27ನೇ ಟೆಸ್ಟ್ ಶತಕ; ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಸ್ಟೀವನ್ ಸ್ಮಿತ್

ಸಿಡ್ನಿ: ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 27ನೇ ಶತಕ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್, ಭಾರತದ ರನ್ ಮೆಶಿನ್ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಭಾರತ ವಿರುದ್ಧ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಸ್ಟೀವನ್ ಸ್ಮಿತ್ ಅಮೋಘ ಶತಕ ಸಾಧನೆ ಮಾಡಿದರು. ಕೊನೆಯವರಾಗಿ ರನೌಟ್ ಆದ ಸ್ಮಿತ್, 226 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಿಂದ 131 ರನ್ ಗಳಿಸಿದರು. ಈ ಮೂಲಕ ಆಸೀಸ್ ತಂಡವನ್ನು 338 ರನ್‌ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಮುನ್ನಡೆಸಿದರು.
ಇದನ್ನೂ ಓದಿ: IND vs AUS: ಸ್ಮಿತ್ ಶತಕ; ಲಾಬುಷೇನ್ 91; ಆಸೀಸ್ 338ಕ್ಕೆ ಆಲೌಟ್
ಬ್ರಾಡ್ಮನ್ ಬಳಿಕ ಸ್ಮಿತ್...
ಅಷ್ಟೇ ಯಾಕೆ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಸರ್ ಡಾನ್ ಬ್ರಾಡ್ಮನ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 27 ಶತಕಗಳನ್ನು ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಸ್ಟೀವನ್ ಸ್ಮಿತ್ ಭಾಜನವಾಗಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರನ್ನೇ ಹಿಂದಿಕ್ಕಿದ್ದಾರೆ.
ಡಾನ್ ಬ್ರಾಡ್ಮನ್ 70 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ ಸ್ಮಿತ್ 136ನೇ ಇನ್ನಿಂಗ್ಸ್‌ನಲ್ಲಿ ಮೈಲುಗಲ್ಲು ತಲುಪಿದರು.
The moment @stevesmith49 brought up his 27th Test century! @VodafoneAU | #AUSvIND pic.twitter.com/C7n447qoFT
— cricket.com.au (@cricketcomau) January 8, 2021
ಟೆಸ್ಟ್‌ನಲ್ಲಿ ಭಾರತ ವಿರುದ್ಧ ಗರಿಷ್ಠ 8 ಶತಕ ಸಾಧನೆ:
ಅದೇ ಹೊತ್ತಿಗೆ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮಾಜಿ ದಿಗ್ಗಜರಾದ ಗ್ಯಾರಿ ಸೋಬರ್ಸ್, ವಿವ್ ರಿಚರ್ಡ್ಸ್ ಮತ್ತು ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದು ಭಾರತ ವಿರುದ್ಧ ಸ್ಮಿತ್ ಅವರ ಬ್ಯಾಟ್‌ನಿಂದ ಸಿಡಿದ ಎಂಟನೇ ಶತಕ ಸಾಧನೆಯಾಗಿದೆ.
ಇದನ್ನೂ ಓದಿ: ಟ್ರೋಲ್ ಆದ ವಿಕೆಟ್ಕೀಪರ್ ರಿಷಭ್ ಪಂತ್
ರನ್ ಬೇಟೆಯಲ್ಲೂ ವಿರಾಟ್ ಹಿಂದಿಕ್ಕಿದ ಸ್ಮಿತ್..
ಈ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್ ರನ್ ಬೇಟೆಯಲ್ಲೂ ವಿರಾಟ್ ಕೊಹ್ಲಿ ಅವರನ್ನು ಸ್ಟೀವನ್ ಸ್ಮಿತ್ ಮೀರಿ ನಿಂತಿದ್ದಾರೆ. 87 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 7318 ರನ್ ಗಳಿಸಿದ್ದರು. ಸ್ಮಿತ್ 75 ಟೆಸ್ಟ್‌ಗಳಲ್ಲೇ ಈ ಸಾಧನೆ ಮೀರಿಸಿದ್ದಾರೆ.
ಸ್ಟೀವನ್ ಸ್ಮಿತ್ ಕೊನೆಯದಾಗಿ 2019ನೇ ಇಸವಿಯಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ 211 ರನ್ ಗಳಿಸಿದ್ದರು. ಇದೀಗ ಮಗದೊಂದು ಶತಕದೊಂದಿಗೆ ದೀರ್ಘ ಸಮಯದ ರನ್ ಬರವನ್ನು ನೀಗಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.