ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಸಿದ್ಧಾರ್ಥ್ ದೇಸಾಯಿಗೆ 7 ವಿಕೆಟ್‌ l ಗುಜರಾತ್‌ ಜಯಭೇರಿ

Published 15 ಜನವರಿ 2024, 21:42 IST
Last Updated 15 ಜನವರಿ 2024, 21:42 IST
ಅಕ್ಷರ ಗಾತ್ರ

ಅಹಮದಾಬಾದ್: ಸಂಕ್ರಾಂತಿ ಹಬ್ಬದ ದಿನ ನಾಡಿನ ಕ್ರಿಕೆಟ್ ಅಭಿಮಾನಿಗಳಿಗೆ ಮಯಂಕ್ ಅಗರವಾಲ್ ಬಳಗವು ಗೆಲುವಿನ ಸಿಹಿಯೂಟ ಬಡಿಸಲಿಲ್ಲ.

ಸೋಮವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಗುಜರಾತ್ ತಂಡವು ಒಡ್ಡಿದ್ದ 110 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ 6 ರನ್‌ಗಳಿಂದ ಸೋಲಿನ ಕಹಿಯುಂಡಿತು. 26.2 ಓವರ್‌ಗಳಲ್ಲಿ 103 ರನ್‌ ಗಳಿಸಲಷ್ಟೇ ತಂಡಕ್ಕೆ ಸಾಧ್ಯವಾಯಿತು.

ಚೆಂಡು ಬುಗುರಿಯಂತೆ ತಿರುಗುತ್ತಿದ್ದ ಪಿಚ್‌ನಲ್ಲಿ ಗುಜರಾತ್ ತಂಡದ ಎಡಗೈ ಸ್ಪಿನ್ನರ್ ಸಿದ್ಧಾರ್ಥ್‌ ದೇಸಾಯಿ (13–4–42–7) ಒಬ್ಬರೇ ಕರ್ನಾಟಕದ ಏಳು ಬ್ಯಾಟರ್‌ಗಳನ್ನು ಸ್ಪಿನ್ ಖೆಡ್ಡಾಕ್ಕೆ ಕೆಡವಿದರು. ಅಕ್ಷರಶಃ ಕರ್ನಾಟಕದ ಕೈಯಿಂದ ಗೆಲುವನ್ನು ಕಿತ್ತುಕೊಂಡರು. ಇನ್ನುಳಿದ ಮೂರು ವಿಕೆಟ್‌ಗಳನ್ನು ಚೊಚ್ಚಲ ಪಂದ್ಯವಾಡಿದ ಸ್ಪಿನ್ನರ್ ರಿಂಕೇಶ್ ವಘೇಲಾ ಕಬಳಿಸಿದರು. 

ಆರಂಭಿಕರಾದ ಮಯಂಕ್  ಮತ್ತು ದೇವದತ್ತ ಪಡಿಕ್ಕಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ ಒಂಬತ್ತು ಓವರ್‌ಗಳಲ್ಲಿ 50 ರನ್‌ಗಳನ್ನು ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಆದರೆ ಹತ್ತನೇ ಓವರ್‌ನಲ್ಲಿ  ದೇಸಾಯಿ ಎಸೆತದಲ್ಲಿ ಹಿಂಗರೇಜಾಗೆ ಕ್ಯಾಚಿತ್ತ ಮಯಂಕ್ ನಿರ್ಗಮಿಸಿದರು. ಇಲ್ಲಿಂದ ಮುಂದೆ ಪಂದ್ಯವು ನಾಟಕೀಯ ತಿರುವು ಪಡೆಯಿತು. ಕರ್ನಾಟಕದ ಉಳಿದ ಉಳಿದ ಒಂಬತ್ತು ವಿಕೆಟ್‌ಗಳು 53 ರನ್‌ಗಳ ಅಂತರದಲ್ಲಿ ಪತನವಾದವು. ಕ್ಲೋಸ್‌ ಇನ್ ಫೀಲ್ಡಿಂಗ್ ತಂತ್ರಗಾರಿಕೆಯನ್ನು ಗುಜರಾತ್ ಸಮರ್ಥವಾಗಿ ನಿಭಾಯಿಸಿತು. 

ನಿಕಿನ್ ಜೋಸ್, ಮನೀಷ್ ಪಾಂಡೆ, ಪದಾರ್ಪಣೆ ಆಟಗಾರ ಸುಜಯ್ ಸತೇರಿ, ವೈಶಾಖ ವಿಜಯಕುಮಾರ್, ಅನಾರೋಗ್ಯದ ಕಾರಣ  ಎಂಟನೇ ಕ್ರಮಾಂಕದಲ್ಲಿ ಆಡಿದ ಆರ್‌.ಸಮರ್ಥ್ ವೈಫಲ್ಯ ಅನುಭವಿಸಿದ್ದು ತಂಡದ ಸೋಲಿಗೆ ಕಾರಣ. ಬೌಲಿಂಗ್ ದಾಳಿಗೆ ತಕ್ಕ ಬ್ಯಾಟಿಂಗ್ ಕೌಶಲ ತೋರುವಲ್ಲಿ ಆಟಗಾರರು ವಿಫಲರಾದರು.

ಶುಭಾಂಗ್ ಭರವಸೆ: ಇದೆಲ್ಲದರ ನಡುವೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶುಭಾಂಗ್ ಹೆಗಡೆ (27; 37ಎ, 4X3, 6X1) ಗೆಲುವಿನ ಭರವಸೆ ಮೂಡಿಸಿದ್ದರು. ರೋಹಿತ್‌ ಕುಮಾರ್ ಒಂದೂ ರನ್ ಗಳಿಸಲಿಲ್ಲ. ಆದರೆ ಹತ್ತು  ಎಸೆತ ಎದುರಿಸಿದರಲ್ಲದೇ ಶುಭಾಂಗ್‌ಗೆ  ಉತ್ತಮ ಜೊತೆ ನೀಡಿದರು. ಎಂಟನೇ ವಿಕೆಟ್ ಜೊತೆಯಾಟದಲ್ಲಿ  ಶುಭಾಂಗ್ ಜೊತೆಗೆ 15 ರನ್‌ ಸೇರಲು ಸಹಕರಿಸಿದರು.  ಶುಭಾಂಗ್ ಒಂದು ಸಿಕ್ಸರ್ ಸಿಡಿಸಿದಾಗ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಆದರೆ, 23ನೇ ಓವರ್‌ನಲ್ಲಿ ವಘೇಲಾ ಎಸೆತವನ್ನು ಆಡುವ ಯತ್ನದಲ್ಲಿ ವಿಕೆಟ್‌ಕೀಪರ್ ಹೆಟ್ ಪಟೇಲ್‌ಗೆ ಕ್ಯಾಚ್ ಕೊಟ್ಟರು. ನಂತರದ ಓವರ್‌ನಲ್ಲಿ ರೋಹಿತ್ ಅವರೂ ದೇಸಾಯಿಗೆ ವಿಕೆಟ್ ಒಪ್ಪಿಸಿದರು.

ಪ್ರಸಿದ್ಧ ಸಿಕ್ಸರ್: ಬೌಲಿಂಗ್‌ನಲ್ಲಿ ಮಿಂಚಿದ್ದ ವಾಸುಕಿ ಕೌಶಿಕ್ ಮತ್ತು ಗಾಯಾಳು ಪ್ರಸಿದ್ಧಕೃಷ್ಣ ಅವರು ಕೊನೆಯ ಹಂತದಲ್ಲಿ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಸ್ನಾಯುಸೆಳೆತದಿಂದಾಗಿ ಪಂದ್ಯದ ಮೊದಲ ದಿನದಿಂದಲೇ ಕಣದಿಂದ ಹೊರಗುಳಿದಿದ್ದ ಪ್ರಸಿದ್ಧ ಇಲ್ಲಿ ಅನಿವಾರ್ಯವಾಗಿ ಬ್ಯಾಟಿಂಗ್‌ಗೆ ಬಂದಾಗ ತಂಡಕ್ಕೆ 18 ರನ್‌ಗಳ ಅವಶ್ಯಕತೆ ಇತ್ತು. 

ಅವರು ಒಂದು ಸಿಕ್ಸರ್‌ ಸಿಡಿಸಿದಾಗ ಭರವಸೆಯ ಮಿಂಚು ಹರಿಯಿತು. ಇನ್ನೊಂದೆಡೆ ರಕ್ಷಣಾತ್ಮಕವಾಗಿ ಆಡಿದ ಕೌಶಿಕ್ ಕೂಡ ನಾಲ್ಕು ರನ್‌ ಗಳಿಸಿದರು. ಇದರಿಂದಾಗಿ ತಂಡವು 100ರ ಗಡಿ ದಾಟಿತು. ಪ್ರಸಿದ್ಧ ಕುಂಟುತ್ತಲೇ ಓಡಾಡಿದರು. ಆದರೆ 27ನೇ ಓವರ್‌ನಲ್ಲಿ ವಘೇಲಾ ಹಾಕಿದ ಎಸೆತಕ್ಕೆ ಪ್ರಸಿದ್ಧ ಕ್ಲೀನ್‌ಬೌಲ್ಡ್ ಆದರು. 

ಪಂದ್ಯದ ಮೂರನೇ ದಿನದಾಟವಾದ  ಭಾನುವಾರ ಮುಕ್ತಾಯಕ್ಕೆ ಗುಜರಾತ್ 7 ವಿಕೆಟ್‌ಗಳಿಗೆ 171 ರನ್‌ ಗಳಿಸಿತ್ತು. ಸೋಮವಾರ ಬೆಳಿಗ್ಗೆ ಈ ಮೊತ್ತಕ್ಕೆ 48 ರನ್‌ಗಳನ್ನು ಸೇರಿಸಿತು. ಉಮಂಗ್ ಕುಮಾರ್ ಅರ್ಧಶತಕ ಪೂರೈಸಿದರು. ತಂಡವು 219 ರನ್‌ಗಳಿಗೆ ಆಲೌಟ್ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT