ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಲಂಕಾ ಹಳೆಯ ಕ್ರಿಕೆಟ್‌ ಮಂಡಳಿಗೆ ಮತ್ತೆ ಅಧಿಕಾರ: ನ್ಯಾಯಾಲಯ

ಕ್ರೀಡಾ ಸಚಿವರ ನಿರ್ಧಾರ ಅನೂರ್ಜಿತಗೊಳಿಸಿದ ನ್ಯಾಯಾಲಯ
Published 7 ನವೆಂಬರ್ 2023, 12:18 IST
Last Updated 7 ನವೆಂಬರ್ 2023, 12:18 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ವಜಾಗೊಳಿಸುವ ಕ್ರೀಡಾ ಸಚಿವರ ನಿರ್ಧಾರವನ್ನು ಅಲ್ಲಿನ ಮೇಲ್ಮನವಿ ನ್ಯಾಯಾಲಯ ಪೂರ್ಣಪ್ರಮಾಣದ ವಿಚಾರಣೆ ಬಾಕಿಯಿರಿಸಿ ಮಂಗಳವಾರ ಅನೂರ್ಜಿತಗೊಳಿಸಿದೆ. ಹೀಗಾಗಿ ಹಳೆಯ ಮಂಡಳಿಯ ಪದಾಧಿಕಾರಿಗಳು ಮತ್ತೆ ಅಧಿಕಾರದಲ್ಲಿ ಇರಲಿದ್ದಾರೆ.

ಮಂಡಳಿ ವಜಾಗೊಳಿಸಿ, ಮಧ್ಯಂತರ ಸಮಿತಿಯನ್ನು ನೇಮಿಸಿದ ಕ್ರೀಡಾ ಸಚಿವ ರೋಷನ್ ರಣಸಿಂಘೆ ಅವರ ಕ್ರಮವನ್ನು ಪ್ರಶ್ನಿಸಿ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವ ಅವರ ಸಲ್ಲಿಸಿದ್ದ ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಲಯ ಈ ಆದೇಶ ಪ್ರಕಟಿಸಿತು.

‘ಆದರೆ ಅನೂರ್ಜಿತ ಆದೇಶ ಎರಡು ವಾರಗಳವರೆಗೆ ಮಾತ್ರ ಚಾಲ್ತಿಯಲ್ಲಿರಲಿದೆ. ನಂತರ ನ್ಯಾಯಾಲಯ ವಿಚಾರಣೆ ಮುಂದುವರಿಸಲಿದೆ’ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ರಣಸಿಂಘೆ ಮತ್ತು ಮಂಡಳಿ ನಡುವೆ ತಿಂಗಳಿಂದ ಘರ್ಷಣೆ ನಡೆಯುತ್ತಿದೆ. ಮಂಡಳಿಯಲ್ಲಿ ವ್ಯಾಪಕ ಪ್ರಮಾಣ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಚಿವರು ಆರೋಪಿಸುತ್ತ ಬಂದಿದ್ದರು. ವಿಶ್ವಕಪ್‌ ಪಂದ್ಯದಲ್ಲಿ ಭಾರತ ಕೈಲಿ ಹೀನಾಯವಾಗಿ ಸೋತ ಎರಡೇ ದಿನದಲ್ಲಿ ಅವರು ಮಂಡಳಿಯನ್ನು ವಜಾಗೊಳಿಸಿದ್ದರು. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಈ ದೇಶದಲ್ಲಿ ಕ್ರಿಕೆಟ್‌ ಮಂಡಳಿ ಅತ್ಯಂತ ಶ್ರೀಮಂತ ಸಂಸ್ಥೆಯಾಗಿದೆ.

ನ್ಯಾಯಾಲಯದ ಆದೇಶ ಓದಿ ಹೇಳುತ್ತಿದ್ದಂತೆ ಮಾಜಿ ನಾಯಕ ಹಾಗೂ ಮಧ್ಯಂತರ ಸಮಿತಿ ಅಧ್ಯಕ್ಷ ಅರ್ಜುನ ರಣತುಂಗ ಮತ್ತು ಇತರ ಪದಾಧಿಕಾರಿಗಳು ಮಂಡಳಿಯ ಕಚೇರಿಯಿಂದ ನಿರ್ಗಮಿಸಿದರು. ಹಳೆಯ ಪದಾಧಿಕಾರಿಗಳು ಮತ್ತೆ ಅಧಿಕಾರ ವಹಿಸಿಕೊಂಡರು.

1996ರ ವಿಶ್ವಕಪ್‌ ವಿಜೇತ ತಂಡದ ನಾಯಕ ಅರ್ಜುನ ರಣತುಂಗ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ‘ಶ್ರೀಲಂಕಾ ಕ್ರಿಕೆಟ್‌ ದೇಶದ ಅತ್ಯಂತ ಭ್ರಷ್ಟ ಸಂಸ್ಥೆ ಎಂಬ ಭಾವನೆ ದೇಶದಲ್ಲಿ ಮೂಡಿದೆ. ನಾನು ಆ ಚಿತ್ರಣವನ್ನು ಬದಲಿಸಬಯಸುತ್ತೇನೆ’ ಎಂದು ಸೋಮವಾರ ಅವರು ಹೇಳಿದ್ದರು.

ದೇಶದ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಸಚಿವ ರಣಸಿಂಘೆ ಅವರು ‘ಕ್ರಿಕೆಟ್‌ ಮಂಡಳಿ ವಜಾಗೊಳಿಸಿರುವ ನಿರ್ಧಾರವನ್ನು ಅವರು ಬದಲಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದರು. ‘ಅವರು (ಅಧ್ಯಕ್ಷ) ಮಧ್ಯಂತರ ಸಮಿತಿ ರದ್ದುಮಾಡಿ ಮತ್ತೆ ಹಳೆಯ ಮಂಡಳಿಗೆ ಅಧಿಕಾರ ನಾನು ನೀಡಬೇಕೆಂಬು ಅವರು ಬಯಸಿದ್ದರು. ಆದರೆ ನನ್ನನ್ನು ಬೇಕಾದರೆ ವಜಾಗೊಳಿಸಿ, ನನ್ನ ನಿರ್ಧಾರದಿಂದ ಹಿಂದೆಸರಿಯುವುದಿಲ್ಲ ಎಂದು ಅವರಿಗೆ ಹೇಳಿದ್ದೆ’ ಎಂದು ವಿರೋಧಪಕ್ಷಗಳ ಸ್ವಾಗತದ ಮಧ್ಯೆ ರಣಸಿಂಘೆ ಹೇಳಿರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT