ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನಿ ಕಪ್‌: ದ್ವಿಶತಕ ಬಾರಿಸಿದ ಸರ್ಫರಾಜ್‌ ವಿಶಿಷ್ಟ ಸಾಧನೆ

Published : 2 ಅಕ್ಟೋಬರ್ 2024, 12:39 IST
Last Updated : 2 ಅಕ್ಟೋಬರ್ 2024, 12:39 IST
ಫಾಲೋ ಮಾಡಿ
Comments

ಲಖನೌ: ಬ್ಯಾಟರ್ ಸರ್ಫರಾಜ್ ಖಾನ್ ದಿನದಿಂದ ದಿನಕ್ಕೆ ಬಲಾಢ್ಯವಾಗಿ ಬೆಳೆಯುತ್ತಿದ್ದಾರೆ.  ತಮಗೆ ಲಭಿಸಿದ ಅವಕಾಶಗಳಲ್ಲಿ ರನ್‌ ಹೊಳೆ  ಹರಿಸುತ್ತಿದ್ದಾರೆ. ಇದೀಗ ಇರಾನಿ ಟ್ರೋಫಿ ಪಂದ್ಯದಲ್ಲಿಯೂ ಅಬ್ಬರಿಸಿದ್ದಾರೆ.

ಏಕನಾ ಕ್ರೀಡಾಂಗಣದಲ್ಲಿ ಇತರೆ ಭಾರತ ತಂಡದ ಎದುರು ಮುಂಬೈ ತಂಡದ ಸರ್ಫರಾಜ್ ಭರ್ಜರಿ ದ್ವಿಶತಕ (ಬ್ಯಾಟಿಂಗ್ 221, 276ಎ, 4X25, 6X4) ದಾಖಲಿಸಿದರು. ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ ಮತ್ತು ತನುಷ್ ಕೋಟ್ಯಾನ್ ಅವರು ಅರ್ಧಶತಕ ಗಳಿಸಿದರು.

ಇದರಿಂದಾಗಿ ಮುಂಬೈ ತಂಡವು ಮೊದಲ ಇನಿಂಗ್ಸ್‌ನಲ್ಲಿ 138 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 536 ರನ್ ಗಳಿಸಿತು. 

ಇತರೆ ಭಾರತ ತಂಡದ ವೇಗಿ ಮುಕೇಶ್ ಕುಮಾರ್ 4 ವಿಕೆಟ್ ಕಬಳಿಸಿದರು. ಯಶ್ ದಯಾಳ್, ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ತಲಾ ಎರಡು ವಿಕೆಟ್ ಗಳಿಸಿದರು. ಆದರೆ ಸರ್ಫರಾಜ್ ಅವರ ಅಬ್ಬರಕ್ಕೆ ತಡೆಯೊಡ್ಡಲು ಅವರಿಗೆ ಸಾಧ್ಯವಾಗಲಿಲ್ಲ. ಇರಾನಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ ಮುಂಬೈ ತಂಡದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸರ್ಫರಾಜ್ ಪಾತ್ರರಾದರು. 

ಈ ಹಿಂದೆ ಮುಂಬೈ ಮೂಲದವರೇ ಆದ ವಾಸೀಂ ಜಾಫರ್ (ವಿದರ್ಭ ತಂಡ), ರವಿಶಾಸ್ತ್ರಿ, ಪ್ರವೀಣ ಆಮ್ರೆ ಮತ್ತು ಯಶಸ್ವಿ ಜೈಸ್ವಾಲ್ (ಮೂವರು ಇತರೆ ಭಾರತ ತಂಡ) ದ್ವಿಶತಕ ದಾಖಲಿಸಿದ್ದರು. ಆದರೆ ಬೇರೆ ತಂಡಗಳನ್ನು ಪ್ರತಿನಿಧಿಸಿದ್ದಾಗ ಈ ಸಾಧನೆ ಮಾಡಿದ್ದರು. 

ಸರ್ಫರಾಜ್ ಅವರಿಗೆ ಈ ವಾರವು ಅತ್ಯಂತ ಸವಾಲಿನದ್ದಾಗಿತ್ತು. ಅವರ ತಮ್ಮ ಮುಷೀರ್ ಖಾನ್  ಮತ್ತು ತಂದೆ ನೌಷಾದ್ ಅವರು ಈಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು.  ಮುಷೀರ್ ಅವರು ಈ ಪಂದ್ಯದಲ್ಲಿ ಆಡಬೇಕಿತ್ತು. ಆದರೆ ಗಾಯದಿಂದಾಗಿ ಅವರು 16 ವಾರಗಳ ವಿಶ್ರಾಂತಿ ಪಡೆಯಬೇಕಿದೆ. ಇದರಿಂದಾಗಿ ರಣಜಿ ಟೂರ್ನಿಯ ಪಂದ್ಯಗಳನ್ನು ಅವರು ತಪ್ಪಿಸಿಕೊಳ್ಳಲಿದ್ದಾರೆ. 

ಆದರೆ ಸರ್ಫರಾಜ್ ಈ ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಏಕಾಗ್ರತೆಯಿಂದ ಆಡಿದರು. ಅವರು ಎದುರಿಸಿದ ಒಟ್ಟು ಎಸೆತಗಳ ಪೈಕಿ 160 ಡಾಟ್‌ಬಾಲ್ ಆಗಿದ್ದವು. 80ರ ಸ್ಟ್ರೈಕ್‌ರೇಟ್ ಕೂಡ ನಿರ್ವಹಿಸಿದ್ದು ಅವರ ಬ್ಯಾಟಿಂಗ್ ಕೌಶಲಕ್ಕೆ ಸಾಕ್ಷಿ. 

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಮುಂಬೈ: 138 ಓವರ್‌ಗಳಲ್ಲಿ 9ಕ್ಕೆ536 (ಅಜಿಂಕ್ಯ ರಹಾನೆ 97, ಶ್ರೇಯಸ್ ಅಯ್ಯರ್ 57, ಸರ್ಫರಾಜ್ ಖಾನ್ ಬ್ಯಾಟಿಂಗ್ 221, ತನುಷ್ ಕೋಟ್ಯಾನ್ 64, ಶಾರ್ದೂಲ್ ಠಾಕೂರ್ 36, ಮುಕೇಶ್ ಕುಮಾರ್ 109ಕ್ಕೆ4, ಯಶ್ ದಯಾಳ್ 89ಕ್ಕೆ2, ಪ್ರಸಿದ್ಧಕೃಷ್ಣ 102ಕ್ಕೆ2) ವಿರುದ್ಧ ಇತರೆ ಭಾರತ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT