ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಸುರೇಶ್ ರೈನಾ ಕ್ರಿಕೆಟ್‌ ಪಯಣದ ಅಂತ್ಯವೇ? ಹೊಸ ಆರಂಭವೇ?

Last Updated 1 ಸೆಪ್ಟೆಂಬರ್ 2020, 6:44 IST
ಅಕ್ಷರ ಗಾತ್ರ

ಉತ್ತರಪ್ರದೇಶ ರಾಜ್ಯ ಕ್ರಿಕೆಟ್ ಸಂಸ್ಥೆ ಎಂದರೆ ’ಅವ್ಯವಸ್ಥೆೆಗಳ ಆಗರ‘ ಎಂದೇ ಜನಜನಿತ. ಆದರೂ ಕೆಸರಿನಲ್ಲಿ ಕಮಲ ಹೂವು ಅರಳುವ ರೀತಿಯಲ್ಲಿಯೇ ಈ ರಾಜ್ಯದಿಂದ ಕ್ರಿಕೆಟ್ ಸಾಧಕರು ಹೊರಬರುತ್ತಾರೆ. ಅಂತಹವರಲ್ಲಿ ಸುರೇಶ್ ರೈನಾ ಕೂಡ ಒಬ್ಬರು.

ಈ ರಾಜ್ಯದಲ್ಲಿ ಬಾಲ್ಯದಲ್ಲಿ ಕ್ರಿಕೆಟ್ ಆಡಲು ತೆರಳುವ ಮಕ್ಕಳು ಅವ್ಯವಸ್ಥೆಗಳ ವಿರುದ್ಧದ ಹೋರಾಟದ ಪ್ರಥಮಾಕ್ಷರಗಳನ್ನೂ ಕಲಿಯತ್ತಾರೆ. ಆದರೆ ರೈನಾ ತಮ್ಮ ಮನೆಯೊಳಗಿನಿಂದಲೇ ಸವಾಲುಗಳ ವಿರುದ್ಧ ಸೆಣಸುವುದನ್ನು ಕಲಿಯುತ್ತಲೇ ಬೆಳೆದವರು. ಉತ್ತರ ಪ್ರದೇಶದ ಮುರಾದಾಬಾದ್‌ನ ಸುರೇಶ್ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದವರು. ಅಪ್ಪ ತ್ರಿಲೋಕಚಂದ್ ರೈನಾ ಅವರು ಸೇನೆಯ ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆಯಲ್ಲಿ ಬಾಂಬ್‌ ತಯಾರಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಜಮ್ಮು ಮತ್ತು ಕಾಶ್ಮೀರದ ರೈನಾವರಿಯಲ್ಲಿ ಕೆಲಸ ಮಾಡುತ್ತಿದ್ದರು. 90ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಹೆಚ್ಚಿದಾಗ, ತಮ್ಮ ಕುಟುಂಬದೊಂದಿಗೆ ಉತ್ತರಪ್ರದೇಶದ ಮೊರಾದಾಬಾದ್‌ಗೆ ಬಂದು ನೆಲೆಸಿದರು.

ಆಗಿನ ಸಂದರ್ಭದಲ್ಲಿ ಬರುತ್ತಿದ್ದ ಕೇವಲ ಹತ್ತು ಸಾವಿರ ಸಂಬಳದಲ್ಲಿ ರೈನಾ ಕುಟುಂಬದ ಎಂಟು ಜನರ ಜೀವನ ನಡೆಯಬೇಕಿತ್ತು. ಇದು ತ್ರಿಲೋಕ್‌ಚಂದ್ ಅವರಿಗೆ ರೈನಾ ಸೇರಿದಂತೆ ಐವರು ಮಕ್ಕಳು.

’ಅಪ್ಪ ಸೇನೆಯಲ್ಲಿದ್ದರು. ನನ್ನ ದೊಡ್ಡಣ್ಣ ಕೂಡ ಸೇನೆಯಲ್ಲಿದ್ದರು. ಬಾಂಬ್‌ಗಳ ತಯಾರಿಕೆಯಲ್ಲಿ ಅಪ್ಪ ಪರಿಣತರಾಗಿದ್ದರು. ಅವರು ತಮಗೆ ಬರುತ್ತಿದ್ದ ವರಮಾನದಲ್ಲಿ ಹುತಾತ್ಮ ಸೈನಿಕರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದರು. ಅವರು ಭಾವನಾತ್ಮಕವಾಗಿ ಮಾಡುತ್ತಿದ್ದ ಕಾರ್ಯ ಅದು‘ ಎಂದು ರೈನಾ ಒಂದು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು.

ಚಿರಪರಿಚಿತರಿಗೆಲ್ಲ ’ಸೋನು‘ ಎಂದೇ ಆಪ್ತರಾಗಿರುವ ಸುರೇಶ್, ಬಾಲ್ಯದಲ್ಲಿ ಕ್ರಿಕೆಟ್‌ ಅಕಾಡೆಮಿಗೆ ಸೇರಲು ಹತ್ತು ಸಾವಿರ ರೂಪಾಯಿಯ ಕೊರತೆ ಕಾಡಿತ್ತು. ಅಪ್ಪ ಕೇವಲ ಐದು ಸಾವಿರ ಮಾತ್ರ ಹೊಂದಿಸಿಕೊಟ್ಟಿದ್ದರು. ಆದರೆ ತಮ್ಮ ಪ್ರತಿಭೆಯಿಂದಲೇ ಆಯ್ಕೆದಾರರ ಗಮನ ಸೆಳೆದು ಬೆಳೆದ ಸುರೇಶ್ ಇತ್ತು ₹ 200 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಪಾಸ್ತಿ ಇರುವ ಕ್ರಿಕೆಟಿಗ.

’ಲಖನೌನ ಗುರುಗೋವಿಂದ್ ಸಿಂಗ್ ಸ್ಪೋರ್ಟ್ಸ್‌ ಕಾಲೇಜಿನಲ್ಲಿ ಕ್ರಿಕೆಟ್ ಆಯ್ಕೆಗೆ ಹಾಜರಾಗಿದ್ದೆ. ಆದರೆ ಆ ಸಂದರ್ಭದಲ್ಲಿ ಅಗತ್ಯವಾಗಿದ್ದ ಹತ್ತು ಸಾವಿರ ರೂಪಾಯಿ ಹೊಂದಿಸುವುದು ಕಷ್ಟವಾಗಿತ್ತು. ಕಾಲೇಜಿನ ವರ್ಷದ ಶುಲ್ಕ ಐದು ಸಾವಿರ ಮಾತ್ರ ಹೊಂದಿಸಿಕೊಡಲು ಮಾತ್ರ ಸಾಧ್ಯ ಎಂದು ಅಪ್ಪ ಹೇಳಿದ್ದರು. ಓದು ಮತ್ತು ಆಟವಾಡಿಕೊಂಡಿರುತ್ತೇನೆ ನನ್ನ ಬಗ್ಗೆ ಚಿಂತೆ ಬಿಡಿಯೆಂದು ಹೇಳಿದ್ದೆ‘ ಎಂದು ಸುರೇಶ್ ನೆನಪಿಸಿಕೊಳ್ಳುತ್ತಾರೆ.

ಮೂರು ವರ್ಷಗಳ ಹಿಂದೆ ತಮ್ಮ ಅಪ್ಪ–ಅಮ್ಮನಿಗೆ ₹ 80 ಲಕ್ಷ ಮೌಲ್ಯದ ಮರ್ಸಿಡಿಸ್ ಕಾರು ಉಡುಗೊರೆ ಕೊಟ್ಟು ಸುದ್ದಿಯಾಗಿದ್ದರು.

’ಅಪ್ಪ–ಅಮ್ಮ ನಮಗಾಗಿ ಎಷ್ಟು ಕಷ್ಟಪಟ್ಟಿದ್ದಾರೆ. ಈ ವಯಸ್ಸಿನಲ್ಲಿ ಅವರು ಚೆನ್ನಾಗಿರಬೇಕು. ಅದಕ್ಕಾಗಿ ಅವರಿಗಾಗಿ ಮನೆ ಮತ್ತು ಚೆಂದದ ಕಾರು ಕೊಡುವುದು ನನ್ನ ಕರ್ತವ್ಯವಷ್ಟೇ. ಕ್ರಿಕೆಟ್‌ ನನಗೆ ಎಲ್ಲವನ್ನೂ ಕೊಟ್ಟಿದೆ‘ ಎಂದು ಕಾನ್ಪುರದಲ್ಲಿ 2017–18ರ ಋತುವಿನ ರಣಜಿ ಟೂರ್ನಿಯಲ್ಲಿ ಕರ್ನಾಟಕ –ಉತ್ತರಪ್ರದೇಶ ನಡುವಣ ರಣಜಿ ಪಂದ್ಯದ ಸಂದರ್ಭದಲ್ಲಿ ’ಪ್ರಜಾವಾಣಿ‘ ಸಂದರ್ಶನದಲ್ಲಿ ಹೇಳಿದ್ದರು.

ಕಾಶ್ಮೀರ ಹಿನ್ನೆಲೆಯ ಕುರಿತು ಹೆಚ್ಚು ಮಾತನಾಡಲು ಇಷ್ಟಪಡದ ರೈನಾ, ’ನಾನು ದೇಶದ ಗಡಿಗೆ ಎರಡು ಮೂರು ಸಲ ಹೋಗಿದ್ದೇನೆ. ಸೇನೆಯ ಕಾರ್ಯಚಟುವಟಿಕೆಗಳನ್ನು ಗಮನಸಿದ್ದೇನೆ. ಮಹಿ ಭಾಯ್ (ಧೋನಿ) ಜೊತೆಗೂ ಒಮ್ಮೆ ಹೋಗಿದ್ದೆ. ಕಾಶ್ಮೀರದಲ್ಲಿ ನಮ್ಮ ಮನೆ ಇತ್ತಂತೆ, ಈಗಲೂ ಕೆಲವು ಸಂಬಂಧಿಕರು ಇದ್ದಾರಂತೆ‘ ಎಂದಷ್ಟೇ ಹೇಳಿದ್ದರು.

2005ರಲ್ಲಿ ಶ್ರೀಲಂಕಾ ವಿರುದ್ಧದ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ, ಧೋನಿಯ ಆಪ್ತಮಿತ್ರನಾದ ರೈನಾ ತಮ್ಮ ಎಡಗೈ ಬ್ಯಾಟಿಂಗ್ ಮೂಲಕವೂ ಗಮನ ಸೆಳೆದರು. ಸೀಮಿತ ಓವರ್‌ಗಳ ಪರಿಣತ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದ ರೈನಾ, ಫೀಲ್ಡಿಂಗ್‌ನಲ್ಲಿ ಚುರುಕಾಗಿದ್ದರು. ಅದರಲ್ಲಿ ಮೂವತ್ತು ಯಾರ್ಡ್‌ ವೃತ್ತದಲ್ಲಿ ಅವರ ಚಾಕಚಕ್ಯತೆಯು ಮೊಹಮ್ಮದ್ ಅಜರುದ್ದೀನ್ ಅವರ ಫೀಲ್ಡಿಂಗ್ ನೆನಪಿಸುತ್ತಿದ್ದದ್ದು ಸುಳ್ಳಲ್ಲ.

ಆಗಸ್ಟ್‌ 15ರಂದು ಧೋನಿ ನಿವೃತ್ತಿ ಘೋಷಿಸಿದ ಕೆಲವೇ ನಿಮಿಷಗಳನಂತರ ತಾವೂ ಅಂತರರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದರು. ಆದರೆ ಐಪಿಎಲ್‌ನಲ್ಲಿ ಮುಂದುವರಿಯುವುದಾಗಿ ಘೋಷಿಸಿದ್ದರು. ಆದರೆ, ಕಳೆದ ಎರಡು ಮೂರು ದಿನಗಳ ಬೆಳವಣಿಗೆಯಲ್ಲಿ ಅವರ ಐಪಿಎಲ್ ಪಯಣವೂ ಅಂತ್ಯವಾದಂತೆ ಕಾಣುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ’ವೈಯಕ್ತಿಕ ಕಾರಣ‘ಗಳಿಗಾಗಿ ಹೊರ ಬಿದ್ದಿರುವ ರೈನಾ ಸುತ್ತ ಚರ್ಚೆ ಶುರುವಾಗಿದೆ. 15 ದಿನಗಳ ಹಿಂದಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ರೈನಾ ಅವರ ಆಟ ಈ ಬಾರಿ ಐಪಿಎಲ್‌ನಲ್ಲಿಯೂ ನಡೆಯುತ್ತಿಲ್ಲ ಎನ್ನುವುದು ಅವರ ಅಭಿಮಾನಿಗಳ ಪಾಲಿಗೆ ಬೇಸರ ಮೂಡಿಸಿದೆ. ಅಲ್ಲದೇ ಮುಂದಿನ ವರ್ಷವೂ ಕ್ರಿಕೆಟ್‌ಗೆ ಮರಳುವ ಸಾಧ್ಯತೆಗಳು ಕಡಿಮೆ ಎಂದೂ ಹೇಳಲಾಗುತ್ತಿದೆ. 33 ವರ್ಷದ ರೈನಾ ಅವರ ಕ್ರಿಕೆಟ್ ಪಯಣ ಅಂತ್ಯವಾಗುವುದೇ? ಇಲ್ಲ ಮುಂದುವರಿಯುವುದೇ ಕಾದು ನೋಡಬೇಕು.

ಫ್ರ್ಯಾಂಚೈಸಿ ಮಾಲೀಕ ಎನ್. ಶ್ರೀನಿವಾಸನ್ ಅವರು ಸುರೇಶ್ ರೈನಾ ಅವರಿಗೆ ತಮ್ಮ ತಂಡದ ಬಾಗಿಲು ಶಾಶ್ವತವಾಗಿ ಮುಚ್ಚಿದಂತಾಗಿದೆ ಎಂದು ಪರೋಕ್ಷವಾಗಿಯೇ ಹೇಳಿದ್ದಾರೆ. ಅಲ್ಲದೇ ರೈನಾ ತಮ್ಮ ಈ ನಿರ್ಧಾರದಿಂದ ಏನು ಕಳೆದುಕೊಳ್ಳುತ್ತಾರೆಂದು ಬಲ್ಲರೇ ಎಂದೂ ಕೇಳಿದ್ದಾರೆ. ₹ 11 ಕೋಟಿ ಹಣ ಕಳೆದುಕೊಳ್ಳಲಿದ್ದಾರೆನ್ನುವುದೂ ಸುದ್ದಿಯಾಗಿದೆ.

ಪಠಾಣ್‌ಕೋಟ್‌ನಲ್ಲಿದ್ದ ರೈನಾ ಅವರ ಮಾವನನ್ನು ದುಷ್ಮರ್ಮಿಗಳು ಹತ್ಯೆ ಮಾಡಿದ್ದರು. ಆದ್ದರಿಂದ ರೈನಾ ಯುಎಇಯಿಂದ ಮರಳಿದ್ದರು ಎಂದು ಮೊದಲಿಗೆ ವರದಿಯಾಗಿತ್ತು. ಆದರೆ ಈಗ ಶ್ರೀನಿವಾಸನ್ ಹೇಳಿಕೆಗಳಿಂದಾಗಿ ತಮಗೆ ಉತ್ತಮ ವಸತಿ ಸೌಲಭ್ಯ (ಸ್ವೀಟ್) ಒದಗಿಸಿಲ್ಲ ಎಂದು ತಗಾದೆ ತೆಗೆದು ರೈನಾ ಮರಳಿದ್ದಾರೆ ಎಂಬ ಸುದ್ದಿಗಳು ಓಡಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ರೈನಾ ಪರವಾಗಿ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

’ರೈನಾ ಅಂತಹ ಆಟಗಾರನಿಗೆ ಫ್ರ್ಯಾಂಚೈಸಿ ಮುಖ್ಯವಲ್ಲ. ಮುಂದಿನ ದಿನಗಳಲ್ಲಿ ಅವರು ಇದಕ್ಕೂ ಹೆಚ್ಚಿನ ಹಣ ಗಳಿಸಬಲ್ಲಪ್ರತಿಭಾವಂತ. ಕುಟುಂಬದ ಸಂಕಷ್ಟಕ್ಕಾಗಿ ಮಿಡಿದು ಮರಳಿದ್ದಾರೆ. ಅವರೊಂದಿಗೆ ಶ್ರೀನಿವಾಸನ್ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ‘ ಎಂದು ನೆಟ್ಟಿಗರು ಟೀಕಿಸಿದ್ದಾರೆ.

’ಆಟಗಾರರ ವೈಯಕ್ತಿಕ ಜೀವನಕ್ಕೆ ಬೆಲೆಯಿಲ್ಲವೇ?‘ ಎಂದೂ ಪ್ರಶ್ನಿಸಿದ್ದಾರೆ.

193 ಐಪಿಎಲ್ ಪಂದ್ಯಗಳಲ್ಲಿ ಆಡಿರುವ ರೈನಾ ಅವರ ಖಾತೆಯಲ್ಲಿ 5368 ರನ್‌ಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT