ಎಂದೂ ಹೇಳಿದರು. 

‘ಪಿಚ್‌ ಹಸಿರು ಹೊದಿಕೆಯನ್ನು ಹೊಂದಿದೆ. ಸಿದ್ಧತೆಗೆ ಇನ್ನೂ ಎರಡು ದಿನಗಳು ಬಾಕಿ ಇವೆ. ಸದ್ಯ ತಾಪಮಾನ ಹೆಚ್ಚಿದೆ. ನಮ್ಮ ಕೆಲಸ ತೃಪ್ತಿಕರವಾಗಿದೆ’ ಎಂದು ಹೇಳಿದರು.

'ದಕ್ಷಿಣ ಆಫ್ರಿಕಾ ತಂಡದವರೊಂದಿಗೆ ಹೆಚ್ಚೆನೂ ಮಾತುಕತೆ ಆಗಿಲ್ಲ. ವಿಕೆಟ್‌ನಲ್ಲಿ ಗುಣಲಕ್ಷಣಗಳಿಗೆ ತಕ್ಕನಾಗಿ ಕಾರ್ಯನಿರ್ವಹಿಸಿದ್ದೇವೆ’ ಎಂದರು.

ಇದೇ 26ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.

ಕಗಿಸೊ ರಬಾಡ ಅಭ್ಯಾಸ

ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ವೇಗಿ ಕಗಿಸೊ ರಬಾಡ ಅವರು ಶನಿವಾರ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದರು.

ಅವರು ಈಚೆಗೆ ಗಾಯಗೊಂಡು ಕ್ರಿಕೆಟ್ ನಿಂದ ದೂರವಿದ್ದರು. ಇದೀಗ ಅವರು ಚೇತರಿಸಿಕೊಂಡಿರುವುದು ತಂಡದಲ್ಲಿ ಹೊಸ ಭರವಸೆ ಮೂಡಿಸಿದೆ.

‘ರಬಾಡ ಮತ್ತು ಲುಂಗಿ ಎನ್‌ಗಿಡಿ ಅವರಿಬ್ಬರೂ ಈಗ ಹೊಸ ಚೈತನ್ಯದೊಂದಿಗೆ ಕಣಕ್ಕಿಳಿಯುವರು. ಅದರಿಂದ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ’ ಎಂದು ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕೊನ್ರಾಡ್ ಹೇಳಿದ್ದಾರೆ.

ಎನ್‌ಸಿಎಗೆ ಋತುರಾಜ್ ಗಾಯಕವಾಡ್: ಭಾರತದ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕವಾಡ್ ಅವರು ತಮ್ಮ ಗಾಯದ ಚಿಕಿತ್ಸೆ ಮತ್ತು ಆರೈಕೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ತೆರಳಲಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ  ಭಾರತ ತಂಡದಲ್ಲಿ ಋತುರಾಜ್ ಇದ್ದರು. ಆದರೆ ಏಕದಿನ ಪಂದ್ಯದ ಸಂದರ್ಭದಲ್ಲಿ ಅವರ ಕೈ ಬೆರಳಿನ ಮೂಳೆ ಮುರಿದಿತ್ತು.  ಇದರಿಂದಾಗಿ ಅವರು ತವರಿಗೆ ಮರಳಿದ್ದರು. ‘ಫೀಲ್ಡಿಂಗ್ ಮಾಡುವಾಗ ಋತುರಾಜ್ ಗಾಯಗೊಂಡಿದ್ದರು. ಸ್ಕ್ಯಾನಿಂಗ್‌ ಮಾಡಲಾಗಿದ್ದು ಮೂಳೆಮುರಿತ ಇರುವುದು ಕಂಡುಬಂದಿದೆ. ಪರಿಣತ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ಹಂತದಲ್ಲಿ ಅವರು ಎನ್‌ಸಿಎನಲ್ಲಿ ಪುನಶ್ಚೇತನಕ್ಕಾಗಿ ಸೇರ್ಪಡೆಯಾಗುವರು. ಅವರ ಬದಲಿಗೆ ಆಭಿಮನ್ಯು ಈಶ್ವರನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಭಿಮನ್ಯು ಈಶ್ವರನ್ ಅವರು ಸದ್ಯ ಭಾರತ ಎ ತಂಡದ ನಾಯಕತ್ವ ವಹಿಸಿದ್ದಾರೆ. ದಕ್ಷಿಣ ಆಫ್ರಿಕಾ ಎ ತಂಡದ ಎದುರಿನ ಸರಣಿಯಲ್ಲಿ ಆಡುತ್ತಿದ್ದಾರೆ. ಆದ್ದರಿಂದ ಮೊದಲ ಟೆಸ್ಟ್‌ಗೆ ಅವರು ಲಭ್ಯರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT