ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ ‘ಭಾರತದ ಮಿಸ್ಟರ್‌ 360’: ಸ್ಕೂಪ್ ಶಾಟ್ ಸಿಕ್ಸರ್‌ಗೆ ಗಾವಸ್ಕರ್‌ ಮೆಚ್ಚುಗೆ

Last Updated 7 ನವೆಂಬರ್ 2022, 19:36 IST
ಅಕ್ಷರ ಗಾತ್ರ

ಮೆಲ್ಬರ್ನ್‌/ ನವದೆಹಲಿ: ಟಿ20 ವಿಶ್ವಕಪ್‌ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತದ ಸೂರ್ಯಕುಮಾರ್‌ ಯಾದವ್‌ ಅವರು ಜಿಂಬಾಬ್ವೆಯ ರಿಚರ್ಡ್‌ ಎಂಗರವ ಬೌಲಿಂಗ್‌ನಲ್ಲಿ ‘ಸ್ಕೂಪ್‌ ಶಾಟ್‌’ ಮೂಲಕ ಹೊಡೆದ ಸಿಕ್ಸರ್‌ ಬಗ್ಗೆ ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ.

ತಮ್ಮ ವಿಶಿಷ್ಟ ರೀತಿಯ ಬ್ಯಾಟಿಂಗ್‌ ಮೂಲಕ ಈಗಾಗಲೇ ಅಭಿಮಾನಿಗಳ ಮನಗೆದ್ದಿರುವ ‘ಸೂರ್ಯ’ನ ಪ್ರಖರತೆ ಪಂದ್ಯದಿಂದ ಪಂದ್ಯಕ್ಕೆ ಹೆಚ್ಚುತ್ತಿದೆ. ಭಾನುವಾರ ಎಂಸಿಜಿಯಲ್ಲಿ ನೆರೆದಿದ್ದ 80 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಮುಂದೆ ಅಮೋಘ ಆಟವಾಡಿದ್ದ ಅವರು 25 ಎಸೆತಗಳಲ್ಲಿ 61 ರನ್‌ ಗಳಿಸಿದ್ದರು.

ನಾಲ್ಕು ಸಿಕ್ಸರ್‌ ಹಾಗೂ ಆರು ಬೌಂಡರಿ ಹೊಡೆದಿದ್ದರಲ್ಲದೆ, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೂರ್ಯಕುಮಾರ್‌ ಆಟವನ್ನು ದಿಗ್ಗಜ ಆಟಗಾರ ಸುನಿಲ್‌ ಗಾವಸ್ಕರ್‌ ಸೇರಿದಂತೆ ಹಲವರು ಕೊಂಡಾಡಿದ್ದಾರೆ.

ಮುಂಬೈನ ಬ್ಯಾಟರ್‌ ಈ ವಿಶ್ವಕಪ್‌ನಲ್ಲಿ ಆಡಿರುವ ಐದು ಪಂದ್ಯಗಳಿಂದ 225 ರನ್‌ ಪೇರಿಸಿದ್ದಾರೆ. ಅವರ ಸ್ಟ್ರೈಕ್‌ರೇಟ್‌ 193.26 ಆಗಿದೆ. ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲೂ ಭಾರತ ತಂಡ ಅವರಿಂದ ಇಂತಹದೇ ಆಟ ನಿರೀಕ್ಷಿಸುತ್ತಿದೆ.

ಭಾರತದ ‘ಮಿಸ್ಟರ್‌ 360’: ‘ಸೂರ್ಯಕುಮಾರ್‌ ಅವರು ಭಾರತದ ‘ಮಿಸ್ಟರ್‌ 360 ಡಿಗ್ರಿ’ ಆಟಗಾರನಾಗಿ ಹೊರಹೊಮ್ಮಿದ್ದಾರೆ’ ಎಂದು ಸುನಿಲ್‌ ಗಾವಸ್ಕರ್‌ ಬಣ್ಣಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಕ್ರಿಕೆಟ್‌ ವಲಯದಲ್ಲಿ ‘ಮಿ.360’ ಎಂಬ ಹೆಸರು ಪಡೆದುಕೊಂಡಿದ್ದಾರೆ. ಸ್ಕೂಪ್‌ ಶಾಟ್‌ಗಳ ಮೂಲಕ ವಿಕೆಟ್‌ ಕೀಪರ್‌ ತಲೆಮೇಲಿಂದ ಸೇರಿದಂತೆ ಅಂಗಳದ ಎಲ್ಲ ಕಡೆಗೂ ಸಿಕ್ಸರ್‌, ಬೌಂಡರಿ ಹೊಡೆಯಬಲ್ಲ ಸಾಮರ್ಥ್ಯ ಅವರಿಗೆ ಈ ಹೆಸರು ತಂದುಕೊಟ್ಟಿದೆ. ಇದೀಗ ಸೂರ್ಯ ಅವರಿಗೂ ಅದೇ ಹೆಸರು ದೊರೆತಿದೆ.

‘ಸೂರ್ಯಕುಮಾರ್‌ ಆಟ ದಿಂದಾಗಿಯೇ ಭಾರತ ತಂಡಕ್ಕೆ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಡಿಫೆಂಡ್‌ ಮಾಡಬಲ್ಲಂತಹ ಸ್ಕೋರ್‌ ಗಳಿಸಲು ಸಾಧ್ಯವಾಗುತ್ತಿದೆ. ಇಲ್ಲದಿದ್ದರೆ 140–150 ರನ್ ಗಳಿಸಲೂ ಪರದಾಡಬೇಕಾಗುತ್ತದೆ’ ಎಂದು ಗಾವಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

1,000 ರನ್‌ ಸಾಧನೆ: ಸೂರ್ಯಕುಮಾರ್‌ 2022ರ ಕ್ಯಾಲೆಂಡರ್‌ ಋತುವಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ ಸಾವಿರ ರನ್‌ ಪೂರೈಸಿದ ಮೊದಲ ಹಾಗೂ ಏಕೈಕ ಬ್ಯಾಟರ್‌ ಎನಿಸಿಕೊಂಡಿದ್ದಾರೆ.

ಟಿ20ಯಲ್ಲಿ ಒಂದು ವರ್ಷದಲ್ಲಿ ಸಾವಿರ ರನ್‌ ಪೇರಿಸಿದ ವಿಶ್ವದ ಎರಡನೇ ಬ್ಯಾಟರ್‌ ಎಂಬ ಗೌರವ ಒಲಿದಿದೆ.

ಪಾಕಿಸ್ತಾನದ ಮೊಹಮ್ಮದ್‌ ರಿಜ್ವಾನ್‌ ಕಳೆದ ವರ್ಷ ಇಂತಹ ಸಾಧನೆ ಮಾಡಿದ್ದರು. ಅವರು ಒಂದೇ ವರ್ಷದಲ್ಲಿ 1,326 ರನ್‌ ಕಲೆಹಾಕಿದ್ದರು. ಈ ವರ್ಷ 924 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

‘ರಬ್ಬರ್‌ ಬಾಲ್‌ನಲ್ಲಿ ಆಡಿ ಸ್ಕೂಪ್‌ ಶಾಟ್‌ ಕಲಿತೆ’
‘ರಬ್ಬರ್‌ ಬಾಲ್‌ ಬಳಸಿ ಕ್ರಿಕೆಟ್‌ ಆಡುತ್ತಿದ್ದಾಗ ಇಂತಹ ಸ್ಕೂಪ್‌ ಶಾಟ್‌ಗಳನ್ನು ಹೊಡೆಯಲು ಕಲಿತೆ. ಅದನ್ನು ಇಲ್ಲೂ
ಕಾರ್ಯರೂಪಕ್ಕಿಳಿಸಿದ್ದೇನೆ’ ಎಂದು ಸೂರ್ಯಕುಮಾರ್‌ ತಮ್ಮ ಆಟದ ಬಗ್ಗೆ ಹೇಳಿದ್ದಾರೆ.

‘ಬೌಲರ್‌ ಯಾವ ರೀತಿ ಬೌಲ್‌ ಮಾಡುವನು ಎಂಬುದನ್ನು ಮುಂಚಿತವಾಗಿಯೇ ಅಂದಾಜಿಸಿ, ಸ್ಕೂಪ್‌ ಶಾಟ್‌ಗಳಿಗೆ ಮುಂದಾಗುವೆ’ ಎಂದು ಭಾನುವಾರದ ಇನಿಂಗ್ಸ್‌ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸೂರ್ಯ ‘ಭಾರತದ ಮಿಸ್ಟರ್‌ 360’: ಸ್ಕೂಪ್ ಶಾಟ್ ಸಿಕ್ಸರ್‌ಗೆ ಗಾವಸ್ಕರ್‌ ಮೆಚ್ಚುಗೆ
ಸೂರ್ಯ ‘ಭಾರತದ ಮಿಸ್ಟರ್‌ 360’: ಸ್ಕೂಪ್ ಶಾಟ್ ಸಿಕ್ಸರ್‌ಗೆ ಗಾವಸ್ಕರ್‌ ಮೆಚ್ಚುಗೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT