ಗುರುವಾರ , ಅಕ್ಟೋಬರ್ 22, 2020
25 °C

ಆಟದ ಮನೆ: ಕಪ್ಪು ಹುಡುಗನ ಬಿಳಿ ಸತ್ಯಗಳು

ವಿಶಾಖ ಎನ್., Updated:

ಅಕ್ಷರ ಗಾತ್ರ : | |

Prajavani

ಕ್ರಿಕೆಟ್‌ನ ಶಾಸ್ತ್ರೀಯಪ್ರಜ್ಞೆ ಚುಟುಕು ಕ್ರಿಕೆಟ್‌ ಅನ್ನು ವಾರೆಗಣ್ಣಿನಿಂದ ನೋಡಿದ್ದೇ ಹೆಚ್ಚು. ಕೆಲವರಂತೂ ಕ್ರೀಡಾಂಗಣಕ್ಕೆ ಹೋಗಿ ಈ ಕ್ರಿಕೆಟ್‌ ನೋಡುವುದೇ ಇಲ್ಲ ಎಂದು ಸಂಕಲ್ಪ ಮಾಡಿದ್ದೂ ಇದೆ. ಆದರೆ, ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡಾ ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲೂ ತಮ್ಮತನದ ರುಜು ಹಾಕುತ್ತಿದ್ದಾರೆ. ಐಪಿಎಲ್‌ನಲ್ಲಿ ಮೊನ್ನೆ ಸೂಪರ್‌ ಓವರ್‌ ಮಾಡಿ, ಡೆಲ್ಲಿ ಕ್ಯಾಪಿಟಲ್ಸ್‌ ಅನ್ನು ಗೆಲ್ಲಿಸಿಕೊಟ್ಟ ಅವರ ಹೆಜ್ಜೆಗುರುತುಗಳ ಮೇಲೆ ಮಸೂರ ತೋರುವ ಪ್ರಯತ್ನವಿದು.

ಹದಿನಾರು ವರ್ಷಗಳಾದವು; ಬಿ.ಎಸ್. ಚಂದ್ರಶೇಖರ್ ಅವರ ಮನೆಯ ವರಾಂಡದಲ್ಲಿ ಚುಟುಕು ಕ್ರಿಕೆಟ್ ಬಂದರೆ ಏನಾಗಬಹುದು ಎಂದು ಸಣ್ಣದೊಂದು ಚರ್ಚೆ ನಡೆಸಿ. ಈಗ ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯಗಳನ್ನು ನೋಡುತ್ತಿದ್ದರೆ ಆ ಚರ್ಚೆಯಲ್ಲಿ ಚಂದ್ರು (ಅವರ ಆಪ್ತರು ‘ಚಂದ್ರ’ ಎಂದೇ ಅವರನ್ನು ಸಂಬೋಧಿಸುತ್ತಾರೆ) ಆಡಿದ್ದ ಮಾತೆಲ್ಲವನ್ನೂ ದೊಡ್ಡ ಮಳೆ ತೊಳೆದುಹಾಕಿದಂತೆ ಭಾಸವಾಗತೊಡಗಿದೆ. ಖುದ್ದು ಚಂದ್ರು ಅಸಾಂಪ್ರದಾಯಿಕ ಸ್ಪಿನ್ನರ್‌ ಆಗಿದ್ದವರು. ಇಂಗ್ಲೆಂಡ್‌ನ ಪಿಚ್‌ಗಳ ಮೇಲೆ ಅವರು ಸ್ಪಿನ್ನರ್‌ ಆಗಿಯೂ ಬೌನ್ಸರ್‌ಗಳನ್ನು ಒಗೆಯಬಲ್ಲವರಾಗಿದ್ದುದು ಅವರನ್ನು ಹತ್ತರಲ್ಲಿ ಹನ್ನೊಂದನೆಯವರು ಎಂದು ಅನೇಕರು ಶ್ಲಾಘಿಸಲು ಕಾರಣವಾಗಿತ್ತೆನ್ನಿ. ಚುಟುಕು ಕ್ರಿಕೆಟ್ ಶುರುವಾದರೆ ಆಟದ ಶಾಸ್ತ್ರೀಯತೆ ಮುಕ್ಕಾಗುತ್ತದೆ, ಟೆಸ್ಟ್‌ ಕ್ರಿಕೆಟ್‌ನ ಹರಿತ ಮೊಂಡಾಗುತ್ತದೆ ಎಂದೆಲ್ಲ ಸಹಜವಾಗಿಯೇ ಚಂದ್ರು ಹಳಹಳಿಸಿದ್ದರು. ಟ್ವೆಂಟಿ20 ಕ್ರಿಕೆಟ್ಟನ್ನು ಕ್ರೀಡಾಂಗಣಕ್ಕೆ ಹೋಗಿ ನೋಡುವುದೇ ಇಲ್ಲ ಎಂದು ಸಂಕಲ್ಪ ಮಾಡಿದ್ದನ್ನು ರಾಮಚಂದ್ರ ಗುಹಾ ಅವರಂಥವರು ಬರೆದುಕೊಂಡಿದ್ದರು. ‘ಇನ್ನು ಕ್ರಿಕೆಟ್‌ ಅಂದರೆ ಬರೀ ಹೊಡಿ–ಬಡಿ. ಹಳೆಯ ಆಟದ ಲಾಲಿತ್ಯವಿನ್ನೆಲ್ಲಿ’ ಎಂದು ನಿಟ್ಟುಸಿರು ಸುರಿದವರು ಅಸಂಖ್ಯ.

ಮೈಸೂರಿನಲ್ಲಿ ಚಂದ್ರು ಹುಟ್ಟಿದ ಮೇ ತಿಂಗಳಲ್ಲೇ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನ ಗಾಟೆಂಗ್‌ನಲ್ಲಿ ಜನ್ಮತಳೆದವರು ಕಗಿಸೊ ರಬಾಡಾ. ಚಂದ್ರು, ರಬಾಡಾ ಇಬ್ಬರಿಗೂ ಬರೋಬ್ಬರಿ ಐವತ್ತು ವರ್ಷಗಳ ಅಂತರ. ಲೆಗ್‌ಸ್ಪಿನ್ನರ್‌ ಚಂದ್ರು ಹತ್ತೊಂಬತ್ತರ ಪ್ರಾಯದಲ್ಲೇ ಮೊದಲ ಟೆಸ್ಟ್‌ ಆಡಿದ ಪ್ರತಿಭಾವಂತ. ಹದಿನೈದು ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವಮಾನದಲ್ಲಿ 58 ಟೆಸ್ಟ್‌ಗಳನ್ನು ಆಡಿದವರು. 242 ವಿಕೆಟ್‌ಗಳನ್ನು ಕಿತ್ತಿದ್ದು ಅವರ ಸಾಧನೆ. ನ್ಯೂಜಿಲೆಂಡ್‌ ವಿರುದ್ಧ 1976ರಲ್ಲಿ ಒಂದೇ ಒಂದು ಏಕದಿನ ಕ್ರಿಕೆಟ್‌ ಪಂದ್ಯ ಆಡಿದರಷ್ಟೆ. ಅದರಲ್ಲೂ ಅವರು ಮೂರು ವಿಕೆಟ್ ಪಡೆದಿದ್ದರು.

ಅವರಿಗಿಂತ 50 ವರ್ಷ ಸಣ್ಣವರು ರಬಾಡಾ. ಮೊನ್ನೆ ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಚುಟುಕು ಕ್ರಿಕೆಟ್‌ನಲ್ಲಿ ಸೂಪರ್‌ ಓವರ್ ಬೌಲ್ ಮಾಡಿದರು. ಅವರು ಹಾಕಿದ ಚೆಂಡು ನುಗ್ಗಿಬಂದ ಪರಿಯನ್ನು ಅಂದಾಜು ಮಾಡಲು ವೆಸ್ಟ್‌ಇಂಡೀಸ್‌ನ ನಿಕೊಲಸ್ ಪೂರನ್‌ಗೆ ಆಗಲೇ ಇಲ್ಲ. ವಿಕೆಟ್‌ಗಳು ಉರುಳಿದ್ದವು. ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವಲ್ಲಿ ರಬಾಡಾ ತೂರಿಬಿಟ್ಟ ಬಾಣದಂಥ ಆ ಎಸೆತದ ಕಾಣ್ಕೆ ದೊಡ್ಡದು.

ಚುಟುಕು ಕ್ರಿಕೆಟ್ ಬಂದರೆ ಶಾಸ್ತ್ರೀಯತೆ ಮುಕ್ಕಾದೀತು ಎಂದು ಚಂದ್ರು ಹೇಳಿದ್ದರಲ್ಲ ಎಂದುಕೊಂಡು ರಬಾಡಾ ಎಂಬ ಈ ಕಾಲದ ಪ್ರತಿಭೆಯ ಹೆಜ್ಜೆಗುರುತುಗಳನ್ನು ನೋಡಿದರೆ, ಬೇರೆಯದೇ ಸತ್ಯ ಎದ್ದುಕಾಣುತ್ತದೆ. 2015ರ ನವೆಂಬರ್‌ನಲ್ಲಿ ಭಾರತದ ಎದುರೇ ಮೊದಲ ಟೆಸ್ಟ್‌ ಆಡಿದ ದಕ್ಷಿಣ ಆಫ್ರಿಕಾದ ಈ ಕಪ್ಪು ಹುಡುಗ ಇದುವರೆಗೆ 43 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾಗಿದೆ. 197 ವಿಕೆಟ್‌ಗಳು ಖಾತೆಯಲ್ಲಿವೆ. ಚಂದ್ರು ಹದಿನೈದು ವರ್ಷಗಳ ಸುದೀರ್ಘಾವಧಿ ಆಡಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 15,963 ಎಸೆತಗಳನ್ನು ಹಾಕಿದ್ದರು. ರಬಾಡಾ ಈಗಾಗಲೇ 8,011 ಎಸೆತಗಳನ್ನು ಬೌಲ್ ಮಾಡಿದ್ದಾಗಿದೆ. ಏಕದಿನದ ಪಂದ್ಯಗಳಲ್ಲಿನ 3,842 ಎಸೆತಗಳನ್ನೂ ಸೇರಿಸಿಕೊಂಡರೆ ಪುಟ್ಟ ಅವಧಿಯಲ್ಲಿ ಕೈಕಾಲುಗಳು ಅದೆಷ್ಟು ದಣಿದಿರಬೇಡ? ಚುಟುಕು ಕ್ರಿಕೆಟ್‌ನಲ್ಲೂ ಬೆವರಿಳಿಸುವುದನ್ನು 25ರ ಈ ಹುಡುಗ ಮುಂದುವರಿಸಿರುವುದು ಸಾಂಪ್ರದಾಯಿಕ ಮನಸ್ಸುಗಳಿಗೆಲ್ಲ ಸವಾಲೇ ಸರಿ.

ದಕ್ಷಿಣ ಆಫ್ರಿಕಾದ ವಾಣಿಜ್ಯ ರಾಜಧಾನಿ ಜೊಹಾನ್ಸ್‌ಬರ್ಗ್‌ನಲ್ಲಿ ಬೆಳೆದವರು ರಬಾಡಾ. ಅವರ ತಂದೆ ಎಂಫೊ ರಬಾಡಾ ವೈದ್ಯ. ಅವರು ಕೊಳೆಗೇರಿಗಳಿಗೆ ಹೋಗಿ, ಬಡಬಗ್ಗರ ಆರೋಗ್ಯ ವಿಚಾರಿಸಿಕೊಂಡು, ಸಾಧ್ಯವಾದಷ್ಟು ಮಾತ್ರೆಗಳನ್ನೋ, ಟಾನಿಕ್‌ ಅನ್ನೋ ಕೊಟ್ಟುಬರುತ್ತಿದ್ದರು. ಒಂಬತ್ತನೇ ಇಯತ್ತೆಯಲ್ಲಿ ಓದುತ್ತಿದ್ದಾಗಿನಿಂದಲೇ ರಬಾಡಾ ಕೂಡ ಅಪ್ಪನ ಜತೆಗೆ ಹೋಗುತ್ತಿದ್ದುದು ಮಾಮೂಲಾಗಿತ್ತು. ಮಗ ಯಾವುದೋ ಬೇರೆ ಕೆಲಸದಲ್ಲಿ ನಿರತನಾಗಿದ್ದರೂ ಬಲವಂತವಾಗಿ ಎಬ್ಬಿಸಿಕೊಂಡು ಅಪ್ಪ ಕೊಳೆಗೇರಿಗಳಿಗೆ ಕರೆದೊಯ್ಯುತ್ತಿದ್ದರು. ಅಲ್ಲಿನ ಜನರ ಬದುಕಿನ ದರ್ಶನ ಮಗನಿಗೆ ಆಗಲಿ ಎನ್ನುವುದು ಅವರ ಉದ್ದೇಶವಾಗಿತ್ತು. ಕೊಳೆಗೇರಿಗಳಲ್ಲಿನ ಹುಡುಗರ ಬೇಕು–ಬೇಡಗಳನ್ನೆಲ್ಲ ಆಲಿಸಿದ ರಬಾಡಾ, ತನ್ನ ಬಟ್ಟೆಗಳು, ಬೂಟುಗಳನ್ನು ಅಗತ್ಯವಿದ್ದವರಿಗೆ ಸ್ವಪ್ರೇರಣೆಯಿಂದ ಕೊಟ್ಟಿದ್ದು ಬೇರೆಯದೇ ನೀತಿ ಕಥೆ.

ಇಂತಹ ರಬಾಡಾಗೆ ‘ಕೆ.ಜಿ’ ಎಂಬ ಅಡ್ಡಹೆಸರಿದೆ. ಪ್ರತಿ ಗಂಟೆಗೆ 140ರಿಂದ 150 ಕಿ.ಮೀ. ವೇಗದಲ್ಲಿ ಎಸೆತಗಳನ್ನು ಹಾಕಬಲ್ಲರು. 2014ರಲ್ಲಿ ನಡೆದ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ದಕ್ಷಿಣ ಆಫ್ರಿಕಾ ಮಣಿಸಿತು. ಆ ಪಂದ್ಯದಲ್ಲಿ ಬರೀ 25 ರನ್‌ ನೀಡಿ ರಬಾಡಾ 6 ವಿಕೆಟ್‌ಗಳನ್ನು ಕಿತ್ತಿದ್ದರು. ಆಗಿನ್ನೂ 19ರ ಪ್ರಾಯ. ಗಂಟೆಗೆ 145 ಕಿ.ಮೀ ವೇಗದಲ್ಲಿ ಅದಾಗಲೇ ಎಸೆತಗಳನ್ನು ಹಾಕುತ್ತಿದ್ದ ಅವರು, ಎರಡೇ ವರ್ಷಗಳ ನಂತರ ‘ಕ್ರಿಕೆಟ್ ಸೌತ್ ಆಫ್ರಿಕಾ’ದ ವಾರ್ಷಿಕ ಸಮಾರಂಭದ ಡಿನ್ನರ್ ಟೇಬಲ್ ಎದುರು ಕುಳಿತಿದ್ದರು. ‘ವರ್ಷದ ಶ್ರೇಷ್ಠ ಕ್ರಿಕೆಟಿಗ’ ಎಂಬ ಗೌರವವೂ ಸೇರಿದಂತೆ ಆರು ಪ್ರಶಸ್ತಿಗಳು ಬುಟ್ಟಿಗೆ ಬಿದ್ದಿದ್ದವು. ಇನ್ನೆರಡು ವರ್ಷಗಳ ನಂತರ ಅಂಥದ್ದೇ ಇನ್ನೊಂದು ಸಮಾರಂಭ. ಆಗಲೂ 6 ಪ್ರಶಸ್ತಿ. ‘ವರ್ಷದ ಶ್ರೇಷ್ಠ ಕ್ರಿಕೆಟಿಗ’, ‘ಏಕದಿನ ಪಂದ್ಯಗಳಲ್ಲಿ ವರ್ಷದ ಶ್ರೇಷ್ಠ ಕ್ರಿಕೆಟಿಗ’, ‘ಟೆಸ್ಟ್‌ ಪಂದ್ಯಗಳಲ್ಲಿ ವರ್ಷದ ಶ್ರೇಷ್ಠ ಕ್ರಿಕೆಟಿಗ’– ಈ ಮೂರೂ ಪ್ರಶಸ್ತಿಗಳು ಆ ಪೈಕಿ ಇದ್ದವು. ಟೆಸ್ಟ್‌ ಕ್ರಿಕೆಟ್‌ನ ಸಾಂಪ್ರದಾಯಿಕ ವರಸೆ, ಏಕದಿನದ ವೇಗ, ಚುಟುಕು ಕ್ರಿಕೆಟ್‌ನ ಪರಮ ವೇಗ ಈ ಮೂರಕ್ಕೂ ಒಗ್ಗಿಕೊಳ್ಳುತ್ತಲೇ ಎಲ್ಲಿಗಾದರೂ ತಾನು ಸೈ ಎನ್ನುವ ಸಂದೇಶವನ್ನು ಇಷ್ಟು ಚಿಕ್ಕಪ್ರಾಯದ ಹುಡುಗ ನೀಡಿದಾಗ, ಮತ್ತೆ ಚಂದ್ರು ಅವರೇ ಹದಿನೈದು ವರ್ಷಗಳ ಹಿಂದೆ ಹೊರಹಾಕಿದ್ದ ನಿಟ್ಟುಸಿರು ನೆನಪಾಗಿತ್ತು.

ರಬಾಡಾ 2018ರಲ್ಲಿ ವಾರ್ಷಿಕ ಸಮಾರಂಭದಲ್ಲಿ ಅಷ್ಟೊಂದು ಪ್ರಶಸ್ತಿಗಳನ್ನು ಸ್ವೀಕರಿಸಿದ ಮರು ತಿಂಗಳೇ ಟೆಸ್ಟ್‌ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ಖಾತೆಗೆ ಹಾಕಿಕೊಂಡರು. 23 ವರ್ಷ 50 ದಿನಗಳ ವಯಸ್ಸಿನ ಹುಡುಗನೊಬ್ಬ ಮಾಡಿದ ಸಾಧನೆ ಅದು. ವಿಶ್ವದಲ್ಲೇ ಯಾರೂ ಅದುವರೆಗೆ ಇಷ್ಟು ಚಿಕ್ಕಪ್ರಾಯದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ಪಡೆದಿರಲಿಲ್ಲ. 2018ರ ವರ್ಷ ಈ ಹುಡುಗ ಮುಟ್ಟಿದ್ದೆಲ್ಲ ಚಿನ್ನ. ‘ವಿಸ್ಡನ್ ವರ್ಷದ ಕ್ರಿಕೆಟಿಗ’ ಪ್ರಶಸ್ತಿ ಒಲಿದುಬಂದದ್ದೂ ಆಗಲೇ.

2014ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ ಪಂದ್ಯಗಳಲ್ಲಿ 14 ವಿಕೆಟ್‌ ಪಡೆದು, ಅತಿ ಹೆಚ್ಚು ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದ ಎರಡನೇ ಬೌಲರ್‌ ಎನಿಸಿಕೊಂಡಾಗಲೇ ರಬಾಡಾ ವೃತ್ತಿಬದುಕಿನ ಬ್ಲೂ ಪ್ರಿಂಟ್ ಕಾಣತೊಡಗಿತ್ತು. ಸನ್‌ಫಾಯಿಲ್‌ ಸರಣಿ ನಡೆಯುತ್ತಿದ್ದ ಅದೇ ಹೊತ್ತಿನಲ್ಲಿ ‘ಕೊನೆಯ ಎರಡು ಪಂದ್ಯಗಳನ್ನು ಆಡಲು ಬಾರಪ್ಪ’ ಎಂದು ಅಲ್ಲಿನ ಲಯನ್ಸ್‌ ತಂಡದ ಫ್ರಾಂಚೈಸ್‌ಗಳು ಆಹ್ವಾನವಿತ್ತರು. 186 ರನ್‌ಗಳನ್ನು ನೀಡಿ ಆ ಎರಡು ಪಂದ್ಯಗಳಲ್ಲಿ ಏಳು ವಿಕೆಟ್‌ಗಳನ್ನು ವೇಗಿ ಕಿತ್ತರು.

2015ರ ಜುಲೈ 10ರಂದು ದಕ್ಷಿಣ ಆಫ್ರಿಕಾದ ಈ ಕ್ರಿಕೆಟಿಗ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು. ಎದುರಾಳಿ ಬಾಂಗ್ಲಾದೇಶ. ಮಾರ್ನ್ ಮಾರ್ಕಲ್ ಅವರನ್ನು ಕೈಬಿಟ್ಟು 20ರ ಹರೆಯದ ಕಪ್ಪು ಹುಡುಗನನ್ನು ಎರಡನೇ ವೇಗಿಯಾಗಿ ನಾಯಕ ಹಶೀಮ್ ಆಮ್ಲ ಕಣಕ್ಕಿಳಿಸಿದ್ದರು. ಬಾಂಗ್ಲಾದ ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್ ಇಕ್ಬಾಲ್ ಮೂರು ಓವರ್‌ಗಳಾದರೂ ರನ್ ಖಾತೆ ತೆರೆದಿರಲಿಲ್ಲ. ನಾಲ್ಕನೇ ಓವರ್‌ನಲ್ಲಿ ರಬಾಡಾ ತಮ್ಮ ವೇಗ ಮತ್ತು ಪಕ್ಕಾ ಯೋಜನೆಯ ಪ್ರಾತ್ಯಕ್ಷಿಕೆ ನೀಡಿದರು. ಎರಡು ಶಾರ್ಟ್‌ ಬಾಲ್‌ಗಳನ್ನು ಹಾಕಿದರು. ತಮೀಮ್‌ಗೆ ಏನು ಮಾಡಬೇಕೋ ತೋಚಲಿಲ್ಲ. ಮೂರನೆಯದ್ದೂ ಹಾಗೆಯೇ ಬಂದೀತು ಎಂಬ ನಿರೀಕ್ಷೆಯಲ್ಲಿದ್ದ ಅವರಿಗೆ ಅಚ್ಚರಿ. ರಬಾಡಾ ಫುಲ್ಲರ್ ಲೆಂಗ್ತ್‌ ಬಾಲ್ ಹಾಕಿದರು. ತಮೀಮ್ ಕಕ್ಕಾಬಿಕ್ಕಿ. ಮಧ್ಯದ ಹಾಗೂ ಆಫ್‌ಸ್ಟಂಪ್‌ನತ್ತ ಗುರಿ ಮಾಡಿದ್ದ ಆ ಎಸೆತ ವಿಕೆಟ್‌ಗಳನ್ನು ಎಗರಿಸಿತ್ತು. 13 ಎಸೆತಗಳನ್ನು ಎದುರಿಸಿ ಒಂದೂ ರನ್ ಗಳಿಸದೆ ತಮೀಮ್ ಔಟಾದರು. ಅದು ಪ್ರತಿಭಾವಂತ ವೇಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಡೆದ ಮೊದಲ ವಿಕೆಟ್. ಪ್ಯಾಡ್‌ನತ್ತ ಒಳನುಗ್ಗಿದ ಮರುಎಸೆತವನ್ನು ಲೀಟನ್ ದಾಸ್‌ ಮಿಡ್‌ವಿಕೆಟ್‌ನತ್ತ ಫ್ಲಿಕ್‌ ಮಾಡಿ ಕ್ಯಾಚಿತ್ತರು. ಹ್ಯಾಟ್ರಿಕ್ ಎಸೆತವನ್ನು ಬೌನ್ಸರ್‌ ಹಾಕಬೇಕೋ, ಯಾರ್ಕರ್‌ ಹಾಕಬೇಕೋ ಎಂಬ ಜಿಜ್ಞಾಸೆ ಹುಡುಗನಿಗೆ. ಎರಡನ್ನೂ ಬಿಟ್ಟು ಗುಡ್‌ಲೆಂಗ್ತ್ ಹಾಕಿದರು. ವೇಗವೇ ಈ ಸಲ ಫಲ ಕೊಟ್ಟಿತು. ಬೆರಳಿನ ಗಾಯದಿಂದ ಚೇತರಿಸಿಕೊಂಡು ಆಡಲು ಬಂದಿದ್ದ ಮಹಮದುಲ್ಲ ಪ್ಯಾಡ್‌ಗೆ ರೊಪ್ಪನೆ ಚೆಂಡು ಬಡಿಯಿತು. ಅಂಪೈರ್‌ ತೋರುಬೆರಳನ್ನು ಎರಡನೇ ಯೋಚನೆಯೇ ಇಲ್ಲದೆ ಮೇಲೆತ್ತಿದರು. ತೈಜುಲ್ ಇಸ್ಲಾಂ ಬಿಟ್ಟರೆ ಬೇರೆ ಯಾರೂ ಚೊಚ್ಚಲ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿರಲಿಲ್ಲ. ರಬಾಡಾ ಅಂಥದೊಂದು ಸಾಧನೆಯ ರುಜು ಹಾಕಿದರು. ಬರೀ 16 ರನ್‌ಗಳಿಗೆ 6 ವಿಕೆಟ್‌ ಅನ್ನು ಮೊದಲ ಪಂದ್ಯದಲ್ಲೇ ಗಳಿಸಿದ್ದು ವಿಶೇಷ. ಏಕದಿನ ಪಂದ್ಯಗಳಲ್ಲಿ ಆಗ ವಿಶ್ವದಲ್ಲೇ ಬೌಲರ್ ಒಬ್ಬ ಮಾಡಿದ ಶ್ರೇಷ್ಠ ಸಾಧನೆ ಅದು. ಪಂದ್ಯ ಪುರುಷೋತ್ತಮ ಪ್ರಶಸ್ತಿಯೂ ಒಲಿಯಿತು. ಹೀಗಾಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುವ ಭಾಗ್ಯ ಅವರದ್ದಾಯಿತು. ‘ದಕ್ಷಿಣ ಆಫ್ರಿಕಾ ತಂಡ ಈಗ ಶ್ರೇಷ್ಠ ಆಟಗಾರರನ್ನು ಒಳಗೊಂಡಿದೆ. ಅಂಥ ತಂಡದಲ್ಲಿ ಆಡದ ಯಾರೇ ಆದರೂ ಹತಭಾಗ್ಯರೇ ಸರಿ’ ಎಂದು ಮುಗ್ಧತನದ ಮಾತನ್ನು ಈ ಹುಡುಗ ಆಡಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ನಲ್ಲಿ 2017ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಈ ಪ್ರತಿಭೆಯನ್ನು ಬುಟ್ಟಿಗೆ ಹಾಕಿಕೊಂಡಿತು. ಆ ವರ್ಷ ಕೇವಲ 128 ಎಸೆತಗಳನ್ನಷ್ಟೇ ಬೌಲ್ ಮಾಡುವ ಅವಕಾಶ ಸಿಕ್ಕಿದ್ದು. 6 ವಿಕೆಟ್‌ಗಳು ಸಂದವು. ಮರುವರ್ಷ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ ಆಡುವ ಆಯ್ಕೆಯನ್ನು ತನ್ನದಾಗಿಸಿಕೊಂಡದ್ದಕ್ಕೆ ದೆಹಲಿ ತಂಡವನ್ನು ಪ್ರತಿನಿಧಿಸಲಿಲ್ಲ. ಆದರೂ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್‌ ರಬಾಡಾ ಅವರನ್ನು ಉಳಿಸಿಕೊಂಡಿತು. ಐಪಿಎಲ್‌ನಲ್ಲಿ ಸೆಮಿಫೈನಲ್ ಕೂಡ ತಲುಪಿತು. ರಬಾಡಾ 25 ವಿಕೆಟ್‌ಗಳನ್ನು ಪಡೆದು, ‘ಕ್ರಿಕೆಟ್ ಯಾವುದಾದರೇನು, ವಿಕೆಟ್‌ ನವನವೀನ’ ಎಂದು ನಕ್ಕಿದ್ದರು. ಈ ಸಲ ಮೊದಲ ಬೀಸಿನಲ್ಲೇ ಅವರ ಛಾಪು ಎದ್ದುಕಂಡಿದೆ.

ಕಳೆದ ಸಲವೂ ಒಂದು ಸೂಪರ್‌ ಓವರ್‌ ಮಾಡಿ ತಮ್ಮ ತಂಡವನ್ನು ಗೆಲ್ಲಿಸಿಕೊಟ್ಟಿದ್ದ ಅವರು ಈ ಬಾರಿ ಅಂತಹುದೇ ಇನ್ನೊಂದು ಅವಕಾಶವನ್ನು ಹಣ್ಣಾಗಿಸಿಕೊಂಡದ್ದು ಸೋಜಿಗ. ಭಾರತದ ಜಸ್‌ಪ್ರೀತ್ ಬೂಮ್ರಾ ಬಿಟ್ಟರೆ ಹೀಗೆ ಎರಡು ಸೂಪರ್‌ ಓವರ್‌ಗಳ ಸಂಭ್ರಮಕ್ಕೆ ಸಾಕ್ಷಿಯಾಗುವ ಅವಕಾಶ ಇನ್ನೊಬ್ಬ ವೇಗದ ಬೌಲರ್‌ಗೆ ಸಿಕ್ಕಿರಲಿಲ್ಲ.

ಟೆಸ್ಟ್‌ನಲ್ಲಿ 197, ಏಕದಿನ ಪಂದ್ಯಗಳಲ್ಲಿ 117, ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 29 ವಿಕೆಟ್‌ಗಳನ್ನು ಪಡೆದಿರುವ ರಬಾಡಾ, ಜೋರಾಗಿ ಮಳೆಯಾಗುತ್ತಿರುವ ಈ ಕಾಲದಲ್ಲಿ ಕ್ರಿಕೆಟ್‌ ಬದಲಾವಣೆ ಕುರಿತ ಹಲವು ‘ಮಿಥ್‌’ಗಳನ್ನು ಒಡೆಯುತ್ತಿರುವುದಂತೂ ಸ್ಪಷ್ಟ. ಬಿ.ಎಸ್‌. ಚಂದ್ರಶೇಖರ್ ಅಭಿಪ್ರಾಯವೀಗ ಎಷ್ಟರ ಮಟ್ಟಿಗೆ ಬದಲಾಗಿದೆಯೋ ಎನ್ನುವುದು ಕುತೂಹಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು