ಗುರುವಾರ , ಆಗಸ್ಟ್ 18, 2022
23 °C
ಸ್ಥಾನ ಕಳೆದುಕೊಂಡ ಡಬ್ಲ್ಯು.ವಿ. ರಾಮನ್

ಭಾರತ ಮಹಿಳಾ ತಂಡದ ಕೋಚ್‌ ಸ್ಥಾನಕ್ಕೆ ಮರಳಿದ ರಮೇಶ್ ಪೊವಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಾಜಿ ಸ್ಪಿನ್ನರ್ ರಮೇಶ್ ಪೊವಾರ್ ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಮರಳಿದ್ದಾರೆ.

ಗುರುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವರನ್ನು ಮದನ್‌ ಲಾಲ್ ನೇತೃತ್ವದ ಸಮಿತಿಯ ನೇಮಕ ಮಾಡಿತು. ಇದರಿಂದಾಗಿ ಹಿರಿಯ ಕೋಚ್ ಡಬ್ಲ್ಯು. ವಿ. ರಾಮನ್ ಅವರ ಕಾರ್ಯಾವಧಿಯು ಮುಕ್ತಾಯವಾದಂತಾಗಿದೆ. ‌

ರಾಮನ್ ಸೇರಿದಂತೆ ಒಟ್ಟು ಎಂಟು ಅಭ್ಯರ್ಥಿಗಳು ಮದನ್ ಲಾಲ್‌ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಮುಂದೆ ಸಂದರ್ಶನ ನೀಡಿದರು. ಅವರಲ್ಲಿ 42 ವರ್ಷದ ಪೊವಾರ್ ಅವಕಾಶ ಪಡೆದರು.

‘ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ರಮೇಶ್ ಪೊವಾರ್ ಅವರನ್ನು ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ. ಈ ಹುದ್ದೆಗಾಗಿ ಕೆಲವು ದಿನಗಳ ಹಿಂದೆ ಮಂಡಳಿಯು ಅರ್ಜಿ ಆಹ್ವಾನಿಸಿತ್ತು. 35 ಮಂದಿ ಅರ್ಜಿ ಸಲ್ಲಿಸಿದ್ದರು‘ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. 

ಅದರಲ್ಲಿ ಭಾರತ ತಂಡದ ಮಾಜಿ ವಿಕೆಟ್‌ಕೀಪರ್ ಅಜಯ್ ರಾತ್ರಾ, ಮಹಿಳಾ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥೆ ಹೇಮಲತಾ ಕಲಾ ಅವರೂ ಅರ್ಜಿ ಸಲ್ಲಿಸಿದ್ದರು.

ಎರಡು ವರ್ಷಗಳ ಹಿಂದೆಯೂ ಪೊವಾರ್ ಅವರು ಇದೇ ತಂಡಕ್ಕೆ ಕೋಚ್ ಆಗಿದ್ದರು. ಆಗ  ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರೊಂದಿಗಿನ ಭಿನ್ನಾಭಿಪ್ರಾಯ ವಿವಾದದ ರೂಪ ಪಡೆದಿತ್ತು. ಆಗ ಬಿಸಿಸಿಐ ಅವರನ್ನು ಪದಚ್ಯುತಗೊಳಿಸಿತ್ತು.  ಆಗ ತಮ್ಮನ್ನು ಟಿ20 ತಂಡದಿಂದ ಕೈಬಿಟ್ಟಿದ್ದನ್ನು ಮಿಥಾಲಿ ವಿರೋಧಿಸಿದ್ದರು. ಪೊವಾರ್ ಅವರ ವಿರುದ್ಧ ಮಂಡಳಿಗೆ ಪತ್ರ ಕೂಡ ಬರೆದಿದ್ದರು. ಇದೀಗ ಮತ್ತೆ ಮಿಥಾಲಿ ನಾಯಕತ್ವದ ತಂಡಕ್ಕೂ ಪೊವಾರ್ ತರಬೇತಿ ನೀಡಬೇಕಿದೆ.

2018ರಲ್ಲಿ ಪೊವಾರ್ ಬದಲು ರಾಮನ್ ಅವರನ್ನು ತಂಡಕ್ಕೆ ನೇಮಕ ಮಾಡಲಾಗಿತ್ತು. ಅವರ ಮಾರ್ಗದರ್ಶನದಲ್ಲಿ ತಂಡವು ಹೋದ ವರ್ಷ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿತ್ತು. ಆದರೆ ಕಳೆದ ಮಾರ್ಚ್‌ನಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಸರಣಿಲ್ಲಿ ಭಾರತ ತಂಡವು ಸೋತಿದ್ದು ರಾಮನ್ ಅವರಿಗೆ ಹಿನ್ನಡೆಯಾಗಿ ಪರಿಣಮಿಸಿತು. ಪೊವಾರ್ ಈಚೆಗೆ ಕೋಚ್ ಆಗಿದ್ದ ಮುಂಬೈ ತಂಡವು ವಿಜಯ್ ಹಜಾರೆ ಟ್ರೋಫಿ ಗೆದ್ದಿತ್ತು.

ಜೂನ್ 16ರಂದು ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ತಂಡವು ತೆರಳಲಿದ್ದು, ಪೊವಾರ್ ಅವರಿಗೆ ಇದು ಮೊದಲ ಸವಾಲಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು