ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದ ಕೋಚ್ ಅಯ್ಕೆಯೆಂಬ ಪ್ರಹಸನ

Last Updated 17 ಆಗಸ್ಟ್ 2019, 13:23 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಗಾದಿಗೆ ಯಾರೆಂಬ ಚರ್ಚೆಗೆ ತೆರೆಬಿದ್ದಿದೆ. ಬಹಳಷ್ಟು ಜನರು ನಿರೀಕ್ಷಿಸಿದಂತೆ ರವಿಶಾಸ್ತ್ರಿಯೇ ಆ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇದರೊಂದಿಗೆ ಭಾರತದ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ತಂಡದ ನಾಯಕನೇ ‘ಸುಪ್ರೀಂ’ ಎಂಬ ಮಾತು ನಿಜವಾಗಿದೆ.

ಕೋಚ್ ಆಯ್ಕೆ ಪ್ರಕ್ರಿಯೆ ಶುರುವಾದ ಆರಂಭದಲ್ಲಿಯೇ ವಿರಾಟ್ ಕೊಹ್ಲಿ ಅವರು ಶಾಸ್ತ್ರಿಯವರನ್ನೇ ಮುಂದುವರಿಸಿದರೆ ಸೂಕ್ತ ಎಂದು ಹೇಳಿದ್ದರು.

ಭಾರತಕ್ಕೆ ಮೊಟ್ಟಮೊದಲ ವಿಶ್ವಕಪ್ ಗೆದ್ದುಕೊಟ್ಟಿದ್ದ ನಾಯಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಯಾರೋಬ್ಬರೂ ವಿರೋಧಿಸಲಿಲ್ಲ. ‘ಕೊಹ್ಲಿಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ. ಅದನ್ನು ನಾವು ಗೌರವಿಸುತ್ತೇವೆ. ಆದರೆ ಅಂತಿಮ ನಿರ್ಧಾರ ನಮ್ಮ ಸಮಿತಿಯೇ ಕೈಗೊಳ್ಳಲಿದೆ’ ಎಂದು ಸಮಿತಿಯ ಕಪಿಲ್, ಅನ್ಷುಮನ್ ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರು ಹೇಳಿದ್ದರು.‌

ಈ ಹಿಂದೆ ಸೌರವ್ ಗಂಗೂಲಿ ನಾಯಕತ್ವ ವಹಿಸಿದಾಗಲೂ ಇದೇ ರೀತಿ ಆಗಿತ್ತು. ಗ್ರೇಗ್ ಚಾಪೆಲ್ ಅವರ ವಿರುದ್ಧ ‘ದಾದಾ’ ಬಂಡಾಯ ಸಾರಿದ್ದರು. ತಂಡದ ಹಲವು ದಿಗ್ಗಜ ಆಟಗಾರರೂ ನಾಯಕನಿಗೇ ಸಾಥ್ ನೀಡಿದ್ದರು. ಬಿಸಿಸಿಐ ಕೂಡ ಗಂಗೂಲಿ ಮಾತಿಗೆ ಮಣೆ ಹಾಕಿತ್ತು. ಮಹೇಂದ್ರಸಿಂಗ್ ಧೋನಿ ನಾಯಕರಾಗಿದ್ದಾಗ ಗ್ಯಾರಿ ಕರ್ಸ್ಟನ್ ಅವರೊಂದಿಗಿನ ನಂಟು ಚೆನ್ನಾಗಿತ್ತು. ಆದ್ದರಿಂದ ಗ್ಯಾರಿ ಹೆಚ್ಚು ಕಾಲ ಕೋಚ್ ಆಗಿ ಕಾರ್ಯನಿರ್ವಹಿಸಿದರು. ಧೋನಿ–ಗ್ಯಾರಿ ಜೊತೆಯಾಟದಲ್ಲಿ ಭಾರತಕ್ಕೆ ವಿಶ್ವಕಪ್ ಲಭಿಸಿದ್ದು ಲಾಭ. ಅಲ್ಲದೇ ಭವಿಷ್ಯದ ತಂಡಕ್ಕೂ ಅವರು ಅಡಿಪಾಯ ಹಾಕಿದ್ದರು. ರೋಹಿತ್, ವಿರಾಟ್, ಶಮಿ, ರವೀಂದ್ರ ಜಡೇಜ, ಚೇತೇಶ್ವರ್ ಪೂಜಾರ ಸೇರಿದಂತೆ ಹಲವರು ತಂಡಕ್ಕೆ ಕಾಲಿಟ್ಟಿದ್ದು ಅವರ ಸಂದರ್ಭದಲ್ಲಿಯೇ.

ಧೋನಿ ದೇಶಿ ಕೋಚ್‌ಗಿಂತ ವಿದೇಶಿ ಕೋಚ್‌ಗಳೊಂದಿಗೆ ಇರಲು ಹೆಚ್ಚು ಒತ್ತು ನೀಡಿದ್ದರು. ಗ್ಯಾರಿ ನಿವೃತ್ತಿಯ ನಂತರ ತಂಡಕ್ಕೆ ಡಂಕೆನ್ ಫ್ಲೆಚರ್ ಕೋಚ್ ಆಗಿದ್ದರು. 2015ರಲ್ಲಿ ಫ್ಲೆಚರ್ ಅವರು ವಿದಾಯ ಹೇಳಿದಾಗ ತಂಡಕ್ಕೆ ಡೇನಿಯಲ್ ವೆಟೋರಿ ಅವರನ್ನು ಆಯ್ಕೆ ಮಾಡಬೇಕು ಎಂದು ಕೊಹ್ಲಿ ಸಲಹೆ ನೀಡಿದ್ದರು. ಆಗ ವೆಟೋರಿಯವರು ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಕೋಚ್ ಆಗಿದ್ದರು.

ಆನಂತರ 2016ರ ವಿಶ್ವ ಟ್ವೆಂಟಿ–20 ಟೂರ್ನಿ ಮುಗಿಯುವವರೆಗೂ ತಂಡದ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಮಾರ್ಗದರ್ಶಕರೂ ಆಗಿದ್ದರು. ಆದರೆ 2017ರಲ್ಲಿ ರವಿಗೆ ಅವಕಾಶ ಸಿಗದೇ ಕುಂಬ್ಳೆ ಕೋಚ್‌ ಆಗಿದ್ದರು. ನಂತರದ ಕಥೆ ಎಲ್ಲರಿಗೂ ಗೊತ್ತಿರುವಂತಹದ್ದೇ. ಕುಂಬ್ಳೆಯವರ ಸುಧಾರಣೆ ಕ್ರಮಗಳು, ಶಿಸ್ತಿನ ಪಾಠ ಮತ್ತು ತಾರಾ ವರ್ಚಸ್ಸು ಬಹುತೇಕರಿಗೆ ರುಚಿಸಿರಲಿಲ್ಲವೇನೊ?

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಕೊಹ್ಲಿ ಬಳಗ ಸೋತಾಗ ಎಲ್ಲರ ಆಕ್ರೋಶ ಕೋಚ್ ಅನಿಲ್ ಕುಂಬ್ಳೆಯವರ ಮೇಲೆ ತಿರುಗಿತ್ತು. ಕುಂಬ್ಳೆಯವರು ತಾವೇ ರಾಜೀನಾಮೆ ನೀಡಿ ಹೊರಬಂದಿದ್ದರು. ಆಗ ರವಿಶಾಸ್ತ್ರಿ ಅವರನ್ನು ಕೋಚ್ ಆಗಿ ತಂಡಕ್ಕೆ ತರಲು ಕೊಹ್ಲಿ ಅವರ ಪ್ರಭಾವ ನಡೆದಿತ್ತು ಎಂಬ ಮಾತು ಕೇಳಿಬಂದಿತ್ತು. ಕ್ರಿಕೆಟ್ ಲೇಖಕ ರಾಮಚಂದ್ರ ಗುಹಾ ಕೊಹ್ಲಿಯ ಧೋರಣೆಯನ್ನು ಆಗ ಖಂಡಿಸಿದ್ದರು.

ಆದರೆ ಈ ಬಾರಿ ಅದು ಕೊಹ್ಲಿ ಮುಚ್ಚುಮರೆಯಿಲ್ಲದೇ ತಮ್ಮ ಪ್ರಭಾವನ್ನು ಬಳಸಿದ್ದಾರೆ. ಲಾಲ್‌ಚಂದ್ ರಜಪೂತ್, ರಾಬಿನ್ ಸಿಂಗ್, ಟಾಮ್ ಮೂಡಿ, ಮೈಕ್ ಹೆಸನ್ ಮತ್ತು ಫಿಲ್ ಸಿಮನ್ಸ್‌ ಸೇರಿದಂತೆ ಹಲವಾರು ಅನುಭವಿಗಳು ಅರ್ಜಿ ಸಲ್ಲಿಸಿದ್ದರು. ಕಪಿಲ್ ಅವರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದಂತೆ ಅವರೆಲ್ಲರೂ (ಸಿಮನ್ಸ್‌ ಬಿಟ್ಟು) ರವಿಶಾಸ್ತ್ರಿಗೆ ನಿಕಟ ಪೈಪೋಟಿ ಒಡ್ಡಿದ್ದರಂತೆ.

ಆಟದ ಅನುಭವ, ಕೌಶಲ್ಯ, ಸಂವಹನ ಕಲೆ, ಬದ್ಧತೆ ಮತ್ತಿತರ ಗುಣಗಳನ್ನು ಅನುಲಕ್ಷಿಸಿ ಅಂಕಗಳನ್ನು ನೀಡಲಾಗಿದೆ ಎಂದು ಕೂಡ ಸಮಿತಿಯ ಸದಸ್ಯರು ‘ಸಂದರ್ಶನ ‍ಪ್ರಹಸನ’ ಮುಗಿದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಇದೀಗ ಈ ಕೋಚ್ ನೇಮಕ‌ವಾಗಿದೆ 2021ರವರೆಗೆ ಶಾಸ್ತ್ರಿಯೇ ಮುಂದುವರಿಯುವರು. ಆದರೆ ಈ ಪ್ರಹಸನವು ಕೆಲವು ಪ್ರಶ್ನೆಗಳನ್ನು ಉಳಿಸಿಹೋಗಿದೆ.

ಈಗಾಗಲೇ ತಂಡಕ್ಕೆ ಎರಡು ವರ್ಷಗಳಿಂದ ಕೋಚ್ ಆಗಿ ಕಾರ್ಯನಿರ್ವಹಿಸಿರುವ ವ್ಯಕ್ತಿಯೊಂದಿಗೆ ಹೊಸ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸುವುದು ಎಷ್ಟು ಸೂಕ್ತ? ಇದರಿಂದಾಗಿ ಅನುಭವದಲ್ಲಿ ಸಹಜವಾಗಿಯೇ ಆ ವ್ಯಕ್ತಿ ಉಳಿದವರಿಗಿಂತ ಒಂದು ತೂಕ ಹೆಚ್ಚೇ ಆಗಿರುವುದಿಲ್ಲವೇ? ಹಾಗೊಮ್ಮೆ ಅವಕಾಶ ಕೊಟ್ಟಾಗ ಆತನಿಗೆ ಬೇರೆ ರೀತಿಯ ಪರೀಕ್ಷೆ ಅಥವಾ ಪ್ರಕ್ರಿಯೆ ನಿಗದಿಪಡಿಸಬೇಕಲ್ಲವೇ? ತಂಡದ ನಾಯಕನಿಗೆ ತನ್ನ ಅಭಿಪ್ರಾಯ ಹೇಳುವ ಅವಕಾಶ ಇದೆ. ಆ ರೀತಿಯ ಅವಕಾಶ ನೀಡುವುದು ಸೂಕ್ತವೇ? ವಿದ್ಯಾರ್ಥಿಗಳಿಗೆ ಕೇಳಿ ಶಿಕ್ಷಕರನ್ನು ನೇಮಕ ಮಾಡುವಂತಾಗುವುದಿಲ್ಲವೇ? ಪ್ರಕ್ರಿಯೆಗೂ ಮುನ್ನವೇ ನಾಯಕನು ಈ ರೀತಿ ಹೇಳಿಕೆ ಕೊಟ್ಟಾಗ. ಅದೂ ವಿರಾಟ್ ಕೊಹ್ಲಿಯವರಂತಹ ‘ಪವರ್‌ಫುಲ್’ ಆಟಗಾರ ಹೇಳಿದ್ದೇ ಅಂತಿಮವಾಗುತ್ತದೆ. ಮುಂದಿನ ದಿನಗಳಲ್ಲಿ ಇದು ತಂಡದ ಬೆಳವಣಿಗೆಗೆ ಅಪಾಯವೊಡ್ಡುವುದಿಲ್ಲವೇ? ಪಂದ್ಯ ಅಥವಾ ಸರಣಿಗೆ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿಯೂ ತಮ್ಮ ಪ್ರಭಾವ ಪ್ರದರ್ಶಿಸುವುದಿಲ್ಲವೇ? ರವಿಶಾಸ್ತ್ರಿಯನ್ನೇ ಮುಂದುವರಿಸುವುದಾದರೆ ಆಗಲೇ ನಿರ್ಧಾರ ಮಾಡಿಬಿಡಬಹುದಿತ್ತಲ್ಲ? ಅದಕ್ಕಾಗಿ ಕಪಿಲ್, ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರಂತಹ ದಿಗ್ಗಜರು ಸಮಿತಿ ರಚನೆ ಮಾಡಬೇಕಿತ್ತೆ? ಇಷ್ಟೊಂದು ಸಮಯ ಮತ್ತು ಸಂಪನ್ಮೂಲ ವಿನಿಯೋಗಿಸಬೇಕಿತ್ತೆ? ಎಂಬ ಪ್ರಶ್ನೆಗಳು ಈಗ ಕ್ರಿಕೆಟ್ ವಲಯದಲ್ಲಿ ಸುಳಿದಾಡುತ್ತಿವೆ.

ಇಂಗ್ಲೆಂಡ್ ಆಟಗಾರ ಜೋಫ್ರಾ ಆರ್ಚರ್ ಕೂಡ ‘ರವಿಯೇ ಏಕೆ?’ ಎಂದು ಟ್ವೀಟ್ ಮಾಡುವಷ್ಟರ ಮಟ್ಟಿಗೆ ಶಾಸ್ತ್ರಿ ಆಯ್ಕೆಯು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಿವೆ ರವಿ ಆಯ್ಕೆಗೆ ಬಹಳಷ್ಟು ಟೀಕೆಗಳು ಮತ್ತು ವ್ಯಂಗ್ಯಗಳು ಹರಿದಾಡುತ್ತಿವೆ.

ಇಷ್ಟಕ್ಕೂ ಒಬ್ಬ ವ್ಯಕ್ತಿಯು ಎಷ್ಟು ವರ್ಷ ತಂಡದ ಕೋಚ್ ಆಗಿರಬೇಕು ಎಂಬುದಕ್ಕೆ ಯಾವುದೇ ಮಾನದಂಡ ಅಥವಾ ನಿಯಮವಿಲ್ಲದಿರುವುದು ಕೂಡ ಇಂತಹ ಚರ್ಚೆಗಳಿಗೆ ಕಾರಣವಾಗುತ್ತಿದೆ. ಕೂಲಿಂಗ್ ಅವಧಿ ನಿಗದಿಪಡಿಸುವತ್ತ ಚಿಂತನೆ ನಡೆಸಲು ಇದು ಸೂಕ್ತ ಕಾಲ ಎನಿಸುತ್ತದೆ.

ಜೂನಿಯರ್ ಹಂತದಲ್ಲಿ ತಂಡಗಳಿಗೆ ಕೋಚ್ ಅಗತ್ಯವಿರುತ್ತದೆ. ಆದರೆ, ಸೀನಿಯರ್ ಹಂತದಲ್ಲಿ ತಂಡವನ್ನು ಒಗ್ಗೂಡಿಸಿಕೊಂಡು ಹೋಗುವ ಒಬ್ಬ ಮ್ಯಾನೇಜರ್ ಇದ್ದರೆ ಸಾಕು ಎಂದು ಹೇಳುವವರು ಇದ್ದಾರೆ. ಫುಟ್‌ಬಾಲ್‌ ಕ್ಷೇತ್ರದಲ್ಲಿ ಇಂತಹದ್ದೇ ಪದ್ಧತಿ ಇದೆ. ಇಲ್ಲಿ ಮ್ಯಾನೇಜರ್ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಆದರೆ ಕ್ರಿಕೆಟ್‌ನಲ್ಲಿ ಕೋಚ್‌ಗೆ ನಾಯಕನಷ್ಟು ಅಧಿಕಾರ ನೀಡಿಲ್ಲ ಎನ್ನುವುದು ಬಹಿರಂಗವಲ್ಲದ ಸತ್ಯ. ಆದ್ದರಿಂದ ಕೋಚ್ ಆದವರು ನಾಯಕನ ಜೊತೆಗೆ ಉತ್ತಮ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ಈಗ ಕೋಚ್ ಆದವರಿಗೆ ದೊಡ್ಡ ಮೊತ್ತದ ಸಂಭಾವನೆ (ವರ್ಷಕ್ಕೆ ಏಳು ಕೋಟಿ) ಲಭಿಸುತ್ತಿದೆ. ಇದರಿಂದಾಗಿ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗುತ್ತಿರಬಹುದು. ಕೋಚ್ ಅಥವಾ ಮ್ಯಾನೇಜರ್ ಆದವರಿಗೆ ಉತ್ತರದಾಯಿತ್ವ ಇರುವುದು ಮುಖ್ಯವಾಗುತ್ತದೆ. ತಂಡ ಗೆದ್ದಾಗ ಸಂಭ್ರಮಿಸುವಂತೆ, ಸೋತಾಗ ನೈತಿಕ ಹೊಣೆ ಹೊರುವ ಅಗತ್ಯವೂ ಇದೆ. ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಸೆಮಿಫೈನಲ್ ಸೋಲಿನ ಹೊಣೆಯನ್ನು ಶಾಸ್ತ್ರಿ ಹೊತ್ತುಕೊಂಡರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT