ಮಂಗಳವಾರ, ಮಾರ್ಚ್ 21, 2023
20 °C
ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ–ಉತ್ತರಾಖಂಡ ಕ್ವಾರ್ಟರ್‌ ಫೈನಲ್ ಇಂದಿನಿಂದ

ರಣಜಿ ಟ್ರೋಫಿ ಕ್ರಿಕೆಟ್: ಮಯಂಕ್ ಬಳಗಕ್ಕೆ ನಾಕೌಟ್ ಸವಾಲು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಅಭ್ಯಾಸ ನಡೆಸಿದ  ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡದ ಆಟಗಾರರಲ್ಲಿ ಅಪಾರ ಆತ್ಮವಿಶ್ವಾಸ ಕಾಣುತ್ತಿತ್ತು.

ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನಲ್ಲಿ ಅಜೇಯವಾಗಿ ಎಂಟರ ಘಟ್ಟ ಪ್ರವೇಶಿಸಿರುವುದೇ ತಂಡದ ಹುಮ್ಮಸ್ಸು ಹೆಚ್ಚಲು  ಕಾರಣ. ಅದೇ ಹುರುಪಿನಲ್ಲಿ ಮಂಗಳವಾರ ಇಲ್ಲಿ ನಡೆಯಲಿರುವ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಉತ್ತರಾಖಂಡ ಬಳಗವನ್ನು ಎದುರಿಸಲು ಸಿದ್ಧವಾಗಿದೆ.

ಆದರೆ ಕಳೆದ ಐದು ಋತುಗಳಲ್ಲಿ ನಾಕೌಟ್ ಹಂತದಲ್ಲಿಯೇ ಕರ್ನಾಟಕವು ಸೋತು ಹೊರಬಿದ್ದಿತ್ತು. ಅದರಲ್ಲಿ ಎರಡು ಸಲ ಕ್ವಾರ್ಟರ್‌ಫೈನಲ್ ಮತ್ತು ಮೂರು ಬಾರಿ ಸೆಮಿಫೈನಲ್‌ ಗಳಲ್ಲಿ ನಿರಾಶೆ ಅನುಭವಿಸಿತ್ತು. ಆದರೆ ಅನುಭವ ಹಾಗೂ ಆಟಗಾರರ ಸಾಮರ್ಥ್ಯವನ್ನು ನೋಡಿದರೆ  ಕರ್ನಾಟಕವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. 

ಲೀಗ್ ಹಂತದಲ್ಲಿ ಮೂರು ಶತಕ ಬಾರಿಸಿರುವ ಆರ್. ಸಮರ್ಥ್, ದ್ವಿಶತಕ ಗಳಿಸಿರುವ ಮಯಂಕ್, ಮನೀಷ್ ಪಾಂಡೆ ಮತ್ತು ದೀರ್ಘ ಬಿಡುವಿನ ನಂತರ ತಂಡಕ್ಕೆ ಮರಳಿ ಶತಕ ದಾಖಲಿಸಿರುವ ದೇವದತ್ತ ಪಡಿಕ್ಕಲ್ ಉತ್ತಮ ಲಯದಲ್ಲಿದ್ದಾರೆ. ಪದಾರ್ಪಣೆಯ ಟೂರ್ನಿಯಲ್ಲಿ ಆಡುತ್ತಿರುವ ನಿಕಿನ್ ಜೋಸ್ ತಮ್ಮ ಛಾಪು ಮೂಡಿಸುವಲ್ಲಿ ಸಫಲರಾಗಿದ್ದಾರೆ. ಬ್ಯಾಟರ್  ಕೆ.ವಿ. ಸಿದ್ಧಾರ್ಥ್‌ಗೆ  ಲೀಗ್‌ ಹಂತದಲ್ಲಿ ಅವಕಾಶ ಸಿಕ್ಕಿಲ್ಲ. ಒಂದೊಮ್ಮೆ ಇಲ್ಲಿ ಅವಕಾಶ ಸಿಕ್ಕರೆ ನಿಕಿನ್ ಜೋಸ್ ವಿಶ್ರಾಂತಿ ಪಡೆಯಬೇಕಾಗಬಹುದು.

ಇಲ್ಲಿಯವರೆಗೆ ತಂಡದ ಗೆಲುವಿನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿರುವುದು ಬೌಲಿಂಗ್ ಪಡೆ. ವೇಗತ್ರಯರಾದ ವಿದ್ವತ್, ವೈಶಾಖ ಮತ್ತು ಕೌಶಿಕ್ ತಂಡದ ಶಕ್ತಿಯಾಗಿದ್ದಾರೆ. ಆಫ್‌ಸ್ಪಿನ್ನರ್ ಗೌತಮ್  ಲೀಗ್‌ನ ಕೊನೆಯ ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್ ಗಳಿಸಿದ್ದರು. ಫೀಲ್ಡಿಂಗ್ ವಿಭಾಗದಲ್ಲಿ ಕ್ಯಾಚ್‌ಗಳನ್ನು ಕೈಚೆಲ್ಲದಿದ್ದರೆ ಮಯಂಕ್ ಬಳಗವು ಉತ್ತರಾಖಂಡವನ್ನು ಮಣಿಸುವ ಹಾದಿ ಸುಗಮವಾಗಲಿದೆ.

ಗುಂಪು ಹಂತದಲ್ಲಿ ಮೂರು ಗೆಲುವು ಮತ್ತು ನಾಲ್ಕು ಡ್ರಾ ಸಾಧಿಸಿರುವ ಆದಿತ್ಯ ತಾರೆ ನಾಯಕತ್ವದ ಬಳಗವು ಸೆಮಿಫೈನಲ್ ಕನಸು ಕಾಣುತ್ತಿದೆ. ಬೌಲರ್‌ಗಳಾದ ಅಗ್ರಿಮ್ ತಿವಾರಿ, ನಿಖಿಲ್ ಕೊಹ್ಲಿ ಅವರ ಮುಂದೆ ಕರ್ನಾಟಕದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲಿದೆ. ಬ್ಯಾಟಿಂಗ್‌ನಲ್ಲಿ ಅವನೀಶ್ ಸುಧಾ, ಆದಿತ್ಯ ತಾರೆ ಅವರ ಮೇಲೆ ಹೆಚ್ಚು
ಅವಲಂಬಿತವಾಗಿದೆ.

ಪಂದ್ಯ ಆರಂಭ: ಬೆಳಿಗ್ಗೆ 9.30

ಇನ್ನುಳಿದ ಕ್ವಾರ್ಟರ್‌ಫೈನಲ್‌ಗಳು:

ಬಂಗಾಳ – ಜಾರ್ಖಂಡ್ (ಕೋಲ್ಕತ್ತ)

ಸೌರಾಷ್ಟ್ರ–ಪಂಜಾಬ್ (ರಾಜ್‌ಕೋಟ್)

ಮಧ್ಯಪ್ರದೇಶ –ಆಂಧ್ರ (ಇಂದೋರ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು