ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಅಫ್ಗಾನ್ ಅಭಿಮಾನಿಗಳ ದುರ್ವರ್ತನೆಗೆ ಶೋಯಿಬ್ ಅಖ್ತರ್ ಕಿಡಿ

Last Updated 8 ಸೆಪ್ಟೆಂಬರ್ 2022, 10:53 IST
ಅಕ್ಷರ ಗಾತ್ರ

ದುಬೈ: ಶಾರ್ಜಾದಲ್ಲಿ ನಡೆದ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಟಿ–20 ಕ್ರಿಕೆಟ್ ಟೂರ್ನಿಯ ಸೂಪರ್–4 ಹಂತದ ಪಂದ್ಯದ ಬಳಿಕ ಅಫ್ಗಾನ್ ತಂಡದ ಅಭಿಮಾನಿಗಳ ದುರ್ವರ್ತನೆ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿ‌ದ್ದಾರೆ.

ಕ್ರೀಡಾಂಗಣದಲ್ಲಿ ಅಫ್ಗಾನಿಸ್ತಾನದ ಅಭಿಮಾನಿಗಳು ಕುರ್ಚಿಗಳನ್ನು ಮುರಿದು ಅವುಗಳನ್ನು ಪಾಕಿಸ್ತಾನ ಬೆಂಬಲಿಗರ ಕಡೆಗೆ ಎಸೆಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿರುವ ಅವರು, ಅಫ್ಗಾನಿಸ್ತಾನದ ಅಭಿಮಾನಿಗಳು ಏನು ಮಾಡುತ್ತಿದ್ದಾರೆ ನೋಡಿ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಮಾಡಿದ್ದನ್ನೇ ಈಗಲೂ ಮಾಡುತ್ತಿದ್ದಾರೆ. ಇಂದೊಂದು ಕ್ರಿಕೆಟ್ ಪಂದ್ಯ, ಕ್ರೀಡಾಸ್ಫೂರ್ತಿಯಿಂದ ನಡೆದುಕೊಳ್ಳಬೇಕಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಶಫಿಕ್ ಅವರಿಗೆ ಟ್ಯಾಗ್ ಮಾಡಿರುವ ಅವರು, ಈ ಕ್ರೀಡೆಯಲ್ಲಿ ನೀವು ಮತ್ತಷ್ಟು ಬೆಳೆಯಬೇಕೆಂದುಕೊಂಡಿದ್ದರೆ ನಿಮ್ಮ ಅಭಿಮಾನಿಗಳ ಸಮೂಹ ಮತ್ತು ನಿಮ್ಮ ಆಟಗಾರರು ಕೆಲವು ವಿಷಯಗಳನ್ನು ಕಲಿಯಬೇಕಿದೆ ಎಂದು ತಿಳಿ ಹೇಳಿದ್ದಾರೆ.

ಬುಧವಾರ ನಡೆದ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ನಡುವಿನ ಪಂದ್ಯವು ಅತ್ಯಂತ ರೋಚಕತೆಗೆ ಸಾಕ್ಷಿಯಾಯ್ತು. ಅಂತಿಮ ಓವರಿನಲ್ಲಿ ನಸೀಮ್ ಶಾ ಎರಡು ಎಸೆತಗಳಲ್ಲಿ ಸಿಡಿಸಿದ ಎರಡು ಸಿಕ್ಸರ್ ಪಾಕಿಸ್ತಾನಕ್ಕೆ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿತು. ಪಂದ್ಯದ ಬಳಿಕ, ಹತಾಶ ಅಫ್ಗಾನ್ ಅಭಿಮಾನಿಗಳು ಕುರ್ಚಿಗಳನ್ನು ಮುರಿದು, ಪಾಕಿಸ್ತಾನದ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದ್ದರು.

ಅಖ್ತರ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಶಫೀಕ್ ಸ್ಟಾನಿಕ್ಜೈ ಅವರು, ಅಭಿಮಾನಿಗಳ ಭಾವನೆಗಳನ್ನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ. ಅಂತಹ ಘಟನೆಯ ಬಗ್ಗೆ ಮಾತನಾಡುವಾಗ ಇಡೀ ರಾಷ್ಟ್ರವನ್ನು ತರಬಾರದು ಎಂದು ಹೇಳಿದರು.

‘ಜನಸಮೂಹದ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ಅಂತಹ ಘಟನೆಗಳು ಕ್ರಿಕೆಟ್ ಜಗತ್ತಿನಲ್ಲಿ ನಡೆದಿವೆ, ನೀವು ಕಬೀರ್ ಖಾನ್, ಇಂಜಿಮಾಮ್ ಭಾಯ್ ಮತ್ತು ರಶೀದ್ ಲತೀಫ್ ಅವರನ್ನು ಕೇಳಿ, ನಾವು ಅವರ ಜೊತೆ ಹೇಗೆ ನಡೆಸಿಕೊಂಡಿದ್ದೇವೆ ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ. ಮುಂದಿನ ಬಾರಿ ಇಂತಹ ವಿಷಯಗಳಿಗೆ ದೇಶವನ್ನು ಎಳೆದುತರಬೇಡಿ’ ಎಂದಿದ್ಧಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನ್ ತಂಡವು, 129 ರನ್ ಕಲೆ ಹಾಕಿತ್ತು. ಸಾಧಾರಣ ಮೊತ್ತ ಬೆನ್ನತ್ತಿದ್ದ ಪಾಕಿಸ್ತಾನ 19ನೇ ಓವರ್ ಬಳಿಕ 9 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿತ್ತು. ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ನಸೀಮ್ ಶಾ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT