ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2020| ಎರಡನೇ ಸ್ಥಾನಕ್ಕಾಗಿ ಕೊಹ್ಲಿ–ಶ್ರೇಯಸ್ ಸೆಣಸು

ಬೆಂಗಳೂರು–ಡೆಲ್ಲಿ ಕ್ಯಾಪಿಟಲ್ಸ್‌ ಹೋರಾಟ ಇಂದು
Last Updated 1 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಅಬುಧಾಬಿ: ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಲು ಎರಡು ಮದಗಜಗಳು ಸೋಮವಾರ ಕಣಕ್ಕಿಳಿಯಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಶ್ರೇಯಸ್ ಅಯ್ಯರ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ಇಲ್ಲಿ ಮುಖಾಮುಖಿಯಾಲಿವೆ. ಲೀಗ್ ಹಂತದಲ್ಲಿ ಉಭಯ ತಂಡಗಳಿಗೂ ಇದು ಕೊನೆಯ ಪಂದ್ಯ. ತಲಾ 14 ಪಾಯಿಂಟ್ಸ್ ಗಳಿಸಿರುವ ಈ ತಂಡಗಳು ಇನ್ನೆರಡು ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡರೆ ದ್ವಿತೀಯ ಸ್ಥಾನ ಖಚಿತ. ಈಗಾಗಲೇ ಮೊದಲ ಸ್ಥಾನದಲ್ಲಿ ’ಹಾಲಿ ಚಾಂಪಿಯನ್‘ ಮುಂಬೈ ಇಂಡಿಯನ್ಸ್‌ ತಳವೂರಿದೆ.

ನಾಲ್ಕರ ಘಟ್ಟದ ಪ್ರವೇಶಕ್ಕಾಗಿ ಅತಿ ಹೆಚ್ಚು ಪೈಪೋಟಿ ನಡೆಯುತ್ತಿರುವ ಟೂರ್ನಿ ಈಬಾರಿಯದ್ದು. ಆದ್ದರಿಂದಲೇ ಈಗ ಬೆಂಗಳೂರು ಡೆಲ್ಲಿ ತಂಡಗಳ ನಡುವಿನ ಪಂದ್ಯವನ್ನು ’ಕ್ವಾರ್ಟರ್‌ಫೈನಲ್‌‘ ಎಂದೇ ವಿಶ್ಲೇಷಿಸಲಾಗುತ್ತಿದೆ.

ವಿರಾಟ್ ಬಳಗವು ತನ್ನ ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲನುಭವಿಸಿದೆ. ಅದರಲ್ಲಿ ಎರಡರಲ್ಲಿ ಗೆದ್ದಿದ್ದರೂ ಅಗ್ರಸ್ಥಾನದಲ್ಲಿರುತ್ತಿತ್ತು. ಡೆಲ್ಲಿ ಕೂಡ ಕಳೆದ ನಾಲ್ಕು ಪಂದ್ಯಗಳಲ್ಲಿ ಸೋತಿದೆ.

ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ವೈಫಲ್ಯವು ತಂಡಕ್ಕೆ ದುಬಾರಿಯಾಗುತ್ತಿದೆ. ಸತತ ಎರಡು ಶತಕ ಬಾರಿಸಿದ ದಾಖಲೆ ಬರೆದಿರುವ ಶಿಖರ್ ಧವನ್ ಕಳೆದೆರಡು ಪಂದ್ಯಗಳಲ್ಲಿ ರನ್‌ ಹರಿಸಿಲ್ಲ. ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಶಿಮ್ರೊನ್ ಹೆಟ್ಮೆಯರ್ ಅವರು ಕೂಡ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾಗುತ್ತಿದ್ದಾರೆ.

ಕಳೆದ ಕೆಲವು ಪಂದ್ಯಗಳಲ್ಲಿ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತಿರುವ ಇಲ್ಲಿಯ ಪಿಚ್‌ನಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ದೇವದತ್ತ ಪಡಿಕ್ಕಲ್, ಜೋಶ್ ಫಿಲಿಪ್ ಇನಿಂಗ್ಸ್‌ ಆರಂಭಿಸುವ ಹೊಣೆ ಹೊತ್ತಿದ್ದಾರೆ. ಡೆಲ್ಲಿಯ ಕಗಿಸೊ ರಬಾಡ, ಎನ್ರಿಕ್ ನಾಕಿಯಾ ಮತ್ತು ಆರ್. ಅಶ್ವಿನ್ ಅವರ ದಾಳಿಯನ್ನು ಎದುರಿಸಬೇಕಿದೆ.

ವಿರಾಟ್, ಎಬಿಡಿ ಕೂಡ ಲಯಕ್ಕೆ ಮರಳಿದರೆ ತಂಡದ ಬಲ ಹೆಚ್ಚುತ್ತದೆ. ಹೋದ ಪಂದ್ಯದಲ್ಲಿ ಹೆಚ್ಚು ಎಸೆತ ಎದುರಿಸಿ ಕಡಿಮೆ ರನ್ ಗಳಿಸಿದ ಗುರುಕೀರತ್ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾಗಿದ್ದಾರೆ. ಬೌಲಿಂಗ್‌ನಲ್ಲಿ ಕ್ರಿಸ್ ಮೊರಿಸ್, ಯಜುವೇಂದ್ರ ಚಾಹಲ್, ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಹೆಚ್ಚು ನೆಚ್ಚಿಕೊಳ್ಳಬಹುದು. ಸಿರಾಜ್ ಮತ್ತು ಉಡಾನ ಅವರೇನಾದರೂ ಚೆನ್ನಾಗಿ ಆಡಿದರೆ ಅದು ಬೋನಸ್ ಆಗಲಿದೆ.

***

ತನ್ನ ಕಳೆದ ನಾಲ್ಲು ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ

ಸದ್ಯ ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT