ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಡ್ಮನ್ ದಾಖಲೆ ಮುರಿದ ರೋಹಿತ್ ಶರ್ಮಾ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌
Last Updated 20 ಅಕ್ಟೋಬರ್ 2019, 19:26 IST
ಅಕ್ಷರ ಗಾತ್ರ

ರಾಂಚಿ: ಟೆಸ್ಟ್‌ ಕ್ರಿಕೆಟ್‌ ದಿಗ್ಗಜ, ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಅವರು 71 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಭಾರತದ ರೋಹಿತ್ ಶರ್ಮಾ ಭಾನುವಾರ ಮುರಿದರು.

ಡಾನ್ ತಮ್ಮ ತವರಿನ ನೆಲದಲ್ಲಿ ಆಡಿದ್ದ ಸತತ ಹತ್ತು ಟೆಸ್ಟ್‌ಗಳಿಂದ 98.22ರ ಸರಾಸರಿಯಲ್ಲಿ ರನ್‌ ಗಳಿಸಿದ್ದರು. ದಕ್ಷಿಣ ಆಫ್ರಿಕಾ ಎದುರು ದ್ವಿಶತಕ ಬಾರಿಸಿದ ರೋಹಿತ್ ಭಾರತದಲ್ಲಿ ಆಡಿದ ಹತ್ತು ಪಂದ್ಯಗಳಲ್ಲಿ 99.84 ಸರಾಸರಿಯಲ್ಲಿ ರನ್‌ ಸೇರಿಸಿದ್ದಾರೆ.

ರೋಹಿತ್ ದಾಖಲೆಯ ದ್ವಿಶತಕ

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕದ ಟ್ರಿಪಲ್ ಸಾಧಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಇನ್ನೂರರ ಗಡಿ ದಾಟಿಯೇ ಬಿಟ್ಟರು. ಮೂರು ವರ್ಷಗಳ ನಂತರ ಸ್ವದೇಶದಲ್ಲಿ ಶತಕ ದಾಖಲಿಸಿದ ಮತ್ತೊಬ್ಬ ಮುಂಬೈಕರ್ ಅಜಿಂಕ್ಯ ರಹಾನೆ ಕೂಡ ಮಿಂಚಿದರು.

ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನ ರೋಹಿತ್ ದ್ವಿಶತಕ (212‍; 255ಎಸೆತ, 28ಬೌಂಡರಿ, 6ಸಿಕ್ಸರ್) ಮತ್ತು ಅಜಿಂಕ್ಯ ರಹಾನೆ (115; 192ಎಸೆತ, 17ಬೌಂಡರಿ, 1ಸಿಕ್ಸರ್) ಅವರ ಜೊತೆಯಾಟದ ಬಲದಿಂದ ಭಾರತ ತಂಡವು 116.3 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 497 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇನಿಂಗ್ಸ್‌ ಆರಂಭದಲ್ಲಿಯೇ ಪ್ರವಾಸಿ ತಂಡವು ಕೇವಲ 9 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು.

ಮುಂಬೈ ಜೋಡಿಯ ಭರಾಟೆ: ಪಂದ್ಯದ ಮೊದಲ ದಿನವಾದ ಶನಿವಾರ 39 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದ ಭಾರತ ತಂಡವನ್ನು ಮುಂಬೈ ಜೋಡಿ ರೋಹಿತ್ ಮತ್ತು ಅಜಿಂಕ್ಯ ಸಂಕಷ್ಟದಿಂದ ಪಾರು ಮಾಡಿದ್ದರು. ಮಂದಬೆಳಕಿನಿಂದ ಆಟ ಸ್ಥಗಿತವಾದಾಗ ಶತಕ ಗಳಿಸಿದ್ದ ರೋಹಿತ್ (117 ರನ್) ಮತ್ತು ಅಜಿಂಕ್ಯ (83) ಕ್ರೀಸ್‌ನಲ್ಲಿದ್ದರು. ಭಾನುವಾರ ಆಟ ಮುಂದುವರಿಸಿದ ಇಬ್ಬರೂ ಎದುರಾಳಿ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು.

ಅಜಿಂಕ್ಯ ಆಕರ್ಷಕ ಹೊಡೆತಗಳ ಮೂಲಕ ರನ್‌ ಗಳಿಸಿದರು. ತಾವೆ ದುರಿಸಿದ 169ನೇ ಎಸೆತದಲ್ಲಿ ನೂರರ ಗಡಿ ಮುಟ್ಟಿದರು. ಸ್ವದೇಶದ ನೆಲದಲ್ಲಿ ಮೂರು ವರ್ಷಗಳ ನಂತರ ಅವರ ಖಾತೆಗೆ ಶತಕ ದಾಖಲಾಯಿತು.

2016ರಲ್ಲಿ ಇಂದೋರ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಶತಕ ಗಳಿಸಿ ದ್ದರು. ಅದರ ನಂತರ ಭಾರತದಲ್ಲಿ ಅವರು ನೂರರ ಗಡಿ ದಾಟಿರಲಿಲ್ಲ. ರೋಹಿತ್ ಜೊತೆಗೆ ಅಜಿಂಕ್ಯ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 267 ರನ್‌ ಸೇರಿಸಿದರು. ತಂಡದ ಮೊತ್ತವು ಮುನ್ನೂರರ ಗಡಿ ದಾಟಿದ ನಂತರ ಅವರು ಜಾರ್ಜ್ ಎಸೆತದಲ್ಲಿ ವಿಕೆಟ್‌ಕೀಪರ್‌ ಕ್ಲಾಸನ್‌ಗೆ ಕ್ಯಾಚಿತ್ತರು. ಇದರೊಂದಿಗೆ ಜೊತೆಯಾಟ ಮುರಿ ದುಬಿತ್ತು. ಆದರೆ ರೋಹಿತ್ ಆಟ ರಂಗೇರಿತು.

ದಾಖಲೆಗಳ ಸರಮಾಲೆ: ರೋಹಿತ್ ಬ್ಯಾಟ್‌ನಿಂದ ರನ್‌ಗಳು ಹರಿ ಯುತ್ತಿದ್ದಂತೆಯೇ ದಾಖಲೆಗಳೂ ಸಾಲುಗಟ್ಟಿದವು. ‌249 ಎಸೆತಗಳಲ್ಲಿ ದ್ವಿಶತಕದ ಗಡಿ ದಾಟಿದರು. ಪೆವಿ ಲಿಯನ್‌ನತ್ತ ಬ್ಯಾಟ್ ತೋರಿಸಿ ನಗುತ್ತ ಸಂಭ್ರಮಿಸಿದರು.

ಇದರೊಂದಿಗೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ ಮಾದರಿಗಳಲ್ಲಿ ದ್ವಿಶತಕ ದಾಖಲಿಸಿದ ವಿಶ್ವದ ನಾಲ್ಕನೇ ಮತ್ತು ಭಾರತದ ಮೂರನೇ ಬ್ಯಾಟ್ಸ್‌ಮನ್‌ ಆದರು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್ ಅವರ ನಂತರ ರೋಹಿತ್ ಈ ಸಾಧನೆ ಮಾಡಿದ್ದಾರೆ.

ಈ ಸರಣಿಯಲ್ಲಿ ದ್ವಿಶತಕ ಹೊಡೆದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯೂ ಅವರದ್ದಾಯಿತು. ಮೊದಲ ಪಂದ್ಯದಲ್ಲಿ ಮಯಂಕ್ ಅಗರವಾಲ್ ಮತ್ತು ಎರಡನೇದ್ದರಲ್ಲಿ ವಿರಾಟ್ ಕೊಹ್ಲಿ ದ್ವಿಶತಕದ ಸಾಧನೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಸರಣಿಯಲ್ಲಿ ರೋಹಿತ್‌ ಒಟ್ಟು 500 ಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದರು. ಈ ಸಾಧನೆ ಮಾಡಿದ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳ ಪಟ್ಟಿ ಸೇರಿದರು.

ಶನಿವಾರ ಅವರು ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವದಾಖಲೆಯನ್ನೂ ಬರೆದಿದ್ದರು. 89ನೇ ಓವರ್‌ನಲ್ಲಿ ಅವರ ಆಟಕ್ಕೆ ಜಾರ್ಜ್ ಲಿಂಡ್‌ ಕಡಿವಾಣ ಹಾಕಿದರು. ನಂತರ ಅರ್ಧಶತಕ ಹೊಡೆದ ರವೀಂದ್ರ ಜಡೇಜ (51 ರನ್) ತಂಡದ ಮೊತ್ತವನ್ನು ಹೆಚ್ಚಿಸಿದರು.

ಉಮೇಶ್ ದಾಖಲೆ: ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಉಮೇಶ್ ಯಾದವ್ ಕೇವಲ 10 ಎಸೆತಗಳಲ್ಲಿ 31 ರನ್‌ ಹೊಡೆದು ದಾಖಲೆ ಬರೆದರು. ಐದು ಸಿಕ್ಸರ್‌ಗಳನ್ನು ಎತ್ತಿದ ಅವರು 310ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ್ದು ದಾಖಲೆಯಾಯಿತು. ವೇಗದ ಬೌಲರ್‌ ಶರವೇಗದ 30 ರನ್‌ ಪೇರಿಸಿದ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT