ಮಂಗಳವಾರ, ಜೂನ್ 15, 2021
27 °C

ಸೆಪ್ಟೆಂಬರ್‌ 19ರಂದು ನಿಮ್ಮನ್ನು ಕಾಣುವೆ: ಧೋನಿಗೆ ರೋಹಿತ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ರೋಹಿತ್‌ ಶರ್ಮಾ ಅವರು ಶ್ರೇಷ್ಠ ಆರಂಭಿಕರಲ್ಲಿ ಒಬ್ಬರಾಗಲು ಮಹೇಂದ್ರಸಿಂಗ್ ಧೋನಿ ಅವರ ದೂರದೃಷ್ಟಿಯೇ ಕಾರಣವಾಯಿತು. ‘ಭಾರತೀಯ ಕ್ರಿಕೆಟ್‌ ಇತಿಹಾಸದ ಅತ್ಯಂತ ಪ‍್ರಭಾವಿ ವ್ಯಕ್ತಿಗಳಲ್ಲಿ ಧೋನಿ ಒಬ್ಬರು‘ ಎಂದು ಹೇಳುವ ಮೂಲಕ ರೋಹಿತ್‌ ಅವರು ಭಾನುವಾರ ರಾಂಚಿಯ ಬ್ಯಾಟ್ಸ್‌ಮನ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

2013ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ರೋಹಿತ್‌ ಅವರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಿದ ಧೋನಿ ಅವರ ನಿರ್ಧಾರವು ರೋಹಿತ್‌ ವೃತ್ತಿಜೀವನದಲ್ಲಿ ಮಹತ್ವದ ತಿರುವಿಗೆ ಕಾರಣವಾಯಿತು.

‘ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಧೋನಿ ಕೂಡ ಒಬ್ಬರು. ಕ್ರಿಕೆಟ್‌ ಕ್ಷೇತ್ರವನ್ನೂ ಮೀರಿ ಅವರ ಪ್ರಭಾವ ಇತ್ತು. ತಂಡವೊಂದನ್ನು ಕಟ್ಟುವಲ್ಲಿ ಅವರು ಪ್ರಾವೀಣ್ಯತೆ ಸಾಧಿಸಿದ್ದರು‘ ಎಂದು ರೋಹಿತ್‌ ಟ್ವೀಟ್‌ ಮಾಡಿದ್ದಾರೆ.

ಧೋನಿ ಅವರು ಶನಿವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 

‘ನೀಲಿಬಣ್ಣದ ಜೆರ್ಸಿಯಲ್ಲಿ ಖಂಡಿತ ಅವರ ಅನುಪಸ್ಥಿತಿ ಕಾಡಲಿದೆ. ಆದರೆ ಹಳದಿ ಜೆರ್ಸಿಯಲ್ಲಿ ನಮ್ಮೊಂದಿಗೆ ಇರುತ್ತಾರೆ. ಸೆಪ್ಟೆಂಬರ್ 19ರ ದಿನ ಪಂದ್ಯದ ಟಾಸ್‌ ವೇಳೆ ನಿಮ್ಮನ್ನು ಕಾಣುವೆ‘ ಎಂದು ರೋಹಿತ್ ಹೇಳಿದ್ದಾರೆ. ಯುಎಇಯಲ್ಲಿ ನಡೆಯಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಮೊದಲ ದಿನ ಮುಂಬೈ ಇಂಡಿಯನ್ಸ್ (ರೋಹಿತ್‌ ನಾಯಕತ್ವ)‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (ಧೋನಿ ನಾಯಕತ್ವ) ತಂಡಗಳು ಮುಖಾಮುಖಿಯಾಗಲಿವೆ. ಇದನ್ನು ಉಲ್ಲೇಖಿಸಿ ರೋಹಿತ್‌ ಈ ಮಾತು ಹೇಳಿದ್ದಾರೆ. ಆದರೆ ಐಪಿಎಲ್‌ನ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ (ಮುಂಬೈ ಇಂಡಿಯನ್ಸ್‌)‌ ಹಾಗೂ ರನ್ನರ್‌ ಅಪ್ (ಚೆನ್ನೈ)‌ ತಂಡಗಳು ಕಣಕ್ಕಿಳಿಯುವುದು ವಾಡಿಕೆ.

ವಿಶ್ವಕಪ್‌ ವಿಜೇತ ನಾಯಕ ಧೋನಿ ಅವರು ಇನ್ನೆರಡು ವರ್ಷ ಐಪಿಎಲ್‌ನಲ್ಲಿ ಆಡಲಿದ್ದಾರೆ ಎಂಬುದು ಖುಷಿಯ ವಿಚಾರ ಎಂದೂ ರೋಹಿತ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು