ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಟ್ಮೆಯರ್ ನಡೆಗೆ ರಾಬರ್ಟ್ಸ್‌ ಕಿಡಿ

ಇಂಗ್ಲೆಂಡ್‌ ಪ್ರವಾಸದಿಂದ ಹಿಂದೆ ಸರಿದ ಯುವ ಬ್ಯಾಟ್ಸ್‌ಮನ್‌
Last Updated 27 ಜೂನ್ 2020, 10:08 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಕಾರಣ ನೀಡಿ ಇಂಗ್ಲೆಂಡ್‌ ಪ್ರವಾಸದಿಂದ ಹಿಂದೆ ಸರಿದ ಬ್ಯಾಟ್ಸ್‌ಮನ್‌ ಶಿಮ್ರಾನ್‌ ಹೆಟ್ಮೆಯರ್‌ ಅವರ ನಡೆಯನ್ನು ವೆಸ್ಟ್‌ ಇಂಡೀಸ್‌ನ ಹಿರಿಯ ವೇಗಿ ಆ್ಯಂಡಿ ರಾಬರ್ಟ್ಸ್‌ ಟೀಕಿಸಿದ್ದಾರೆ.

ಇಂಗ್ಲೆಂಡ್‌ ಕ್ರಿಕೆಟ್‌ ಪ್ರವಾಸ ಕೈಗೊಳ್ಳಲು ವಿಂಡೀಸ್‌ ತಂಡದ ಅನುಭವಿ ಆಟಗಾರ ಡರೆನ್‌ ಬ್ರಾವೊ ಹಾಗೂ ಹೆಟ್ಮೆಯರ್‌ ಅವರು ಹಿಂದೇಟು ಹಾಕಿದ್ದರು. ಇದರಿಂದ ರೋಜರ್‌ ಹಾರ್ಪರ್‌ ನೇತೃತ್ವದ ಆಯ್ಕೆ ಸಮಿತಿಯು ಕೊನೆಯ ಹಂತದಲ್ಲಿ ತಂಡದಲ್ಲಿ ಬದಲಾವಣೆ ಮಾಡಿತ್ತು.

‘ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಬ್ರಾವೊ ಹಾಗೂ ಹೆಟ್ಮೆಯರ್‌ ಪ್ರಮುಖ ಪಾತ್ರ ವಹಿಸುತ್ತಿದ್ದರು. ಭರವಸೆಯ ಆಟಗಾರನಾಗಿರುವ ಹೆಟ್ಮೆಯರ್‌ ಅವರ ಈ ನಡವಳಿಕೆ ಇಷ್ಟವಾಗಲಿಲ್ಲ. ಪೆವಿಲಿಯನ್‌ನಲ್ಲಿ ಕುಳಿತು ರನ್‌ ಗಳಿಸಲು ಸಾಧ್ಯವಿಲ್ಲ ಎಂಬುದನ್ನು ಆತನಿಗೆ ಯಾರಾದರೂ ಮನದಟ್ಟು ಮಾಡಬೇಕಿದೆ’ ಎಂದು ರಾಬರ್ಟ್ಸ್‌ ಅವರು ಮೈಕೆಲ್‌ ಹೋಲ್ಡಿಂಗ್‌ ಅವರ ಯೂಟ್ಯೂಬ್‌ ಚಾನಲ್‌ನಲ್ಲಿ ಹೇಳಿದ್ದಾರೆ.

1970 ಹಾಗೂ 80ರ ದಶಕದಲ್ಲಿ ಹೋಲ್ಡಿಂಗ್‌ ಹಾಗೂ ರಾಬರ್ಟ್ಸ್‌ ಅವರ ವೇಗದ ಬೌಲಿಂಗ್‌ ಜೋಡಿ ಖ್ಯಾತಿ ಪಡೆದಿತ್ತು. ಹೋಲ್ಡಿಂಗ್‌ ಕೂಡ ಹೆಟ್ಮೆಯರ್‌ ಅವರ ನಿಲುವನ್ನು ‘ದುರಾದೃಷ್ಟ’ ಎಂದಿದ್ದಾರೆ.

ಇದೇ ವೇಳೆ ಅಲ್ಜರಿ ಜೋಸೆಫ್‌, ಕೇಮರ್‌ ಹೋಲ್ಡರ್‌, ಓಷೇನ್‌ ಥಾಮಸ್‌ ಹಾಗೂ ಶಾನನ್‌ ಗೇಬ್ರಿಯಲ್‌ ಅವರ ವೇಗದ ಬೌಲಿಂಗ್ ಪಡೆಯಲ್ಲಿ ರಾಬರ್ಟ್ಸ್‌ ಅವರಿಗೆ ಉಜ್ವಲ ಭವಿಷ್ಯ ಕಾಣಿಸಿದೆ.

‘ಕಳೆದೆರಡು ತಿಂಗಳಿನಿಂದ ಬೌಲಿಂಗ್‌ ವಿಭಾಗದಲ್ಲಿ ಒಂದು ರೀತಿಯ ನವೋತ್ಸಾಹ ಗೋಚರಿಸುತ್ತಿದೆ. ಕೆಲವು ಯುವ ಪ್ರತಿಭೆಗಳು ಕಂಡುಬರುತ್ತಿವೆ. ಹಾಗಂತ ಇಷ್ಟು ಬೇಗ ಅವರಿಂದ ಹೆಚ್ಚಿನ ಸಾಧನೆಯನ್ನು ನಿರೀಕ್ಷಿಸಬಾರದು’ ಎಂದು ರಾಬರ್ಟ್ಸ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT