ಮುಂಬೈ: ಭಾರತ ತಂಡದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಕೈಗೆ ಕಳೆದ ವಾರ ಗಾಯವಾದ ಕಾರಣ ಸೆ.5ರಂದು ಆರಂಭವಾಗುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಿಂದ ಹೊರಗುಳಿದಿದ್ದಾರೆ.
ಟಿಎನ್‌ಸಿಎ ಇಲೆವೆನ್ ವಿರುದ್ಧ ಕೊಯಮತ್ತೂರಿನಲ್ಲಿ ಇತ್ತೀಚೆಗೆ ನಡೆದ ಬುಚ್ಚಿಬಾಬು ಆಹ್ವಾನ ಟೂರ್ನಿಯಲ್ಲಿ ಮುಂಬೈ ಪರ ಆಡಿದ್ದ ಸೂರ್ಯಕುಮಾರ್ ಅವರು ಗಾಯದ ಕಾರಣ ಕೊನೆಯ ದಿನ ಬ್ಯಾಟಿಂಗ್ ಮಾಡಿರಲಿಲ್ಲ.
ದುಲೀಪ್ ಟ್ರೋಫಿಗೆ ಸೂರ್ಯ ಅಲಭ್ಯತೆಯನ್ನು ಬಿಸಿಸಿಐ ಮೂಲಗಳು ಖಚಿತಪಡಿಸಿವೆ. ಭಾರತ ‘ಸಿ’ ಪರ ಸೂರ್ಯ ಅವರು ಅನಂತಪುರದಲ್ಲಿ ಸೆ. 5ರಿಂದ 8ರ ವರೆಗೆ ಮೊದಲ ಸುತ್ತಿನ ಹಣಾಹಣಿಯಲ್ಲಿ ಭಾರತ ‘ಡಿ’ ವಿರುದ್ಧ ಆಡಬೇಕಾಗಿತ್ತು.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ‘ಎ’ ಮತ್ತು ಭಾರತ ‘ಬಿ’ ತಂಡಗಳು ಮುಖಾಮುಖಿಯಾಗಲಿವೆ.
ಸೆ.19ರಂದು ಚೆನ್ನೈನಲ್ಲಿ ಆರಂಭವಾಗಲಿರುವ ಪ್ರವಾಸಿ ಬಾಂಗ್ಲಾದೇಶ ತಂಡದ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಲು ಅಕಾಂಕ್ಷಿ ಆಟಗಾರರಿಗೆ ಈ ಟೂರ್ನಿ ಉತ್ತಮ ಅವಕಾಶವಾಗಿದೆ.