ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಸಿಹಿ ತಂದ ಶಿಮ್ರೊನ್–ಮಾನ್

ಸನ್‌ರೈಸರ್ಸ್‌ ಪ್ಲೇ ಆಫ್‌ ಹಾದಿ ಕಠಿಣ: ಕೇನ್‌ ವಿಲಿಯಮ್ಸನ್ ಅರ್ಧಶತಕ ವ್ಯರ್ಥ; ವಾಷಿಂಗ್ಟನ್‌ ‘ಸುಂದರ’ ಬೌಲಿಂಗ್
Last Updated 4 ಮೇ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷದ ಆವೃತ್ತಿಯ ಕೊನೆಯ ಪಂದ್ಯದಲ್ಲಾದರೂ ಆರ್‌ಸಿಬಿ ಗೆಲ್ಲಲಿ ಎಂದು ಮೈದಾನಕ್ಕೆ ಧಾವಿಸಿದ್ದ ಅಭಿಮಾನಿಗಳಿಗೆ ನಿರಾಶೆಯಾಗಲಿಲ್ಲ.

ಪ್ಲೇ ಆಫ್‌ ಗೆ ಹೋಗುವ ಅವಕಾಶವನ್ನು ಒಂದು ವಾರದ ಹಿಂದೆಯೇ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಬಳಗವು ಶನಿವಾರ ರಾತ್ರಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಕೌಟ್ ಹಾದಿಯನ್ನು ಕಠಿಣಗೊಳಿಸಿತು. ಆರ್‌ಸಿಬಿ 4 ವಿಕೆಟ್‌ಗಳಿಂದ ಗೆದ್ದಿತು. ಟೂರ್ನಿಯ ಆರಂಭದಲ್ಲಿಯೇ ಸತತ ಆರು ಸೋಲುಗಳನ್ನು ಅನುಭವಿಸಿದ್ದ ವಿರಾಟ್ ಕೊಹ್ಲಿ ಬಳಗವು ಕೊನೆಯ ಪಂದ್ಯದಲ್ಲಿ ಜಯದ ಸಿಹಿಯೊಂದಿಗೆ ಅಭಿಯಾನ ಮುಗಿಸಿತು. ಟೂರ್ನಿಯಲ್ಲಿ ಐದನೇ ಜಯ ದಾಖಲಿಸಿತು.

ವಿಂಡೀಸ್ ಬ್ಯಾಟ್ಸ್‌ಮನ್ ಶಿಮ್ರೊನ್ ಹೆಟ್ಮೆಯರ್ ಮತ್ತು ಗುರುಕೀರತ್ ಸಿಂಗ್ ಮಾನ್ ಅವರ ಅಬ್ಬರದ ಅರ್ಧಶತಕಗಳು ಗೆಲುವಿಗೆ ಕಾರಣವಾದವು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಇವರಿಬ್ಬರೂ ಪೇರಿಸಿದ 144 ರನ್‌ಗಳ ಜೊತೆಯಾಟವೇ ಮೇಲುಗೈ ಸಾಧಿಸಿತು.

ಆದರೆ, 12 ಪಾಯಿಂಟ್‌ ಗಳಿಸಿರುವ ಸನ್‌ರೈಸರ್ಸ್‌ ತಂಡವು ಈ ಪಂದ್ಯದಲ್ಲಿ ಗೆದ್ದಿದ್ದರೆ ಪ್ಲೇ ಆಫ್‌ ಪ್ರವೇಶ ಸುಲಭವಾಗುತ್ತಿತ್ತು. ಆದರೆ ಭಾನುವಾರ ಮುಂಬೈ ಇಂಡಿಯನ್ಸ್ ಎದುರು ಕೋಲ್ಕತ್ತ ನೈಟ್ ರೈಡರ್ಸ್‌ ತಂಡವು ದೊಡ್ಡ ಅಂತರದಿಂದ ಸೋಲನುಭವಿಸಲಿ ಎಂದು ಪ್ರಾರ್ಥಿಸುತ್ತ ಕೂರುವುದಷ್ಟೇ ಈಗ ಕೇನ್ ಬಳಗಕ್ಕಿರುವ ಏಕೈಕ ದಾರಿ!

ಹಲವು ನಾಟಕೀಯ ತಿರುವುಗಳನ್ನು ಕಂಡ ಈ ಪಂದ್ಯದಲ್ಲಿ ಆರ್‌ಸಿಬಿಗೆ ಜಯವು ಸುಲಭವಾಗಿ ಒಲಿಯಲಿಲ್ಲ. ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೇನ್‌ ವಿಲಿಯಮ್ಸನ್ (ಔಟಾಗದೆ 70; 43ಎಸೆತ, 5ಬೌಂಡರಿ, 4ಸಿಕ್ಸರ್) ಮಿಂಚಿದರು. ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 175 ರನ್‌ ಗಳಿಸಿತು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕೇನ್ ಇಲ್ಲಿ ಮಿಂಚಿದರು.

ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ತಂಡವು ಆರಂಭದಲ್ಲಿಯೇ ಮುಗ್ಗರಿಸಿತ್ತು. ಕೇವಲ 20 ರನ್‌ ಗಳಿಸುವಷ್ಟರಲ್ಲಿ ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಔಟಾಗಿ ಮರಳಿದರು. ಅದರಿಂದಾಗಿ ತಂಡದ ಸೋಲು ಖಚಿತ ಎಂಬ ನಿರಾಸೆ ಕವಿದಿತ್ತು.

ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡಿದ್ದ ಹೆಟ್ಮೆಯರ್ ಒಟ್ಟು 15 ರನ್‌ ಮಾತ್ರ ಗಳಿಸಲು ಶಕ್ತರಾಗಿದ್ದರು. ಅದ್ದರಿಂದಾಗಿ ಅವರು ಒಂಬತ್ತು ಪಂದ್ಯಗಳಲ್ಲಿ ಬೆಂಚ್ ಕಾಯಬೇಕಾಯಿತು. ಆದರೆ ಈ ಪಂದ್ಯದಲ್ಲಿ ಅವರು 47 ಎಸೆತಗಳಲ್ಲಿ 75 ರನ್‌ ಗಳಿಸಿದರು. ನಾಲ್ಕು ಬೌಂಡರಿ, ಆರು ಸಿಕ್ಸರ್‌ಗಳನ್ನು ಸಿಡಿಸಿದರು. ಅವರೊಂದಿಗೆ ಉತ್ತಮ ಜೊತೆ ನೀಡಿದ ಪಂಜಾಬಿ ಹುಡುಗ ಗುರುಕೀರತ್ (65; 48ಎಸೆತ, 8ಬೌಂಡರಿ, 1ಸಿಕ್ಸರ್) ಮಿಂಚಿದರು.

18ನೇ ಓವರ್‌ನಲ್ಲಿ ಶಿಮ್ರೊನ್ ಔಟಾದರು. 19ನೇ ಓವರ್‌ನಲ್ಲಿ ಎಡಗೈ ಬೌಲರ್ ಖಲೀಲ್ ಅವರು ಗುರುಕೀರತ್ ಮತ್ತು ಸುಂದರ್ ವಿಕೆಟ್‌ಗಳನ್ನು ಗಳಿಸಿದರು. ಇದರಿಂದಾಗಿ ತುಸು ಆತಂಕ ಕಾಡಿತ್ತು. ಕೊನೆಯ ಓವರ್‌ನಲ್ಲಿ ಆರು ರನ್‌ಗಳ ಅವಶ್ಯಕತೆ ಇದ್ದಾಗ ಉಮೇಶ್ ಯಾದವ್ ಎರಡು ಬೌಂಡರಿ ಹೊಡೆದು ಕೆಲಸ ಮುಗಿಸಿದರು.

ಸುಂದರ್ ಸ್ಪಿನ್ ಮೋಡಿ: ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸನ್‌ರೈಸರ್ಸ್ ತಂಡದ ಆರಂಭಿಕ ಜೋಡಿ ವೃದ್ಧಿಮಾನ್ ಸಹಾ ಮತ್ತು ಮಾರ್ಟಿನ್ ಗಪ್ಟಿಲ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ ಜೊತೆ ಯಾಟದಲ್ಲಿ 27ಎಸೆತಗಳಲ್ಲಿ 46 ರನ್‌ ಚಚ್ಚಿದರು. ‌

ಮೂರನೇ ಓವರ್‌ನಲ್ಲಿ ಯಜುವೇಂದ್ರ ಚಾಹಲ್ ಅವರಿಂದ ಜೀವದಾನ ಪಡೆದ ನಂತರ ಸಹಾ ಉತ್ತಮವಾಗಿ ಆಡಿದರು. ಆದರೆ, ಐದನೇ ಓವರ್ನಲ್ಲಿ ನವದೀಪ್ ಸೈನಿ ಎಸೆತದಲ್ಲಿ ಉಮೇಶ್ ಯಾದವ್‌ಗೆ ಸುಲಭ ಕ್ಯಾಚಿತ್ತು ನಿರ್ಗಮಿಸಿದರು.

ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಕೈಗೆ ಎಂಟನೇ ಓವರ್ ಹಾಕಲು ಚೆಂಡು ನೀಡಿದ ಕೊಹ್ಲಿ ಉದ್ದೇಶ ಈಡೇರಿತು. ಆ ಓವರ್‌ನ ಎರಡನೇ ಎಸೆತದಲ್ಲಿ ಗಪ್ಟಿಲ್ ಮತ್ತು ಐದನೇ ಎಸೆತದಲ್ಲಿ ಮನೀಷ್ ಪಾಂಡೆ ವಿಕೆಟ್ ಕಬಳಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಕೇನ್ ಮತ್ತು ವಿಜಯಶಂಕರ್ (27 ರನ್) ನಿಧಾನವಾಗಿ ಇನಿಂಗ್ಸ್ ಕಟ್ಟಿದರು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 45 ರನ್‌ ಗಳಿಸಿದರು. ಇದರಿಂದಾಗಿ ತಂಡದ ಮೊತ್ತವು ನೂರರ ಗಡಿ ದಾಟಿತು. ಈ ಜೊತೆಯಾಟವನ್ನೂ ಸುಂದರ್ ಮುರಿದರು. 14ನೇ ಓವರ್‌ನಲ್ಲಿ ವಿಜಯಶಂಕರ್‌ಗೆ ಡಗ್‌ಔಟ್ ದಾರಿ ತೋರಿಸಿದರು.

1 ಓವರ್ 28 ರನ್: ಆದರೆ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಉಮೇಶ್ ಯಾದವ್ ಅವರನ್ನು ಕೇನ್ ವಿಲಿಯಮ್ಸನ್ ಸಖತ್‌ ಆಗಿ ದಂಡಿಸಿದರು. ಒಟ್ಟು 28 ರನ್‌ಗಳು ಹರಿದುಬಂದವು. ಅದರಲ್ಲಿ ಕೇನ್ ಪಾಲು 22 ರನ್‌ಗಳು. ಈ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳು ದಾಖಲಾದವು. ಆದರೆ, ಐದನೇ ಎಸೆತವನ್ನು ನೋಬಾಲ್ ಎಂದು ಅಂಪೈರ್ ನಿಗೆಲ್ ಲಾಂಗ್ ತಪ್ಪು ತೀರ್ಪು ಕೊಟ್ಟ ಘಟನೆಯೂ ನಡೆಯಿತು.

ಟಾಸ್ ಗೆದ್ದರೂ ನಂಬದ ಕೊಹ್ಲಿ!
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಗೆಲುವಿನ ಸಿಹಿಗಿಂತ ಸೋಲಿನ ಕಹಿಯನ್ನೇ ಹೆಚ್ಚು ಅನುಭವಿಸಿದೆ.ಪಂದ್ಯಗಳ ಟಾಸ್‌ ಗೆಲುವಿನ ವಿಷಯದಲ್ಲಿಯೂ ಹಾಗೆಯೇ ಆಗಿದೆ. 14 ಪಂದ್ಯಗಳಲ್ಲಿ ಹತ್ತು ಸಲ ಟಾಸ್ ಸೋತಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಗೆದ್ದಿದ್ದು ಒಂದೇ ಟಾಸ್. ಅದೂ ಈ ಪಂದ್ಯದಲ್ಲಿ.ಕೊಹ್ಲಿ ನಾಣ್ಯವನ್ನು ಆಗಸದತ್ತ ಚಿಮ್ಮಿದರು. ನೆಲಕ್ಕೆ ಬಿದ್ದಾಗ ವಿರಾಟ್ ಗೆದ್ದಿದ್ದರು. ಆದರೆ ನಂಬಿಕೆಯಲ್ಲದೇ ಎರಡೆರಡು ಬಾರಿ ದಿಟ್ಟಿಸಿ ನೋಡಿದರು. ನಂತರ ವೀಕ್ಷಕ ವಿವರಣೆಗಾರ ಮ್ಯಾಥ್ಯೂ ಹೇಡನ್ ಪ್ರಶ್ನೆಗಳಿಗೆ ಉತ್ತರಿಸಿದರು.

ಅಭಿಮಾನಿಗಳಿಗೆ ಜಯ ಅರ್ಪಿಸಿದ ಆರ್‌ಸಿಬಿ
ಬೆಂಗಳೂರು:
ನಮ್ಮ ತಂಡವು ಪ್ಲೇ ಆಫ್ ಅವಕಾಶ ಕಳೆದುಕೊಂಡಿದೆ. ಇದು ಈ ಟೂರ್ನಿಯಲ್ಲಿ ನಮ್ಮ ಕೊನೆಯ ಪಂದ್ಯ ಎಂಬ ವಿಷಯಗಳು ಗೊತ್ತಿದ್ದರೂ ಮೈದಾನದಲ್ಲಿ ಅಭಿಮಾನಿಗಳು ಭರ್ತಿಯಾಗಿ ತುಂಬಿದ್ದರು. ಅವರನ್ನು ಸಂತೋಷಪಡಿಸುವ ಗುರಿ ಒಂದೇ ನಮ್ಮ ಮುಂದಿತ್ತು. ಅದಕ್ಕಾಗಿಯೇ ಈ ಜಯವನ್ನು ಅವರಿಗೆ ಅರ್ಪಿಸುತ್ತೇವೆ ಎಂದು ಆರ್‌ಸಿಬಿ ತಂಡದ ಆಟಗಾರ ಗುರುಕೀರತ್ ಸಿಂಗ್ ಮಾನ್ ಹೇಳಿದರು.

ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮಗೆ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಆದ್ದರಿಂದ ಆಟವನ್ನು ಎಂಜಾಯ್ ಮಾಡಿದೆವು. ಜನರ ಪ್ರೋತ್ಸಾಹ ನಮ್ಮನ್ನು ಭಾವುಕರನ್ನಾಗಿಸಿದೆ. ಬೆಂಗಳೂರು ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ’ ಎಂದರು.

ಪಂದ್ಯ ಮುಗಿದ ನಂತರ ಆರ್‌ಸಿಬಿ ಆಟಗಾರರು ಮೈದಾನದಲ್ಲಿ ಒಂದು ಸುತ್ತು ಹಾಕಿ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT