ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ಗೆ ‘ಬಾಬಾ ಸೆಹ್ವಾಗ್’ ಆಶೀರ್ವಾದ; ಕಾಲೆಳೆದ ನೆಟ್ಟಿಗರು

Last Updated 5 ಅಕ್ಟೋಬರ್ 2020, 16:49 IST
ಅಕ್ಷರ ಗಾತ್ರ

ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ವಿಶ್ವದ ಬೌಲರ್‌ಗಳಿಗೆಲ್ಲ ದುಸ್ವಪ್ನವಾಗಿ ಕಾಡುತ್ತಿದ್ದ ವೀರೇಂದ್ರ ಸೆಹ್ವಾಗ್ ಈಗ ‘ಸಾಧು’ವಾಗಿದ್ದಾರೆಯೇ...?

ಅವರ ಟ್ವಿಟರ್ ಖಾತೆಯಲ್ಲಿರುವ ಚಿತ್ರವನ್ನು ನೋಡಿದರೆ ಇಂಥ ಪ್ರಶ್ನೆ ಏಳುವುದು ಸಹಜ. ಚಿತ್ರದಲ್ಲಿ ಮಾತ್ರವಲ್ಲ, ವರ್ತನೆಯಲ್ಲೂ ಕೆಲವೊಮ್ಮೆ ‘ಸ್ವಾಮೀಜಿ’ ಆಗಿ ಅವರು ಗಮನ ಸೆಳೆದಿದ್ದಾರೆ. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೇ ಆಶೀರ್ವಾದ ಮಾಡುವಷ್ಟು ಪ್ರಬಲರಾಗಿ ಬೆಳೆದಿದ್ದಾರೆ!

ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುವ ಟ್ರಂಪ್ ಬೇಗನೇ ಗುಣಮುಖರಾಗಲಿ ಎಂದು ಬಯಸಿ ಸೆಹ್ವಾಗ್ ಮಾಡಿರುವ ಟ್ವೀಟ್ ವೈರಲ್ ಆಗಿದ್ದು ಐದೂವರೆ ಸಾವಿರ ಮಂದಿ ರಿಟ್ವೀಟ್ ಮಾಡಿದ್ದಾರೆ. 97 ಸಾವಿರ ಲೈಕ್‌ಗಳು ಬಂದಿದ್ದು 508 ಮಂದಿ ಕಮೆಂಟ್ ಮಾಡಿದ್ದಾರೆ. ಕೆಲವರು ಸೆಹ್ವಾಗ್ ಅವರ ಕ್ರಿಕೆಟ್ ಜೀವನ ಮತ್ತು ನಿವೃತ್ತಿ ನಂತರದ ಜೀವನವನ್ನು ಉಲ್ಲೇಖಿಸಿ ಕಾಲೆಳೆದಿದ್ದಾರೆ.

ಕೈಯಲ್ಲೂ ಕೊರಳಲ್ಲೂ ರುದ್ರಾಕ್ಷಿ ಮಾಲೆ ಧಿರಿಸಿ ಸನ್ಯಾಸಿಯಂತೆ ವೇಷ ತೊಟ್ಟಿರುವ ಸೆಹ್ವಾಗ್ ’ಟ್ರಂಪ್‌ ಕೋ ಕೋವಿಡ್‌ ಸೆ ನಿಪಟ್ನೆ ಕೇಲಿಯೆ ಬಾಬಾ ಸೆಹ್ವಾಗ್‌ ಕಾ ಆಶೀರ್ವಾದ್‌...ಗೋ ಕೊರೊನಾ ಗೋ ಕೊರೊನಾ ಗೋ (ಕೊರೊನಾದಿಂದ ಟ್ರಂಪ್ ಅವರು ಮುಕ್ತರಾಗಲು ಬಾಬಾ ಸೆಹ್ವಾಗ್‌ನ ಆಶೀರ್ವಾದ. ಕೊರೊನಾವೇ ತೊಲಗು)’ ಎಂದು ಟ್ವೀಟ್ ಮಾಡಿದ್ದಾರೆ.

’ನೀವು ಅಂಗಣದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಅತ್ಯುತ್ತಮ ಬ್ಯಾಟ್ಸ್‌ಮನ್’ ಎಂದು ಒಬ್ಬರು ಉತ್ತರಿಸಿದ್ದರೆ, ‘ಈ ಹಿಂದೆ ಬ್ಯಾಟ್‌ ಮೂಲಕ ಆಶೀರ್ವಾದ ಮಾಡುತ್ತಿದ್ದಿರಿ, ಈಗ ಬಾಬಾನ ರೂಪದಲ್ಲಿ ಆಶೀರ್ವಾದ ಸಿಗುತ್ತಿದೆ’ ಎಂದು ಮತ್ತೊಬ್ಬರು ಹೇಳಿದ್ದಾರೆ. ಸೆಹ್ವಾಗ್ ಹಾಕಿರುವ ಚಿತ್ರದಲ್ಲಿರುವ ಟಿವಿ ಪರದೆಯಲ್ಲಿ ಅವರು ಶತಕ ಗಳಿಸಿದ್ದಾಗ ಸಂಭ್ರಮಿಸಿದ್ದ ಚಿತ್ರ ಕಾಣುತ್ತಿದೆ. ಅದನ್ನು ಉಲ್ಲೇಖಿಸಿರುವ ಒಬ್ಬರು ‘ನೀವು ಈಗಲೂ ಒಳ್ಳೆಯ ಮನರಂಜನೆಯನ್ನು ನೀಡುತ್ತಿದ್ದೀರಿ’ ಎಂದಿದ್ದಾರೆ.

ಕೆಲವರು ಸೆಹ್ವಾಗ್ ಅವರನ್ನು ಟೀಕಿಸಿದ್ದಾರೆ. ‘ನೀವು ಹಾಸ್ಯದ ಶಾಟ್ ಕೂಡ ಹೊಡೆಯಬಲ್ಲಿರಿ ಎಂದು ಈಗ ಗೊತ್ತಾಯಿತು’ ಎಂದು ಒಬ್ಬರು ವ್ಯಂಗ್ಯ ಮಾಡಿದ್ದು ಮತ್ತೊಬ್ಬರು ‘ಹೇ ಜೋಕರ್‌, ತಮಾಷೆ ಮಾಡಬೇಡ. ಮುಂದೊಂದು ದಿನ ನಿನಗೂ ಇದು ಬರಲಾರದು ಎಂದು ಹೇಳುವುದು ಹೇಗೆ‘ ಎಂದು ಪ್ರಶ್ನಿಸಿದ್ದಾರೆ. ಅತ್ಯಾಚಾರದಂಥ ಸಮಸ್ಯೆಯಿಂದ ದೇಶ ಬೇಯು‌ತ್ತಿದ್ದರೆ, ಇವರು ಹೀಗೆ ತಮಾಷೆ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂಬ ಧ್ವನಿಯಲ್ಲಿ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT