ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊನಾಲ್ಡೊ ದಾಖಲೆ: ಚಾಂಪಿಯನ್ ಪೋರ್ಚುಗಲ್‌ ಶುಭಾರಂಭ

ಯೂರೊ ಕಪ್‌ ಫುಟ್‌ಬಾಲ್‌: ಸ್ಪೇನ್‌–ಸ್ವೀಡನ್ ಪಂದ್ಯ ಡ್ರಾ; ಉಡುಗೊರೆ ಗೋಲು ನೀಡಿದ ಒಸೀಚ್ ಸೆಜೆನಿ
Last Updated 16 ಜೂನ್ 2021, 5:57 IST
ಅಕ್ಷರ ಗಾತ್ರ

ಬುಡಾಪೆಸ್ಟ್‌/ಸೇಂಟ್ ಪೀಟರ್ಸ್‌ಬರ್ಗ್‌(ಎಎಫ್‌ಪಿ): ಕ್ರಿಸ್ಟಿಯಾನೊ ರೊನಾಲ್ಡೊ ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿ ಯೂರೊ ಕಪ್‌ನಲ್ಲಿ ಅತ್ಯಧಿಕ (11) ಗೋಲು ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು.

ಅವರ ಅಮೋಘ ಸಾಧನೆಯ ಬಲದಿಂದ ಹಾಲಿ ಚಾಂಪಿಯನ್ ಪೋರ್ಚುಗಲ್‌ ತನ್ನ ಮೊದಲ ಪಂದ್ಯದಲ್ಲಿ 3–0 ಅಂತರದಲ್ಲಿ ಹಂಗರಿ ವಿರುದ್ಧ ಜಯ ಗಳಿಸಿತು.

ಮಂಗಳವಾರ ರಾತ್ರಿ ನಡೆದ ಪಂದ್ಯದ 84ನೇ ನಿಮಿಷದಲ್ಲಿ ರಫೆಲ್ ಗುರೇರೊ ಮೊದಲ ಗೋಲು ಗಳಿಸಿದರು. 87ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿಸಿದ ರೊನಾಲ್ಡೊ ಇಂಜುರಿ ಅವಧಿಯಲ್ಲಿ ಮತ್ತೊಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು.

ಸ್ಲೊವಾಕಿಯಾ ಶುಭಾರಂಭ

ಇಂಟರ್ ಮಿಲಾನ್ ತಂಡದ ಡಿಫೆಂಡರ್ ಮಿಲಾನ್ ಕ್ರಿನಿಯಾರ್ ಅವರ ಅಮೋಘ ಆಟದ ಬಲದಿಂದ ಸ್ಲೊವಾಕಿಯಾ ತಂಡ ಶುಭಾರಂಭ ಮಾಡಿತು. ಸೋಮವಾರ ತಡರಾತ್ರಿ ನಡೆದ ‘ಇ’ ಗುಂಪಿನ ಪಂದ್ಯದಲ್ಲಿ ಸ್ಲೊವಾಕಿಯಾ 2–1ರಲ್ಲಿ ಪೋಲೆಂಡ್ ವಿರುದ್ಧ ಜಯ ಸಾಧಿಸಿತು.

ಕ್ರಿಸ್ಟೊವ್‌ಸ್ಕಿ ಕ್ರೀಡಾಂಗಣದಲ್ಲಿ ಎದುರಾಳಿ ತಂಡದ ಒಸೀಚ್ ಸೆಜೆನಿ ಅವರ ಉಡುಗೊರೆ ಗೋಲಿನಿಂದ 18ನೇ ನಿಮಿಷದಲ್ಲಿ ಸ್ಲೊವಾಕಿಯಾ ಮುನ್ನಡೆ ಸಾಧಿಸಿತು. 46ನೇ ನಿಮಿಷದಲ್ಲಿ ಕರೋಲ್ ಲಿನೆಟಿ ಚೆಂಡನ್ನು ಗುರಿ ಮುಟ್ಟಿಸಿ ಪೋಲೆಂಡ್‌ಗೆ ಸಮಬಲ ತಂದುಕೊಟ್ಟರು.

ಒಂದು ತಾಸಿನ ಆಟ ಮುಗಿದಾಗ ಪೋಲೆಂಡ್‌ಗೆ ಆಘಾತ ಕಾದಿತ್ತು. ಮಿಡ್‌ಫೀಲ್ಡರ್ ಗ್ರೆಗಾರ್ ಕ್ರಿಚೊವಿಯಾಕ್ ರೆಡ್ ಕಾರ್ಡ್ ಪಡೆದು ಹೊರನಡೆದರು. ಇದರ ಲಾಭ ಪಡೆದು ಸ್ಲೊವಾಕಿಯಾ ಆಕ್ರಮಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿತು. ಮಿಲಾನ್ ಕ್ರಿನಿಯಾರ್ 69ನೇ ನಿಮಿಷದಲ್ಲಿ ಮೋಹಕ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ‌

ಐದು ವರ್ಷಗಳ ಹಿಂದೆ ಯುರೋಪಿಯನ್ ಚಾಂಪಿಯನ್‌ಷಿಪ್‌ಗೆ ಪದಾರ್ಪಣೆ ಮಾಡಿದ ಸ್ಲೊವಾಕಿಯಾ ಆ ವರ್ಷ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.

ಗ್ಲಾಸ್ಗೊದ ಎಸ್ಟಡಿಯೊ ಲಾ ಕಾರ್ಟುಜಾ ಕ್ರೀಡಾಂಗಣದಲ್ಲಿ ನಡೆದ ‘ಇ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಸ್ಪೇನ್ ಮತ್ತು ಸ್ವೀಡನ್ ಗೋಲುರಹಿತ ಡ್ರಾ ಸಾಧಿಸಿತು. ಸ್ಪೇನ್‌ ದಾಖಲೆಯ ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟು ಟೂರ್ನಿಯಲ್ಲಿ ಕಣಕ್ಕೆ ಇಳಿದಿದೆ.

ಕೋವಿಡ್‌ನಿಂದಾಗಿ ಪ್ರತ್ಯೇಕವಾಸದಲ್ಲಿರುವ ಸರ್ಜಿಯೊ ಬಸ್ಕೀಟ್ಸ್‌ ಅನುಪಸ್ಥಿತಿಯಲ್ಲಿ ಜೋರ್ಡಿ ಆಲ್ಬ ನೇತೃತ್ವದಲ್ಲಿ ಆಡಿದ ಸ್ಪೇನ್‌ ಉತ್ತಮ ಆಕ್ರಮಣಕಾರಿ ಆಟವಾಡಿತು. ಚೆಂಡಿನ ಮೇಲೆ ಹೆಚ್ಚು ಕಾಲ ಹಿಡಿತ ಸಾಧಿಸುವಲ್ಲಿಯೂ ಯಶಸ್ವಿಯಾಯಿತು. ಆದರೆ ಜಯ ಆ ತಂಡಕ್ಕೆ ದಕ್ಕಲಿಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT