ಶುಕ್ರವಾರ, ಜನವರಿ 27, 2023
27 °C
ವಿಜಯ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ

ಸಾಗರ: ಕ್ರಿಕೆಟ್ ಪಂದ್ಯಾವಳಿ ರಾಜ್ಯ ತಂಡಕ್ಕೆ ಸಾಗರದ ರಯಾನ್

ಎಂ.ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಾಗರ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯೋಜಿಸುವ 16 ವರ್ಷದೊಳಗಿನ ಬಾಲಕರ ವಿಜಯ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಕರ್ನಾಟಕ ತಂಡಕ್ಕೆ ಇಲ್ಲಿನ ಯುವ ಕ್ರಿಕೆಟಿಗ ಮಹಮದ್ ಇಬ್ರಾಹಿಂ ರಯಾನ್ ಆಯ್ಕೆಯಾಗಿದ್ದಾರೆ.

ಇಲ್ಲಿನ ನಗರಸಭೆ ಸದಸ್ಯ ಟಿಪ್ ಟಾಪ್ ಬಶೀರ್, ಶಹನಾಜ್ ದಂಪತಿ ಪುತ್ರನಾಗಿರುವ ರಯಾನ್ ಶಿವಮೊಗ್ಗ ವಲಯ ಕಿರಿಯರ ಕ್ರಿಕೆಟ್ ಹಾಗೂ ಆಯ್ಕೆ ಪಂದ್ಯಗಳಲ್ಲಿ ಮಾಡಿದ ಉತ್ತಮ ಸಾಧನೆಯ ಕಾರಣ ರಾಜ್ಯ ತಂಡದಲ್ಲಿ ಸ್ಥಾನ ಲಭಿಸಿದೆ.

ಮಧ್ಯಮ ವೇಗದ ಬೌಲರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ರಯಾನ್ 16 ವರ್ಷದೊಳಗಿನ ಶಿವಮೊಗ್ಗ ವಲಯ ಕ್ರಿಕೆಟ್ ಪಂದ್ಯಾವಳಿಯ ನಾಲ್ಕು ಪಂದ್ಯಗಳಲ್ಲಿ 15 ವಿಕೆಟ್ ಗಳಿಸಿ ಈ ವರ್ಷ ಗಮನ ಸೆಳೆದಿದ್ದರು. ಇದರ ಆಧಾರದ ಮೇಲೆ ರಾಜ್ಯದ ಸಂಭವನೀಯ ಆಟಗಾರರ ಪಟ್ಟಿಗೆ ಸೇರಿದ್ದರು.

ನಂತರ ನಡೆದ ಆಯ್ಕೆ ಪ್ರಕ್ರಿಯೆಯ ಪಂದ್ಯಾವಳಿಯ ಮೂರು ಪಂದ್ಯಗಳಲ್ಲಿ 10 ವಿಕೆಟ್ ಪಡೆದು ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸುವ ಮೂಲಕ ರಯಾನ್ ರಾಜ್ಯ ತಂಡಕ್ಕೆ ಕಾಲಿಟ್ಟಿದ್ದಾರೆ. ಗಂಟೆಗೆ 130 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ರಯಾನ್ ಹೊಂದಿರುವುದು ವಿಶೇಷವಾಗಿದೆ.

ಆರಂಭದಲ್ಲಿ ಇಲ್ಲಿನ ಸಾಗರ್ ಸ್ಪೋರ್ಟ್ಸ್ ಅಕಾಡೆಮಿಯ ರವಿ ನಾಯ್ಡು ಅವರ ಬಳಿ ತರಬೇತಿ ಪಡೆದ ರಯಾನ್ ನಂತರ ಬೆಂಗಳೂರಿನ ಕ್ರಿಕೆಟ್ ಕೋಚ್ ವಿನೋದ್ ಅವರ ಬಳಿ ಕ್ರಿಕೆಟ್ ನ ಪಾಠಗಳನ್ನು ಹೇಳಿಸಿಕೊಂಡಿದ್ದರು. ತದನಂತರ ಬೆಂಗಳೂರಿನ ಇರ್ಫಾನ್ ಶೇಟ್ ನೇತೃತ್ವದ ಕೆವೈಒಸಿ ತರಬೇತಿ ಕೇಂದ್ರವನ್ನು ರಯಾನ್ ಸೇರಿದ್ದು ಅವರ ಪ್ರತಿಭೆ ಬೆಳೆಯಲು ಸಹಕಾರಿಯಾಯಿತು.

ಈಗ ರಾಜ್ಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಕ್ರಿಕೆಟ್ ನಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿನ ಪ್ರತಿಭೆಗಳಿಗೆ ಮಾತ್ರ ದೊಡ್ಡಮಟ್ಟದಲ್ಲಿ ಆಡುವ ಅವಕಾಶ ಸಿಗುತ್ತದೆ ಎನ್ನುವ ಮಾತನ್ನು ರಯಾನ್ ಸುಳ್ಳು ಮಾಡಿದ್ದಾರೆ. ಇಲ್ಲಿನ ಕ್ರಿಕೆಟ್ ಕ್ಲಬ್ ಆಫ್ ಸಾಗರ್, ಯುವರಂಗ ಕ್ರಿಕೆಟ್ ಕ್ಲಬ್ ರಯಾನ್ ಅವರ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದೆ.

ಕಳೆದ ವರ್ಷ 19 ವರ್ಷದೊಳಗಿನ ರಾಜ್ಯ ಕ್ರಿಕೆಟ್ ತಂಡಕ್ಕೆ ಇಲ್ಲಿನ ಮಿಥೇಶ್ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದರು. ಇತ್ತೀಚೆಗೆ ಇಲ್ಲಿನ ಕ್ರಿಕೆಟ್ ಕ್ಲಬ್ ಆಫ್ ಸಾಗರ್‌ನ ಯುವ ಕ್ರಿಕೆಟಿಗ ತನ್ಮಯ್ ಮಂಜುನಾಥ್ 16 ವರ್ಷದೊಳಗಿನವರ ಲೀಗ್ ಕ್ರಿಕೆಟ್‌ನಲ್ಲಿ 165 ಎಸೆತಗಳಲ್ಲಿ 407 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಹೀಗೆ ಇಲ್ಲಿನ ಯುವ ಕ್ರಿಕೆಟ್ ಪ್ರತಿಭೆಗಳು ಉನ್ನತ ಮಟ್ಟದಲ್ಲಿ ಮಿಂಚುವ ಮೂಲಕ ಭರವಸೆ ಮೂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು