ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ | ಮಹತ್ವದ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಸಾಧಿಸಿದ ಕರ್ನಾಟಕ

Last Updated 12 ಫೆಬ್ರುವರಿ 2020, 13:17 IST
ಅಕ್ಷರ ಗಾತ್ರ

ಬೆಂಗಳೂರು:ನಾಕೌಟ್‌ ಪ್ರವೇಶದ ದೃಷ್ಟಿಯಿಂದ ನಿರ್ಣಾಯಕವೆನಿಸಿದ್ದ ಪಂದ್ಯದಲ್ಲಿ ಮೊದಲ ದಿನ ಸಂಘಟಿತ ಪ್ರದರ್ಶನ ತೋರಿರುವ ಕರ್ನಾಟಕ ತಂಡ, ಬರೋಡ ಎದುರು ಇನಿಂಗ್ಸ್‌ ಮುನ್ನಡೆ ಸಾಧಿಸಿದೆ.

ಸುಲಭವಾಗಿ ನಾಕೌಟ್‌ ಪ್ರವೇಶಿಸಲು ಈ ಪಂದ್ಯವನ್ನು ಗೆಲ್ಲಬೇಕಾದ ಅಥವಾ ಇನಿಂಗ್ಸ್‌ ಮುನ್ನಡೆ ಸಾಧಿಸಲೇಬೇಕಾದ ಒತ್ತಡ ಕರ್ನಾಟಕ ಪಡೆಯ ಮೇಲಿತ್ತು. ಹಾಗಾಗಿ ಸದ್ಯ ದೊರೆತಿರುವ ಇನಿಂಗ್ಸ್‌ ಮುನ್ನಡೆಯು ಕರುಣ್‌ ನಾಯರ್‌ ಬಳಗಕ್ಕೆ ಉತ್ಸಾಹ ತುಂಬಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಕರ್ನಾಟಕ ತಂಡದ ನಾಯಕ ಕರುಣ್‌ ನಾಯರ್‌, ಬರೋಡಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಬೌಲರ್‌ಗಳು ಬರೋಡ ಬಳಗವನ್ನು ಇನ್ನಿಲ್ಲದಂತೆ ಕಾಡಿದರು.

ಪ್ರವಾಸಿ ತಂಡದ ಅಹ್ಮದ್‌ನೂರ್ ಪಠಾಣ್‌(45) ಮತ್ತು ದೀಪಕ್‌ ಹೂಡಾ (20) ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮುಟ್ಟಲಿಲ್ಲ. ನಾಯಕ ಕೃಣಾಲ್‌ ಪಾಂಡ್ಯ ಸೇರಿ ಒಟ್ಟು ಐವರು ಸೊನ್ನೆ ಸುತ್ತಿದರು. ಹೀಗಾಗಿ ಬರೋಡ ಕೇವಲ 85 ರನ್‌ ಗಳಿಗೆ ಆಲೌಟ್‌ ಆಯಿತು.

ವೇಗಿ ಅಭಿಮನ್ಯುಮಿಥುನ್‌ ಮತ್ತು ಸ್ಪಿನ್ನರ್ ಕೃಷ್ಣಪ್ಪ ಗೌತಮ್‌ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು. ಪ್ರಸಿದ್ಧ ಕೃಷ್ಣ 2 ಹಾಗೂ ಶ್ರೇಯಸ್‌ ಗೋಪಾಲ್‌ ಒಂದು ವಿಕೆಟ್ ಪಡೆದರು.

ಹೋರಾಟ ನಡೆಸಿದ ಬರೋಡ
ಅಲ್ಪ ಮೊತ್ತಕ್ಕೆ ಕುಸಿದ ಬಳಿಕ ಬೌಲಿಂಗ್‌ನಲ್ಲಿ ಮೊನಚಿನ ದಾಳಿ ಸಂಘಟಿಸಿದ ಬರೋಡ, ಕೇವಲ 23 ರನ್‌ ಆಗುವಷ್ಟರಲ್ಲಿ ಆತಿಥೇಯರ 2 ವಿಕೆಟ್‌ ಕಬಳಿಸಿ ಆಘಾತ ನೀಡಿದರು. ಆದರೆ, ಮೂರನೇ ವಿಕೆಟ್‌ಗೆ 61 ರನ್ ಸೇರಿಸಿದಕರುಣ್ (47) ಮತ್ತು ಕೆ.ಸಿದ್ಧಾರ್ಥ್‌ (29) ಜೋಡಿ ಕುಸಿತಕ್ಕೆ ಬ್ರೇಕ್‌ ಹಾಕಿ ಇನಿಂಗ್ಸ್‌ ಮುನ್ನಡೆಯನ್ನೂ ತಂದುಕೊಟ್ಟಿತು.

ಸದ್ಯ ಮೊದಲ ದಿನದಂತ್ಯಕ್ಕೆ 7 ವಿಕೆಟ್‌ ಕಳೆದುಕೊಂಡು 165 ರನ್‌ ಗಳಿಸಿರುವ ಕರ್ನಾಟಕ ತಂಡ 80 ರನ್‌ಗಳ ಮುನ್ನಡೆಯಲ್ಲಿದೆ. 19 ರನ್‌ ಗಳಿಸಿರುವ ಆರ್‌. ಸಮರ್ಥ್‌ ಮತ್ತು 9 ರನ್‌ ಹೊಡೆದಿರುವ ಮಿಥುನ್‌ ಕ್ರೀಸ್‌ನಲ್ಲಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಉಳಿದ ಮೂರು ವಿಕೆಟ್‌ಗಳನ್ನು ಬೇಗನೆ ಕಬಳಿಸುವ ಯೋಜನೆಯಲ್ಲಿ ಕೃಣಾಲ್‌ ಪಡೆ ಇದ್ದರೆ,ಮುನ್ನಡೆಯ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದು ಕರುಣ್‌ ಬಳಗದ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT