ಸೋಮವಾರ, ಡಿಸೆಂಬರ್ 5, 2022
22 °C
ಕೊನೆಯ ಟಿ20 ಇಂದು: ವಿರಾಟ್‌ ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ

IND vs SA 3rd T20| ರೋಹಿತ್‌ ಬಳಗಕ್ಕೆ ಸರಣಿ ‘ಕ್ಲೀನ್‌ಸ್ವೀಪ್‌’ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಂದೋರ್‌ (ಪಿಟಿಐ): ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಈಗಾಗಲೇ ಕೈವಶ ಮಾಡಿಕೊಂಡಿರುವ ಭಾರತ ತಂಡ, ‘ಕ್ಲೀನ್‌ಸ್ವೀಪ್‌’ ಸಾಧನೆಯ ಗುರಿಯೊಂದಿಗೆ ಮಂಗಳವಾರ ಕಣಕ್ಕಿಳಿಯಲಿದೆ.

ಗುವಾಹಟಿಯಲ್ಲಿ ಭಾನುವಾರ ನಡೆದಿದ್ದ ಪಂದ್ಯವನ್ನು ಭಾರತ 16 ರನ್‌ಗಳಿಂದ ಗೆದ್ದಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ಎದುರು ತವರಿನಲ್ಲಿ ಮೊದಲ ಬಾರಿ ಟಿ20 ಸರಣಿ ಗೆದ್ದ ಸಾಧನೆ ಮಾಡಿತ್ತು.

ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ರೋಹಿತ್‌ ಶರ್ಮ ಬಳಗ ಕೆಲವೊಂದು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಆರಂಭಿಕ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ವಿಶ್ವಕಪ್‌ಗೆ ಮುನ್ನ ಭಾರತ ಆಡಲಿರುವ ಕೊನೆಯ ಟಿ20 ಪಂದ್ಯ ಇದಾಗಿದ್ದು, ಲೋಪಗಳನ್ನು ಸರಿಪಡಿಸಲು ಸಿಗುವ ಅಂತಿಮ ಅವಕಾಶವೂ ಹೌದು. ಕಳೆದ ಪಂದ್ಯದಲ್ಲಿ ಪೂರ್ಣ ವೈಫಲ್ಯ ಅನುಭವಿಸಿದ್ದ ಬೌಲರ್‌ಗಳು ಈ ಪಂದ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.

ಏಷ್ಯಾ ಕಪ್‌ ಬಳಿಕ ಭಾರತ ಐದು ಟಿ20 ಪಂದ್ಯಗಳನ್ನು ಆಡಿದ್ದು, ಎಲ್ಲ ಬ್ಯಾಟ್ಸ್‌ಮನ್‌ಗಳು ತಮ್ಮ ಸಾಮರ್ಥ್ಯ ತೋರಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಅವರು ಬಿರುಸಿನ ಆಟದ ಮೂಲಕ ಇತರ ಬ್ಯಾಟ್ಸ್‌ಮನ್‌ಗಳಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ.

ಕೊಹ್ಲಿಗೆ ವಿಶ್ರಾಂತಿ ನೀಡಿರುವುದರಿಂದ ಅವರ ಜಾಗದಲ್ಲಿ ಶ್ರೇಯಸ್‌ ಅಯ್ಯರ್‌ ಆಡಲಿದ್ದಾರೆ. ರಾಹುಲ್‌ ಜಾಗದಲ್ಲಿ ಸೂರ್ಯಕುಮಾರ್‌ ಅಥವಾ ರಿಷಭ್‌ ಪಂತ್‌ ಅವರು ರೋಹಿತ್‌ ಜತೆ ಇನಿಂಗ್ಸ್‌ ಆರಂಭಿಸಲಿದ್ದಾರೆ.

ಬೌಲರ್‌ಗಳು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ವಿಫಲರಾಗಿರುವುದು ಭಾರತಕ್ಕೆ ಚಿಂತೆ ಉಂಟುಮಾಡಿದೆ. ಜಸ್‌ಪ್ರೀತ್‌ ಬೂಮ್ರಾ ಅವರ ಗೈರು ಈಗಾಗಲೇ ತಂಡವನ್ನು ಬಹುವಾಗಿ ಕಾಡುತ್ತಿದೆ.

ಬೂಮ್ರಾ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್‌ನ ನೇತೃತ್ವ ವಹಿಸಿರುವ ಆರ್ಷದೀಪ್‌ ಸಿಂಗ್‌ ಮೊದಲ ಪಂದ್ಯದಲ್ಲಿ ಪ್ರಭಾವಿ ಎನಿಸಿದ್ದರೂ ಭಾನುವಾರ 4 ಓವರ್‌ಗಳಲ್ಲಿ 62 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಹರ್ಷಲ್‌ ಪಟೇಲ್‌ ಮತ್ತು ಆರ್‌.ಅಶ್ವಿನ್‌ ಕೂಡಾ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ. ಬೂಮ್ರಾ ಬದಲು ತಂಡದಲ್ಲಿ ಸ್ಥಾನ ಪಡೆದಿರುವ ಮೊಹಮ್ಮದ್‌ ಸಿರಾಜ್‌ ಅವರು ಆಡುವ ಸಾಧ್ಯತೆಯಿದೆ.

ದಕ್ಷಿಣ ಆಫ್ರಿಕಾ ತಂಡ ‘ಕ್ಲೀನ್‌ಸ್ವೀಪ್‌’ ಮುಖಭಂಗ ತಪ್ಪಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯ. ಗುವಾಹಟಿಯಲ್ಲಿ ಶತಕ ಗಳಿಸಿದ್ದ ಡೇವಿಡ್‌ ಮಿಲ್ಲರ್‌ ಮತ್ತು ಕ್ವಿಂಟನ್‌ ಡಿಕಾಕ್‌ ಅವರು ಪ್ರವಾಸಿ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ಭಾರತ: ರೋಹಿತ್‌ ಶರ್ಮಾ (ನಾಯಕ), ಸೂರ್ಯಕುಮಾರ್‌ ಯಾದವ್, ರಿಷಭ್ ಪಂತ್‌, ದಿನೇಶ್‌ ಕಾರ್ತಿಕ್, ಆರ್‌.ಅಶ್ವಿನ್‌, ಯಜುವೇಂದ್ರ ಚಾಹಲ್, ಅಕ್ಷರ್‌ ಪಟೇಲ್, ಆರ್ಷದೀಪ್‌ ಸಿಂಗ್, ಹರ್ಷಲ್ ಪಟೇಲ್, ದೀಪಕ್‌ ಚಾಹರ್‌, ಉಮೇಶ್‌ ಯಾದವ್, ಶ್ರೇಯಸ್‌ ಅಯ್ಯರ್‌, ಶಹಬಾಜ್‌ ಅಹ್ಮದ್, ಮೊಹಮ್ಮದ್‌ ಸಿರಾಜ್

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿಕಾಕ್, ಬಿಜಾರ್ನ್ ಫಾರ್ಟ್ಯೂನ್, ರೀಜಾ ಹೆನ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಕೇಶವ ಮಹಾರಾಜ್, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಎನ್ರಿಚ್ ನಾಕಿಯಾ, ವೇಯ್ನ್ ಪಾರ್ನೆಲ್, ಆ್ಯಂಡಿಲ್ ಪಿಶುವಾಯೊ, ಡ್ವೆನ್ ಪ್ರಿಟೊರಿಯಸ್, ಕಗಿಸೊ ರಬಾಡ, ರಿಲಿ ರೊಸೊ, ತಬ್ರೇಜ್ ಶಮ್ಸಿ, ಟ್ರಿಸ್ಟನ್ ಸ್ಟಬ್ಸ್.

ಪಂದ್ಯ ಆರಂಭ: ಸಂಜೆ 7

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು