ಮಂಗಳವಾರ, ನವೆಂಬರ್ 24, 2020
22 °C
ಮಹಿಳಾ ಚಾಲೆಂಜರ್ ಟೂರ್ನಿ: ಹರ್ಮನ್‌ಪ್ರೀತ್ ಕೌರ್–ಸ್ಮೃತಿ ಮಂದಾನ ಬಳಗಗಳ ಮುಖಾಮುಖಿ

ಭರವಸೆಯಲ್ಲಿ ಟ್ರೇಲ್‌ಬ್ಲೇಜರ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ: ಪ್ರಬಲ ವೆಲೋಸಿಟಿ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿ ಭರವಸೆಯಲ್ಲಿರುವ ಟ್ರೇಲ್‌ಬ್ಲೇಜರ್ಸ್ ತಂಡ ಐಪಿಎಲ್‌ ಅಂಗವಾಗಿ ನಡೆಯುತ್ತಿರುವ ಮಹಿಳಾ ಚಾಲೆಂಜರ್ ಟೂರ್ನಿಯಲ್ಲಿ ಶನಿವಾರ ಸೂಪರ್‌ನೋವಾಸ್ ವಿರುದ್ಧ ಸೆಣಸಲಿದೆ. ಮೊದಲ ಪಂದ್ಯದಲ್ಲಿ ವೆಲೋಸಿಟಿಗೆ ಮಣಿದಿರುವ ಹಾಲಿ ಚಾಂಪಿಯನ್‌ ಸೂಪರ್‌ನೋವಾಸ್‌ ಫೈನಲ್‌ ಪ್ರವೇಶಿಸಬೇಕಾದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.

ಹಿಂದಿನ ಎರಡೂ ಆವೃತ್ತಿಗಳಲ್ಲಿ ಪಾರಮ್ಯ ಸ್ಥಾಪಿಸಿದ್ದ ಸೂಪರ್‌ನೋವಾಸ್‌ ಈ ಬಾರಿ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಸೋತಿತ್ತು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ ಕೇವಲ 126 ರನ್ ಗಳಿಸಿತ್ತು. ಒಂದು ಎಸೆತ ಬಾಕಿ ಇರುವಾಗ ವೆಲೋಸಿಟಿ ಐದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತ್ತು. ಗುರುವಾರ ನಡೆದ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ವೆಲೋಸಿಟಿಗೆ ಸ್ಮೃತಿ ಮಂದಾನ ನಾಯಕತ್ವದ ಟ್ರೇಲ್‌ಬ್ಲೇಜರ್ಸ್ ಭಾರಿ ಪೆಟ್ಟು ನೀಡಿತ್ತು. 47 ರನ್‌ಗಳಿಗೆ ವೆಲೋಸಿಟಿಯನ್ನು ಕೆಡವಿದ ಟ್ರೇಲ್‌ಬ್ಲೇಜರ್ಸ್ ಒಂದು ವಿಕೆಟ್ ಕಳೆದುಕೊಂಡು ಎಂಟನೇ ಓವರ್‌ನಲ್ಲಿ ಜಯ ಗಳಿಸಿತ್ತು.

ಶನಿವಾರದ ಪಂದ್ಯದಲ್ಲೂ ಜಯ ಗಳಿಸಿದರೆ ಟ್ರೇಲ್‌ಬ್ಲೇಜರ್ಸ್‌ ಸುಲಭವಾಗಿ ಫೈನಲ್ ಪ್ರವೇಶಿಸಲಿದೆ. ಸೂಪರ್‌ನೋವಾಸ್ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಗುರುವಾರದ ಪಂದ್ಯದಲ್ಲಿ ಮಂದಾನ ಬಳಗದ ಬೌಲರ್‌ಗಳು ಅಪ್ರತಿಮ ಸಾಮರ್ಥ್ಯ ಮೆರೆದಿದ್ದರು. ಸೋಫಿ ಎಕ್ಲೆಸ್ಟೋನ್ ಒಂಬತ್ತು ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದರು. ಜೂಲನ್ ಗೋಸ್ವಾಮಿ ಮತ್ತು ರಾಜೇಶ್ವರಿ ಗಾಯಕವಾಡ್ ಕೂಡ ಉತ್ತಮ ಬೌಲಿಂಗ್ ಮಾಡಿದ್ದರು. 

ಸ್ಮೃತಿ ಮಂದಾನ ಒಳಗೊಂಡಂತೆ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದು ಎದುರಾಳಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಯಾವುದೇ ಬೌಲರ್‌ಗಳ ವಿರುದ್ಧ ರನ್‌ ಕಲೆಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಜೆಮಿಮಾ ರಾಡ್ರಿಗಸ್ ಮತ್ತು ಚಾಮರಿ ಅಟ್ಟಪಟ್ಟು ಅವರ ಬಲವೂ ತಂಡಕ್ಕೆ ಇದೆ. ಗೆಲುವು ಸಾಧಿಸಿದರೆ ಸೂಪರ್‌ನೋವಾ ರನ್‌ರೇಟ್‌ನಲ್ಲಿ ವೆಲೋಸಿಟಿಯನ್ನು ಹಿಂದಿಕ್ಕಲಿದೆ. ಹೀಗಾಗಿ ಅದರ ಫೈನಲ್ ಪ್ರವೇಶ ಸುಲಭವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು