ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಣಜಿ ಕ್ರಿಕೆಟ್: ಬೌಲರ್‌ಗಳ ಆರ್ಭಟ; ಬ್ಯಾಟರ್‌ಗಳ ಪರದಾಟ

ರಣಜಿ ಕ್ರಿಕೆಟ್: ಸೂರತ್‌ ಅಂಗಳದಲ್ಲಿ ಒಂದೇ ದಿನ 16 ವಿಕೆಟ್ ಪತನ; ಕೌಶಿಕ್, ಹಾರ್ದಿಕ್ ಮಿಂಚು
Published 2 ಫೆಬ್ರುವರಿ 2024, 16:13 IST
Last Updated 2 ಫೆಬ್ರುವರಿ 2024, 16:13 IST
ಅಕ್ಷರ ಗಾತ್ರ

ಸೂರತ್: ಶುಕ್ರವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಮೊದಲು ಕರ್ನಾಟಕದ ಬೌಲರ್‌ಗಳು ರೈಲ್ವೆಸ್ ತಂಡವನ್ನು ಹಳಿ ತಪ್ಪಿಸಿದರು. ನಂತರ ’ಆತಿಥೇಯ‘ ತಂಡದ ಬೌಲರ್‌ಗಳು ಕರ್ನಾಟಕ ಪಡೆಯನ್ನು ಆತಂಕದ ಸ್ಥಿತಿಗೆ ತಳ್ಳಿದರು. ಇದರಿಂದಾಗಿ ಲಾಲಭಾಯಿ ಕ್ರೀಡಾಂಗಣದಲ್ಲಿ ಒಂದೇ ದಿನ 16 ವಿಕೆಟ್‌ಗಳು ಪತನವಾದವು.

ಕರ್ನಾಟಕದ ಸ್ಪಿನ್ನರ್ ಹಾರ್ದಿಕ್ ರಾಜ್ (28ಕ್ಕೆ3), ಮಧ್ಯಮವೇಗಿ ಕೌಶಿಕ್ (22ಕ್ಕೆ3) ಹಾಗೂ ವೈಶಾಖ ವಿಜಯಕುಮಾರ್ (57ಕ್ಕೆ2) ಅವರ ದಾಳಿಗೆ ರೈಲ್ವೆಸ್ ತಂಡವು 155 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಕರ್ನಾಟಕದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಕುಸಿದರು. ದಿನದಾಟದ ಮುಕ್ತಾಯಕ್ಕೆ ತಂಡವು 27.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 90 ರನ್ ಗಳಿಸಿತು. ಕಿಶನ್ ಬೆದರೆ (ಬ್ಯಾಟಿಂಗ್ 2) ಕ್ರೀಸ್‌ನಲ್ಲಿದ್ದಾರೆ. ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಕರ್ನಾಟಕ ತಂಡಕ್ಕೆ 65 ರನ್‌ಗಳ ಅವಶ್ಯಕತೆ ಇದೆ.

ಮಯಂಕ್ ಅಗರವಾಲ್ ಅವರ ಗೈರುಹಾಜರಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಯುವ ಆಟಗಾರ ನಿಕಿನ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಓವರ್‌ನಲ್ಲಿ ರಿಷಭ್ ಮಿಶ್ರಾ ಅವರ ವಿಕೆಟ್ ಗಳಿಸಿದ ವಿದ್ವತ್ ಮಿಂಚಿದರು. ಇನ್ನೊಂದು ಬದಿಯಿಂದ ಕೌಶಿಕ್ ಮತ್ತು ವೈಶಾಖ ಅವರೂ ಪರಿಣಾಮಕಾರಿ ದಾಳಿ ನಡೆಸಿದರು. ಇದರಿಂದಾಗಿ ರೈಲ್ವೆಸ್ ತಂಡವು ಕೇವಲ ಏಳು ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ನಾಯಕ ಪ್ರಥಮ್ ಸಿಂಗ್ (56; 131ಎ) ಮತ್ತು ಮೊಹಮ್ಮದ್ ಸೈಫ್ (45; 115ಎ) ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 98 ರನ್‌ ಸೇರಿಸಿದರು. ಊಟದ ನಂತರ ಪ್ರಥಮ್ ವಿಕೆಟ್ ಗಳಿಸಿದ ವೈಶಾಖ ಜೊತೆಯಾಟವನ್ನು ಮುರಿದರು. ವೈಶಾಖ,ತಮ್ಮ ಇನ್ನೊಂದು ಓವರ್‌ನಲ್ಲಿ ಸೈಫ್ ವಿಕೆಟ್ ಕಬಳಿಸಿದರು. ನಂತರದ ಆಟದಲ್ಲಿ ನವಪ್ರತಿಭೆ ಹಾರ್ದಿಕ್ ತಮ್ಮ ಕೈಚಳಕ ತೋರಿಸಿದರು. ಅದರಿಂದಾಗಿ ರೈಲ್ವೆಸ್ ಇನಿಂಗ್ಸ್‌ಗೆ ತೆರೆಬಿತ್ತು.

ಆದರೆ ಕರ್ನಾಟಕ ತಂಡದ ಬ್ಯಾಟರ್‌ಗಳು ಮತ್ತೆ ವೈಫಲ್ಯ ಅನುಭವಿಸಿದರು. ಸಮರ್ಥ್ ಮತ್ತು ನಿಶ್ಚಲ್ ಐದು ಓವರ್‌ಗಳಲ್ಲಿ 24 ರನ್‌ ಸೇರಿಸಿ ಉತ್ತಮ ಆರಂಭ ಮಾಡಿದ್ದರು. ಆದರೆ ನಿಶ್ಚಲ್ ದೊಡ್ಡ ಹೊಡೆತಗಳನ್ನು ಆಡುವ ಭರದಲ್ಲಿ ಔಟಾದರು. ನಿಕಿನ್ ಖಾತೆಯನ್ನೇ ತೆರೆಯಲಿಲ್ಲ. ಅನುಭವಿ ಮನೀಷ್ ಪಾಂಡೆ, ಸಮರ್ಥ್ ಕೂಡ ದೊಡ್ಡ ಇನಿಂಗ್ಸ್ ಆಡಲಿಲ್ಲ. ರೈಲ್ವೆ ತಂಡದ ಆಕಾಶ್ ಪಾಂಡೆ ಹಾಗೂ ಅಯಾನ್ ಚೌಧರಿ ಕ್ರಮವಾಗಿ 3 ಹಾಗೂ 2 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ರೈಲ್ವೆಸ್: 56 ಓವರ್‌ಗಳಲ್ಲಿ 155 (ಪ್ರಥಮ್ ಸಿಂಗ್ 56, ಮೊಹಮ್ಮದ್ ಸೈಫ್ 45, ವಿದ್ವತ್ ಕಾವೇರಪ್ಪ 25ಕ್ಕೆ2, ವಿ. ಕೌಶಿಕ್ 22ಕ್ಕೆ3, ವೈಶಾಖ ವಿಜಯಕುಮಾರ್ 57ಕ್ಕೆ2, ಹಾರ್ದಿಕ್ ರಾಜ್ 28ಕ್ಕೆ3) ಕರ್ನಾಟಕ: 27.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 90 (ಆರ್. ಸಮರ್ಥ್ 22, ಡಿ. ನಿಶ್ಚಲ್ 20, ಕೆ.ವಿ. ಅನೀಶ್ 27, ಆಕಾಶ್ ಪಾಂಡೆ 21ಕ್ಕೆ3, ಆಯಾನ್ ಬಿ ಚೌಧರಿ 18ಕ್ಕೆ2)

ಮಾಹಿತಿ: ಬಿಸಿಸಿಐ ಡಾಟ್ ಟಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT