ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವದಾನದ ಭೂಮಿಕೆ ಮೇಲೆ ರನ್ ಸೌಧ

ರಣಜಿ ಕ್ರಿಕೆಟ್: ಮಧ್ಯಪ್ರದೇಶಕ್ಕೆ ಆದಿತ್ಯ ಶತಕದ ಆಸರೆ; ವೆಂಕಟೇಶ್‌ ಜೊತೆ ಭರ್ಜರಿ ಜೊತೆಯಾಟ
Last Updated 6 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಶಿವಮೊಗ್ಗ: ಎರಡು ಜೀವದಾನಗಳ ದೊಡ್ಡ ಲಾಭ ಪಡೆದ ಆದಿತ್ಯ ಶ್ರೀವಾಸ್ತವ ಮಧ್ಯಪ್ರದೇಶದ ಪರವಾಗಿ ರನ್‌ಗಳ ಸೌಧ ಕಟ್ಟಿದರು. ಅದಕ್ಕೆ ಅಗತ್ಯವಿದ್ದ ಗೋಪುರ ನಿರ್ಮಾಣ ಮಾಡಿದ್ದು ವೆಂಕಟೇಶ್‌ ಅಯ್ಯರ್. ಅವರಿಗೂ ಸಂದದ್ದು ಎರಡು ಜೀವದಾನ ಹಾಗೂ ಒಮ್ಮೆ ನೋಬಾಲ್‌ನಲ್ಲಿ ಬೌಲ್ಡ್‌ ಆಗಿಯೂ ಉಳಿಯುವ ಅದೃಷ್ಟ.

ಈ ರಣಜಿ ಋತುವಿನಲ್ಲಿ ತಂಡದ ಪರ ಆಡಲು ತಡವಾಗಿ ಅವಕಾಶ ಪಡೆದ ಆದಿತ್ಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಐದನೇ ಶತಕ ದಾಖಲಿಸಿದರು (ಬ್ಯಾಟಿಂಗ್ 109; 223 ಎಸೆತ, 15 ಬೌಂಡರಿ). ಈ ಸಲ ರಣಜಿ ಟೂರ್ನಿಯಲ್ಲಿ ನಾಲ್ಕನೇ ಅರ್ಧಶತಕ ದಾಖಲಿಸಿರುವ ವೆಂಕಟೇಶ್ (80; 200 ಎಸೆತ, 10 ಬೌಂಡರಿ, 1 ಸಿಕ್ಸರ್) ಚೊಚ್ಚಲ ಶತಕ ಗಳಿಸುವ ಕನಸನ್ನು ನೇವರಿಸತೊಡಗಿದ್ದಾರೆ. ಇಬ್ಬರೂ ಮುರಿಯದ ಐದನೇ ವಿಕೆಟ್‌ಗೆ 188 ರನ್‌ಗಳ ಜೊತೆಯಾಟವಾಡಿದ್ದಾರೆ.

ಪ್ರಬಲ ಕರ್ನಾಟಕ ತಂಡದ ಸವಾಲಿಗೆ ಮಧ್ಯಪ್ರದೇಶದ ಮಧ್ಯಮ ಕ್ರಮಾಂಕ ರಣಜಿ ಕ್ರಿಕೆಟ್‌ ಪಂದ್ಯದಲ್ಲಿ ಆಡಿದ ರೀತಿ ಬೆರಗು ಮೂಡಿಸಿತು. ಗುರುವಾರ ಮೂರನೆಯ ದಿನದಾಟದ ಅಂತ್ಯಕ್ಕೆ ಪ್ರವಾಸಿ ತಂಡ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತು.

ಕೇವಲ ನಾಲ್ಕು ಓವರ್‌ಗಳ ಅಂತರದಲ್ಲಿ ನೆಲೆಯೂರುತ್ತಿದ್ದ ಇಬ್ಬರು ಬ್ಯಾಟ್ಸ್‌ಮನ್‌ಗಳು ದಿನದಾಟದ ಮೊದಲ ಅವಧಿಯಲ್ಲಿ ಔಟಾಗಿದ್ದು, ಮಧ್ಯಪ್ರದೇಶ ಸಂಕಷ್ಟಕ್ಕೆ ಸಿಲುಕುವಂತೆ ಕಂಡಿತು. ಅನುಭವಿ ಬ್ಯಾಟ್ಸ್‌ಮನ್‌ ಯಶ್ ದುಬೆ ಐದು ರನ್‌ಗಳಿಂದ (4 ಬೌಂಡರಿ) ಅರ್ಧಶತಕ ವಂಚಿತರಾದರು. ಅವರನ್ನು ಶ್ರೇಯಸ್ ಗೋಪಾಲ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ದಿನದಾಟದ ತಮ್ಮ ಮೊದಲ ಓವರ್‌ನಲ್ಲೇ ಮೊದಲ ಸ್ಲಿಪ್‌ನಲ್ಲಿದ್ದ ಆತಿಥೇಯರ ನಾಯಕ ಕರುಣ್ ನಾಯರ್‌ಗೆ ಶುಭಂ ಕ್ಯಾಚ್‌ ನೀಡುವಂತೆ ಬೌಲಿಂಗ್ ಮಾಡಿದ್ದು ಗೌತಮ್. ಉತ್ತಮ ಲಯದಲ್ಲಿದ್ದ ಗೌತಮ್, ಆದಿತ್ಯ ಅವರ ಬ್ಯಾಟ್‌ನ ತುದಿಗೂ ಚೆಂಡು ಸವರಿಕೊಂಡು ಹೋಗುವಂತೆ ಬೌಲ್ ಮಾಡಿದರು. ಆದರೆ, ವಿಕೆಟ್‌ ಕೀಪರ್ ಶರತ್ ಚಕ್ಕನೆ ನುಗ್ಗಿದ ಚೆಂಡು ಹಿಡಿಯದೇ, ಕ್ಯಾಚ್ ಕೈಚೆಲ್ಲಿದರು. ಆಗ ಬರೀ 8 ರನ್ ಗಳಿಸಿದ್ದ ಆದಿತ್ಯ ಆಮೇಲೆ ಆಟಕ್ಕೆ ಕುದುರಿಕೊಂಡರು. 66 ರನ್ ಗಳಿಸಿದ್ದ ಸಂದರ್ಭದಲ್ಲಿ ಮೊದಲ ಸ್ಲಿಪ್‌ನಲ್ಲಿದ್ದ ಕರುಣ್ ಇನ್ನೊಂದು ಕ್ಯಾಚ್ ಬಿಟ್ಟು ಆದಿತ್ಯ ಅವರಿಗೆ ಎರಡನೇ ಜೀವದಾನ ನೀಡಿದರು.

ಹಳಿ ತಪ್ಪುವಂತೆ ಕಂಡಿದ್ದ ಮಧ್ಯಪ್ರದೇಶದ ಇನಿಂಗ್ಸ್‌ಗೆ ಜೀವತುಂಬಿದ್ದು ಆದಿತ್ಯ–ವೆಂಕಟೇಶ್ ಜೋಡಿ. ಕ್ರೀಸ್‌ಗೆ ಬಂದ ಪ್ರಾರಂಭದಲ್ಲಿ ಆಕ್ರಮಣಕಾರಿಯಾಗಿ ಆಡುವ ಧೋರಣೆ ತೋರಿದ ವೆಂಕಟೇಶ್ ಬಲು ಬೇಗ ಗೌತಮ್ ಇರಾದೆ ಅರ್ಥಮಾಡಿಕೊಂಡು ರಕ್ಷಣಾ ತ್ಮಕ ಆಟಕ್ಕಿಳಿದರು. ಇನ್ನೊಂದು ಕಡೆ ಆದಿತ್ಯ ಸಾಧ್ಯವಾದಾಗಲ್ಲೆಲ್ಲ ‘ಕಾಪಿಬುಕ್ ಶಾಟ್‌’ಗಳನ್ನು ಹೊಡೆಯುತ್ತಾ ಬಂದರು. ಗೌತಮ್ ಎಸೆತದಲ್ಲಿ ಥರ್ಡ್‌ಮನ್‌ ಬೌಂಡರಿ ಕಡೆಗೆ ಒಂದು ಹಾಗೂ ಇನ್ನೊಂದು ಆಫ್‌ಡ್ರೈವ್ ಮಾಡಿ ಬೌಂಡರಿಗಳನ್ನು ಗಿಟ್ಟಿಸಿಯೇ ಅವರು ಶತಕದ ಗಡಿ ದಾಟಿದ್ದು ವಿಶೇಷ.

ಎಂಬತ್ತನೇ ಓವರ್ ಬೌಲ್ ಮಾಡಲು ಶ್ರೇಯಸ್ ಗೋಪಾಲ್ ಮರಳಿದಾಗ ವೆಂಕಟೇಶ್ ಅಯ್ಯರ್ ಮತ್ತೆ ತಮ್ಮ ಸಹಜ ಆಕ್ರಮಣದಾಟಕ್ಕೆ ಇಳಿದ ಪರಿ ಮಜವಾಗಿತ್ತು. ಆಫ್‌ಡ್ರೈವ್, ಕವರ್‌ಡ್ರೈವ್ ಅಲ್ಲದೆ ಲಾಂಗ್‌ಆನ್‌ ಕಡೆಗೆ ಚೆಂಡನ್ನು ಹೊಡೆದು ಸತತವಾಗಿ ಮೂರು ಬೌಂಡರಿ ಗಳಿಸಿದರು. ಅದೇ ಓವರ್‌ನಲ್ಲಿ ಇನ್ನೊಂದು ರಿವರ್ಸ್ ಸ್ವೀಪ್ ಕೂಡ ಮಾಡಿ ಥಟ್ಟನೆ ಒಟ್ಟು ನಾಲ್ಕು ಬೌಂಡರಿ ಗಿಟ್ಟಿಸಿ, ವೈಯಕ್ತಿಕ ಸ್ಕೋರ್‌ ಅನ್ನು 32ಕ್ಕೆ ಹಿಗ್ಗಿಸಿಕೊಂಡರು. ಮತ್ತೊಂದು ಓವರ್‌ನಲ್ಲಿ ಶ್ರೇಯಸ್‌ ಗೋಪಾಲ್‌ ಅವರ ಎಸೆತದಲ್ಲೇ ಹೊರ ನುಗ್ಗಿ ಸ್ಟ್ರೇಟ್‌ಡ್ರೈವ್‌ ಮೂಲಕ ಸಿಕ್ಸರ್ ಹೊಡೆದಾಗ ಕರ್ನಾಟಕದ ಬೌಲರ್‌ಗಳ ಸದ್ದು ಅಡಗಿತು. ಇನ್ನೊಂದು ತುದಿಯಲ್ಲಿ ಗೌತಮ್ 27 ಓವರ್‌ಗಳ ದೀರ್ಘ ಸ್ಪೆಲ್‌ ಬೌಲಿಂಗ್ ಮಾಡಿದರು. ಕರ್ನಾಟಕದ ಮಧ್ಯಮ ವೇಗದ ಬೌಲರ್‌ಗಳು ಅಚ್ಚು ಕಟ್ಟಾಗಿ ಎಸೆತಗಳನ್ನು ಹಾಕಿದರೂ ವಿಕೆಟ್‌ಗಳು ದಕ್ಕಲಿಲ್ಲ.

ಒಮ್ಮೆ ರನ್‌ಔಟ್‌ ಮಾಡಲೆಂದು ಗೌತಮ್ ಮಿಡ್‌ಆನ್‌ ಕಡೆಯಿಂದ ಎಸೆದ ಚೆಂಡನ್ನು ಬೌಲರ್ ಶ್ರೇಯಸ್ ಗೋಪಾಲ್ ಹಿಡಿಯದೆ, ಅಯ್ಯರ್‌ಗೆ ಜೀವದಾನ ನೀಡಿದರು. ಆಗ ಎಡಗೈ ಬ್ಯಾಟ್ಸ್‌ಮನ್ ಬರೀ 7 ರನ್ ಗಳಿಸಿದ್ದರು. ರೋನಿತ್ ಮೋರೆ ಮಾಡಿದ 113ನೇ ಓವರ್‌ನಲ್ಲೂ ಚೆಂಡು ಅವರ ಬ್ಯಾಟ್‌ನ ಅಂಚಿಗೆ ತಾಕಿಕೊಂಡು ಮೊದಲ ಸ್ಲಿಪ್‌ನಲ್ಲಿದ್ದ ಗೌತಮ್ ಕಡೆಗೆ ಚಿಮ್ಮಿತು. ಅದನ್ನೂ ಕ್ಯಾಚ್‌ ಆಗಿ ಪರಿವರ್ತಿಸುವಲ್ಲಿ ಎಡವಿದರು. ಆಗ ವೆಂಕಟೇಶ್ ಖಾತೆಯಲ್ಲಿ 70 ರನ್‌ಗಳು ಸೇರಿದ್ದವು. ಅದಕ್ಕೂ ಮೊದಲು 62 ರನ್‌ನಲ್ಲಿ ಇದ್ದಾಗ ಮಿಥುನ್ ಬೌಲಿಂಗ್‌ನಲ್ಲಿ ಬೌಲ್ಡ್‌ ಆಗಿದ್ದರು. ಅವರ ಅದೃಷ್ಟಕ್ಕೆ ಅದು ನೋಬಾಲ್ ಆಗಿತ್ತು.

ಕರ್ನಾಟಕದ ಮೊದಲ ಇನಿಂಗ್ಸ್‌ನ ಮೊತ್ತಕ್ಕಿಂತ ಈಗ 115 ರನ್‌ ಹಿಂದೆ ಇರುವ ಮಧ್ಯಪ್ರದೇಶ ಕೊನೆಯ ದಿನವಾದ ಶುಕ್ರವಾರ ಅದನ್ನು ಮುಟ್ಟೀತೇ ಎನ್ನುವುದು ಸದ್ಯದ ಕುತೂಹಲ.

ಆದಿತ್ಯ– ಗಮನಾರ್ಹ ಪುನರಾಗಮನ

2017–18ರಲ್ಲಿ ಎರಡು ರಣಜಿ ಪಂದ್ಯಗಳಲ್ಲಷ್ಟೇ ಆಡುವ ಅವಕಾಶ ಪಡೆದಿದ್ದ ಮಧ್ಯಪ್ರದೇಶದ ಆದಿತ್ಯ ಶ್ರೀವಾಸ್ತವ ಈ ಬಾರಿ ತಂಡಕ್ಕೆ ಮರಳಿದರೂ ಅವಕಾಶ ಸಿಕ್ಕಿದ್ದು ಕಡಿಮೆಯೇ. ಹಾಗೆ ಆಡಿದ ಎರಡನೇ ಪಂದ್ಯದಲ್ಲೇ ಶತಕ ಗಳಿಸಿದ್ದಾರೆ.

‘ಈ ಶತಕ ನನಗೆ ಅಗತ್ಯವಿತ್ತು. ನನ್ನ ತರಬೇತುದಾರ ದೇವೇಂದ್ರ ಬಂಡೇಲ ಮನೋಬಲ ತುಂಬಿದ್ದ ರಿಂದ ಇದು ಸಾಧ್ಯವಾಯಿತು. ತಾಳ್ಮೆಯಿಂದ ಆಡಿದರೆ ಈ ಪಿಚ್‌ನಲ್ಲಿ ರನ್‌ ಗಳಿಸುವುದು ಸಾಧ್ಯವೆಂದು ಗೊತ್ತಿತ್ತು. ಮುಂದಿನ ಒಂದು ಎಸೆತವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಆಡೋಣ. ಆಗ ಹೆಚ್ಚು ರನ್‌ ನಮ್ಮದಾಗಲಿದೆ ಎಂದು ವೆಂಕಟೇಶ್‌ಗೆ ಹೇಳಿದೆ. ಅದರಂತೆಯೇ ಇಬ್ಬರೂ ಆಡಿದೆವು’ ಎಂದು ಆದಿತ್ಯ ದಿನದಾಟದ ನಂತರ ಪ್ರತಿಕ್ರಿಯಿಸಿದರು.

ವೆಂಕಟೇಶ್ ಅಯ್ಯರ್‌ ಪ್ರಕಾರ–ಇದು ಬ್ಯಾಟಿಂಗ್ ಪಿಚ್. ಜೀವದಾನದ ಅದೃಷ್ಟ ಕರ್ನಾಟಕದ ಬ್ಯಾಟ್ಸ್‌ಮನ್‌ಗಳಿಗೂ ಇತ್ತು. ಅಂತೆಯೇ ತಮಗೂ ಸಿಕ್ಕಿದೆ.

ಈ ಋತುವಿನ ತಮ್ಮ ಅರ್ಧಶತಕಗಳೆಲ್ಲ ಒತ್ತಡದ ಸಂದರ್ಭದಲ್ಲೇ ಬಂದಿರುವುದರ ಕುರಿತು ಅವರಿಗೆ ಹೆಮ್ಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT