ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದಲ್ಲಿ ಕೊರೊನಾ ಭೀತಿ; ವಿಕೆಟ್‌ಕೀಪರ್‌ ರಿಷಭ್ ಪಂತ್‌ಗೆ ಕೋವಿಡ್

Last Updated 15 ಜುಲೈ 2021, 15:10 IST
ಅಕ್ಷರ ಗಾತ್ರ

ನವದೆಹಲಿ/ಲಂಡನ್ (ಪಿಟಿಐ): ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ರಿಷಭ್ ಪಂತ್ ಮತ್ತು ಥ್ರೋಡೌನ್ ಪರಿಣತ ದಯಾನಂದ ಗರಾನಿ ಅವರಿಗೆ ಕೋವಿಡ್ –19 ತಗುಲಿರುವುದು ಖಚಿತವಾಗಿದೆ.

ತಂಡದಲ್ಲಿರುವ ಇನ್ನೊಬ್ಬ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅವರನ್ನೂ ಐಸೊಲೇಷನ್‌ಗೆ ಒಳಪಡಿಸಲಾಗಿದೆ. ಇವರಿಬ್ಬರೂ ದಯಾನಂದ ಗರಾನಿ ಅವರೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದರು. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗಿದೆ.

ಈ ನಾಲ್ವರೂ ಈಗ ಲಂಡನ್‌ನಲ್ಲಿದ್ದಾರೆ. ತಂಡದ ಉಳಿದ ಆಟಗಾರರು ಡರ್‌ಹ್ಯಾಮ್ ನಲ್ಲಿ ಗುರುವಾರ ಸಂಜೆ ಸೇರಿದರು. ಅವರು ಲಂಡನ್‌ನಿಂದ ಡರ್‌ಹ್ಯಾಮ್‌ಗೆ ಬಸ್‌ನಲ್ಲಿ ಐದು ಗಂಟೆಗಳ ಕಾಲ ಪ್ರಯಾಣ ಮಾಡಿದರು. ಹೋದ ತಿಂಗಳು ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ನಂತರ ತಂಡಕ್ಕೆ 20 ದಿನಗಳ ರಜೆ ನೀಡಲಾಗಿತ್ತು. ಬಹುತೇಕರು ತಮ್ಮ ಕುಟುಂಬದೊಂದಿಗೆ ವಿಹಾರಕ್ಕೆ ತೆರಳಿದ್ದರು.

ಜುಲೈ 20ರಿಂದ ಅಭ್ಯಾಸ ಪಂದ್ಯ ಆರಂಭವಾಗಲಿದೆ. ಆದರೆ ರಿಷಭ್ ಮತ್ತು ಸಹಾ ಹೊರಗುಳಿಯಲಿದ್ದಾರೆ. ಪಂತ್ ಕಳೆದ ಎಂಟು ದಿನಗಳಿಂದ ಲಕ್ಷಣರಹಿತ ಸೋಂಕು ಇರುವುದರಿಂದ ಪ್ರತ್ಯೇಕವಾಸದಲ್ಲಿದ್ದಾರೆಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.‌

ಇನ್ನೊಂದು ಮೂಲದ ಪ್ರಕಾರ ಸದ್ಯ ಇಂಗ್ಲೆಂಡ್‌ನಲ್ಲಿ ತಾರಕಕ್ಕೇರುತ್ತಿರುವ ಡೆಲ್ಟಾ ವೈರಸ್‌ ಸೋಂಕು ಪಂತ್ ಅವರಿಗೆ ತಗುಲಿದೆಯೆನ್ನಲಾಗಿದೆ.

‘ರಿಷಭ್ ಪಂತ್ ಅವರು ಸುರಕ್ಷಿತ ಜಾಗವೊಂದರಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ. ಅವರು ಗುರುವಾರ ಡರ್‌ಹ್ಯಾಮ್ ಗೆ ತೆರಳುವ ತಂಡದೊಂದಿಗೆ ಹೋಗುತ್ತಿಲ್ಲ‘ ಎಂದು ಮೂಲಗಳು ಖಚಿತಪಡಿಸಿವೆ. ಇನ್ನೂ ಎರಡ್ಮೂರು ದಿನಗಳ ನಂತರ ಮತ್ತೊಮ್ಮೆ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ.

ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರು ಗಾಯಗೊಂಡಿದ್ದರು. ಅದರಿಂದಾಗಿ ಅವರು ತಂಡದ ಬಯೋಬಬಲ್‌ನಿಂದ ಹೊರಗುಳಿದು ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಸದ್ಯದ ಮಾಹಿತಿಯಂತೆ ಒಬ್ಬ ಆಟಗಾರ ಮಾತ್ರ ಸೋಂಕಿಗೊಳಗಾಗಿದ್ದಾರೆ. ಮತ್ತೆ ಯಾರಿಗೂ ಸೋಂಕು ತಗುಲಿಲ್ಲ‘ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಆಗಸ್ಟ್ 4ರಿಂದ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಸರಣಿಯಲ್ಲಿ ಆಡಲಿದೆ. ಈ ಸರಣಿಯು ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಆರಂಭವೂ ಆಗಲಿದೆ.

ಯುರೊ ಕಪ್ ಟೂರ್ನಿಗೆ ತೆರಳಿದ್ದ ಪಂತ್

ಇಲ್ಲಿ ಹೋದ ತಿಂಗಳು ನಡೆದ ಯುರೊ ಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯವೊಂದನ್ನು ನೋಡಲು ರಿಷಭ್ ಪಂತ್ ತೆರಳಿದ್ದರು. ಅಲ್ಲಿಗೆ ಹೋಗಿದ್ದ ತಮ್ಮ ಚಿತ್ರಗಳನ್ನೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

ಕೆಲವು ದಿನಗಳ ನಂತರ ಸ್ವಲ್ಪ ಜ್ವರದಿಂದ ಬಳಲಿದ ರಿಷಭ್ ಪಂತ್ ಅವರನ್ನು ಪರೀಕ್ಷೆಗೊಳಪಡಿಸಲಾಯಿತು. ಆಗ ಸೋಂಕು ಪತ್ತೆಯಾಗಿದೆ.

ಶಾ ಎಚ್ಚರಿಕೆ ಪತ್ರ

‘ಕೋವಿಶೀಲ್ಡ್ ಲಸಿಕೆಯು ಕೋವಿಡ್‌ನಿಂದ ರಕ್ಷಣೆ ನೀಡುತ್ತದೆ. ಆದರೆ, ಸಂಪೂರ್ಣವಾಗಿ ಸೋಂಕು ಬರದಂತೆ ತಡೆಗಟ್ಟುವುದಿಲ್ಲ. ಆದ್ದರಿಂದ ಎಚ್ಚರಿಕೆಯಿಂದ ಇರಿ. ಜನಸಂದಣಿ ಹೆಚ್ಚು ಇರುವ ಸ್ಥಳಗಳಿಗೆ ಹೋಗದಿರಿ. ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಯುರೊ ಕಪ್ ಫುಟ್‌ಬಾಲ್, ವಿಂಬಲ್ಡನ್‌ನಂತಹ ಟೂರ್ನಿಗಳಿಗೆ ಹೋಗುವುದನ್ನು ತಪ್ಪಿಸಿ‘ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಂಡಕ್ಕೆ ಇ ಮೇಲ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT