ಭಾನುವಾರ, ಮೇ 16, 2021
22 °C
ಮಯಂಕ್ಯ ಅಗರವಾಲ್–ಹನುಮವಿಹಾರಿಗೆ ವಿಶ್ರಾಂತಿ ಕೊಡುವತ್ತ ಚಿತ್ತ; ಕೆ.ಎಲ್. ರಾಹುಲ್‌ಗೆ ಅವಕಾಶ ಸಿಗುವ ಸಾಧ್ಯತೆ

ರೋಹಿತ್ ಶರ್ಮಾಗಾಗಿ ಯಾರ ಸ್ಥಾನ ತೆರವು?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ತಾರಾ ವರ್ಚಸ್ಸಿನ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬುಧವಾರ ಭಾರತ ತಂಡವನ್ನು ಸೇರಿಕೊಂಡರು.

ಜನವರಿ 7ರಂದು  ಆರಂಭವಾಗುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಅವರು ಹನ್ನೊಂದು ಆಟಗಾರರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಆದರೆ ಅವರಿಗಾಗಿ ಸ್ಥಾನ ತೆರವು ಮಾಡುವವರು ಯಾರು ಎಂಬ ಕುತೂಹಲ ಈಗ ಗರಿಗೆದರಿದೆ.

ಕಳೆದ ಎರಡೂ ಟೆಸ್ಟ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ ಮತ್ತು ಹನುಮವಿಹಾರಿ ಅವರಲ್ಲಿ ಒಬ್ಬರನ್ನು ಬೆಂಚ್‌ನಲ್ಲಿ ಕೂರಿಸುವ ಸಾಧ್ಯತೆ ಇದೆ.

ಈ ಮೊದಲು ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ರೋಹಿತ್, ಹೋದ ವರ್ಷವಷ್ಟೇ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಡ್ತಿಪಡೆದಿದ್ದರು.

ಅಡಿಲೇಡ್‌ನಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಪೃಥ್ವಿ ಶಾ ಅವರನ್ನು ಕೈಬಿಡಲಾಗಿತ್ತು. ಎರಡನೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಭರವಸೆದಾಯಕ  ಆಟವಾಡಿದ್ದರು. ಆದ್ದರಿಂದ ಅವರು ಸಿಡ್ನಿ ಟೆಸ್ಟ್‌ನಲ್ಲಿ ಮತ್ತೊಂದು ಅವಕಾಶ ಪಡೆಯುವುದು ಖಚಿತ.

ಆದರೆ ಕಳೆದ ನಾಲ್ಕು ಇನಿಂಗ್ಸ್‌ಗಳಲ್ಲಿ ಮಯಂಕ್ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಆದ್ದರಿಂದ ಅವರಿಗೆ ವಿಶ್ರಾಂತಿ ಕೊಡುವ ಸಾಧ್ಯತೆ ದಟ್ಟವಾಗಿದೆ.

ಅವರ ಬದಲಿಗೆ ರೋಹಿತ್ ಕಣಕ್ಕಿಳಿಯಬಹುದು.  ಇಂಡಿಯನ್ ಪ್ರೀಮಿಯರ್‌ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಗಾಯಗೊಂಡಿದ್ದ ರೋಹಿತ್, ಎನ್‌ಸಿಎನಲ್ಲಿ ಚೇತರಿಸಿಕೊಂಡಿದ್ದರು. ಫಿಟ್‌ನೆಸ್ ಪರೀಕ್ಷೆಯ ನಂತರ ಆಸ್ಟ್ರೇಲಿಯಾಕ್ಕೆ ತೆರಳಿದ್ದರು.

ಸಿಡ್ನಿಯಲ್ಲಿ ಎರಡು ವಾರಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿದ ನಂತರ ಮೆಲ್ಬರ್ನ್‌ನಲ್ಲಿರುವ ಭಾರತ ತಂಡವನ್ನು ಸೇರಿಕೊಂಡಿದ್ಧಾರೆ.

ರೋಹಿತ್ ಶರ್ಮಾ ಅವರನ್ನು ಏಕದಿನ ಮತ್ತು ಟ್ವೆಂಟಿ–20 ಸರಣಿಗಳು ಹಾಗೂ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲೆರಡು ಟೆಸ್ಟ್‌ಗಳಿಗೆ ಆಯ್ಕೆ ಮಾಡಿರಲಿಲ್ಲ.

ಸತತ ವೈಫಲ್ಯ ಅನುಭವಿಸುತ್ತಿರುವ ಹನುಮವಿಹಾರಿಗೂ ವಿಶ್ರಾಂತಿ ಕೊಟ್ಟು ಕನ್ನಡಿಗ ಕೆ.ಎಲ್. ರಾಹುಲ್‌ಗೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ನೀಡುವ ಸಾಧ್ಯತೆಯೂ ಇದೆ.

’ದೀರ್ಘ ಬಿಡುವಿನ ನಂತರ ರೋಹಿತ್ ತಂಡಕ್ಕೆ ಮರಳಿದ್ದಾರೆ. ಅವರು ಇನಿಂಗ್ಸ್‌ ಆರಂಭಿಸಲು ಶಕ್ತರಾಗಿರುವರೇ ಎಂಬುದನ್ನು ಮೊದಲು ನೋಡಬೇಕು. ಅವರಿಗೆ ಮಧ್ಯಮಕ್ರಮಾಂಕದಲ್ಲಿ ಬ್ಯಾಟಿಂಗ್‌ ಕೊಡುವ ಬಗ್ಗೆ ಯೋಚಿಸಹುದು‘ ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಎಂ.ಎಎಸ್.ಕೆ. ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು