ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KKR vs RCB: ವಿರಾಟ್ ಬಳಗದ ಮೇಲೆ ಕಣ್ಣು

ರಾಯಲ್ ಚಾಲೆಂಜರ್ಸ್‌ ಬೆಂಗಳೂರು–ಕೋಲ್ಕತ್ತ ನೈಟ್ ರೈಡರ್ಸ್‌ ಮುಖಾಮುಖಿ ಇಂದು
Last Updated 20 ಸೆಪ್ಟೆಂಬರ್ 2021, 3:09 IST
ಅಕ್ಷರ ಗಾತ್ರ

ಅಬುಧಾಬಿ: ಟ್ವೆಂಟಿ–20 ವಿಶ್ವಕಪ್ ಟೂರ್ನಿ ಮುಗಿದ ನಂತರ ಭಾರತ ಚುಟುಕು ಕ್ರಿಕೆಟ್ ತಂಡದ ನಾಯಕತ್ವ ಬಿಟ್ಟುಕೊಡುವುದಾಗಿ ಹೇಳಿರುವ ವಿರಾಟ್ ಕೊಹ್ಲಿ ಅವರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

ವಿಶ್ವಕಪ್ ಟೂರ್ನಿಗೂ ಮುನ್ನ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯ ದ್ವಿತೀಯಾರ್ಧದಲ್ಲಿ ಅವರ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಜಯಿಸಬಹುದೇ ಎಂಬ ನಿರೀಕ್ಷೆ ಮೂಡಿದೆ.

2008ರಲ್ಲಿ ಟೂರ್ನಿ ಆರಂಭವಾದಾಗಿನಿಂದಲೂ ತಾರಾ ವರ್ಚಸ್ಸಿನ ದಿಗ್ಗಜ ಆಟಗಾರರು ಈ ತಂಡದಲ್ಲಿ ಆಡಿದ್ದಾರೆ. ಅಲ್ಲದೇ ದಾಖಲೆ ಸಂಖ್ಯೆಯ ಅಭಿಮಾನಿ ಬಳಗ ಕೂಡ ಈ ತಂಡಕ್ಕೆ ಇದೆ. ಆದರೂ ಇಲ್ಲಿಯವರೆಗೆ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ಸಲದ ಟೂರ್ನಿಯ ಮೊದಲಾರ್ಧದಲ್ಲಿ ಉತ್ತಮ ಆರಂಭವನ್ನೇ ಮಾಡಿರುವುದು ಪ್ರಶಸ್ತಿ ನಿರೀಕ್ಷೆ ಮೂಡಲು ಕಾರಣವಾಗಿದೆ. ಆರ್‌ಸಿಬಿಯು ಸೋಮವಾರ ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧ ಕಣಕ್ಕಿಯಲಿದೆ.

ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿಯು 10 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಗ್ಲೆನ್ ಮ್ಯಾಕ್ಸ್‌ವೆಲ್ (7 ಪಂದ್ಯಗಳಿಂದ 223 ರನ್), ಎಬಿ ಡಿವಿಲಿಯರ್ಸ್ (7 ಪಂದ್ಯಗಳಿಂದ 207), ವಿರಾ್ಟ್ ಕೊಹ್ಲಿ (198) ಮತ್ತು ದೇವದತ್ತ ಪಡಿಕ್ಕಲ್ (195) ಅವರ ಅಮೋಘ ಬ್ಯಾಟಿಂಗ್‌ ತಂಡದ ಜಯದಲ್ಲಿ ಪ್ರಮುಖವಾಗಿದೆ.

ಹರ್ಷಲ್ ಪಟೇಲ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್ ಅವರೂ ಕೂಡ ಜಯದ ಕಾಣಿಕೆ ನೀಡಿದ್ದಾರೆ. ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ತಂಡದಲ್ಲಿ ಸ್ಥಾನ ಪಡೆಯದ ಸ್ಪಿನ್ನರ್ ಯಜುವೇಂದ್ರ ಚಾಹಲ್ ತಮ್ಮ ಸಾಮರ್ಥ್ಯ ಮೆರೆದು ಆಯ್ಕೆಗಾರರ ಗಮನ ಸೆಳೆಯಲು ಸಿದ್ಧರಾಗಿದ್ದಾರೆ. ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ಅವರ ಬದಲಿಗೆ ಶ್ರೀಲಂಕಾದ ವನಿಂದು ಹಸರಂಗಾ ಮತ್ತು ದುಷ್ಮಂತಾ ಚಮೀರ ಸ್ಥಾನ ಪಡೆದಿದ್ದಾರೆ.

ಆದರೆ ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಮಾತ್ರ ಏಳು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಜಯಿಸಿ ಒತ್ತಡದಲ್ಲಿದೆ. ಏಯಾನ್ ಮಾರ್ಗನ್ ನಾಯಕತ್ವದ ಬಳಗವು ಪ್ಲೇ ಆಫ್‌ ಪ್ರವೇಶಿಸಬೇಕಾದರೆ ಮುಂದಿನ ಹಂತದಲ್ಲಿ ಕನಿಷ್ಠ ಐದು ಪಂದ್ಯಗಳಲ್ಲಿ ಉತ್ತಮ ರನ್‌ ಸರಾಸರಿಯೊಂದಿಗೆ ಜಯಿಸುವ ಸವಾಲು ಇದೆ.

2014ರಲ್ಲಿ ಟೂರ್ನಿಯ ಆರಂಭದಲ್ಲಿ ಇಂತಹದೇ ಸ್ಥಿತಿ ಎದುರಿಸಿದ್ದ ಕೆಕೆಆರ್ ನಂತರ ಸತತ ಒಂಬತ್ತು ಪಂದ್ಯಗಳಲ್ಲಿ ಜಯಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

‘ಈ ಮೊದಲು ಕೂಡ ಕಠಿಣ ಸ್ಥಿತಿಯಿಂದ ಮೇಲೆದ್ದು ಪ್ರಶಸ್ತಿ ಗೆದ್ದಿರುವ ಇತಿಹಾಸ ನಮ್ಮದು. ಈಗಲೂ ಅಂತಹ ಆತ್ಮವಿಶ್ವಾಸ ಇದೆ. ಪ್ರತಿಭಾವಂತ ಆಟಗಾರರೂ ತಂಡದಲ್ಲಿದ್ದಾರೆ’ ಎಂದು ಕೆಕೆಆರ್ ಮಾರ್ಗದರ್ಶಕ ಡೇವಿಡ್ ಹಸ್ಸಿ ಹೇಳಿದ್ದಾರೆ.

ಮೊದಲ ಹಂತದಲ್ಲಿ ಇವೆರಡೂ ತಂಡಗಳು ಮುಖಾಮುಖಿಯಾದಾಗ ಆರ್‌ಸಿಬಿ ಜಯಿಸಿತ್ತು. ಮತ್ತೊಂದು ಜಯದ ಕನಸಿನಲ್ಲ ವಿರಾಟ್ ಬಳಗವಿದೆ.

ತಂಡಗಳು
ಕೋಲ್ಕತ್ತ ನೈಟ್ ರೈಡರ್ಸ್: ಏಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಗುರುಕೀರತ್ ಸಿಂಗ್ ಮಾನ್, ಕರುಣ್ ನಾಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಹರಭಜನ್ ಸಿಂಗ್, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗ್ಯುಸನ್, ಪವನ್ ನೇಗಿ, ಎಂ. ಪ್ರಸಿದ್ಧಕೃಷ್ಣ, ಸಂದೀಪ್ ವಾರಿಯರ್, ಶಿವಂ ದುಬೆ, ಟಿಮ್ ಸೌಥಿ, ವೈಭವ್ ಅರೋರ, ವರುಣ ಚಕ್ರವರ್ತಿ, ಆ್ಯಂಡ್ರೆ ರಸೆಲ್, ಬೆನ್ ಕಟಿಂಗ್, ಶಕೀಬ್ ಅಲ್ ಹಸನ್, ಸುನೀಲ್ ನಾರಾಯಣ್, ವೆಂಕಟೇಶ್ ಅಯ್ಯರ್, ಶೆಲ್ಡನ್ ಜಾಕ್ಸನ್, ಟಿಮ್ ಸೀಫರ್ಟ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ದೇವದತ್ತ ಪಡಿಕ್ಕಲ್, ಎಬಿ ಡಿವಿಲಿಯರ್ಸ್,ಮೊಹಮ್ಮದ್ ಸಿರಾಜ್, ಕೈಲ್ ಜೆಮಿಸನ್, ಟಿಮ್ ಡೇವಿಡ್, ಕೆ.ಎಸ್. ಭರತ್, ವನಿಂದು ಹಸರಂಗಾ, ಹರ್ಷಲ್ ಪಟೇಲ್, ನವದೀಪ್ ಸೈನಿ, ಗ್ಲೆನ್ ಮ್ಯಾಕ್ಸ್‌ವೆಲ್, ಡ್ಯಾನ್ ಕ್ರಿಸ್ಟಿಯನ್, ರಜತ್ ಪಾಟೀದಾರ್, ದುಷ್ಮಂತ ಚಮೀರ, ಪವನ್ ದೇಶಪಾಂಡೆ, ಮೊಹಮ್ಮದ್ ಅಜರುದ್ದೀನ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಬಲಾಬಲ
ಪಂದ್ಯ
: 28
ಕೆಕೆಆರ್ ಜಯ; 15
ಆರ್‌ಸಿಬಿ ಜಯ; 13

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT