ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC ವರ್ಷದ ಟೆಸ್ಟ್ ತಂಡದಲ್ಲಿ ಪಂತ್; ಏಕದಿನ, ಟಿ20 ಬಳಗದಲ್ಲಿ ಭಾರತದ ಆಟಗಾರರಿಲ್ಲ

Last Updated 20 ಜನವರಿ 2022, 14:57 IST
ಅಕ್ಷರ ಗಾತ್ರ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗುರುವಾರ ಪ್ರಕಟಿಸಿರುವ ವರ್ಷದ ಟೆಸ್ಟ್ ತಂಡದಲ್ಲಿ ಭಾರತದ ರೋಹಿತ್ ಶರ್ಮಾ, ರಿಷಭ್ ಪಂತ್ ಮತ್ತು ಆರ್. ಅಶ್ವಿನ್ ಸ್ಥಾನ ಗಳಿಸಿದ್ದಾರೆ.

ಆದರೆ, ಇದೇ ಸಂದರ್ಭದಲ್ಲಿ ಪ್ರಕಟಿಸಿರುವ ಏಕದಿನ ಮತ್ತು ಟಿ20 ತಂಡಗಳಲ್ಲಿ ಭಾರತದ ಒಬ್ಬ ಆಟಗಾರನಿಗೂ ಸ್ಥಾನ ಲಭಿಸಿಲ್ಲ.

2021ರ ಸಾಧನೆಗಳ ಆಧಾರದಲ್ಲಿ ಈ ತಂಡಗಳನ್ನು ಆಯ್ಕೆ ಮಾಡಲಾಗಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ರನ್ನರ್ಸ್ ಅಪ್ ಆಗಿತ್ತು. ಚಾಂಪಿಯನ್ ಆಗಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ ಈ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಹೋದ ವರ್ಷದಲ್ಲಿ ಭಾರತವು ಒಟ್ಟು 14 ಟೆಸ್ಟ್‌ಗಳಲ್ಲಿ ಆಡಿದೆ. ಅದರಲ್ಲಿ ಎಂಟು ಗೆದ್ದಿದೆ. ಮೂರರಲ್ಲಿ ಸೋತಿದೆ. ಮೂರರಲ್ಲಿ ಡ್ರಾ ಮಾಡಿಕೊಂಡಿದೆ.

ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ 47.68ರ ಸರಾಸರಿಯಲ್ಲಿ 906 ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿ ಎರಡು ಶತಕಗಳು ಸೇರಿವೆ. ಎರಡೂ ಶತಕಗಳನ್ನು ಅವರು ಇಂಗ್ಲೆಂಡ್ ವಿರುದ್ಧ ಗಳಿಸಿದ್ದಾರೆ. ಒಂದು ಚೆನ್ನೈನಲ್ಲಿ ಇನ್ನೊಂದು ಓವಲ್‌ನಲ್ಲಿ.

ವಿಕೆಟ್‌ಕೀಪರ್–ಬ್ಯಾಟರ್ಪಂತ್ 12 ಪಂದ್ಯಗಳನ್ನು ಆಡಿ 748 ರನ್‌ಗಳನ್ನು ಗಳಿಸಿದ್ದಾರೆ. ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಹೊಡೆದಿದ್ದರು. ಕೀಪಿಂಗ್‌ನಲ್ಲಿ ಅವರು 39 ಬಲಿ ಪಡೆದಿದ್ದಾರೆ.

ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಒಂಬತ್ತು ಪಂದ್ಯಗಳಿಂದ 54 ವಿಕೆಟ್‌ಗಳನ್ನು ಗಳಿಸಿದ್ದಾರೆ. ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಎದುರಿನ ಸರಣಿಗಳಲ್ಲಿ ಅವರು ಮಿಂಚಿದ್ದರು. ಬ್ಯಾಟಿಂಗ್‌ನಲ್ಲಿಯೂ ಉಪಯುಕ್ತ ಕಾಣಿಕೆ ನೀಡಿದ್ದ ಅವರು 355 ರನ್‌ಗಳನ್ನು ಕಲೆಹಾಕಿದ್ದರು.

ಈ ತಂಡದಲ್ಲಿ ಶ್ರೀಲಂಕಾದ ದಿಮುತ ಕರುಣಾರತ್ನೆ, ಆಸ್ಟ್ರೇಲಿಯಾದ ಮಾರ್ನಸ್ ಲಾಬುಷೇನ್, ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ನ್ಯೂಜಿಲೆಂಡ್‌ನ ಕೈಲ್ ಜೆಮಿಸನ್, ಪಾಕಿಸ್ತಾನದ ಫವಾದ್ ಆಲಂ, ಹಸನ್ ಅಲಿ ಮತ್ತು ಶಾಹೀನ್ ಆಫ್ರಿದಿ ಸ್ಥಾನ ಪಡೆದಿದ್ದಾರೆ.

ಏಕದಿನ ತಂಡದಲ್ಲಿ ಭಾರತದ ಆಟಗಾರರಿಗೆ ಸ್ಥಾನ ಲಭಿಸಿಲ್ಲ. ಆದರೆ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್‌ನ ಆಟಗಾರರೂ ಈ ಪಟ್ಟಿಯಲ್ಲಿ ಇಲ್ಲ.

ಪಾಕಿಸ್ತಾನದ ಬಾಬರ್ ಆಜಂ ಈ ತಂಡಕ್ಕೆ ನಾಯಕರಾಗಿಆಯ್ಕೆಯಾಗಿದ್ಧಾರೆ. ದಕ್ಷಿಣ ಆಫ್ರಿಕಾದ ಜನೆಮನ್ ಮಲಾನ್, ರಸಿ ವ್ಯಾನ್ ಡರ್ ಡಸೆ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಮುಸ್ತಫಿಜುರ್ ರೆಹಮಾನ್, ಮುಷ್ಫಿಕುರ್ ರಹೀಂ, ಶ್ರೀಲಂಕಾದ ವಾಣಿಂದು ಹಸರಂಗಾ, ದಿಶಮಂತಾ ಚಾಮೀರಾ, ಐರ್ಲೆಂಡ್‌ನ ಪಾಲ್ ಸ್ಟರ್ಲಿಂಗ್ ಮತ್ತು ಸಿಮಿ ಸಿಂಗ್ ಇದರಲ್ಲಿದ್ದಾರೆ.

ಭಾರತ ತಂಡವು ಕಳೆದ ವರ್ಷದಲ್ಲಿ ಏಕದಿನ ಮಾದರಿಯಲ್ಲಿ ಕಡಿಮೆ ಪಂದ್ಯಗಳನ್ನು ಆಡಿದೆ. ಕೊಹ್ಲಿ, ರಾಹುಲ್ ಮತ್ತು ರೋಹಿತ್ ಶರ್ಮಾ ಕೇವಲ ಮೂರು ಪಂದ್ಯಗಳಣ್ನು ಆಡಿದ್ದಾರೆ. ಶಿಖರ್ ಧವನ್ ಒಬ್ಬರೇ ಆರು ಪಂದ್ಯಗಳನ್ನು ಆಡಿ 297 ರನ್‌ಗಳನ್ನು ಗಳಿಸಿದ್ದಾರೆ.

ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಐದು ಪಂದ್ಯ ಆಡಿ 9 ವಿಕೆಟ್ ಗಳಿಸಿದ್ದಾರೆ.

ಐರ್ಲೆಂಡ್‌ನ ಸ್ಟರ್ಲಿಂಗ್ 14 ಪಂದ್ಯಗಳನ್ನು ಆಡಿ 705 ರನ್‌ಗಳನ್ನು ಗಳಿಸಿದ್ದಾರೆ.

ಹೋದ ವರ್ಷ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ ಚುಟುಕು ತಂಡದಲ್ಲಿಯೂ ಭಾರತದ ಆಟಗಾರರು ಸ್ಥಾನ ಪಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT