ಶನಿವಾರ, ಮೇ 8, 2021
19 °C
ರಾಯಲ್ ಚಾಲೆಂಜರ್ಸ್‌ ಬೆಂಗಳೂರು–ರಾಜಸ್ಥಾನ ರಾಯಲ್ಸ್‌ ಮುಖಾಮುಖಿ ಇಂದು, ಅತ್ಮವಿಶ್ವಾಸದಲ್ಲಿರುವ ವಿರಾಟ್ ಕೊಹ್ಲಿ ಬಳಗ

IPL 2021: ವಾಂಖೆಡೆಯಲ್ಲೂ ಬೆಂಗಳೂರಿಗೆ ಜಯದ ಕನಸು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಚೆನ್ನೈನಲ್ಲಿ ‘ಹ್ಯಾಟ್ರಿಕ್‌‘ ಜಯದ ಸಂಭ್ರಮ ಆಚರಿಸಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ವಾಂಖೆಡೆ ಅಂಗಳದಲ್ಲಿ ತನ್ನ ಸಾಮರ್ಥ್ಯವನ್ನು ಪಣಕ್ಕೊಡ್ಡಲಿದೆ.

ಕೊರೊನಾ ಕಾಲಘಟ್ಟದ ಸವಾಲುಗಳ ನಡುವೆ ನಡೆಯುತ್ತಿರುವ  ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಭರ್ಜರಿ ಜಯ ಗಳಿಸಿದೆ. ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಕಣಕ್ಕಿಳಿಯಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ  ಇದುವರೆಗೆ ಮೂರು ಪಂದ್ಯಗಳನ್ನು ಆಡಿರುವ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ತಂಡವು ಒಂದರಲ್ಲಿ ಜಯಿಸಿ, ಎರಡರಲ್ಲಿ ಸೋತಿದೆ. ಗೆಲುವಿನ ಹಾದಿಗೆ ಮರಳುವ ಛಲದಲ್ಲಿದೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌, ಸನ್‌ರೈಸರ್ಸ್‌ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳನ್ನು ಮಣಿಸಿರುವ ವಿರಾಟ್ ಬಳಗವು ಭರ್ತಿ ಆತ್ಮವಿಶ್ವಾಸದಲ್ಲಿದೆ.  ಇದೇ ವರ್ಷ ಆರ್‌ಸಿಬಿ ಸೇರಿರುವ ಗ್ಲೆನ್ ಮ್ಯಾಕ್ಸ್‌ವೆಲ್ ತಮಗೆ ನೀಡಿರುವ ದುಬಾರಿ ಮೌಲ್ಯಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮೂರು ಪಂದ್ಯಗಳಿಂದ 176 ರನ್‌ ಗಳಿಸಿದ್ದಾರೆ. ಅದರಲ್ಲಿ ಎರಡು ಅರ್ಧಶತಕಗಳಿವೆ.

ಎಬಿ ಡಿವಿಲಿಯರ್ಸ್‌ ‘ಆಪದ್ಭಾಂಧವ‘ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಡೆತ್‌ ಓವರ್‌ಗಳಲ್ಲಿ ಬೌಲರ್‌ಗಳ ವೈಡ್ ಆ್ಯಂಗಲ್ ಎಸೆತಗಳನ್ನೂ ಸಿಕ್ಸರ್‌ಗೆತ್ತುವ ಮೂಲಕ ತಾವು ‘ಮಿಸ್ಟರ್ 360 ಡಿಗ್ರಿ‘ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 125 ರನ್‌ಗಳಿವೆ.  ಇವರಿಬ್ಬರಿಂದಾಗಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ  ಆನೆಬಲ ಲಭಿಸಿದೆ.

ಆರಂಭಿಕ ಜೋಡಿ ನಾಯಕ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ತಮ್ಮ ನೈಜ ಆಟಕ್ಕೆ ಮರಳಿದರೆ, ಬೌಲರ್‌ಗಳಿಗೆ ಮತ್ತಷ್ಟು ಕಠಿಣ ಸವಾಲು ಒಡ್ಡಬಹುದು. ಕೈಲ್ ಜೆಮಿಸನ್, ವಾಷಿಂಗ್ಟನ್ ಸುಂದರ್ ತಮ್ಮ ಆಲ್‌ರೌಂಡ್ ಆಟದಿಂದ ತಂಡಕ್ಕೆ ಬಲ ತುಂಬಬಲ್ಲರು.

ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್ ಉತ್ತಮ ಲಯದಲ್ಲಿರುವುದು ತಂಡದ ಬೌಲಿಂಗ್‌ ವಿಭಾಗವನ್ನು ಹೆಚ್ಚು ಬಲಿಷ್ಠಗೊಳಿಸಿದೆ.  ಹಿಂದೆಂದಿಗಿಂತಲೂ ಹೆಚ್ಚು ಬಲಾಢ್ಯವಾಗಿ ಕಾಣುತ್ತಿರುವ ಆರ್‌ಸಿಬಿಯನ್ನು ಕಟ್ಟಿಹಾಕಲು ಸಂಜು ಸ್ಯಾಮ್ಸನ್ ಬಳಗವು ವಿಶೇಷ ತಂತ್ರಗಾರಿಕೆ ರೂಪಿಸುವ ಒತ್ತಡದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಜಯಸಿದ್ದ ತಂಡವು, ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯಗಳಲ್ಲಿ ಸೋತಿತ್ತು. ಜೋಸ್ ಬಟ್ಲರ್  ಉತ್ತಮವಾಗಿ ಆಡುತ್ತಿದ್ದಾರೆ. ಸಂಜು ಮೊದಲ ಪಂದ್ಯದಲ್ಲಿ  ಶತಕ ಹೊಡೆದಿದ್ದರು. ಅದರೆ ನಂತರದ ಎರಡು ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಮಂಕಾಗಿತ್ತು.

ತಮ್ಮಲ್ಲಿರುವ ಮಧ್ಯಮವೇಗಿಗಳಾದ ಜಯದೇವ್ ಉನದ್ಕತ್, ಕ್ರಿಸ್ ಮೊರಿಸ್ ಅವರ ಅನುಭವವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸಂಜು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಯುವಬೌಲರ್ ಚೇತನ್ ಸಕಾರಿಯಾ ಮಿಂಚುತ್ತಿದ್ದಾರೆ. ಆದರೆ ಆರ್‌ಸಿಬಿಯ ಅನುಭವಿ ಬ್ಯಾಟಿಂಗ್ ಪಡೆಯನ್ನು ರಾಯಲ್ಸ್‌ ಬೌಲರ್‌ಗಳು ಕಟ್ಟಿಹಾಕುವಲ್ಲಿ ಯಶಸ್ವಿಯಾದರೆ ತಂಡವು ಜಯದ ಹಾದಿಗೆ ಮರಳುವ ಸಾಧ್ಯತೆ ಹೆಚ್ಚುವ ನಿರೀಕ್ಷೆ ಇದೆ.

 ತಂಡಗಳು:

ರಾಯಲ್ ಚಾಲೆಂಜರ್ಸ್: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ದೇವದತ್ತ ಪಡಿಕ್ಕಲ್, ಯಜುವೇಂದ್ರ ಚಾಹಲ್, ಕೈಲ್ ಜೆಮಿಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ, ಜೊಶುವಾ ಫಿಲಿಪ್, ಶಾಬಾಜ್ ಅಹಮದ್, ನವದೀಪ್ ಸೈನಿ, ಆ್ಯಡಂ ಜಂಪಾ, ರಜತ್ ಪಾಟೀದಾರ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಡ್ಯಾನ್ ಕ್ರಿಸ್ಟಿಯನ್, ಕೆ.ಎಸ್. ಭರತ್, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್.

ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ–ವಿಕೆಟ್‌ಕೀಪರ್), ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಬೆನ್ ಸ್ಟೋಕ್ಸ್, ಯಶಸ್ವಿ ಜೈಸ್ವಾಲ್, ಮನನ್ ವೊಹ್ರಾ, ಅನುಜ್ ರಾವತ್, ರಿಯಾನ್ ಪರಾಗ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಮಹಿಪಾಲ್ ಲೊಮ್ರೊರ್, ಶ್ರೇಯಸ್ ಗೋಪಾಲ್, ಮಯಂಕ್ ಮಾರ್ಕಂಡೆ, ಆ್ಯಂಡ್ರ್ಯೂ ಟೈ, ಜಯದೇವ್ ಉನದ್ಕತ್, ಕಾರ್ತಿಕ್ ತ್ಯಾಗಿ, ಶಿವಂ ದುಬೆ, ಕ್ರಿಸ್ ಮೊರಿಸ್, ಮುಸ್ತಫಿಜುರ್ ರೆಹಮಾನ್, ಚೇತನ್ ಸಕಾರಿಯಾ, ಕೆ.ಸಿ. ಕಾರ್ಯಪ್ಪ, ಲಿಯಾಮ್ ಲಿವಿಂಗ್‌ಸ್ಟೋನ್, ಕುಲದೀಪ್ ಯಾದವ್, ಆಕಾಶ್ ಸಿಂಗ್.

ಪಂದ್ಯ ಆರಂಭ: ರಾತ್ರಿ 7.30ರಿಂದ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು