ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ | ಸರ್ವಿಸಸ್ ಎದುರಿನ ಪಂದ್ಯ ಡ್ರಾ; ಕರ್ನಾಟಕಕ್ಕೆ 3 ಅಂಕ

ಸಮರ್ಥ್ ಸುಂದರ ಶತಕ
Last Updated 17 ಡಿಸೆಂಬರ್ 2022, 2:03 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಶತಕ ಬಾರಿಸಿದ ಆರ್. ಸಮರ್ಥ್ ಆತಿಥೇಯ ಕರ್ನಾಟಕಕ್ಕೆ ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಜಯದ ಆರಂಭ ಮಾಡುವ ಅವಕಾಶವನ್ನು ಸೃಷ್ಟಿಸಿದರು. ಆದರೆ ಅನ್ಷುಲ್ ಗುಪ್ತಾ ಸರ್ವಿಸಸ್ ತಂಡದ ಸೋಲು ತಪ್ಪಿಸಿದರು. ಇದರಿಂದಾಗಿ ಪಂದ್ಯ ಡ್ರಾದಲ್ಲಿ ಮುಕ್ತಾಯವಾಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಕರ್ನಾಟಕ 3 ಅಂಕ ಗಳಿಸಿತು. ಸಮರ್ಥ್(ಅಜೇಯ 119) ಶತಕದ ಬಲದಿಂದ ಆತಿಥೇಯ ತಂಡವು ಎರಡನೇ ಇನಿಂಗ್ಸ್‌ನಲ್ಲಿ 56 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 253 ರನ್ ಗಳಿಸಿತು. ಗುರುವಾರ ಮೊದಲ ಇನಿಂಗ್ಸ್‌ನಲ್ಲಿ 43 ರನ್‌ಗಳ ಮುನ್ನಡೆ ಗಳಿಸಿತ್ತು.

ಶುಕ್ರವಾರಊಟದ ವಿರಾಮದಲ್ಲಿ ಕರ್ನಾಟಕ ಡಿಕ್ಲೇರ್ ಮಾಡಿಕೊಂಡಿತು. 296 ರನ್‌ಗಳ ಗುರಿ ಬೆನ್ನಟ್ಟಿದ ಸರ್ವಿಸಸ್‌ 21 ರನ್‌ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಆದರೆ ಈ ಸಂದರ್ಭದಲ್ಲಿ ಜೊತೆಗೂಡಿದ ರವಿ ಚೌಹಾಣ್ (ಅಜೇಯ 66; 105ಎ, 4X10) ಮತ್ತು ಅನ್ಷುಲ್ ಗುಪ್ತಾ (ಅಜೇಯ 71; 92ಎ, 4X9, 6X2) ತಂಡಕ್ಕೆ ಆಸರೆಯಾದರು.

ತಂಡವು 39 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 150 ರನ್‌ ಗಳಿಸಿತು. ಚಹಾ ವಿರಾಮದ ನಂತರ ಪಂದ್ಯವನ್ನು ಡ್ರಾ ಎಂದು ಘೋಷಿಸಲು ಉಭಯ ತಂಡಗಳ ನಾಯಕರು ಸಮ್ಮತಿಸಿದರು.

ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮರ್ಥ್, ‘ನಮ್ಮ ತಂಡಕ್ಕೆ ಇದು ಉತ್ತಮ ಆರಂಭ. ಈ ಹಿಂದೆ ಲೀಗ್‌ ಟೂರ್ನಿಗಳಲ್ಲಿ ಆಡಿದ್ದು ಮತ್ತು ಸತತ ಅಭ್ಯಾಸ ಮಾಡಿದ್ದು ನನಗೆ ಫಾರ್ಮ್‌ಗೆ ಮರಳಲು ಸಹಾಯಕವಾಗಿದೆ. ಈ ಶತಕ ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದರು.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸಮರ್ಥ್ ಎಂಟು ರನ್‌ ಗಳಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಅವರು ತಮ್ಮ ನೈಜ ಆಟಕ್ಕಿಂತ ತುಸು ವೇಗವಾಗಿ ರನ್‌ ಗಳಿಸಿದರು. ನಾಯಕ ಮಯಂಕ್ (73; 100ಎ) ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 143 ರನ್ ಸೇರಿಸಿದರು. 36ನೇ ಓವರ್‌ನಲ್ಲಿ ಅರ್ಪಿತ್ ಗುಲೇರಿಯಾ ಎಸೆತದಲ್ಲಿ ಮಯಂಕ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಜೊತೆಯಾಟ ಮುರಿಯಿತು. ಸಮರ್ಥ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 11ನೇ ಶತಕ ದಾಖಲಿಸಿದರು. ನಿಕಿನ್ ಜೋಸ್ ಕೇವಲ ಎರಡು ರನ್ ಗಳಿಸಿ ಔಟಾದರು. ಅವರು ಕೂಡ ಗುಲೇರಿಯಾ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಮನೀಷ್ ಪಾಂಡೆ ಮತ್ತು ವಿಶಾಲ್ ಒನತ್ ವಿಕೆಟ್‌ಗಳನ್ನು ಪುಳ್ಕಿತ್ ಗಳಿಸಿದರು. ಇದರಿಂದಾಗಿ ತಂಡವು ಊಟಕ್ಕೂ ಮುನ್ನವೇ 232 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಗೌತಮ್ ಎರಡು ಸಿಕ್ಸರ್ ಸಿಡಿಸಿದರು. ಮುನ್ನಡೆಯನ್ನು ಹೆಚ್ಚಿಸಿದರು.

ನೆರಳು..ಮಂದಬೆಳಕು..
‘ಮಳೆ ಮತ್ತು ಮಂದಬೆಳಕಿನಿಂದ ಪಂದ್ಯದಲ್ಲಿ ಬಹಳಷ್ಟು ಸಮಯ ನಷ್ಟವಾಗಿದೆ. ಗುರುವಾರ ಸಂಜೆ ಕೂಡ ಕ್ರೀಡಾಂಗಣದ ಕಟ್ಟಡದ ನೆರಳು ಪಿಚ್‌ ಅನ್ನೂ ಆವರಿಸಿದ್ದರಿಂದ ಮಂದಬೆಳಕು ಎಂದು ಆಟ ಸ್ಥಗಿತವಾಗಿತ್ತು. ಆಗ ಇನ್ನಷ್ಟು ಸಮಯ ಸಿಕ್ಕಿದ್ದರೆ ಮತ್ತಷ್ಟು ರನ್‌ ಸೇರಿಸಬಹುದಿತ್ತು. ಇವತ್ತು ಬೆಳಿಗ್ಗೆ ಇನ್ನೂ ಬೇಗ ಡಿಕ್ಲೇರ್ ಮಾಡಬಹುದಿತ್ತು’ ಎಂದು ಕರ್ನಾಟಕದ ಬ್ಯಾಟರ್ ಸಮರ್ಥ್ ಹೇಳಿದರು.

ಕರ್ನಾಟಕದ ಎರಡನೇ ಇನಿಂಗ್ಸ್‌ ನಡೆದ ಸಂದರ್ಭದಲ್ಲಿ ಸಂಜೆ 4ರ ನಂತರ ಸೂರ್ಯ ಪಶ್ಚಿಮಕ್ಕೆ ಸರಿಯುತ್ತಿದ್ದಂತೆಯೇ ಕಟ್ಟಡದ ನೆರಳು ಪಿಚ್ ಅನ್ನೂ ಆವರಿಸಿತು. ಇದರಿಂದಾಗಿ ಬೆಳಕು ಕಡಿಮೆಯಾಯಿತು. ಕ್ರೀಡಾಂಗಣದ ಇನ್ನರ್ಧ ಭಾಗದಲ್ಲಿ ಎಳೆಬಿಸಿಲು ಇತ್ತು. ಆಗಸ ಕೂಡ ಶುಭ್ರವಾಗಿತ್ತು. ಆದರೆ, ನೆರಳನ್ನು ಮಂದಬೆಳಕು ಎಂದೇ ಪರಿಗಣಿಸಿ ಲೈಟ್‌ ಮೀಟರ್ ಸಾಧನದ ಮೂಲಕ ಪರೀಕ್ಷೆ ಮಾಡಿದ ಅಂಪೈರ್‌ಗಳಾದ ಸಿ. ಶಂಸುದ್ದೀನ್ ಮತ್ತು ರಾಜೀವ್ ಗೊದರಾ ದಿನದಾಟಕ್ಕೆ ತೆರೆ ಎಳೆದಿದ್ದರು.

ಸ್ಕೋರ್‌ ಕಾರ್ಡ್‌
ಮೊದಲ ಇನಿಂಗ್ಸ್‌
ಕರ್ನಾಟಕ
: 304
ಸರ್ವಿಸಸ್: 261 (83.2 ಓವರ್‌ಗಳಲ್ಲಿ)

ಎರಡನೇ ಇನಿಂಗ್ಸ್
ಕರ್ನಾಟಕ:
4ಕ್ಕೆ253 ಡಿಕ್ಲೇರ್ಡ್ (56 ಓವರ್‌ಗಳಲ್ಲಿ)
ಸರ್ವಿಸಸ್: 3ಕ್ಕೆ150 (39 ಓವರ್‌ಗಳಲ್ಲಿ)

ಫಲಿತಾಂಶ: ಪಂದ್ಯ ಡ್ರಾ. ಕರ್ನಾಟಕಕ್ಕೆ 3 ಅಂಕ ಹಾಗೂ ಸರ್ವಿಸಸ್‌ಗೆ 1 ಅಂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT