ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನಿ ಕಪ್‌: ಭಾರತ ಇತರೆ ತಂಡದಲ್ಲಿ ಪಡಿಕ್ಕಲ್, ಪ್ರಸಿದ್ಧ

Published : 24 ಸೆಪ್ಟೆಂಬರ್ 2024, 16:09 IST
Last Updated : 24 ಸೆಪ್ಟೆಂಬರ್ 2024, 16:09 IST
ಫಾಲೋ ಮಾಡಿ
Comments

ನವದೆಹಲಿ: ಮಧ್ಯಮ ಕ್ರಮಾಂಕದ ಆಟಗಾರ ಸರ್ಫರಾಜ್ ಖಾನ್, ವಿಕೆಟ್ ಕೀಪರ್‌ ಧ್ರುವ್ ಜುರೇಲ್ ಮತ್ತು ವೇಗಿ ಯಶ್ ದಯಾಳ್ ಅವರನ್ನು, ಇರಾನಿ ಕಪ್‌ ಪಂದ್ಯಕ್ಕಾಗಿ ಭಾರತ ತಂಡದಿಂದ ಮುಕ್ತಗೊಳಿಸುವ ಸಾಧ್ಯತೆಯಿದೆ. ಇದೇ 27 ರಿಂದ ಕಾನ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ಆರಂಭವಾಗುವ ಎರಡನೇ ಟೆಸ್ಟ್‌ ಪಂದ್ಯ ಆಡುವ ತಂಡಕ್ಕೆ ಆಯ್ಕೆಯಾಗದಿದ್ದಲ್ಲಿ ಈ ಮೂವರು ಇರಾನಿ ಕಪ್ ಆಡಲಿದ್ದಾರೆ.

ಇರಾನಿ ಕಪ್‌ಗೆ 15 ಆಟಗಾರರ ಭಾರತ ಇತರರ ತಂಡವನ್ನು ಮಂಗಳವಾರ ಆಯ್ಕೆ ಮಾಡಲಾಗಿದ್ದು, ಕರ್ನಾಟಕದ ಆರಂಭ ಆಟಗಾರ ದೇವದತ್ತ ಪಡಿಕ್ಕಲ್ ಮತ್ತು ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರು ಸ್ಥಾನ ಪಡೆದಿದ್ದಾರೆ.

ಲಖನೌದಲ್ಲಿ ಅಕ್ಟೋಬರ್‌ 1 ರಿಂದ 5ರವರೆಗೆ ನಡೆಯುವ ಇರಾನಿ ಟ್ರೋಫಿ ಪಂದ್ಯದಲ್ಲಿ ರಣಜಿ ಚಾಂಪಿಯನ್ ಮುಂಬೈ ತಂಡವನ್ನು ಭಾರತ ಇತರರ ತಂಡ ಎದುರಿಸಲಿದೆ.

‘ಭಾರತ ಇತರರ ತಂಡಕ್ಕೆ ಧ್ರುವ್, ಯಶ್‌ ದಯಾಳ್ ಅವರನ್ನು ಆಯ್ಕೆ ಮಾಡಲಾಗಿದೆ. ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್‌ ಆಡದಿದ್ದಲ್ಲಿ ಮಾತ್ರ ಇವರಿಬ್ಬರು ಇರಾನಿ ಕಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ.‌

ರಿಷಭ್ ಪಂತ್ ಅವರೇನಾದರೂ ಗಾಯಾಳಾಗಿ ಆಡಲಾಗದಿದ್ದಲ್ಲಿ ಕೆ.ಎಲ್‌.ರಾಹುಲ್ ಅವರ ಸ್ಥಾನದಲ್ಲಿ ಕೀಪಿಂಗ್ ಮಾಡಲಿದ್ದಾರೆ.

ಭಾರತ ತಂಡದಲ್ಲಿರುವ ಬ್ಯಾಟರ್‌ ಸರ್ಫರಾಜ್‌ ಖಾನ್‌ ಅವರು ತವರು ಮುಂಬೈ ತಂಡಕ್ಕೆ ಆಡಲಿದ್ದಾರೆ. ಮುಂಬೈ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.

ಅಕ್ಟೋಬರ್‌ 6ರಂದು ಗ್ವಾಲಿಯರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟಿ20 ಪಂದ್ಯಕ್ಕೆ 3ರಂದು ವರದಿ ಮಾಡಿಕೊಳ್ಳಬೇಕಾಗಿರುವ ಕಾರಣ ಭಾರತ ಟಿ20 ತಂಡದ ಬ್ಯಾಟರ್‌ ಸೂರ್ಯಕುಮಾರ್ ಯಾದವ್‌ ಮತ್ತು ಆಲ್‌ರೌಂಡರ್‌ ಶಿವಂ ದುಬೆ ಅವರು ಮುಂಬೈ ತಂಡಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ.

ಭಾರತ ಇತರೆ ತಂಡ:

ಋತುರಾಜ್ ಗಾಯಕವಾಡ (ನಾಯಕ), ಅಭಿಮನ್ಯು ಈಶ್ವರನ್ (ಉಪ ನಾಯಕ), ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್, ಧ್ರುವ್ ಜುರೇಲ್‌ (ವಿಕೆಟ್ ಕೀಪರ್‌), ಇಶಾನ್ ಕಿಶನ್ (ವಿಕೆಟ್‌ ಕೀಪರ್‌), ಮಾನವ ಸುತಾರ್‌, ಸಾರಾಂಶ್ ಜೈನ್, ಪ್ರಸಿದ್ಧ ಕೃಷ್ಣ, ಮುಖೇಶ್ ಕುಮಾರ್‌, ಯಶ್‌ ದಯಾಳ್, ರಿಕಿ ಭುಯಿ, ಶಾಶ್ವತ್‌ ರಾವತ್‌, ಖಲೀಲ್‌ ಅಹ್ಮದ್ ಮತ್ತು ರಾಹುಲ್ ಚಾಹರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT