ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಐ‍ಪಿಎಲ್ ಟೂರ್ನಿ ಆಯೋಜನೆಗೆ ಸ್ಮೃತಿ ಮಂದಾನ ಒತ್ತಾಯ

Last Updated 18 ಆಗಸ್ಟ್ 2021, 10:18 IST
ಅಕ್ಷರ ಗಾತ್ರ

ನವದೆಹಲಿ: ಆರು ತಂಡಗಳ ಮಹಿಳಾ ಐಪಿಎಲ್ ಟೂರ್ನಿ ಅನ್ನು ಪರಿಚಯಿಸಲು ದೇಶದಲ್ಲಿ ಮಹಿಳಾ ಕ್ರಿಕೆಟ್ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತ ಮಹಿಳಾ ಕ್ರಿಕೆಟ್‌ನ ಸ್ಟಾರ್ ಆಟಗಾರ್ತಿ, ಆರಂಭಿಕರಾದ ಸ್ಮೃತಿ ಮಂದಾನ ಹೇಳಿದ್ದಾರೆ.

ಐಪಿಎಲ್ ಟಿ -20 ಲೀಗ್ ಬಂದ ನಂತರ ಪುರುಷರ ಕ್ರಿಕೆಟ್‌ನ ದೇಶೀಯ ಆಟಗಾರರ ಗುಣಮಟ್ಟ ಸುಧಾರಿಸಿದೆ ಮತ್ತು ಮಹಿಳಾ ಕ್ರಿಕೆಟ್‌ನಲ್ಲೂ ಇದೇ ರೀತಿ ಆಗಬಹುದು ಎಂದು 25 ವರ್ಷದ ಸ್ಟೈಲಿಶ್ ಬ್ಯಾಟರ್ ಹೇಳಿದರು.

‘ಪುರುಷರು ಮತ್ತು ಮಹಿಳೆಯರಿಗೆ ಒಂದೇ ಸಂಖ್ಯೆಯ ತಂಡಗಳನ್ನು ಹೊಂದಿರುವ ರಾಜ್ಯಗಳಿವೆ. ಆರಂಭದಲ್ಲಿ ಪುರುಷರ ಐಪಿಎಲ್‌ನಲ್ಲೂ ಕಡಿಮೆ ತಂಡಗಳಿದ್ದವು. ವರ್ಷಗಳು ಕಳೆದಂತೆ ಗುಣಮಟ್ಟವು ಹೆಚ್ಚುತ್ತಾ ಹೋಯಿತು. ತಂಡಗಳೂ ಹೆಚ್ಚಾದವು’ ಎಂದು ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಂದಾನ ಹೇಳಿದರು.

‘ಇಂದು ಐಪಿಎಲ್ ಏನಾಗಿದೆಯೋ.. ಅದು 10 ಅಥವಾ 11 ವರ್ಷಗಳ ಹಿಂದೆ ಹಾಗೆ ಇರಲಿಲ್ಲ. ಮಹಿಳಾ ಕ್ರಿಕೆಟ್‌ಗೂ ಇದು ಅನ್ವಯಿಸುತ್ತದೆ. ಸದ್ಯ, ಮಹಿಳೆಯರ ಐಪಿಎಲ್ ಟೂರ್ನಿ ಆಯೋಜಿಸಲು ನಾವು ಒಳ್ಳೆಯ ಐದು ಅಥವಾ ಆರು ತಂಡಗಳನ್ನು ಹೊಂದಿದ್ದೇವೆ. ಬಹುಶಃ ಒಂದು ಅಥವಾ ಎರಡು ವರ್ಷಗಳಲ್ಲಿ ಎಂಟು ತಂಡಗಳಾಗಿ ಬೆಳೆಯುತ್ತೇವೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಹೇಳಿದರು.

ಮಹಿಳಾ ಕ್ರಿಕೆಟಿಗರಿಗೆ ತಮ್ಮ ಆಟವನ್ನು ಸುಧಾರಿಸಲು ಅಗತ್ಯವಿರುವ ಸರಿಯಾದ ವೇದಿಕೆಯನ್ನು ಲೀಗ್ ನೀಡಬಹುದು ಎಂದು ಮಂದಾನ ಭಾವಿಸಿದ್ದಾರೆ.

‘ಐದು-ಆರು ತಂಡಗಳ ಜೊತೆ ನಾವು ಐಪಿಎಲ್ ಟೂರ್ನಿ ಆರಂಭಿಸುವುದು ಒಳ್ಳೆಯದು. ಮುಂಬರುವ ವರ್ಷಗಳಲ್ಲಿ 8 ತಂಡಗಳಾಗಬಹುದು’ ಎಂದು ಅವರು ಹೇಳಿದ್ದಾರೆ.

‘ನಾವು ಟೂರ್ನಿ ಆರಂಭಿಸುವ ತನಕ, ನಮ್ಮ ಆಟಗಾರ್ತಿಯರಿಗೆ ಅವರ ಕ್ರಿಕೆಟ್ ಅನ್ನು ವಿಭಿನ್ನ ಮಟ್ಟಕ್ಕೆ ಕೊಂಡೊಯ್ಯಲು ನಾವು ವೇದಿಕೆ ಒದಗಿಸುತ್ತಿಲ್ಲ ಎಂದಾಗುತ್ತದೆ‘ ಎಂದು ಅವರು ಹೇಳಿದರು.

ಆಸ್ಟ್ರೇಲಿಯಾ ತಂಡದ ಬೆಂಚ್ ಸಾಮರ್ಥ್ಯದಲ್ಲಿ ಸುಧಾರಣೆಗೆಮಹಿಳಾ ಬಿಗ್ ಬ್ಯಾಶ್ ಲೀಗ್ ಕಾರಣವಾಗಿದೆ. ಅದೇ ರೀತಿ, ಮಹಿಳಾ ಐಪಿಎಲ್ ಮೂಲಕ ಭಾರತದಲ್ಲಿ ಅದನ್ನು ಪುನರಾವರ್ತಿಸಬಹುದು ಎಂದು ಮಂದಾನ ಹೇಳಿದರು.

‘ನಾನು ನಾಲ್ಕು ವರ್ಷಗಳ ಹಿಂದೆ ಬಿಗ್ ಬ್ಯಾಶ್‌ನಲ್ಲಿ ಆಡಿದ್ದೆ. ಈಗ ಅದರ ಗುಣಮಟ್ಟವು ತುಂಬಾ ವಿಭಿನ್ನವಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾದಲ್ಲಿ 40-50 ಕ್ರಿಕೆಟಿಗರು ಯಾವುದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಿದ್ಧರಾಗಿರುವುದನ್ನು ನೀವು ನೋಡಬಹುದು. ಹಾಗಾಗಿ, ಭಾರತೀಯ ಕ್ರಿಕೆಟ್‌ನಲ್ಲಿ ಅದು ಆಗಬೇಕೆಂದು ನಾನು ನಿಜವಾಗಿಯೂ ಬಯಸುತ್ತೇನೆ. ಅದರಲ್ಲಿ ಐಪಿಎಲ್ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ‘ ಎಂದು ಮಂದಾನ ಹೇಳಿದರು.

ಪ್ರಸ್ತುತ, ಬಿಸಿಸಿಐ, ಮಹಿಳಾ ಟಿ -20 ಚಾಲೆಂಜ್ ಅನ್ನು ಆಯೋಜಿಸಿದ್ದು, ಇದರಲ್ಲಿ ಟ್ರೈಲ್ ಬ್ಲೇಜರ್ಸ್, ಸೂಪರ್ ನೋವಾಸ್ ಮತ್ತು ವೆಲಾಸಿಟಿ ಎಂಬ ಮೂರು ತಂಡಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT