ಗುರುವಾರ , ಜುಲೈ 29, 2021
23 °C

ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಲ್ಲಿ ಗದ್ದುಗೆ ಹೋರಾಟ ಜೋರು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಜಿಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಉನ್ನತ ಹುದ್ದೆಗಳಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಹಗ್ಗಜಗ್ಗಾಟ ತಾರಕಕ್ಕೇರಿದೆ. ಅಮಾನತಾಗಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಥಬಾಂಗ್ ಮೊರೀ ಇದೀಗ ವಿವಾದದ ಕಣಕ್ಕೆ ಇಳಿದಿದ್ದು ತಾವಿನ್ನೂ ಸಿಇಒ ಆಗಿಯೇ ಮುಂದುವರಿಯುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಕ್ರಿಕೆಟ್ ಮಂಡಳಿ ಅವರಿನ್ನೂ ಅಮಾನತಿನಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಿದೆ.

ಆರು ತಿಂಗಳ ಹಿಂದೆ ಅಮಾನತಾಗಿರುವ ಮೊರೀ ಗುರುವಾರ ಕಾರ್ಯನಿರ್ವಹಿಸಲು ಬಂದಿದ್ದರು. ಅಮಾನತು ಅವಧಿ ಸಂಪೂರ್ಣವಾಗಿ ಮುಗಿದಿರುವುದರಿಂದ ಕರ್ತವ್ಯಕ್ಕೆ ವಾಪಸಾಗಿರುವುದಾಗಿ ಹೇಳಿದ್ದರು. ಆದರೆ ಕೊರೊನಾ ಹಾವಳಿಯಿಂದಾಗಿ ಮಂಡಳಿಯ ಕಚೇರಿ ಲಾಕ್‌ ಡೌನ್ ಆಗಿದ್ದು ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಮೊರೀ ಅವರಿಗೆ ಕಚೇರಿ ಪ್ರವೇಶಿಸಲು ಆಗಲಿಲ್ಲ.

ಅನುಚಿತ ವರ್ತನೆ ತೋರಿದ್ದಕ್ಕಾಗಿ ಅಮಾನತಾಗಿದ್ದ ಮೊರೀ ಆವರಿಗೆ ಸಂಬಂಧಿಸಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೈಸೇರುವ ವರೆಗೆ ಅಮಾನತು ಜಾರಿಯಲ್ಲಿರುತ್ತದೆ ಎಂದು ಶುಕ್ರವಾರ ಬೆಳಿಗ್ಗೆ ತಿಳಿಸಿರುವ ಮಂಡಳಿ ಈ ತಿಂಗಳ ಅಂತ್ಯದ ಒಳಗೆ ಪ್ರಕರಣಕ್ಕೆ ಸಂಬಂಧಿಸಿದ ಸ್ಪಷ್ಟ ಚಿತ್ರಣ ಲಭಿಸಲಿದೆ ಎಂದು ವಿವರಿಸಿದೆ.

ಮೊರೀ ಅಮಾನತು ಆದ ನಂತರ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ (ಸಿಎಸ್‌ಎ) ಆಡಳಿತದಲ್ಲಿ ಅನೇಕ ಬದಲಾವಣೆಗಳಾಗಿವೆ. ಜಾಕ್ಸ್ ಫಾಲ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದ್ದು ಕ್ರಿಕೆಟ್ ಚಟುವಟಿಕೆಗಳ ವಿಭಾಗದ ನಿರ್ದೇಶಕ ಸ್ಥಾನದಲ್ಲಿ ಹಿರಿಯ ಆಟಗಾರ ಗ್ರೇಮ್ ಸ್ಮಿತ್ ಅವರನ್ನು ಕೂರಿಸಲಾಗಿದೆ. ಮಾಜಿ ವಿಕೆಟ್ ಕೀಪರ್ ಮಾರ್ಕ್ ಬೌಚರ್‌ಗೆ ಕೋಚ್ ಹೊಣೆ ಹೊರಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಸಿಎಸ್‌ಎ ಮೇಲೆ ಪ್ರಾಯೋಜಕರು ಮತ್ತು ಮಾಜಿ ಆಡಳಿತಗಾರರು ಟೀಕಾಪ್ರಹಾರ ಮಾಡಿದ್ದರು. ಮಂಡಳಿಯನ್ನು ವಿಸರ್ಜಿಸಬೇಕೆಂದೂ ಅಧ್ಯಕ್ಷ ಕ್ರಿಸ್ ನೆಂಜಾನಿ ಮತ್ತು ಉಪಾಧ್ಯಕ್ಷ ಬೆರೆಸ್‌ಫೋರ್ಡ್‌ ವಿಲಿಯಮ್ಸ್ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಲಾಗಿತ್ತು.

ಸಿಎಸ್‌ಎ ಸಂವಿಧಾನದ ಪ್ರಕಾರ ಹುದ್ದೆಯೊಂದರಲ್ಲಿ ಒಬ್ಬರು ಗರಿಷ್ಠ ಮೂರು ವರ್ಷ ಕಾರ್ಯನಿರ್ವಹಿಸಬಹುದು. ಇದರ ಪ್ರಕಾರ ನೆಂಜಾನಿ ಅವಧಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮುಗಿಯಬೇಕಾಗಿತ್ತು. ಆದರೆ ಅವರನ್ನು ಒಂದು ವರ್ಷ ಮುಂದುವರಿಸಲು ನಿರ್ಧರಿಸಲಾಗಿತ್ತು. 

ಮಂಡಳಿಯಡಿ ಕಾರ್ಯನಿರ್ವಹಿಸುವ ಕ್ರಿಕೆಟ್ ಸಂಸ್ಥೆಗಳೊಂದಿನ ಸಂಬಂಧ ಮೊರೀ ಅವರ ಅವಧಿಯಲ್ಲಿ ಹಳಸಿತ್ತು. ಐವರು ಪತ್ರಕರ್ತರ ಮಾನ್ಯತೆಯನ್ನು ರದ್ದುಮಾಡಿದ ನಂತರ ಮೊರೀ ಅವರನ್ನು ಅಮಾನತು ಮಾಡಲಾಗಿತ್ತು. ಇದರ ಹಿನ್ನೆಲೆಯಲ್ಲಿ ನಾಲ್ವರು ಸದಸ್ಯರು ರಾಜೀನಾಮೆ ನೀಡಿದ್ದರು. ಪ್ರಮುಖ ಕಂಪನಿಗಳು ಪ್ರಾಯೋಜಕತ್ವವನ್ನು ನವೀಕರಿಸಲು ನಿರಾಕರಿಸಿದ್ದವು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು