ಶನಿವಾರ, ಜನವರಿ 25, 2020
22 °C
ತಮಿಳುನಾಡು ವಿರುದ್ಧ ಕರುಣ್‌ ಪಡೆಗೆ 29 ರನ್‌ಗಳ ಮುನ್ನಡೆ

KARvsTN: ಕರ್ನಾಟಕ ಬ್ಯಾಟಿಂಗ್ ವೈಫಲ್ಯ: ರೋಚಕಘಟ್ಟದತ್ತ ವಾಲಿದ ಪಂದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿಂಡಿಗಲ್: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ತಮಿಳುನಾಡು ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕ ತಂಡ 89 ರನ್‌ಗಳಿಗೆ ಪ್ರಮುಖ ಐದು ವಿಕೆಟ್‌ ಕಳೆದುಕೊಂಡಿದೆ. ಇನ್ನೂ ಒಂದು ದಿನದ ಆಟ ಬಾಕಿ ಉಳಿದಿದ್ದು ಪಂದ್ಯವು ರೋಚಕ ತಿರುವು ಪಡೆದುಕೊಂಡಿದೆ.

ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ಗಳಿಸಿದ್ದ 336 ರನ್‌ಗಳಿಗೆ ಉತ್ತರವಾಗಿ ತಮಿಳುನಾಡು ತಂಡ ಅನುಭವಿ ದಿನೇಶ್‌ ಕಾರ್ತಿಕ್‌ ಶತಕದಾಟದ ಹೊರತಾಗಿಯೂ 307 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಕರ್ನಾಟಕ ಪರ ಬ್ಯಾಟಿಂಗ್‌ನಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ ಕೆ.ಗೌತಮ್‌ ಬೌಲಿಂಗ್‌ನಲ್ಲಿಯೂ ಕಮಾಲ್‌ ಮಾಡಿದರು. ಅವರು 110 ರನ್‌ ನೀಡಿ 6 ವಿಕೆಟ್‌ ಪಡೆದು ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.

ಮೂರನೇ ದಿನಕ್ಕೆ ದಿನೇಶ್ ಕಾರ್ತಿಕ್ ಜೊತೆ ಕ್ರೀಸ್‌ಕಾಯ್ದುಕೊಂಡಿದ್ದ ಎನ್‌.ಜಗದೀಶನ್‌ 29ರನ್‌ ಗಳಿಸಿ ಔಟಾದರು. ಬಳಿಕ ಬಂದ ಆರ್.ಅಶ್ವಿನ್‌ (11) ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೆಳಕ್ರಮಾಂಕದಲ್ಲಿ ಆಡಲಿಳಿ ಮುರುಗನ್‌ ಅಶ್ವಿನ್‌ (1), ರವಿಶ್ರೀನಿವಾಸನ್‌ ಸಾಯಿ ಕಿಶೋರ್‌ (3), ಮಣಿಮಾರನ್‌ ಸಿದ್ದಾರ್ಥ್‌ (1) ಎರಡಂಕಿ ದಾಟಲು ವಿಫಲರಾದರು.

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಗಟ್ಟಿಯಾಗಿ ನಿಂತು ಆಡಿದ ದಿನೇಶ್‌, 235 ಎಸೆತಗಳಲ್ಲಿ 113 ರನ್‌ ಗಳಿಸಿದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಮ್ಯಾರಥಾನ್‌ ಇನಿಂಗ್ಸ್‌ ಆಡಿದ ದಿನೇಶ್‌ ತಮ್ಮ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು. ಅಂತಿಮವಾಗಿ ಅವರು ಗೌತಮ್‌ ಎಸೆದ 110ನೇ ಓವರ್‌ನಲ್ಲಿ ಡೇವಿಡ್‌ ಮಥಾಯಿಸ್‌ಗೆ ಕ್ಯಾಚ್‌ ನೀಡಿ ಔಟಾದರು. ಹೀಗಾಗಿ 29 ರನ್‌ಗಳ ಅಲ್ಪ ಮುನ್ನಡೆ ಪಡೆಯಿತು.

ಎರಡನೇ ಇನಿಂಗ್ಸ್‌ ಆರಂಭಿಸಿದ ಕರುಣ್‌ ನಾಯರ್‌ ಬಳಗ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದೆ. ಹೀಗಾಗಿ ಕೊನೆಯ ದಿನದಾಟದಲ್ಲಿ ಸ್ಪಷ್ಟ ಫಲಿತಾಂಶ ಮೂಡುವ ಸಾಧ್ಯತೆ ಇದೆ.

ಭಾರತ ಹಾಗೂ ವಿಂಡೀಸ್‌ ಏಕದಿನ ಕ್ರಿಕೆಟ್ ಸರಣಿಗೆ ಶಿಖರ್‌ ಧವನ್‌ ಬದಲು ಸ್ಥಾನ ಪಡೆದಿರುವ ಆರಂಭಿಕ ಬ್ಯಾಟ್ಸ್‌ಮನ್‌ ಮಯಂಕ್‌ ಅಗರವಾಲ್‌ ಕೇವಲ ಎಂಟು ರನ್‌ಗಳಿಸಿ ರನ್‌ಔಟ್‌ ಆದರು. ಆರಂಭಿಕ ದೇಗಾ ನಿಶ್ಚಲ್‌ ಹಾಗೂ ನಾಯಕ ಕರುಣ್‌ ನಾಯರ ಎರಡನೇ ಇನಿಂಗ್ಸ್‌ನಲ್ಲೂ ನಿರಾಸೆ ಮೂಡಿಸಿದರು. 23 ರನ್‌ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿದ್ದಾಗ ಬಂದ ಪವನ್‌ ದೇಶಪಾಂಡೆ (20), ದೇವದತ್ತ ಪಡಿಕಲ್‌ ಜೊತೆ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 36 ರನ್‌ ಸೇರಿಸಿದರು.

ಈ ಜೋಡಿಯನ್ನು ಅನುಭವಿ ಸ್ಪಿನ್ನರ್‌ ಆರ್‌.ಅಶ್ವಿನ್‌ ಬೇರ್ಪಡಿಸಿದರು. ನಂತರ ಬಂದ ಶ್ರೇಯಸ್‌ ಗೋಪಾಲ್‌ ಸೊನ್ನೆ ಸುತ್ತಿದರು. ಸದ್ಯ 106 ಎಸೆಗಳಲ್ಲಿ 29 ರನ್‌ ಗಳಿಸಿರುವ ಪಡಿಕ್ಕಲ್‌ ಹಾಗು 40 ಎಸೆತಗಳಲ್ಲಿ 25 ರನ್‌ ಗಳಿಸಿರುವ ಬಿ.ಆರ್.ಶರತ್‌ 25 ರನ್‌ ಗಳಿಸಿ ಆಡುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರು
ಕರ್ನಾಟಕ ಮೊದಲ ಇನಿಂಗ್ಸ್‌: 336ಕ್ಕೆ ಆಲೌಟ್
ದೇವದತ್ತ ಪಡಿಕ್ಕಲ್ 78 ರನ್‌, ಪವನ್‌ ದೇಶಪಾಂಡೆ 65, ಕೆ. ಗೌತಮ್‌ 51, ಮಯಂಕ್ ಅಗರವಾಲ್‌ 43
ಆರ್‌. ಅಶ್ವಿನ್‌ಗೆ 79ಕ್ಕೆ 4 ವಿಕೆಟ್‌
ಮಣಿಮಾರನ್ ಸಿದ್ದಾರ್ಥ್‌ 47ಕ್ಕೆ 2 ವಿಕೆಟ್‌
ಕೃಷ್ಣಮೂರ್ತಿ ವಿಘ್ನೇಶ್ 55ಕ್ಕೆ 2 ವಿಕೆಟ್‌
ಬಾಬಾ ಅಪರಾಜಿತ್ 24ಕ್ಕೆ 1 ವಿಕೆಟ್

ತಮಿಳುನಾಡು ಮೊದಲ ಇನಿಂಗ್ಸ್‌: 307ಕ್ಕೆ ಆಲೌಟ್
ದಿನೇಶ್‌ ಕಾರ್ತಿಕ್‌ 113, ಅಭಿನವ್‌ ಮುಕುಂದ್‌ 47 ರನ್‌,  ಬಾಬಾ ಅಪರಾಜಿತ್ 37, ಮುರುಳಿ ವಿಜಯ್‌ 32 ರನ್‌
ಕೆ. ಗೌತಮ್‌ 110ಕ್ಕೆ 6 ವಿಕೆಟ್‌
ರೋನಿತ್‌ ಮೋರೆ 67ಕ್ಕೆ 2 ವಿಕೆಟ್‌
ವಿ. ಕೌಶಿಕ್‌ 36ಕ್ಕೆ 1 ವಿಕೆಟ್‌
ಶ್ರೇಯಸ್‌ ಗೋಪಾಲ್‌ 50ಕ್ಕೆ 1 ವಿಕೆಟ್‌

ಕರ್ನಾಟಕ ಎರಡನೇ ಇನಿಂಗ್ಸ್‌: 5 ವಿಕೆಟ್‌ಗೆ 89
ದೇವದತ್ತ ಪಡಿಕ್ಕಲ್ ಔಟಾಗಡೆ 29 ರನ್‌, ಶರತ್‌ ಬಿ.ಆರ್‌. ಔಟಾಗದೆ 25 ರನ್‌, ಪವನ್‌ ದೇಶಪಾಂಡೆ 20 ರನ್‌
ಆರ್‌. ಅಶ್ವಿನ್‌ಗೆ 30ಕ್ಕೆ 2 ವಿಕೆಟ್‌
ಕೃಷ್ಣಮೂರ್ತಿ ವಿಘ್ನೇಶ್ 11ಕ್ಕೆ 2 ವಿಕೆಟ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು