ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥಿತ ಪಿತೂರಿ ನಡೆಸಿ ನನ್ನನ್ನು ಕೋಚ್‌ ಸ್ಥಾನದಿಂದ ತೆಗೆದುಹಾಕಲಾಗಿದೆ: ರಾಮನ್

Last Updated 15 ಮೇ 2021, 17:04 IST
ಅಕ್ಷರ ಗಾತ್ರ

ನವದೆಹಲಿ: ವ್ಯವಸ್ಥಿತ ಪಿತೂರಿಯ ಮೂಲಕ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ತಮ್ಮನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿರುವ ಮಾಜಿ ಕೋಚ್ ಡಬ್ಲ್ಯು.ವಿ.ರಾಮನ್, ಇದನ್ನು ಕೊನೆಗಾಣಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ರಾಮನ್ ಬದಲಿಗೆ ರಮೇಶ್ ಪೊವಾರ್ ಅವರನ್ನು ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಗುರುವಾರ ನಿರ್ಧರಿಸಿತ್ತು. ಇದು ಶುಕ್ರವಾರ ವಿವಾದದ ಸ್ವರೂಪ ಪಡೆದುಕೊಂಡಿತ್ತು. ರಾಮನ್ ಅವರಿಗೆ ಅವಕಾಶ ಕೊಡದೇ ಇರಲು ಕೆಲವರ ವೈಯಕ್ತಿಕ ಹಿತಾಸಕ್ತಿ ಕಾರಣ ಎಂಬ ಆರೋಪ ಕೇಳಿಬಂದಿತ್ತು.

ಇದರ ಬೆನ್ನಲ್ಲೇ ಸಂಜೆ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ರಾಮನ್ ಪತ್ರ ಬರೆದಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರಿಗೂ ಅದರ ಪ್ರತಿಯನ್ನು ಕಳುಹಿಸಿದ್ದರು. ಪಿತೂರಿಯ ಬಗ್ಗೆ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂಬ ವಿಷಯ ಶನಿವಾರ ಬಹಿರಂಗಗೊಂಡಿದೆ. ತರಬೇತಿಯ ಗುಣಮಟ್ಟ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂಬುದನ್ನು ಬಿಟ್ಟು ಬೇರೆ ಯಾವುದೇ ಕಾರಣಕ್ಕೆ ತಮ್ಮನ್ನು ತೆಗೆದುಹಾಕಿದ್ದರೆ ಅದಕ್ಕಿಂತ ದೊಡ್ಡ ಪ್ರವಾದ ಬೇರೊಂದಿಲ್ಲ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘ನಾನು ತರಬೇತಿ ನೀಡುವ ರೀತಿ ಭಿನ್ನ ಅಗಿರಬಹುದು. ಇದನ್ನೇ ದೊಡ್ಡದು ಮಾಡಿ ಸಂಬಂಧಪಟ್ಟವರ ಗಮನ ಸೆಳೆದಿರುವ ಸಾಧ್ಯತೆ ಇದೆ. ಹೀಗೆ ಮಾಡುವುದನ್ನು ಬಿಟ್ಟು ಅದನ್ನು ಬಿಸಿಸಿಐ ಗಮನಕ್ಕೆ ತಂದಿದ್ದರೆ ಕೋಚ್ ಆಯ್ಕೆಗಾಗಿ ನಾನು ಹಾಕಿದ ಅರ್ಜಿಯ ಮೇಲೆ ಬೇರೆಯೇ ಪರಿಣಾಮ ಉಂಟಾಗುತ್ತಿತ್ತು. ನನ್ನ ಶೈಲಿಯ ಬಗ್ಗೆ ಯಾರಾದರೂ ತಿಳಿಯಲು ಬಯಸಿದರೆ ವಿವರಣೆ ನೀಡಲು ಈಗಲೂ ಸಿದ್ಧ ಇದ್ದೇನೆ’ ಎಂದು ಅವರು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ವಿಷಯಕ್ಕೆ ವಿವಾದದ ರೂಪ ಕೊಡುವುದು ನನ್ನ ಉದ್ದೇಶವಲ್ಲ. ಆದರೆ ವಸ್ತುಸ್ಥಿತಿಯನ್ನು ಬಿಸಿಸಿಐ ಗಮನಕ್ಕೆ ತರಬೇಕಾದುದು ನನ್ನ ನೈತಿಕ ಜವಾಬ್ದಾರಿ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ವೇಳೆ ಅಧ್ಯಕ್ಷರು ಬಯಸುವುದಾದರೆ ಈ ಪತ್ರ ನೆರವಿಗೆ ಬರಬಹುದು’ ಎಂದು 1988ರಿಂದ 1997ರ ವರೆಗೆ 11 ಟೆಸ್ಟ್‌ ಮತ್ತು 27 ಏಕದಿನ ಪಂದ್ಯಗಳನ್ನು ಆಡಿರುವ ರಾಮನ್ ಹೇಳಿದ್ದಾರೆ.

ರಾಮನ್ ಜೊತೆಗೆಮಿಥಾಲಿ ರಾಜ್ ಒಳಗೊಂಡಂತೆ ಕೆಲವು ಆಟಗಾರ್ತಿಯರಿಗೆ ವೈಷಮ್ಯ ಇತ್ತು. ಭಾರತ ಕ್ರಿಕೆಟ್‌ನಲ್ಲಿ ಖ್ಯಾತರು ಮತ್ತು ಸಾಮಾನ್ಯರು ಎಂಬ ಭೇದ ಇರುವುದರಿಂದಲೇ ಸಮಸ್ಯೆಗಳು ಕಾಡುತ್ತಿವೆ ಎಂದು ಅವರು ಹೇಳಿರುವುದು ಈ ಹಿನ್ನೆಲೆಯಲ್ಲೇ ಇರಬೇಕು ಎನ್ನಲಾಗಿದೆ.

ವೇದಾಗೆ ಸಾಂತ್ವನ ಹೇಳದ ಬಿಸಿಸಿಐ: ಲಿಸಾ ಬೇಸರ
ಒಂದು ವಾರದ ಅಂತರದಲ್ಲಿ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡಿರುವ ವೇದಾ ಕೃಷ್ಣಮೂರ್ತಿ ಅವರಿಗೆ ಸಾಂತ್ವನ ಹೇಳದೆ ಭಾರತ ತಂಡವನ್ನು ಆಯ್ಕೆ ಮಾಡಿದ್ದು ಬೇಸರದ ಸಂಗತಿ ಎಂದು ಆಸ್ಟ್ರೇಲಿಯಾ ಮಹಿಳಾ ತಂಡದ ಮಾಜಿ ನಾಯಕಿ ಲಿಸಾ ಸ್ಥಳೇಕರ್ ಹೇಳಿದ್ದಾರೆ.

ಇಂಗ್ಲೆಂಡ್‌ನಲ್ಲಿ ಟೆಸ್ಟ್‌, ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿರುವ ಭಾರತ ತಂಡವನ್ನು ಶುಕ್ರವಾರ ಸಂಜೆ ಪ್ರಕಟಿಸಲಾಗಿತ್ತು. ಈ ಆಯ್ಕೆ ಪ್ರಕ್ರಿಯೆಗೂ ಮೊದಲು ಬಿಸಿಸಿಐ ವೇದಾ ಅವರೊಂದಿಗೆ ಮಾತುಕತೆಯನ್ನೇ ನಡೆಸಲಿಲ್ಲ. ಕನಿಷ್ಠಪಕ್ಷ ಅವರ ಕ್ಷೇಮ ವಿಚಾರಿಸುವುದಕ್ಕೂ ಮುಂದಾಗಲಿಲ್ಲ. ಇದು ಸರಿಯಲ್ಲ ಎಂದು ಸ್ಥಳೇಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT