ಮಂಗಳವಾರ, ನವೆಂಬರ್ 24, 2020
19 °C

ಗಂಗೂಲಿ ಸಲಹೆ ಮೀರಿ ಕಣಕ್ಕಿಳಿದ ರೋಹಿತ್ ಶರ್ಮಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು/ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಗಾಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು.  ಸಂಪೂರ್ಣ ಫಿಟ್ ಆದ ನಂತರವೇ ಕಣಕ್ಕಿಳಿಯುವುದು ಒಳಿತು. ಅವಸರ ಬೇಡ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮಂಗಳವಾರ ಹೇಳಿದರು.

ಆದರೆ ಇದೇ ದಿನ ರೋಹಿತ್ ಅವರು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧದ  ಐಪಿಎಲ್ ಪಂದ್ಯದಲ್ಲಿ ಆಡಲು ಕಣಕ್ಕಿಳಿದು ಅಚ್ಚರಿ ಮೂಡಿಸಿದರು. ಹೋದ ತಿಂಗಳು ಪಂದ್ಯವೊಂದರಲ್ಲಿ ಅವರು ಸ್ನಾಯುಸೆಳೆತದಿಂದ ಬಳಲಿದ್ದರು. ಅದರ ನಂತರ ನಾಲ್ಕು ಪಂದ್ಯಗಳಲ್ಲಿ ಅವರು ಆಡಿರಲಿಲ್ಲ. ಮುಂಬೈ ತಂಡವು ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ಪ್ಲೇ ಆಫ್ ಪ್ರವೇಶಿಸಿದೆ. ಸನ್‌ರೈಸರ್ಸ್ ಎದುರಿನ ಪಂದ್ಯವು ತಂಡಕ್ಕೆ ಔಪಚಾರಿಕವಾಗಿತ್ತು. ಆದರೂ ರೋಹಿತ್ ಆಡಿದರು.

ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡಕ್ಕೆ ರೋಹಿತ್ ಅವರನ್ನು  ಆಯ್ಕೆ ಮಾಡಿಲ್ಲ. ಆದ್ದರಿಂದ ಈ ವಿಷಯದ ಸುತ್ತ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಅವರು ಗಾಯಗೊಂಡಿರುವುದರಿಂದ ಆಯ್ಕೆಗೆ ಪರಿಗಣಿಸಿಲ್ಲ ಎಂದೂ ಹೇಳಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಗಂಗೂಲಿ, ’ರೋಹಿತ್ ಅವರಂತಹ ಆಟಗಾರರು ನಮ್ಮ ತಂಡದ ಆಸ್ತಿ. ಅವರನ್ನು ಕೈಬಿಡಲು ನಾವು ಹೇಗೆ ಒಪ್ಪಲು ಸಾಧ್ಯ. ಅವರು ಗುಣಮುಖರಾಗಿ ತಮ್ಮ ಫಿಟ್‌ನೆಸ್ ಸಾಬೀತು ಮಾಡಿದ ನಂತರ ತಂಡಕ್ಕೆ ಸೇರಿಸಿಕೊಳ್ಳಲು ಮುಕ್ತವಾಗಿದ್ದೇವೆ. ಸೀಮಿತ ಓವರ್‌ಗಳ ತಂಡಗಳಿಗೆ ಅವರು ಉಪನಾಯಕರಾಗಿರುವವರು ಮತ್ತು ಬಹಳ ಪ್ರಮುಖವಾದ ಆಟಗಾರ‘ ಎಂದರು.

’ಅಭ್ಯಾಸ ಮಾಡುವಾಗ ಮತ್ತು ಪಂದ್ಯದಲ್ಲಿ ಆಡುವಾಗಿನ ಪರಿಸ್ಥಿತಿ, ಒತ್ತಡಗಳು ಬೇರೆ ಇರುತ್ತವೆ. ಅದೇ ರೀತಿ ನಮ್ಮ ದೇಹವೂ ಕೂಡ ಅದಕ್ಕೆ ತಕ್ಕಂತೆ ವರ್ತಿಸುತ್ತದೆ. ಅಭ್ಯಾಸದ ಸಂದರ್ಭದಲ್ಲಿ ಅತ್ಯಂತ ಉತ್ಕೃಷ್ಠವಾದ ಸಾಮರ್ಥ್ಯ ಮೆರೆಯಬಹುದು. ಆದರೆ ಅದೇ ರೀತಿಯ ಸಾಮರ್ಥ್ಯ ಪಂದ್ಯದಲ್ಲಿ ತೋರಿಸಲು ಸಾಧ್ಯವಾಗುವುದಿಲ್ಲ‘ ಎಂದು ಭಾರತ ತಂಡದ ಮಾಜಿ ನಾಯಕ ಗಂಗೂಲಿ  ವಿವರಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು