ಶುಕ್ರವಾರ, ಸೆಪ್ಟೆಂಬರ್ 24, 2021
24 °C

IPL 2021| ನಲ್ವತ್ತರ ತಾಕತ್ತು: ಐಪಿಎಲ್ ಗಮ್ಮತ್ತು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇವರು ಸಾಧಿಸುವುದೆಲ್ಲವನ್ನೂ ಸಾಧಿಸಿಯಾಗಿದೆ. ರಾಷ್ಟ್ರೀಯ ತಂಡಗಳಿಗೆ ಮರಳುವ ಒತ್ತಡವೂ ಇವರಿಗಿಲ್ಲ. ಆದರೂ ವೃತ್ತಿಜೀವನದ ‘ಸಂಧ್ಯಾ ಕಾಲ’ದಲ್ಲಿಯೂ ಮಿಂಚುವ ಹಂಬಲಕ್ಕೆ ಮಾತ್ರ ಕೊರತೆಯಿಲ್ಲ.

40ರ ಹರೆಯದ ಈ ಉತ್ಸಾಹಿಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ತಮ್ಮ ಸಾಮರ್ಥ್ಯ ಪ್ರದರ್ಶನದ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಅದರೊಂದಿಗೆ ಯುವ ಪ್ರತಿಭೆಗಳಿಗೆ ತಮ್ಮ ಅನುಭವ ಧಾರೆಯೆರೆಯುವ ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಅದರಲ್ಲಿ ಮಹೇಂದ್ರಸಿಂಗ್ ಧೋನಿ, ಕ್ರಿಸ್‌ ಗೇಲ್, ಇಮ್ರಾನ್ ತಾಹೀರ್ ಪ್ರಮುಖರು. ಭಾರತ ತಂಡದ ನಾಯಕರಾಗಿ ಧೋನಿ ಎರಡು ವಿಶ್ವಕಪ್, ಒಂದು ಚಾಂಪಿಯನ್ಸ್‌ ಟ್ರೋಫಿ ಮತ್ತು ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದವರು.

ಹೋದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಧೋನಿ ಈ ಸಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಮಾರ್ಗದರ್ಶಕರಾಗಿ ನೇಮಕವಾಗಿದ್ದಾರೆ. ಆದರೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರೂ ಆಗಿರುವ ಧೋನಿಯನ್ನು ಭಾರತ ತಂಡದಲ್ಲಿ ಮೆಂಟರ್ ಆಗಿ ನೇಮಕ ಮಾಡಿರುವುದು ಹಿತಾಸಕ್ತಿ  ಸಂಘರ್ಷ ತಡೆ ನಿಯಮದ ಉಲ್ಲಂಘನೆ ಎಂಬ ದೂರು ಕೂಡ ದಾಖಲಾಗಿದೆ.  ಹೋದ ಸಲದ ಐಪಿಎಲ್‌ನಲ್ಲಿ ಅವರ ತಂಡವು ಪ್ಲೇ ಆಫ್‌ಗೂ ಪ್ರವೇಶಿಸಿರಲಿಲ್ಲ. ಆದರೆ ಈ ಬಾರಿ ಮೊದಲಾರ್ಧದದಲ್ಲಿ ತಂಡವು ಮಿಂಚಿದೆ. ‘ಡ್ಯಾಡಿಸ್‌ ಆರ್ಮಿ’ ಎಂದೇ ಕರೆಸಿಕೊಳ್ಳುವ ಚಿನ್ನೈ ತಂಡವು ಈ ಬಾರಿ ಪ್ರಶಸ್ತಿಯನ್ನು ಮುನ್ನಡೆಯುವುದೇ ಎಂಬ ಕುತೂಹಲ ಗರಿಗೆದರಿದೆ.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ ಮತ್ತು ಐಪಿಎಲ್‌ನಲ್ಲಿ ಶ್ರೇಷ್ಠ ದಾಖಲೆಗಳ ರಾಶಿಯನ್ನೇ ಪೇರಿಸುವ ವಿಂಡೀಸ್ ದೈತ್ಯ ಕ್ರಿಸ್ ಗೇಲ್, ಪಂಜಾಬ್ ತಂಡದಲ್ಲಿ ಮನೋಲ್ಲಾಸ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ದೀಪಕ್ ಹೂಡಾ ಅವರಿಗೆ ತಮ್ಮ ಬ್ಯಾಟಿಂಗ್ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಕೆಟ್‌ ಪಡೆದಾಗ ತಮ್ಮ ವಿಶಿಷ್ಟ ರೀತಿಯ ಸಂಭ್ರಮಾಚರಣೆ ಮಾಡುವ ದಕ್ಷಿಣ ಅಫ್ರಿಕಾದ ಇಮ್ರಾನ್ ತಾಹೀರ್ ಈಗಲೂ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡುತ್ತಾರೆ. ಹರಭಜನ್ ಸಿಂಗ್ ಕೋಲ್ಕತ್ತ ನೈಟ್ ರೈಡರ್ಸ್ ನಲ್ಲಿ ಆಡುತ್ತಿದ್ದಾರೆ. ಈ ಋತುವಿನಲ್ಲಿ ಅವರು ಚೆನ್ನೈ ತಂಡದಿಂದ ಕೋಲ್ಕತ್ತಕ್ಕೆ ಹೋಗಿದ್ದರು. ಅಮಿತ್ ಮಿಶ್ರಾ ಕೂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಪ್ರಮುಖ ಲೆಗ್‌ಸ್ಪಿನ್ನರ್ ಆಗಿದ್ದಾರೆ. ಅಮಿತ್ ಬಿಟ್ಟರೆ ಉಳಿದ ನಾಲ್ವರಿಗೂ ಇದು ಕೊನೆಯ ಐಪಿಎಲ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವರ್ಷವಿಡೀ ಕ್ರಿಕೆಟ್‌ನಿಂದ ದೂರ ಉಳಿದೂ ಐಪಿಎಲ್‌ಗಾಗಿ ತಮ್ಮ ಫಿಟ್‌ನೆಸ್‌ ಕಾದಿಟ್ಟುಕೊಳ್ಳುವುದು ಸಣ್ಣ ಸವಾಲೇನಲ್ಲ. ಅಂತರರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್‌ನಿಂದ ದೂರ ಉಳಿದು ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಸಿದ್ದತೆ ಮಾಡುವ ಇವರೆಲ್ಲರ ತಂತ್ರಗಳು ಯುವ ಆಟಗಾರರಿಗೆ ಮಾದರಿಯಾಗುವುದರಲ್ಲಿ ಸಂದೇಹವಿಲ್ಲ. ಅದೂ ಕೊರೊನಾ ಕಾಲಘಟ್ಟದಲ್ಲಿ ಮನೋದೈಹಿಕ ಫಿಟ್‌ನೆಸ್ ಸಾಧಿಸುವುದು ಎಂತಹವರಿಗೂ ಕಠಿಣ ಸವಾಲು. ಅದನ್ನು ಈ ‘ಅನುಭವಿ‘ ಕ್ರಿಕೆಟಿಗರು ನಿರ್ವಹಿಸುವ ರೀತಿ ಕೂಡ ಪಾಠವಾಗಬಲ್ಲದು.

ಇಮ್ರಾನ್ ತಾಹೀರ್

ಲೆಗ್‌ಸ್ಪಿನ್ನರ್

ತಂಡ: ಚೆನ್ನೈ ಸೂಪರ್ ಕಿಂಗ್ಸ್

ವಯಸ್ಸು: 42

ಪಂದ್ಯ; 59

ವಿಕೆಟ್; 82

ಶ್ರೇಷ್ಠ; 12ಕ್ಕೆ4

––

ಕ್ರಿಸ್ ಗೇಲ್

ಬ್ಯಾಟ್ಸ್‌ಮನ್

ಕಿಂಗ್ಸ್ ಪಂಜಾಬ್

ವಯಸ್ಸು: 41

ಪಂದ್ಯ: 140

ರನ್; 4950

ಶ್ರೇಷ್ಠ; 175

ಶತಕ; 6

ಅರ್ಧಶತಕ; 31

ಸ್ಟ್ರೈಕ್‌ರೇಟ್; 149.46

––

ಹರಭಜನ್ ಸಿಂಗ್

ಆಫ್‌ಸ್ಪಿನ್ನರ್

ಕೋಲ್ಕತ್ತ ನೈಟ್ ರೈಡರ್ಸ್

ವಯಸ್ಸು: 40

ಪಂದ್ಯ; 163

ರನ್;  4030

ವಿಕೆಟ್; 150

ಶ್ರೇಷ್ಠ;18ಕ್ಕೆ5

--

ಮಹೇಂದ್ರಸಿಂಗ್ ಧೋನಿ

ಚೆನ್ನೈ ಸೂಪರ್ ಕಿಂಗ್ಸ್

ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್

ವಯಸ್ಸು; 39

ಪಂದ್ಯ; 211

ರನ್; 4669

ಶ್ರೇಷ್ಠ;  84

ಅರ್ಧಶತಕ; 23

ಸ್ಟ್ರೈಕ್‌ರೇಟ್; 136.64

––

ಅಮಿತ್ ಮಿಶ್ರಾ

ಲೆಗ್‌ಸ್ಪಿನ್ನರ್

ಡೆಲ್ಲಿ ಕ್ಯಾಪಿಟಲ್ಸ್‌

ವಯಸ್ಸು; 38

ಪಂದ್ಯ; 154

ವಿಕೆಟ್; 166

ಶ್ರೇಷ್ಠ; 17ಕ್ಕೆ5

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು