ಶನಿವಾರ, ಆಗಸ್ಟ್ 13, 2022
27 °C
ಚೊಚ್ಚಲ ಪ್ರಶಸ್ತಿಯತ್ತ ದಾಪುಗಾಲು

ರಣಜಿ: 41 ಬಾರಿಯ ಚಾಂಪಿಯನ್ ಮುಂಬೈ ಎದುರು ಮಧ್ಯಪ್ರದೇಶಕ್ಕೆ ಇನಿಂಗ್ಸ್ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿದ್ದ ಕ್ರಿಕೆಟ್‌ಪ್ರಿಯರನ್ನು ರಜತ್ ಪಾಟೀದಾರ್ ನಿರಾಶೆಗೊಳಿಸಲಿಲ್ಲ. ಸುಂದರ ಶತಕ ಗಳಿಸಿದ ಅವರು ಮಧ್ಯಪ್ರದೇಶ ತಂಡವನ್ನು ಚೊಚ್ಚಲ ರಣಜಿ ಟ್ರೋಫಿ ಗೆಲುವಿಗೆ ಮತ್ತಷ್ಟು ಸಮೀಪ ತಂದು ನಿಲ್ಲಿಸಿದರು. 42ನೇ ಟ್ರೋಫಿ ಜಯಿಸುವ ಕನಸು ಕಾಣುತ್ತಿರುವ ಮುಂಬೈ ತಂಡದ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದರು. 

ಫೈನಲ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಮಳೆಯ ಆಟವೂ ಇತ್ತು. ಇದೆಲ್ಲದರ ನಡುವೆ ಜಿಗುಟುತನ ಮತ್ತು ಶಿಸ್ತುಬದ್ಧ ಆಟವನ್ನು ಮುಂದುವರಿಸಿದ ಮಧ್ಯಪ್ರದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 162 ರನ್‌ಗಳ ಮುನ್ನಡೆ ಗಳಿಸಿತು.  ಈ ಮೊತ್ತವನ್ನು ಚುಕ್ತಾ ಮಾಡುವ ಹಾದಿಯಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿರುವ ಮುಂಬೈ ತಂಡವು ದಿನದಾಟದ ಕೊನೆಗೆ 22 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 113 ರನ್ ಗಳಿಸಿದೆ.

ಮುಂಬೈ ಕೊನೆಯ ದಿನವಾದ ಭಾನುವಾರ ಬಾಕಿಯಿರುವ 49 ರನ್‌ಗಳನ್ನು ಗಳಿಸಬೇಕು. ನಂತರ ಮಧ್ಯಪ್ರದೇಶಕ್ಕೆ ಕನಿಷ್ಠ 150 ರಿಂದ 200 ರನ್‌ಗಳ ಗುರಿಯೊಡ್ಡಿ, ಹತ್ತು ವಿಕೆಟ್‌ಗಳನ್ನು ಕಬಳಿಸಿದರೆ ಮಾತ್ರ ಟ್ರೋಫಿಗೆ ಮುತ್ತಿಕ್ಕಬಹುದು. ಆದರೆ ಇದು ಅಷ್ಟು ಸರಳವೂ ಅಲ್ಲ. ಸಮಯವೂ ಇಲ್ಲ. ಆದ್ದರಿಂದ ಮಧ್ಯಪ್ರದೇಶ ಬಳಗಕ್ಕೇ ಪ್ರಶಸ್ತಿ ಗೆಲುವಿನ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: 

ರಜತ್, ಸಾರಾಂಶ್ ಮಿಂಚು
ಐಪಿಎಲ್ ಟೂರ್ನಿಯಲ್ಲಿ ಈಚೆಗೆ ಮಿಂಚಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಜತ್ ಪಾಟೀದಾರ್ ಅವರನ್ನು ಹುರಿದುಂಬಿಸಲು ಬಂದಿದ್ದ ಅಭಿಮಾನಿಗಳಿಗೆ ಸಂಭ್ರಮಿಸುವ ಅವಕಾಶ ಸಿಕ್ಕಿತು. ರಜತ್ ಸುಂದರ ಶತಕ (122; 219ಎ, 4X20) ದಾಖಲಿಸಿದರು. ಮಧ್ಯಪ್ರದೇಶ ಇನಿಂಗ್ಸ್‌ನಲ್ಲಿ ದಾಖಲಾದ ಮೂರನೇ ಶತಕ ಇದು. ಆರಂಭಿಕ ಆಟಗಾರ ಯಶ್ ದುಬೆ ಮತ್ತು ಶುಭಂ ಶರ್ಮಾ ಕೂಡ ಶತಕ ಹೊಡೆದಿದ್ದಾರೆ. ಮುಂಬೈ ತಂಡದ ಸರ್ಫರಾಜ್ ಖಾನ್ ಕೂಡ ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದರು. 

ಶುಕ್ರವಾರ ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದ ರಜತ್  ಮುಂಬೈ ಬೌಲರ್‌ಗಳನ್ನು ಕಾಡಿದರು. ತಮ್ಮ ತಾಳ್ಮೆಯ ಆಟದ ಮೂಲಕ ಬೌಲರ್‌ಗಳ ಸಹನೆ ಕೆಡಿಸಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ರಜತ್ ಮತ್ತು ಆದಿತ್ಯ 60 ರನ್‌ ಸೇರಿಸಿದರು.  ಮೋಹಿತ್ ಅವಸ್ತಿ ಬೌಲಿಂಗ್‌ನಲ್ಲಿ ಈ ಜೊತೆಯಾಟವು ಮುರಿಯಿತು. ನಾಯಕ ಆದಿತ್ಯ ಔಟಾದರು. ಅವರ ನಂತರ ಕ್ರೀಸ್‌ಗೆ ಬಂದ ಅಕ್ಷತ್ ಮತ್ತು ಪಾರ್ಥ್ ಬೇಗನೆ ಔಟಾದರು. 

ಈ ಸಂದರ್ಭದಲ್ಲಿ ತಮ್ಮ ಆಟದ ವೇಗ ಹೆಚ್ಚಿಸಿದ ರಜತ್ ರನ್ ಕಲೆಹಾಕುವತ್ತ ಚಿತ್ತ ನೆಟ್ಟರು. ಅವರಿಗೆ ಸಾರಾಂಶ್ ಜೈನ್ (57; 97ಎ) ಜೊತೆಯಾದರು.  ಏಳನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 53 ರನ್‌ ಸೇರಿಸಿದರು. 

ಚಹಾ ವಿರಾಮಕ್ಕೂ ಮುನ್ನ ತುಷಾರ್ ಹಾಕಿದ ಎಸೆತದಲ್ಲಿ ರಜತ್ ಕ್ಲೀನ್‌ಬೌಲ್ಡ್ ಆದರು. ತಂಡದ ಮೊತ್ತವು ಐದನೂರರ ಗಡಿ ದಾಟುವಂತೆ ನೋಡಿಕೊಂಡ ಸಾರಾಂಶ್ ಕೊನೆಯವರಾಗಿ ಔಟಾದರು.

ಮುಂಬೈ ಉತ್ತಮ ಆರಂಭ
ಸತತ ಎರಡೂವರೆ ದಿನಗಳ ಕಾಲ ಫೀಲ್ಡಿಂಗ್ ಮಾಡಿರುವ ಮುಂಬೈ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಮಾಡಿತು. ಪೃಥ್ವಿ ಶಾ (44) ಮತ್ತು ಹಾರ್ದಿಕ್ ತಮೊರೆ (25) ಮೊದಲ ವಿಕೆಟ್ ಜೊತೆಯಾಟದಲ್ಲಿ 63 ರನ್‌ ಸೇರಿಸಿದರು. ಕುಮಾರ್ ಕಾರ್ತಿಕೆಯ ಸಿಂಗ್ ಮತ್ತು ಗೌರವ್ ಯಾದವ್ ಕ್ರಮವಾಗಿ ಹಾರ್ದಿಕ್ ಮತ್ತು ಪೃಥ್ವಿ ವಿಕೆಟ್ ಗಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು