ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ

Last Updated 30 ಆಗಸ್ಟ್ 2021, 19:01 IST
ಅಕ್ಷರ ಗಾತ್ರ

ಬೆಂಗಳೂರು: ‘ಕಳೆದ ಕೆಲವು ವರ್ಷಗಳಿಂದ ನನ್ನ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಕಂಡಿದ್ದೇನೆ. ಇನ್ನಷ್ಟು ಕಾಲ ಇದೇ ರೀತಿಯ ಸ್ಥಿತಿಯಲ್ಲಿರುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ನಿವೃತ್ತಿ ತೀರ್ಮಾನ ತೆಗೆದುಕೊಂಡೆ’–

ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್, ಬೆಂಗಳೂರಿನ ಸ್ಟುವರ್ಟ್ ಬಿನ್ನಿ ಅವರ ಮಾತುಗಳಿವು. ಅವರು ಸೋಮವಾರ ಬೆಳಿಗ್ಗೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.

‘ನನ್ನಲ್ಲಿ ಇನ್ನೂ ಕೆಲಕಾಲ ಕ್ರಿಕೆಟ್ ಆಡುವ ಸಾಮರ್ಥ್ಯ ಇದೆ. ಈ ಹೊತ್ತಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ. ಆದರೂ ಅನಿವಾರ್ಯ’ ಎಂದು ಬಿನ್ನಿ ಹೇಳಿದ್ದಾರೆ.

1983ರ ವಿಶ್ವಕಪ್ ವಿಜೇತ ರೋಜರ್‌ ಬಿನ್ನಿ ಅವರ ಮಗ ಎಂಬ ಖ್ಯಾತಿಯ ಜೊತೆಗೆ ತಮ್ಮ ಆಟದ ಮೂಲಕವೂ ಹೆಸರು ಮಾಡಿಕೊಂಡವರು ಸ್ಟುವರ್ಟ್ ಬಿನ್ನಿ. ಆರು ಟೆಸ್ಟ್ ಮತ್ತು 14 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.2014ರಲ್ಲಿ ಅವರು ಬಾಂಗ್ಲಾದೇಶ ವಿರುದ್ಧ (4.4-2- 4- 6) ಅವರು ಸಾಧನೆಯು ಭಾರತೀಯ ಬೌಲರ್‌ನಿಂದ ಮೂಡಿಬಂದ ಸರ್ವಶ್ರೇಷ್ಠ ದಾಖಲೆಯಾಗಿದೆ.

ದೇಶಿ ಕ್ರಿಕೆಟ್‌ನಲ್ಲಿ ಕರ್ನಾಟಕ ಮತ್ತು ನಾಗಾಲ್ಯಾಂಡ್ ತಂಡಗಳನ್ನು ಪ್ರತಿನಿಧಿಸಿದ್ದರು. 95 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 4796 ರನ್ ಗಳಿಸಿದ್ದರು. ಮಧ್ಯಮವೇಗಿಯಾಗಿದ್ದ ಸ್ಟುವರ್ಟ್‌ 148 ವಿಕೆಟ್‌ಗಳನ್ನೂ ಗಳಿಸಿದ್ದರು. ಕರ್ನಾಟಕ ತಂಡದ ‘ಡಬಲ್‌–ಟ್ರಿಪಲ್’ ಸಾಧನೆಯಲ್ಲಿ ಸ್ಟುವರ್ಟ್ ಪಾತ್ರವೂ ಮಹತ್ವದ್ದಾಗಿತ್ತು.

ಆದರೆ ಅವರ ವೃತ್ತಿಜೀವನವು ಬಹಳಷ್ಟು ಏಳು ಬೀಳುಗಳಿಂದ ಕೂಡಿದ್ದು ಸುಳ್ಳಲ್ಲ. ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್‌)ನಲ್ಲಿ ಅವರು ಆಡಿದ್ದರು. ಅದರಿಂದಾಗಿ ಬಿಸಿಸಿಐ ಕೆಂಗಣ್ಣಿಗೂ ಗುರಿಯಾಗಿದ್ದರು. ನಂತರ ಐಸಿಎಲ್‌ ಬಿಟ್ಟು ಮರಳಿದ ಸ್ಟುವರ್ಟ್‌ ಕರ್ನಾಟಕ ತಂಡದಲ್ಲಿ ತಮ್ಮ ಛಾಪು ಒತ್ತಲು ಬಹಳಷ್ಟು ಕಾಲ ಶ್ರಮಪಡಬೇಕಾಯಿತು.

‘ನಾನು ವೈಫಲ್ಯ ಅನುಭವಿಸಿ ಮರಳಿದಾಗಲೆಲ್ಲ ಮತ್ತೆ ಮತ್ತೆ ಸಾಮರ್ಥ್ಯ ಸಾಬೀತು ಮಾಡಿದ್ದೇನೆ. ಕರ್ನಾಟಕ ಮತ್ತು ಭಾರತ ತಂಡದಲ್ಲಿ ಅವಕಾಶ ಸಿಕ್ಕಾಗಲೆಲ್ಲ ಸಂಪೂರ್ಣ ಸಾಮರ್ಥ್ಯ ಪಣಕ್ಕೊಡ್ಡಿದ್ದೇನೆ. ಆ ತೃಪ್ತಿ ನನಗಿದೆ‘ ಎಂದು 37 ವರ್ಷದ ಬಿನ್ನಿ ಹೇಳಿದ್ದಾರೆ.

ಸ್ಟುವರ್ಟ್‌ ಬಿನ್ನಿ ನಿವೃತ್ತಿಯ ನಂತರ ಕೋಚಿಂಗ್‌ ನೀಡಲು ಆರಂಭಿಸುವುದಾಗಿ ತಿಳಿಸಿದ್ಧಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಲೆವಲ್‌ 2 ಕೋಚ್‌ ಆಗಿದ್ದಾರೆ. ಮೂರನೇ ಸರ್ಟಿಫಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿಯೂ ಅವರು ಆಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT