ಶುಕ್ರವಾರ, ಮಾರ್ಚ್ 31, 2023
22 °C
ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಮುಖ್ಯಸ್ಥರಿಗೆ ಹುಬ್ಬಳ್ಳಿ ಜೊತೆ ನಂಟು

ಗದುಗಿನ ಕೀರ್ತಿ ಬೆಳಗಿದ ಕ್ರಿಕೆಟಿಗ ಸುನೀಲ್‌ ಜೋಶಿ

ಪ್ರಮೋದ್ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಗದುಗಿನ ಸುನೀಲ್‌ ಜೋಶಿ ನೇಮಕವಾಗಿದ್ದಾರೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಅವರು ಕ್ರಿಕೆಟ್‌ ಕೌಶಲ ಕಲಿತು, ಬದುಕು ರೂಪಿಸಿಕೊಂಡ ಧಾರವಾಡ ಹಾಗೂ ಗದಗ ಜಿಲ್ಲೆಯ ಸ್ನೇಹಿತರಲ್ಲಿ ಸಂತಸ ಮನೆ ಮಾಡಿದೆ.

ಆಟಗಾರ, ನಾಯಕ, ಕೋಚ್‌ ಹೀಗೆ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿರುವ ಜೋಶಿ ಅವರಿಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಗೆ ಮುಖ್ಯಸ್ಥ
ರಾಗುವ ಅವಕಾಶ ಒದಗಿ ಬಂದಿದ್ದು ಅವರೊಡನೆ ಕ್ರಿಕೆಟ್ ಆಡಿದ ಸ್ನೇಹಿತರ ಮತ್ತು ಹಿತೈಷಿಗಳಲ್ಲಿ ಹೆಮ್ಮೆಯ ಭಾವ ಮೂಡಿಸಿದೆ.

ಗದುಗಿನಲ್ಲಿ ಸೌಲಭ್ಯಗಳ ಕೊರತೆಯಿದ್ದ ಕಾರಣ ಜೋಶಿ ಅವರು ಅಭ್ಯಾಸ ಮಾಡಲು ನಿತ್ಯ ಹುಬ್ಬಳ್ಳಿಗೆ ಬರುತ್ತಿದ್ದರು. ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಎದುರಿನ ರಣಜಿ ಪಂದ್ಯಕ್ಕೆ ಅವರು ಉತ್ತರ ಪ್ರದೇಶ ತಂಡದ ಕೋಚ್‌ ಆಗಿ ಇಲ್ಲಿಗೆ ಬಂದಿದ್ದರು. ಆಲ್‌ರೌಂಡರ್‌ ಜೋಶಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ವಾಣಿಜ್ಯ ನಗರಿಯಲ್ಲಿಯೇ. ಆದ್ದರಿಂದ ಜೋಶಿ ಹುಟ್ಟಿದ್ದು ಗದುಗಿನಲ್ಲಾದರೂ; ಅವರ ಕ್ರಿಕೆಟ್ ಬದುಕು ರೂಪು
ಗೊಳ್ಳಲು ಕಾರಣವಾಗಿದ್ದು ಹುಬ್ಬಳ್ಳಿ ವಾತಾವರಣ.

ಗದುಗಿನ ವಿ.ಡಿ.ಎಸ್‌.ಟಿ.ಸಿ ಹೈಸ್ಕೂಲ್‌ನಲ್ಲಿ ಓದಿದ ಅವರು, ಎ.ಎಸ್‌.ಎಸ್‌. ವಾಣಿಜ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದರು. ನಂತರ ಮುದ್ರಣ ನಗರಿಯ ಜೆ.ಟಿ. ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು. ಓದಿನ ಜೊತೆಜೊತೆಗೆ ಗದಗ ಕ್ರಿಕೆಟ್‌ ಕ್ಲಬ್‌ ಮತ್ತು ಹುಬ್ಬಳ್ಳಿಯ ಎ.ಕೆ. ಇಂಡಸ್ಟ್ರಿ ಪರ ಪಂದ್ಯಗಳನ್ನಾಡಿದ್ದರು. ಆಗ ಮುನ್ನಾ ಗುಳೇದಗುಡ್ಡ ಮತ್ತು ಜೋಶಿ ಅವರ ಸಹೋದರ ಅಶೋಕ ತರಬೇತಿ ನೀಡುತ್ತಿದ್ದರು.

ಆ ದಿನಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಮಾಜಿ ಕ್ರಿಕೆಟಿಗ ದಯಾನಂದ ಶೆಟ್ಟಿ ‘ದೇಶದ ಹಲವು ರಾಜ್ಯ ತಂಡಗಳಿಗೆ ಕೋಚ್‌ ಆಗಿ ಕೆಲಸ ಮಾಡಿದ ಜೋಶಿ ವಿದೇಶದಲ್ಲಿಯೂ ತಮ್ಮ ಛಾಪು ಮೂಡಿಸಿದರು. ಸ್ವಂತ ಶಕ್ತಿ ಮತ್ತು ಕ್ರಿಕೆಟ್ ಬಗ್ಗೆ ಹೊಂದಿರುವ ಬದ್ಧತೆ ಅವರನ್ನು ದೊಡ್ಡ ಸ್ಥಾನಕ್ಕೆ ಕರೆದೊಯ್ದಿದೆ. ನಮ್ಮೆದುರು ಕಲಿತ ಹುಡುಗ ಈಗ ದೊಡ್ಡ ಹುದ್ದೆಗೆ ಏರಿರುವುದು ಸಂತೋಷ ಉಂಟು ಮಾಡಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಜೋಶಿ ಅವರ ಜೊತೆ ಅನೇಕ ಕ್ರಿಕೆಟ್‌ ಪಂದ್ಯಗಳನ್ನು ಆಡಿರುವ
ಹಿರಿಯ ಕೋಚ್‌ ಸೋಮಶೇಖರ ಶಿರಗುಪ್ಪಿ ‘ಜೋಶಿ ಅವರ ಕ್ರಿಕೆಟ್‌ನಲ್ಲಿನ ಹಿಂದಿನ ಎಲ್ಲ ಅನುಭವಗಳು ಈ ಗೌರವ ಪಡೆಯಲು ನೆರವಾಗಿವೆ’ ಎಂದರು.

ವಿವಿಧ ಡಿವಿಷನ್‌ ಪಂದ್ಯಗಳಲ್ಲಿ ಜೋಶಿ ಜೊತೆ ಆಡಿರುವ ಸತೀಶ ಪೈ ‘ಸುನೀಲ್‌ ಜೋಶಿ ಬಹಳ ಬಡತನದ ಹಿನ್ನೆಲೆಯಿಂದ ಬೆಳೆದು ಬಂದಿದ್ದರಿಂದ ಕ್ರಿಕೆಟ್‌ ಬಗ್ಗೆ ತುಂಬಾ ಗಂಭೀರವಾಗಿದ್ದರು. ಆಟದ ಬಗ್ಗೆ ಬದ್ಧತೆ ಹೊಂದಿದ್ದರು. ಆ ಬದ್ಧತೆ ಮತ್ತು ಶ್ರಮವೇ ಈಗಿನ ಸಾಧನೆಗೆ ಕಾರಣ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು