ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ಸರಣಿ: ಗಾಯಾಳು ಬ್ರಾವೊ ಬದಲು ರೊಮಾರಿಯೊಗೆ ವಿಂಡೀಸ್ ತಂಡದಲ್ಲಿ ಸ್ಥಾನ

Last Updated 22 ಅಕ್ಟೋಬರ್ 2020, 10:28 IST
ಅಕ್ಷರ ಗಾತ್ರ

ದುಬೈ: ಮುಂದಿನ ತಿಂಗಳು ನ್ಯೂಜಿಲೆಂಡ್‌ ವಿರುದ್ಧ ನಡೆಯಲಿರುವ ಟಿ–20 ಟೂರ್ನಿಯಲ್ಲಿ ಆಡಲು ಗಾಯಾಳು ಡ್ವೇನ್‌ ಬ್ರಾವೊ ಬದಲು ರೊಮಾರಿಯೊ ಶೆಫೆರ್ಡ್‌ ಅವರಿಗೆ ವೆಸ್ಟ್‌ ಇಂಡೀಸ್‌ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿ ಆಡುವ 37 ವರ್ಷದ ಬ್ರಾವೊ, ಇದೇ 17ರಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಎದುರು ಶಾರ್ಜಾದಲ್ಲಿ ನಡೆದ ಪಂದ್ಯದ ವೇಳೆ ಗಾಯಗೊಂಡಿದ್ದರು. ತೊಡೆ ನೋವಿನಿಂದ ಬಳಲುತ್ತಿರುವ ಅವರು ಐಪಿಎಲ್‌ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ.

ಗಾಯದ ಸಮಸ್ಯೆ ಬಗ್ಗೆ ಮಾತನಾಡಿರುವ ಬ್ರಾವೊ, ‘ನಾನು ನ್ಯೂಜಿಲೆಂಡ್ ಪ್ರವಾಸಕ್ಕಾಗಿ ನಿಜವಾಗಿಯೂ ಎದುರು ನೋಡುತ್ತಿದ್ದೆ, ಏಕೆಂದರೆ, ನಾವು ಶ್ರೀಲಂಕಾದಲ್ಲಿ ಕೊನೆಯ ಬಾರಿ (ಮಾರ್ಚ್‌ನಲ್ಲಿ) ತಂಡದ ಜೆರ್ಸಿ ತೊಟ್ಟು ಆಡಿದ್ದೆವು. ಇದೀಗ ಹಲವು ತಿಂಗಳು ಕಳೆದಿರುವುದರಿಂದ ಮತ್ತು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ನಾವೆರಲ್ಲರೂ ಉತ್ಸುಕರಾಗಿದ್ದೇವೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘ದುರದೃಷ್ಟವಶಾತ್‌, ಚೆನ್ನೈ ತಂಡಕ್ಕಾಗಿ ಶನಿವಾರ ಆಡುವ ವೇಳೆ ಗಾಯಗೊಂಡಿದ್ದರಿಂದಾಗಿ ಐಪಿಎಲ್‌ನಿಂದ ಮಾತ್ರವಲ್ಲದೆ, ನ್ಯೂಜಿಲೆಂಡ್‌ ಪ್ರವಾಸದಿಂದಲೂ ದೂರ ಉಳಿಯುವಂತಾಗಿದೆ. ಸದ್ಯ ಟ್ರೆನಿಡಾಡ್‌ಗೆ ಮರಳಲು ಸಿದ್ಧತೆ ನಡೆಸುತ್ತಿದ್ದೇನೆ. ಅಲ್ಲಿಯೇ ಚಿಕಿತ್ಸೆ ಮುಂದುವರಿಸುತ್ತೇನೆ. ನಾನು ವಿಂಡೀಸ್‌ ತಂಡವನ್ನು ಪ್ರತಿನಿಧಿಸಲು ಸಂಪೂರ್ಣ ಬದ್ಧನಾಗಿದ್ದು, ನನ್ನನ್ನು ನಾನು ಮತ್ತೆ ಪ್ರಬಲನನ್ನಾಗಿಸಿಕೊಳ್ಳಬೇಕಿದೆ’ ಎಂದೂ ತಿಳಿಸಿದ್ದಾರೆ.

25 ವರ್ಷದ ಶೆಫರ್ಡ್‌ ವಿಂಡೀಸ್‌ ಪರ 5 ಏಕದಿನ ಮತ್ತು 2 ಟಿ20 ಪಂದ್ಯಗಳಲ್ಲಿ ಆಡಿದ್ದು, ಒಟ್ಟು 6 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಆರು ಪಂದ್ಯಗಳನ್ನು ಆಡಿದ್ದ ಬ್ರಾವೊ, ಎರಡು ಇನಿಂಗ್ಸ್‌ಗಳಿಂದ ಏಳು ರನ್‌ ಗಳಿಸಿದ್ದರು. 8.57 ಎಕಾನಮಿ ರೇಟ್‌ನಲ್ಲಿ ಆರು ವಿಕೆಟ್‌ ಕೂಡ ಕಬಳಿಸಿದ್ದರು.

10 ಪಂದ್ಯಗಳಲ್ಲಿ ಆರು ಸೋಲು ಅನುಭವಿಸಿರುವ ಚೆನ್ನೈ ತಂಡದ ಪ್ಲೇ ಆಫ್‌ ಕನಸು ಕ್ಷೀಣಿಸಿದೆ. ಲೀಗ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ಸದ್ಯ ಆ ತಂಡ ಕೊನೆಯ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT